ಚೆಕ್ ವಿಚಾರದಲ್ಲಿ ಮೌನ ಮುರಿದ ಸಿದ್ದರಾಮಯ್ಯ
ಬೆಂಗಳೂರು, ಅಕ್ಟೋಬರ್ 14 : 'ಕೆಪಿಸಿಸಿ ರೈತನಿಗೆ ನೀಡಿದ ಚೆಕ್ ವಿಚಾರದಲ್ಲಿ ಅನಗತ್ಯವಾಗಿ ಗೊಂದಲ ಸೃಷ್ಟಿ ಮಾಡಲಾಗುತ್ತಿದೆ. ಚೆಕ್ ಅನ್ನು ವಾಪಸ್ ಪಡೆಯುವುದಿಲ್ಲ ಎಂದು ರೈತರ ಕುಟುಂಬ ಎಲ್ಲಿಯೂ ಹೇಳಿಲ್ಲ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬುಧವಾರ ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಿದ್ದರಾಮಯ್ಯ, 'ಆತ್ಮಹತ್ಯೆ ಮಾಡಿಕೊಂಡ ಲೋಕೇಶ್ ಕುಟುಂಬಕ್ಕೆ ನೀಡಿದ ಚೆಕ್ ಅನ್ನು ವಾಪಸ್ ಪಡೆಯಲಾಗಿದೆ. ಅದನ್ನು ವಾಪಸ್ ಪಡೆಯುವುದಿಲ್ಲ ಎಂದು ರೈತ ಕುಟುಂಬ ಎಲ್ಲಿಯೂ ಹೇಳಿಲ್ಲ' ಎಂದು ಸ್ಪಷ್ಟಪಡಿಸಿದರು. [ಚೆಕ್ ವಿವಾದ : ಯಾರು, ಏನು ಹೇಳಿದರು?]

'ಕೆಲವರು ಚೆಕ್ ವಿಚಾರದಲ್ಲಿ ಅನಗತ್ಯವಾದ ರಾಜಕೀಯ ಮಾಡುತ್ತಿದ್ದಾರೆ. ಗೊಂದಲ ಸೃಷ್ಟಿಸಲು ಪ್ರಯತ್ನ ನಡೆಸುತ್ತಿದ್ದಾರೆ. ಸಾವಿನ ಮನೆಯಲ್ಲಿಯೂ ಇಂತಹ ರಾಜಕೀಯ ಮಾಡುವುದು ಸರಿಯಲ್ಲ' ಎಂದು ಸಿದ್ದರಾಮಯ್ಯ ಹೇಳಿದರು. [ಮಂಡ್ಯಗೆ ರಾಹುಲ್ ಭೇಟಿ : ಚಿತ್ರಗಳು]
ಮೃತ ಲೋಕೇಶ್ ಕುಟುಂಬಕ್ಕೆ ನೀಡಿರುವ ಚೆಕ್ ಅನ್ನು ವಾಪಸ್ ಪಡೆದಿರುವುದಕ್ಕೆ ಸಣಬದಕೊಪ್ಪಲಿನ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾವು ಸ್ವಾಭಿಮಾನಿಗಳು ಕೆಪಿಸಿಸಿ ಭಿಕ್ಷೆ ನೀಡುವುದು ಬೇಡ, ನಾವೇ ದೇಣಿಗೆ ಸಂಗ್ರಹಿಸಿ ಲೋಕೇಶ್ ಕುಟುಂಬಕ್ಕೆ 1 ಲಕ್ಷ ನೀಡುತ್ತೇವೆ ಎಂದು ಹೇಳಿದ್ದಾರೆ ಎಂಬ ಸುದ್ದಿಗಳು ಹಬ್ಬಿವೆ.
ಚೆಕ್ ವಾಪಸ್ ನೀಡುತ್ತೇವೆ : 'ಚೆಕ್ ಕ್ರಾಸ್ ಮಾಡಿಲ್ಲವೆಂಬ ಕಾರಣಕ್ಕೆ ಒಂದು ಚೆಕ್ ವಾಪಸ್ ಪಡೆಯಲಾಗಿದೆ. ಇನ್ನೆರಡು ದಿನದಲ್ಲಿ ಪರಿಹಾರದ ಚೆಕ್ ಗಳನ್ನು ವಿತರಣೆ ಮಾಡಲಾಗುತ್ತದೆ' ಎಂದು ಮಂಡ್ಯ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ಆತ್ಮಾನಂದ ಅವರು ಹೇಳಿದ್ದಾರೆ.
ಏನಿದು ಚೆಕ್ ವಿವಾದ? : ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಪಾಂಡವಪುರ ತಾಲೂಕಿನ ಸಣಬದಕೊಪ್ಪಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತ ಲೋಕೇಶ ಮನೆಗೆ ಭೇಟಿ ನೀಡಿದಾಗ ಕೆಪಿಸಿಸಿ ವತಿಯಿಂದ ರೈತನ ಕುಟುಂಬಕ್ಕೆ 1 ಲಕ್ಷ ರೂ. ಪರಿಹಾರ ನೀಡಲಾಗಿತ್ತು. ನಂತರ ಚೆಕ್ ಕ್ರಾಸ್ ಮಾಡಿಲ್ಲವೆಂಬ ಕಾರಣದಿಂದ ವಾಪಸ್ ಪಡೆಯಲಾಗಿತ್ತು' ಈ ಬಗ್ಗೆ ಈಗ ಭಾರೀ ಚರ್ಚೆಗೆ ಕಾರಣವಾಗಿದೆ.












Click it and Unblock the Notifications