ಗಗನಕ್ಕೇರಿದ ಟೊಮೆಟೊ ದರ: ನರ್ಸರಿಗಳಲ್ಲಿ ಸಸಿಗಳಿಗೆ ಹೆಚ್ಚಿದ ಬೇಡಿಕೆ, ಬೆಲೆಯೂ ದುಬಾರಿ!
ಚಿಕ್ಕಬಳ್ಳಾಪುರ, ಜುಲೈ 20: ಕಳೆದ ಒಂದು ತಿಂಗಳಿನಿಂದ ಎಲ್ಲೆಡೆ ಟೊಮೆಟೊ ದರ ಹೆಚ್ಚು ಸದ್ದು ಮಾಡುತ್ತಿದೆ. ಟೊಮೆಟೊ ಬೆಳೆದ ರೈತರಿಗೆ ಒಳ್ಳೆಯ ಆದಾಯ ಸಿಗುತ್ತಿದೆ. ಹೀಗಾಗಿ ಹೆಚ್ಚಿನ ರೈತರು ಟೊಮೆಟೊ ಬೆಳೆಯಲು ಆಸಕ್ತಿ ತೋರಿದ್ದು, ಇದರಿಂದ ನರ್ಸರಿಗಳಲ್ಲಿ ಟೊಮೆಟೊ ಸಸಿಗಳಿಗೆ ಬೇಡಿಕೆ ಶುರುವಾಗಿದೆ.
ಜಿಲ್ಲೆಯಲ್ಲಿ ಹಲವು ಕಡೆ ಸಾಕಷ್ಟು ನರ್ಸರಿಗಳಿವೆ. ಅವುಗಳಲ್ಲಿ ಟೊಮೆಟೊ ಸಸಿಗೆ ಹೆಚ್ಚು ಬೇಡಿಕೆ ಬಂದಿದೆ. ಟೊಮೆಟೊ ಸಸಿಗಳನ್ನು ಪಡೆಯಲು ನರ್ಸರಿಗಳಿಗೆ ಮುಂಗಡವಾಗಿ ಹಣ ಪಾವತಿಸಲು ರೈತರು ಮುಂದಾಗಿದ್ದಾರೆ.

ಜೂನ್, ಜುಲೈ, ಆಗಸ್ಟ್ ತಿಂಗಳಲ್ಲಿ ಟೊಮೆಟೊ ಬೆಲೆ ಏರಿಳಿತ ಆಗುವುದು ಸಾಮಾನ್ಯ. ಆದರೆ, ಈ ಬಾರಿ ಅತಿ ಹೆಚ್ಚು ಟೊಮೆಟೊ ಬೆಳೆಯುವ ದೇಶದ ವಿವಿಧ ರಾಜ್ಯಗಳಲ್ಲಿ ಮಹಾಮಳೆಯಿಂದ ಟೊಮೆಟೊ ಬೆಳೆ ಸಂಪೂರ್ಣ ನೆಲಕಚ್ಚಿದೆ. ಹೀಗಾಗಿ ಕೆ.ಜಿ ಟೊಮೆಟೊ ದರ ಹೆಚ್ಚಳವಾಗಿದೆ. ಇದರ ಪರಿಣಾಮ ಈಗ ರೈತರು ಟೊಮೆಟೊ ಬೆಳೆಯಲು ಮುಂದಾಗಿದ್ದಾರೆ.
ಈ ಹಿಂದೆ ಟೊಮೆಟೊ ಸಾಮಾನ್ಯ ದರವಿದ್ದ ಸಮಯದಲ್ಲಿ ಸಸಿಗೆ 10- 20 ಪೈಸೆಯಂತೆ ನರ್ಸರಿಗಳಲ್ಲಿ ಮಾರಾಟ ಮಾಡಲಾಗುತ್ತಿತ್ತು. ಆದರೆ, ಈಗ ಟೊಮೆಟೊ ಬಂಗಾರದ ಬೆಳೆಯಾಗಿದೆ. ಹೀಗಾಗಿ ಟೊಮೆಟೊ ದರ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ನರ್ಸರಿಗಳಲ್ಲಿ ಸಸಿಗೆ ಬಹಳ ಬೇಡಿಕೆ ಬಂದಿದ್ದು, ಸಸಿ ಸಿಗುವುದು ಕಷ್ಟವಾಗಿದೆ. 1 ಸಸಿಗೆ 1 ರೂ.ಗೆ ಮಾರಾಟ ಮಾಡಲಾಗುತ್ತಿದೆ.
ನರ್ಸರಿಯಲ್ಲಿ ಟೊಮೆಟೊ ಬೀಜವನ್ನು ಕ್ರೇಟ್‍ಗೆ ಹಾಕಿದ ನಂತರದಲ್ಲಿ ಸುಮಾರು 20 ದಿನಗಳ ನಂತರ ಅದನ್ನು ರೈತರಿಗೆ ವಿತರಿಸಲಾಗುತ್ತಿತ್ತು. ಆದರೆ ದರ ಹೆಚ್ಚಳವಾದ ಕಾರಣ ರೈತರು 15 ದಿನಗಳ ಸಸಿಗಳನ್ನು ಸಹ ಬಿಡದೇ ಅವುಗಳನ್ನು ತೆಗೆದುಕೊಂಡು ಹೋಗಿ ತಮ್ಮ ಜಮೀನಿನಲ್ಲಿ ನೆಡುವ ಕಾರ್ಯ ಮಾಡುತ್ತಿದ್ದಾರೆ.

ಟೊಮೆಟೊ ರಕ್ಷಣೆಯೇ ರೈತರಿಗೆ ಸವಾಲು
ಚಿಕ್ಕಬಳ್ಳಾಪುರ ನಗರದ ಮಾರುಕಟ್ಟೆಯಲ್ಲಿ 15 ಕೆಜಿ ಟೊಮೆಟೊ ಬಾಕ್ಸ್ 1800, ರಿಂದ 2,000 ರೂ ದರಕ್ಕೆ ಮಾರಾಟವಾಗುತ್ತಿದ್ದು, ಟೊಮೆಟೊ ಬೆಳೆದ ರೈತರಲ್ಲಿ ಸಂತಸ ಮನೆ ಮಾಡಿದೆ. ಚಿಕ್ಕಬಳ್ಳಾಪುರದಿಂದ ನೇಪಾಳ, ಉತ್ತರ ಪ್ರದೇಶ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡಿಗೆ ಟೊಮೆಟೊ ರಫ್ತು ಮಾಡಲಾಗುತ್ತಿದೆ.
ಟೊಮೆಟೊ ಬೆಲೆ ಏರಿಕೆಯಾಗಿರುವುದರಿಂದ ಫಸಲು ಬಿಟ್ಟಿರುವ ಟೊಮೆಟೊ ಬೆಳೆಯನ್ನು ರಕ್ಷಿಸಿಕೊಳ್ಳಲು ಬೆಳೆಗಾರರಿಗೆ ದೊಡ್ಡ ಸವಾಲಾಗಿದೆ. ಕಳ್ಳರ ಕಾಟವನ್ನು ತಪ್ಪಿಸಲು ಹಗಲು ರಾತ್ರಿ ಬೆಳೆಗೆ ಕಾವಲು ಕಾಯುತ್ತಿದ್ದಾರೆ. ಇನ್ನು ಟೊಮೆಟೊ ಬೆಳೆಯಲ್ಲಿ ರೋಗ ಬಾರದಂತೆ ದಿನ ಬಿಟ್ಟು ದಿನ ಔಷಧಿಗಳನ್ನು ಸಿಂಪಡಿಸುತ್ತಿದ್ದಾರೆ. ಕೂಲಿ ಕಾರ್ಮಿಕರನ್ನು ಸಹ ಟೊಮೆಟೊ ಬೆಳೆಯ ರಕ್ಷಣೆಗೆ ತೆಗೆದುಕೊಳ್ಳದೇ ಬೆಳೆಯನ್ನು ಜೋಪಾನವಾಗಿ ಕಾಪಾಡಿಕೊಳ್ಳುವತ್ತ ರೈತರು ಹೆಚ್ಚು ಜಾಗೃತಿ ವಹಿಸಿದ್ದಾರೆ.
ರೈತರಲ್ಲಿ ಮುಂದಿನ ದಿನಗಳ ಆತಂಕ
ಪ್ರಸ್ತುತ ಮಾರುಕಟ್ಟೆಯಲ್ಲಿ ಟೊಮೆಟೊ ದರ ಹೆಚ್ಚಾಗಿರುವುದರಿಂದ ನೀರಾವರಿ ಹೊಂದಿರುವ ಬಹುತೇಕ ರೈತರು ಟೊಮೆಟೊ ಸಸಿಗಳನ್ನು ನೆಡುತ್ತಿದ್ದು, ಮುಂದಿನ ದಿನಗಳಲ್ಲಿ ಏಕ ಕಾಲದಲ್ಲಿ ಫಲಸು ಕೊಯ್ಲಿಗೆ ಬಂದಲ್ಲಿ ಆ ಸಮಯದಲ್ಲಿ ಟೊಮೆಟೊಗೆ ದರ ಇರುತ್ತೋ, ಇಲ್ಲವೋ ಎಂಬ ಆತಂಕದ ನಡುವೆಯೂ ಬೆಳೆಗಾರರು ಟೊಮೆಟೊ ಸಸಿಗಳನ್ನು ನೆಡಲು ಮುಂದಾಗಿದ್ದಾರೆ.
ಈ ಬಗ್ಗೆ ಟೊಮೆಟೊ ಬೆಳೆಗಾರ ಗಂಗಾಧರ ಎನ್ನುವವರು ಮಾತನಾಡಿದ್ದು, 'ಮೊದಲಿನಿಂದಲೂ ನಾವು ಹೆಚ್ಚು ಟೊಮೆಟೊ ಬೆಳೆ ಇಡುತ್ತೇವೆ. ಕೆಲ ವರ್ಷಗಳಿಂದ ಟೊಮೆಟೊ ಬೆಳೆಗೆ ಹೆಚ್ಚು ರೋಗಬಾಧೆ ಕಾಣಿಸಿಕೊಳ್ಳುತ್ತಿದ್ದ ಪರಿಣಾಮ ಟೊಮೆಟೊ ಬೆಳೆಯಲು ಮುಂದಾಗಿರಲಿಲ್ಲ. ಈಗ ಟೊಮೆಟೊಗೆ ಉತ್ತಮ ದರವಿದೆ. ಆದರೆ, ಟೊಮೆಟೊ ಬೆಳೆದಿಲ್ಲ. ಮುಂದೆ ದರ ಸಿಗುತ್ತೊ, ಇಲ್ಲವೋ ಗೊತ್ತಿಲ್ಲ ಆದರೂ ನಾವು ಮತ್ತೆ ಟೊಮೆಟೊ ಸಸಿ ನೆಡಲು ಮುಂದಾಗಿದ್ದೇವೆ.' ಎಂದಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಟೊಮೆಟೊ ಬೆಳೆಗೆ ದರವೇ ಸಿಕ್ಕಿರಲಿಲ್ಲ. ಬೆಳೆಗಾರರು ತುಂಬಾ ನಷ್ಟ ಅನುಭವಿಸಿದ್ದರು. ಈ ಬಾರಿ ಉತ್ತಮ ಬೆಲೆ ಬಂದಿರುವುದರಿಂದ ಹೆಚ್ಚಿನ ರೈತರು ಟೊಮೆಟೊ ಬೆಳೆಯಲು ಮುಂದಾಗಿದ್ದಾರೆ. ನರ್ಸರಿಗಳಲ್ಲಿ ಮುಂಗಡ ಹಣ ಪಾವತಿಸಿ ಸಸಿಗಳನ್ನು ಪಡೆಯಲು ಮುಂದಾಗಿದ್ದಾರೆ ಎಂದರು.












Click it and Unblock the Notifications