ಕಬ್ಬು ಬೆಳೆಗಾರರ ಅಹವಾಲು ಬಗೆಹರಿಸಲು ಸಚಿವರ ಸೂಚನೆ
ಧಾರವಾಡ, ಅಕ್ಟೋಬರ್ 29: ಕಬ್ಬು ಬೆಳೆಗಾರರ ಸಮಸ್ಯೆಯನ್ನು ಆಲಿಸಿದ ಸಚಿವ ಸಂತೋಷ್ ಲಾಡ್, ಕಬ್ಬು ಬೆಳೆಗಾರರ ಅಹವಾಲು ನ್ಯಾಯಸಮ್ಮತವಾಗಿದ್ದು ಕಾರ್ಖಾನೆಯು ಈ ದರವನ್ನು ಕಡಿಮೆಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಕಾರ್ಮಿಕ ಮತ್ತು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಕಬ್ಬು ಬೆಳೆಗಾರರ ಸಮಸ್ಯೆಯನ್ನು ಆಲಿಸಿದರು. ಕಬ್ಬು ಬೆಳೆಗಾರರ ಅಹವಾಲು ನ್ಯಾಯಸಮ್ಮತವಾಗಿದ್ದು ಕಾರ್ಖಾನೆಯು ಕಬ್ಬು ಕಟಾವು ಹಾಗೂ ಸಾಗಾಟ ದರ ರೂ.893 ನಿಗದಿಪಡಿಸಿದೆ ಎಂದರು. ಈ ಸಭೆಯಲ್ಲಿ ಧಾರವಾಡ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಪೋಲಿಸ್ ವರಿಷ್ಠಾಧಿಕಾರಿ ಡಾ. ಗೊಪಾಲ ಬ್ಯಾಕೊಡ್ ಹಾಗೂ ಕಬ್ಬು ಬೆಳೆಗಾರರ ಮುಖಂಡರು ಉಪಸ್ಥಿತರಿದ್ದರು.

ಕಲಘಟಗಿ, ಅಳ್ನಾವರ, ಧಾರವಾಡ ತಾಲೂಕಿನ ಕಬ್ಬು ಬೆಳೆಗಾರರಿಗೆ ಹಳಿಯಾಳದ ಪ್ಯಾರಿ ಶುಗರ್ಸ್ ಕಾರ್ಖಾನೆಗೆ ಕಬ್ಬು ಕಟಾವು ಹಾಗೂ ಸಾಗಾಟ ದರವನ್ನು ಹೆಚ್ಚಿಗೆ ನಿಗದಿ ಮಾಡಿದ್ದು ಅದನ್ನು ಪರಿಶೀಲಿಸಿ ಕಡಿಮೆಗೊಳಿಸುವಂತೆ ಹಳಿಯಾಳದ ಪ್ಯಾರಿ ಶುಗರ್ಸ್ ಕಾರ್ಖಾನೆ ಅಧಿಕಾರಿಗಳಿಗೆ ಸಚಿವರು ನಿರ್ದೇಶನ ನೀಡಿದರು.
ಎರಡು ದಿನದಲ್ಲಿ ದರ ನಿಗದಿ; ಸಭೆಯಲ್ಲಿ ಮಾತನಾಡಿದ ಸಚಿವರು, "ಕಬ್ಬು ಬೆಳೆಗಾರರ ಅಹವಾಲು ನ್ಯಾಯಸಮ್ಮತವಾಗಿದ್ದು ಕಾರ್ಖಾನೆಯು ಕಬ್ಬು ಕಟಾವು ಹಾಗೂ ಸಾಗಾಟ ದರ ರೂ.893 ನಿಗದಿಪಡಿಸಿದೆ. ಕಲಘಟಗಿ, ಅಳ್ನಾವರ, ಧಾರವಾಡ ಸುತ್ತಲಿನ ಕಬ್ಬು ಬೆಳೆಗಾರರಿಗೆ ಹಳಿಯಾಳ ಕಾರ್ಖಾನೆಯ ಕಿ. ಮೀ. ಅಂತರ ಹತ್ತಿರವಾಗಿದ್ದರೂ ಕಾರ್ಖಾನೆಯವರು 110 ಕಿ. ಮೀ. ವ್ಯಾಪ್ತಿಯ ಕಟಾವು ಸಾಗಾಟದ ದರ ರೂ.893 ನಿಗದಿ ಪಡಿಸಿರುವುದು ಸಮಂಜಸವಲ್ಲ. ರೈತರ ಅಹವಾಲು ಮೇಲ್ನೋಟಕ್ಕೆ ನ್ಯಾಯ ಸಮ್ಮತವಾಗಿದ್ದು ಕಾರ್ಖಾನೆಯು ಈ ದರವನ್ನು ಕಡಿಮೆಗೊಳಿಸುವಂತೆ" ಸೂಚಿಸಿದರು.
"ಕಾರ್ಖಾನೆ ಅಧಿಕಾರಿಗಳು ತಮ್ಮ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ ಇನ್ನೇರಡು ದಿನದಲ್ಲಿ ಸದ್ಯದ ದರ ನಿಗದಿಯನ್ನು ಪರಿಶೀಲಿಸಿ ಉತ್ತರ ತಿಳಿಸುವಂತೆ ಮತ್ತು ಸಮಸ್ಯಯನ್ನು ಸಕ್ಕರೆ ಆಯುಕ್ತರು ಹಾಗೂ ಸಕ್ಕರೆ ಸಚಿವರ ಗಮನಕ್ಕೂ ತರುವುದಾಗಿ" ಸಚಿವ ಸಂತೋಷ್ ಲಾಡ್ ತಿಳಿಸಿದರು.
ಈ ವರ್ಷ ಮಳೆಯ ಕೊರತೆಯ ಹೊಡೆತ ತಿಂದಿರುವ ರೈತರ ಬಳಿ ಸಕ್ಕರೆ ಕಾರ್ಖಾನೆಗಳು ಹಿಂದಿನ ದರ 2600ಕ್ಕೆ ಕಬ್ಬು ಮಾರಾಟ ಮಾಡುವಂತೆ ಕೇಳುತ್ತಿವೆ. ಆದ್ದರಿಂದ ರೈತರು ಪ್ರತಿ ಟನ್‌ಗೆ 3500 ರೂ. ನಿಗದಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಹಳೆಯ ದರಕ್ಕೆ ಮಾರಾಟ ಮಾಡಿದರೆ ನಷ್ಟವಾಗುತ್ತದೆ ಎಂದು ಹೇಳಿದ್ದಾರೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಒಂದು ವಾರದಿಂದ ಕಬ್ಬು ಕಟಾವು ಹಂಗಾಮು ಆರಂಭವಾಗಿದೆ. ಇಂತಹ ಸಮಯದಲ್ಲಿ ಕಬ್ಬು ಬೆಳೆಗಾರರ ಹೊಲಗಳಿಗೆ ಧಾವಿಸಿರುವ ಕಾರ್ಖಾನೆಗಳ ಪ್ರತಿನಿಧಿಗಳು ಕಡಿಮೆ ದರಕ್ಕೆ ಕಬ್ಬು ಕಟಾವು ಮಾಡಲು ಒತ್ತಾಯಿಸುತ್ತಿವೆ ಎಂಬ ಆರೋಪ ಕೇಳಿ ಬಂದಿದೆ.
ಕಬ್ಬು ಅರೆಯಲು ಸಿದ್ಧತೆಗಳು ನಡೆಯುತ್ತಿರುವಾಗಲೇ ಕಬ್ಬು ಬೆಳೆಗಾರರು ಪ್ರತಿ ಟನ್ ಕಬ್ಬಿಗೆ 3500 ರೂ. ಬೆಲೆ ನಿಗದಿ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ. ವರ್ಷದಿಂದ ವರ್ಷಕ್ಕೆ ಬೆಳೆ ನಿರ್ವಹಣೆ ವೆಚ್ಚ ಹೆಚ್ಚಾಗುತ್ತಿದೆ. ಹಳೆಯ ದರದಲ್ಲಿ ಹೇಗೆ ಮಾರಾಟ ಮಾಡುವುದು? ಎಂದು ರೈತರು ಪ್ರಶ್ನಿಸಿದ್ದಾರೆ.
ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರ್ ಶಾಂತಕುಮಾರ್ ಕಬ್ಬಿನ ಎಂಆರ್‌ಪಿ ದರ ನಿಗದಿ ಮಾನದಂಡ ಬದಲಾಯಿಸಬೇಕು ಎಂದು ಕೇಂದ್ರದ ಸಿಎಸಿಪಿ ಸಭೆಯಲ್ಲಿ ಒತ್ತಾಯಿಸಿದ್ದಾರೆ. ಕಬ್ಬಿನ ಎಂಆರ್‌ಪಿ ದರ ನಿಗದಿ ಮಾನದಂಡದಿಂದ ರೈತರಿಗೆ ಅನ್ಯಾಯ ವಾಗುತ್ತಿದೆ. ಕಬ್ಬಿನ ಉತ್ಪಾದನೆ ವೆಚ್ಚಕ್ಕಿಂತ ಕಡಿಮೆ ದರ ನಿಗದಿಯಾಗುತ್ತಿದೆ. ರಾಜ್ಯದಲ್ಲಿ 1-2 ಎಕರೆ ಕಬ್ಬು ಬೆಳೆಯುವ ರೈತರೆ ಹೆಚ್ಚು ಇರುವ ಕಾರಣ ಕಬ್ಬು ಉತ್ಪಾದನಾ ವೆಚ್ಚವನ್ನು ಪರಿಗಣಿಸುವಾಗ ಪ್ರತಿ ಹೆಕ್ಟೇರ್‌ಗೆ ಬದಲಾಗಿ ಎಕರೆಗೆ ಲೆಕ್ಕ ಹಾಕಬೇಕು ಎಂದು ಹೇಳಿದ್ದಾರೆ.
ಎಂಆರ್‌ಪಿ ದರ ಏರಿಕೆ ಮಾಡಿದ ಹೆಚ್ಚುವರಿ ಹಣ ರೈತರಿಗೆ ಸಿಗುತ್ತಿಲ್ಲ, ಕಬ್ಬಿನ ಕಟಾವು, ಸಾಗಾಣಿಕೆ ರೈತರಿಗೆ ಸಂಕಷ್ಟವಾಗಿದೆ ಕಬ್ಬಿನ ದರವನ್ನು ರೈತರ ಹೊಲದಲ್ಲಿನ ದರ ಎಂದು ನಿಗದಿಗೊಳಿಸಿ ಟನ್ ಕಬ್ಬು ಬೆಳೆಯಲು ಕನಿಷ್ಠ 3600 ಉತ್ಪಾದನಾ ವೆಚ್ಚ ವಾಗುತ್ತದೆ ಅದಕ್ಕೆ ಲಾಭ ಸೇರಿಸಿ 4000 ರೂ. ಕನಿಷ್ಠ ನಿಗದಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.












Click it and Unblock the Notifications