ಪಹಣಿ ಬೆಲೆ ಹೆಚ್ಚಳ; ದಾವಣಗೆರೆಯಲ್ಲಿ ಸರ್ಕಾರದ ವಿರುದ್ಧ ರೈತ ಸಂಘ ಪ್ರತಿಭಟನೆ
ದಾವಣಗೆರೆ, ಜನವರಿ, 03: ಮೊದಲೇ ರೈತರು ಸಂಕಷ್ಟದಲ್ಲಿದ್ದಾರೆ. ಈ ಬಾರಿ ಭಾರೀ ಮಳೆ ಸುರಿದ ಪರಿಣಾಮ ಬೆಳೆ ಕಳೆದುಕೊಂಡು ಅನ್ನದಾತ ಸಂಕಷ್ಟಕ್ಕೀಡಾಗಿದ್ದಾನೆ. ಇದೀಗ ಪಹಣಿ ಬೆಲೆ ಹೆಚ್ಚಿಸಿರುವ ಮೂಲಕ ಸರ್ಕಾರ ಮತ್ತೆ ರೈತರ ಮೇಲೆ ಗದಾಪ್ರಹಾರ ನಡೆಸಲು ಮುಂದಾಗಿದ್ದು, ಸರ್ಕಾರದ ಕ್ರಮಕ್ಕೆ ರೈತ ಸಮೂಹ ದಾವಣಗೆರೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದೆ.
ಪಹಣಿ ಬೆಲೆ ಹೆಚ್ಚಳವನ್ನು ವಿರೋಧಿಸಿ ಮತ್ತು ಪ್ರತಿ ರೈತನಿಗೆ ವಾರ್ಷಿಕವಾಗಿ ಬೇಕಾದ ಪಹಣಿಗಳನ್ನು ಸಂಪೂರ್ಣ ಉಚಿತವಾಗಿ ನೀಡಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘ, ಹಸಿರು ಸೇನೆ ಹುಚ್ಚವ್ವನಹಳ್ಳಿ ಮಂಜುನಾಥ್ ಬಣದಿಂದ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಂಘದ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ಮಾತನಾಡಿ, ಇದೇ ಜನವರಿಯಿಂದ ಅನ್ವಯವಾಗುವಂತೆ ರಾಜ್ಯ ಸರ್ಕಾರ ಪಹಣಿ ಬೆಲೆಯನ್ನು 15 ರಿಂದ 25 ರೂಪಾಯಿಗೆ ಹೆಚ್ಚಳ ಮಾಡಿರುವುದು ಖಂಡನೀಯವಾಗಿದೆ. ಕೂಡಲೇ ಬೆಲೆ ಹೆಚ್ಚಳ ಆದೇಶವನ್ನು ಸರ್ಕಾರ ಹಿಂಪಡೆಯಬೇಕೆಂದು ಆಗ್ರಹಿಸಿದರು.
ಬೆಳೆ ವಿಮೆ, ಬೆಳೆ ಸಾಲ, ಸಣ್ಣ ಹಿಡುವಳಿದಾರರ ಪ್ರಮಾಣ ಪತ್ರ ಸೇರಿದಂತೆ ಅನೇಕ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಪ್ರತಿವರ್ಷ ಒಬ್ಬ ರೈತರಿಗೆ ಕನಿಷ್ಟ 40 ಪಹಣಿಗಳು ಬೇಕಾಗುತ್ತವೆ. ಇದರಿಂದ ಪ್ರತಿ ರೈತನಿಗೆ 1 ಸಾವಿರ ರೂಪಾಯಿ ಅನಾವಶ್ಯಕವಾಗಿ ವೆಚ್ಚವಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರತಿ ರೈತ ಕುಟುಂಬಕ್ಕೆ ವಾರ್ಷಿಕ 40 ಪಹಣಿಗಳನ್ನು ಸಂಪೂರ್ಣ ಉಚಿತವಾಗಿ ನೀಡಬೇಕೆಂದು ಒತ್ತಾಯಿಸಿದರು.

ಮಧ್ಯಮ ವರ್ಗದ ಜನರ ಹೊಟ್ಟೆ ಮೇಲೆ ಬರೆ
ಜನಸಾಮಾನ್ಯರು ಸರ್ಕಾರದ ವಿವಿಧ ಸೌಲಭ್ಯಗಳನ್ನು ಪಡೆಯಲು ಅಟಲ್‌ಜಿ ಜನಸ್ನೇಹಿ ಕೇಂದ್ರದ ಮೂಲಕ ಅರ್ಜಿ ಸಲ್ಲಿಸಲು ಇದ್ದ 25 ರೂ. ಶುಲ್ಕವನ್ನು ಕೂಡ 40 ರೂಪಾಯಿಗೆ ಹೆಚ್ಚಳ ಮಾಡಿರುವುದು ಸರಿಯಲ್ಲ. ಇದರಿಂದ ಕಡುಬಡವ ಮತ್ತು ಮಧ್ಯಮ ವರ್ಗದ ಜನರಿಗೆ ಕಷ್ಟವಾಗಲಿದೆ. ಈ ರೀತಿಯಲ್ಲಿ ಜನ ಸಾಮಾನ್ಯರಿಂದ ಸರ್ಕಾರ ಹಣ ಲೂಟಿ ಮಾಡುವುದನ್ನು ಮೊದಲು ನಿಲ್ಲಿಸಬೇಕು. ಅಟಲ್ ಜಿ ಜನಸ್ನೇಹಿ ಕೇಂದ್ರದ ಅರ್ಜಿ ಶುಲ್ಕ ದರವನ್ನು ಕೂಡ 10 ರೂಪಾಯಿಗೆ ಇಳಿಕೆ ಮಾಡಬೇಕೆಂದು ಆಗ್ರಹಿಸಿದರು.

ಸರ್ಕಾರ ತ್ವರಿತವಾಗಿ ನಿರ್ಧಾರ ಕೈಗೊಳ್ಳಬೇಕು
ಸರ್ಕಾರ ತ್ವರಿತವಾಗಿ ಈ ವಿಚಾರದಲ್ಲಿ ನಿರ್ಧಾರ ಕೈಗೊಳ್ಳದಿದ್ದರೆ ರಾಜ್ಯಾದ್ಯಂತ ತೀವ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ನಂತರ ಪ್ರಭಾರ ತಹಶೀಲ್ದಾರ್ ನಾಗಲಿಂಗೇಶ್ವರ ಮತ್ತು ಉಪತಹಶೀಲ್ದಾರ್ ಶಕೀಲ್ ಅಹಮ್ಮದ್ ಖಾನ್ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಸಂಘಟನೆಯ ಮುಖಂಡರಾದ ಗುಮ್ಮನೂರು ಬಸವರಾಜ್, ಶಿವಪುರ ಕೃಷ್ಣಪ್ಪ, ಹುಚ್ಚವ್ವನಹಳ್ಳಿ ಸಿದ್ದೇಶ್, ವಿ.ಎನ್. ಪ್ರಕಾಶ್, ಕೋಲ್ಕುಂಟೆ ಹುಚ್ಚೆಂಗಪ್ಪ, ಹೂವಿನ ಮಡು ನಾಗರಾಜ್, ಕೈದಾಳೆ ರವಿಕುಮಾರ್, ಮಲ್ಲಿಕಾರ್ಜುನ್, ಆಲೂರು ಪರಶುರಾಮ್, ಕೆಂಚಮ್ಮನಹಳ್ಳಿ ಹನುಮಂತು, ಚಿಕ್ಕತೊಗಲೇರಿ ಮಲ್ಲಿಕಾರ್ಜುನ್, ಕೋಗಲೂರು ಕುಮಾರ್, ಯರವನಾಗತಿಹಳ್ಳಿ ಬಾಲಾಜಿ, ಭಗತ್ ಸಿಂಹ, ಕುರ್ಕಿ ಹನುಮಂತ, ಆಲೂರು ಹಟ್ಟಿ ಲಕ್ಷ್ಮಣ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಕಿಸಾನ್ ಗ್ರೀನ್ ಆಗ್ರೋ ಕಂಪನಿ ವಿರುದ್ಧ ಆಕ್ರೋಶ
ಇನ್ನು ತುಮಕೂರಿನ ಕಿಸಾನ್ ಗ್ರೀನ್ ಆಗ್ರೋ ಕಂಪನಿಯವರು ಕಳಪೆ ಗುಣಮಟ್ಟಣದ ಸಾವಯುವ ಗೊಬ್ಬರ ಮಾರಾಟ ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಆದ್ದರಿಂದ ಕಳಪೆ ಗುಣಮಟ್ಟಣದ ಸಾವಯುವ ಗೊಬ್ಬರ ಮಾರಾಟವನ್ನು ವಿರೋಧಿಸಿ ಜಂಟಿ ಕೃಷಿ ನಿರ್ದೇಶಕರ ಕಚೇರಿಯ ಎದುರು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ನಕಲಿ ಗೊಬ್ಬರದ ಬಗ್ಗೆ ಪರಿಶೀಲನೆ
ತಾಲೂಕಿನ ಹೊನ್ನೂರು ಗ್ರಾಮದ ರೈತ ಮಲ್ಲಿಕಾರ್ಜುನಪ್ಪ ಅವರು ಸದರಿ ಏಜೆನ್ಸಿಯಲ್ಲಿ ಖರೀದಿ ಮಾಡಿದ್ದ 58 ಸಾವಯುವ ಗೊಬ್ಬರದ ಚೀಲಗಳಲ್ಲಿ ಬೂದಿ ಹಾಗೂ ಮಣ್ಣು ಮಿಶ್ರಣ ಇರುವುದು ಕಂಡುಬಂದಿದೆ. ಅನುಮಾನಗೊಂಡು ಮತ್ತೊಂದು ಚೀಲ ಪರಿಶೀಲಿಸಿದಾಗ ಅದರಲ್ಲೂ ಮಣ್ಣು ಮಿಶ್ರಣಗೊಂಡಿರುವುದು ಕಂಡು ಬಂದಿದೆ ಎಂದು ಜಂಟಿ ಕೃಷಿ ನಿರ್ದೇಶಕರಿಗೆ ರೈತ ಸಂಘದವರು ದೂರು ನೀಡಿದರು. ಜಿಲ್ಲೆಯ ಹಲವೆಡೆ ರೈತರಿಗೆ ಮಾರಾಟ ಮಾಡುತ್ತಿರುವ ಗೊಬ್ಬರ ಕಳಪೆ ಗುಣಮಟ್ಟದಿಂದ ಕೂಡಿದೆ. ಫಸಲು ಚೆನ್ನಾಗಿ ಬರಲಿ ಎಂದು ಗೊಬ್ಬರ ಹಾಕಿದರೆ ಕಳೆಗಳು ಬೆಳೆಯುತ್ತಿವೆ. ಭೂಮಿಯಲ್ಲಿ ಫಸಲಿಗಿಂತ ಕಳೆಯೇ ಜಾಸ್ತಿ ಬೆಳೆಯುತ್ತಿದೆ. ಇದಕ್ಕೆ ಕಳಪೆ ಗೊಬ್ಬರಗಳೇ ಕಾರಣ ಎಂದು ಆರೋಪಿಸಿದರು.
ರೈತ ಸಂಘದ ಜಿಲ್ಲಾ ಕಾರ್ಯದ್ಯಕ್ಷ ಹೊನ್ನೂರು ರಾಜಪ್ಪ ಮಾತನಾಡಿ, ಗ್ರಾಮೀಣ ಪ್ರದೇಶದ ಅಮಾಯಕ ರೈತರನ್ನೇ ಗುರಿಯಾಗಿಸಿ ಕಳಪೆ ಗುಣಮಟ್ಟದ ಸಾವಯುವ ಗೊಬ್ಬರ ತಂದು ಮಾರಾಟ ಮಾಡುತ್ತಿದ್ದಾರೆ. ಮತ್ತೊಂದೆಡೆ ಗುಣಮಟ್ಟ ಪರಿಶೀಲನೆ ಮಾಡಬೇಕಾದ ಅಧಿಕಾರಿಗಳು ನಕಲಿ ಕಂಪನಿಗಳ ಜೊತೆ ಶಾಮೀಲಾಗಿದ್ದಾರೆ ಎಂದು ದೂರಿದರು. ಇನ್ನು ಕಳಪೆ ಗೊಬ್ಬರ ಪೂರೈಕೆ ಕುರಿತು ದೂರುಗಳು ಬಂದಿದ್ದು, ಗೊಬ್ಬರವನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ನಂತರ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್ ತಿಳಿಸಿದರು.












Click it and Unblock the Notifications