ಸರಗೂರಿನ ರೈತರಿಗೆ ಸಂಕಷ್ಟ ತಂದೊಡ್ಡಿದ ಮೆಡಿಸನ್ ಸೌತೆಕಾಯಿ!
ಮೈಸೂರು,
ಡಿಸೆಂಬರ್ 14: ಕೆಲವು ಖಾಸಗಿ ಕಂಪನಿಗಳು ರೈತರಿಗೆ ಹಣದ ಆಸೆ ತೋರಿಸಿ ಹೇಗೆಲ್ಲ ಆಟವಾಡಿಸುತ್ತವೆ ಎಂಬುದಕ್ಕೆ ಮೈಸೂರು ಜಿಲ್ಲೆಯ ಸರಗೂರು ತಾಲೂಕಿನಲ್ಲಿ ಮೆಡಿಸನ್ ಸೌತೆಕಾಯಿ ಬೆಳೆದ ರೈತರೇ ಸಾಕ್ಷಿಯಾಗಿದ್ದಾರೆ. id="toptextpromo"> id='are-slot-1' class='oiad oi-axt oiadv'>ಇತ್ತೀಚೆಗಿನ
ದಿನಗಳಲ್ಲಿ ರೈತರು ಕೂಡ ಆರ್ಥಿಕವಾಗಿ ಒಂದಷ್ಟು ಆದಾಯ ತರುವ ಬೆಳೆಯನ್ನು ಬೆಳೆಯಲು ಹಾತೊರೆಯುತ್ತಿದ್ದಾರೆ. ಈಗಾಗಲೇ ಹಲವು ಸಾಂಪ್ರದಾಯಿಕ ಬೆಳೆಗಳನ್ನು ಬೆಳೆದ ರೈತರು ನಷ್ಟವನ್ನು ಅನುಭವಿಸಿದ್ದಾರೆ. ಹೀಗಾಗಿ ಆದಾಯ ತಂದುಕೊಡುವ ವಾಣಿಜ್ಯ ಬೆಳೆಗಳನ್ನು ಬೆಳೆಯಲು ಮುಂದಾಗುತ್ತಿದ್ದು, ಇದಕ್ಕೆ ಸಾಲ ಮಾಡಿಯಾದರೂ ಲಕ್ಷಾಂತರ ಬಂಡವಾಳ ಸುರಿದು ಬೆಳೆ ಬೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ನಸೀಬು ನೆಟ್ಟಗಿದ್ದು, ಕೊಯ್ಲು ಸಮಯಕ್ಕೆ ಉತ್ತಮ ದರ ದೊರೆತರೆ ಬಂಡವಾಳ ಸುರಿದು ಬೆಳೆ ಬೆಳೆದ ರೈತ ಬದುಕಿದಂತೆ. ಇಲ್ಲದೆ ಹೋದರೆ ಆತನ ತಲೆಗೆ ಚಪ್ಪಡಿ ಕಲ್ಲು ಬೀಳುವುದು ಖಚಿತ. id='are-slot-2' class='oiad oi-axt oiadv'>
ಸೌತೆಕಾಯಿ ಬೆಳೆಸಲು ಪ್ರೋತ್ಸಾಹಿಸಿದ ಸಂಸ್ಥೆ
ಹಾಗೆ ನೋಡಿದರೆ ರೈತರದು ಹೋರಾಟದ ಬದುಕಾಗಿದೆ. ಅಷ್ಟೇ ಅಲ್ಲ, ಬೆಳೆ ಬೆಳೆದು ಅದನ್ನು ಮಾರಾಟ ಮಾಡಿ ಹಣ ಪಡೆಯುವುದು ಕೂಡ ಆತನ ಪಾಲಿಗೆ ಸವಾಲ್ ಆಗಿದೆ. ಹಲವು ಕಷ್ಟ ನಷ್ಟಗಳ ನಡುವೆಯೂ ನಿರೀಕ್ಷೆಯನ್ನಿಟ್ಟುಕೊಂಡು ರೈತ ಕೃಷಿ ಮಾಡಿಕೊಂಡು ಮುನ್ನಡೆಯುತ್ತಲೇ ಇದ್ದಾನೆ. ಅದು ಅವನ ಪಾಲಿಗೆ ಅನಿವಾರ್ಯವೂ ಹೌದು. ಈ ನಡುವೆ ಕೆಲವು ಖಾಸಗಿ ಕಂಪನಿಗಳು ನೇರವಾಗಿ ರೈತರ ಬಳಿಗೆ ಬಂದು ಕೆಲವು ಬೆಳೆಗಳನ್ನು ಬೆಳೆಸಲು ಮುಂದಾಗುತ್ತಿವೆ. ಬೀಜ ಗೊಬ್ಬರ ಎಲ್ಲವನ್ನು ನೀಡಿ ಫಸಲನ್ನು ತಾವೇ ಖರೀದಿಸುವುದಾಗಿ ಹೇಳುತ್ತಿವೆ. ಇದು ಬಹಳಷ್ಟು ಕಡೆ ನಡೆಯುತ್ತಿದೆ. ಆದರೆ ಸರಗೂರಿನಲ್ಲಿ ಮಾತ್ರ ಕಂಪನಿಯನ್ನು ನಂಬಿ ಸೌತೆಕಾಯಿ ಬೆಳೆದ ರೈತ ಈಗ ಬಾಯಿ ಬಡಿದುಕೊಳ್ಳುವಂತಾಗಿದೆ. ಇಷ್ಟಕ್ಕೂ ಅಲ್ಲಿ ಆಗಿದ್ದಾದರೂ ಏನು ಎಂಬುದನ್ನು ನೋಡುತ್ತಾ ಹೋದರೆ ರೈತರು ಕಂಪನಿಯನ್ನು ನಂಬಿ ಕೆಟ್ಟರಾ ಎಂಬ ಸಂಶಯ ಮೇಲ್ನೋಟಕ್ಕೆ ಮೂಡುತ್ತದೆ.

15 ಎಕರೆಯಲ್ಲಿ ಸೌತೆಕಾಯಿ ಬೆಳೆದ ರೈತರು
ಕಳೆದ ಕೆಲವು ತಿಂಗಳ ಹಿಂದೆ ಅಂದರೆ ಆಗಸ್ಟ್ ನಲ್ಲಿ ಸರಗೂರು ತಾಲೂಕಿನ ಮೊಸರಹಳ್ಳ ಗ್ರಾಮದ ರೈತರನ್ನು ಭೇಟಿ ಮಾಡಿದ ತುಮಕೂರು ಜಿಲ್ಲೆಯ ಅಂತರಸನಹಳ್ಳಿ ಸಮೀಪದ ನಿಯೋ ಫುಡ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ಖಾಸಗಿ ಕಂಪನಿಯೊಂದು ಗ್ರಾಮದ ಸುಮಾರು 15ಕ್ಕೂ ಹೆಚ್ಚು ರೈತರಿಂದ 15 ಎಕರೆ ಜಮೀನಿನಲ್ಲಿ ಮೆಡಿಸನ್ ಸೌತೆಕಾಯಿ ಬೆಳೆಯಲು ಬೀಜ, ಗೊಬ್ಬರ ಹಾಗೂ ಔಷಧಿ ವಿತರಣೆ ಮಾಡಿದ್ದಲ್ಲದೆ ಕಟಾವಿ ಮಾಡಿದ ಸೌತೆಕಾಯಿಯನ್ನು ತಾವೇ ಖರೀದಿಸುವುದಾಗಿಯೂ ಒಡಂಬಡಿಕೆ ಮಾಡಿಕೊಂಡಿತ್ತು. ರೈತರು ಒಂದಷ್ಟು ಆದಾಯ ಬರುತ್ತದೆ. ಮಾರುಕಟ್ಟೆಯ ಭಯವಿಲ್ಲ ಎಂಬ ಖಷಿಯಲ್ಲಿ ಕಂಪನಿಯ ಒಡಂಬಡಿಕೆಗೆ ಸಹಿ ಮಾಡಿಕೊಟ್ಟಿದ್ದರು. ಆದರೆ ಒಡಂಬಡಿಕೆಯಲ್ಲಿರುವ ನಿಬಂಧನೆಗಳು ಕಠಿಣವಾಗಿವೆ ಎಂಬುದು ಗೊತ್ತಿದ್ದರೂ ರೈತರು ಸಹಿ ಮಾಡಿ ಮೆಡಿಸನ್ ಸೌತೆಕಾಯಿ ಬೆಳೆಯಲು ಮುಂದಾದರು.

ಸೌತೆಕಾಯಿ ಖರೀದಿಸಲು ಬಾರದ ಕಂಪನಿ
ತುಂಬಾ ಜತನದಿಂದ ಸೌತೆಕಾಯಿಯನ್ನು ರೈತರು ಬೆಳೆಸಿದರು. ನೇರವಾಗಿ ಕಂಪನಿಯೇ ಖರೀದಿಸುವುದರಿಂದ ಒಂದಷ್ಟು ಆದಾಯ ಬರುತ್ತದೆ. ಅದರಿಂದ ತಮ್ಮ ಕಷ್ಟಗಳು ಪರಿಹಾರವಾಗುತ್ತವೆ ಎಂಬ ಕನಸು ಕಂಡಿದ್ದರು. ಸೌತೆಕಾಯಿ ಬಳ್ಳಿ ಚೆನ್ನಾಗಿ ಬೆಳೆದು ಹೂ ಬಿಟ್ಟು ಕಾಯಿಯಾಗಲಾರಂಭಿಸಿತು. ಈ ವೇಳೆ ಬಂದ ಕಂಪನಿಯವರು ಸೌತೆಕಾಯಿಯನ್ನು ಕೊಂಡೊಯ್ದರು. ಹೀಗೆ ಸುಮಾರು ನಾಲ್ಕು ಬಾರಿ ಕಟಾವು ಮಾಡಿ ಕೊಂಡೊಯ್ದರು. ಆದರೆ ಅದರ ಹಣವನ್ನು ನಂತರ ಕೊಡುವುದಾಗಿ ಹೇಳಿದರಾದರೂ ಕಟಾವು ಮಾಡಿದ ಸೌತೆಕಾಯಿಗೆ ಹಣವನ್ನು ನೀಡಲೇ ಇಲ್ಲ. ಜತೆಗೆ ಸೌತೆಕಾಯಿ ಖರೀದಿಸಲು ಕಂಪನಿಯವರು ರೈತರ ಬಳಿಗೆ ಬರಲೇ ಇಲ್ಲ. ಇದೀಗ ಕಟಾವಿಗೆ ಬಂದ ಸೌತೆಕಾಯಿಗಳು ಜಮೀನಿನಲ್ಲೇ ಕೊಳೆಯುತ್ತಿದ್ದು ರೈತರು ಸಂಕಷ್ಟ ಅನುಭವಿಸುವಂತಾಗಿದೆ.

ಸಂಕಷ್ಟ ಪರಿಹರಿಸುವಂತೆ ರೈತರ ಅಳಲು
ರೈತರು ತಮ್ಮ ಜಮೀನಿನಲ್ಲಿ ಸೌತೆಕಾಯಿಯನ್ನು ಬೆಳೆಯಲು 50 ರಿಂದ 60 ಸಾವಿರ ರೂ. ಖರ್ಚು ಮಾಡಿದ್ದು, ಈ ಹಣವನ್ನು ಭರಿಸಲು ಕಂಪನಿ ಹಿಂದೇಟು ಹಾಕುತ್ತಿದೆ. ಜತೆಗೆ ಕಂಪನಿಯ ಪ್ರಾದೇಶಿಕ ವ್ಯವಸ್ಥಾಪಕರನ್ನು ಸಂಪರ್ಕಿಸಿದರೆ ಅವರು ಸ್ಪಂದಿಸುತ್ತಿಲ್ಲ ಎಂಬುದು ರೈತರ ಆರೋಪವಾಗಿದೆ. ಇನ್ನು ತೋಟಗಾರಿಕೆ, ಕೃಷಿ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿದರೂ ಪ್ರಯೋಜನವಾಗಿಲ್ಲ. ಸಂಬಂಧಿಸಿದವರು ಇತ್ತ ಗಮನಹರಿಸಿ ತಮ್ಮ ಸಂಕಷ್ಟಕ್ಕೆ ಸ್ಪಂದಿಸಬೇಕು ಎನ್ನುವುದು ಸೌತೆಕಾಯಿ ಬೆಳೆದ ರೈತರ ಅಳಲಾಗಿದೆ. ಮುಂದೇನಾಗುತ್ತೆ ಎಂಬುದನ್ನು ಕಾದು ನೋಡಬೇಕಾಗಿದೆ.












Click it and Unblock the Notifications