ಕೊಡಗಿನ ಕಾಫಿ ಬೆಳೆಗಾರರಿಂದ ಮಳೆಗಾಗಿ ಪ್ರಾರ್ಥನೆ
ಮಡಿಕೇರಿ, ಮಾರ್ಚ್, 01: ಕೊಡಗಿನ ಕಾಫಿ ಬೆಳೆಗಾರರು ಈಗ ಆಕಾಶದತ್ತ ಆಸೆಗಣ್ಣಿನ ನೋಟ ಬೀರುತ್ತಿದ್ದಾರೆ. ಸ್ವಲ್ಪ ಮೋಡ ಕಂಡರೂ ಮಳೆ ಸುರಿಯುವ ನಿರೀಕ್ಷೆ ಮಾಡುತ್ತಿದ್ದಾರೆ. ಈ ಸಮಯದಲ್ಲಿ ಕಾಫಿ ಬೆಳೆಗಾರರತ್ತ ವರುಣ ಕರುಣೆ ತೋರಿದರೆ ಅದಕ್ಕಿಂತ ಖುಷಿ ಬೇರೊಂದಿಲ್ಲ. ಆದರೆ ಅದ್ಯಾಕೋ ಗೊತ್ತಿಲ್ಲ ಮಳೆ ಸುರಿಯುವ ಲಕ್ಷಣ ಕಾಣಿಸುತ್ತಿಲ್ಲ. ಈಗಾಗಲೇ ಕಕ್ಕಬ್ಬೆ ವ್ಯಾಪ್ತಿಯಲ್ಲಿ ಸ್ವಲ್ಪ ಮಳೆ ಸುರಿದಿರುವುದು ಜಿಲ್ಲೆಯಾದ್ಯಂತ ಮಳೆ ಸುರಿಯಬಹುದೆಂಬ ಬಯಕೆಯನ್ನು ಬೆಳೆಗಾರರ ಮನದಲ್ಲಿ ಹುಟ್ಟುಹಾಕುವಂತೆ ಮಾಡಿದೆ.
ಇಷ್ಟರಲ್ಲೇ ಜಿಲ್ಲೆಯಾದ್ಯಂತ ಕಾಫಿ ಕೊಯ್ಲು ಮುಗಿಯುವ ಹಂತಕ್ಕೆ ತಲುಪಿದೆ. ಬಹುತೇಕ ಕಾಫಿ ಬೆಳೆಗಾರರು ಕೊಯ್ಲು ಮಾಡಿ ಒಣಗಿಸಿ ತಂದು ಜೋಪಾನವಾಗಿಟ್ಟಿದ್ದರೆ, ಮತ್ತೆ ಕೆಲವು ಬೆಳೆಗಾರರು ಕಾಫಿಯನ್ನು ಮಾರಾಟ ಮಾಡಿದ್ದಾರೆ. ಸದ್ಯ ಈಗ ಜಿಲ್ಲೆಯಾದ್ಯಂತ ಕಾಫಿ ಘಮಲು ಎಲ್ಲೆಂದರಲ್ಲಿ ಹರಡಿದೆ. ಇದರ ನಡುವೆ ಕಾರ್ಮಿಕರ ಕೊರತೆಯಿಂದ ಕೆಲವೊಂದು ತೋಟಗಳಲ್ಲಿ ಈಗಲೂ ಕಾಫಿ ಕೊಯ್ಲು ನಡೆಯುತ್ತಿದೆ.

ಇದೆಲ್ಲದರ ನಡುವೆ ಕಾಫಿ ಕೊಯ್ಲು ಮುಗಿಸಿದವರು ಕಾಫಿ ತೋಟಕ್ಕೆ ಸ್ಪ್ರಿಂಕ್ಲರ್ ಮೂಲಕ ನೀರು ಹಾಯಿಸುವ ಕೆಲಸದಲ್ಲಿ ನಿರತರಾಗಿದ್ದು, ಕಾಫಿ ಹೂ ಅರಳಿ ಘಮ್ಮೆನ್ನುವುದಲ್ಲದೆ, ಹೂವಿನ ಸುಂದರ ನೋಟ ಮನಸೆಳೆಯುತ್ತಿದೆ. ಹಾಗೆನೋಡಿದರೆ ಕೊಡಗಿನಲ್ಲಿ ಕಾಫಿ ತೋಟ ಹೊಂದಿದ ಬಹುತೇಕ ಬೆಳೆಗಾರರಿಗೆ ನೀರು ಹಾಯಿಸಲು ನದಿ, ಹೊಳೆ, ಕೆರೆ ಮೊದಲಾದವುಗಳ ಅನುಕೂಲವೇ ಇಲ್ಲದಾಗಿದೆ.
ಬೆಟ್ಟ, ಗುಡ್ಡಗಳಲ್ಲಿ ನಿರ್ಮಿಸಲಾಗಿರುವ ತೋಟಗಳಿಗೆ ಪೈಪ್ ಲೈನ್ ಮೂಲಕ ನೀರು ಹಾಯಿಸುವುದು ಅಷ್ಟು ಸುಲಭದ ಕೆಲಸವಲ್ಲ. ಒಂದು ವೇಳೆ ನೀರು ಹಾಯಿಸಲು ಮುಂದಾದರೂ ನೀರಿನ ವ್ಯವಸ್ಥೆ ಇಲ್ಲದ ಕಾರಣ ಮಳೆಗೆ ಮೊರೆ ಹೋಗುವುದು ಅನಿವಾರ್ಯವಾಗಿದೆ. ಕಳೆದ ಎರಡು ವರ್ಷಗಳಿಂದ ಈ ಸಮಯದಲ್ಲಿ ಸರಿಯಾಗಿ ಮಳೆಯಾಗದಿರುವುದು ಕಾಫಿ ಬೆಳೆಗಾರರ ಆತಂಕಕ್ಕೆ ಕಾರಣವಾಗಿದೆ.
ಕಾಫಿ ಬೆಳೆಗೆ ಮಳೆಯ ಅಗತ್ಯತೆ ಹೆಚ್ಚು: ಒಂದು ವೇಳೆ ಮಾರ್ಚ್ ತಿಂಗಳಲ್ಲಿ ಉತ್ತಮ ಮಳೆಯಾದರೆ ಕಾಫಿ ಬೆಳೆಗಾರರಿಗೆ ಮುಂದಿನ ವರ್ಷಕ್ಕೆ ಬಂಪರ್ ಫಸಲು ಎಂದರ್ಥ. ಆದರೆ ಸಮಯಕ್ಕೆ ಸರಿಯಾಗಿ ಮಳೆಯಾಗದಿರುವುದು, ಒಮ್ಮೆ ಬಂದ ಮಳೆ ಮತ್ತೆ ಬಾರದೆ ಹೋಗುವುದು ಹೀಗೆ ಹಲವು ಸಮಸ್ಯೆಗಳಿಂದ ಕಾಫಿ ಬೆಳೆಗಾರರು ಫಸಲು ಕಳೆದು ಕೊಳ್ಳಬೇಕಾದ ಪರಿಸ್ಥಿತಿ ಎದುರಾಗುತ್ತಿದೆ.
ಕಳೆದ ವರ್ಷ ಮಳೆ ಏಪ್ರಿಲ್ ತಿಂಗಳಲ್ಲಿ ಸುರಿದ ಕಾರಣದಿಂದಾಗಿ ಈ ಬಾರಿ ಕಾಫಿ ಫಸಲು ಗಣನೀಯ ಇಳಿಕೆ ಕಂಡಿದೆ. ಕಳೆದ ವರ್ಷ ಬೇಸಿಗೆಯಲ್ಲಿ ಮಳೆ ಸುರಿಯದೆ ಮೇ ನಂತರ ಆರಂಭವಾದ ಮಳೆ ಡಿಸೆಂಬರ್ ತನಕವೂ ಸುರಿದಿತ್ತು. ಪರಿಣಾಮ ತೇವದಿಂದಾಗಿ ಫಸಲು ಉದುರಿತ್ತು. ಕಾಫಿ ವಾರ್ಷಿಕ ಬೆಳೆಯಾಗಿರುವ ಕಾರಣ ಒಂದು ವರ್ಷ ಫಸಲು ಕಡಿಮೆಯಾದರೂ ಅದರ ಪರಿಣಾಮ ಬೆಳೆಗಾರರ ಮೇಲಾಗುತ್ತದೆ.
ಬೆಳೆಗಾರರು ಮತ್ತೆ ಫಸಲು ಪಡೆಯಬೇಕಾದರೆ ವರ್ಷಪೂರ್ತಿ ಕಾಯಬೇಕಾಗುತ್ತದೆ. ಇಲ್ಲಿ ಕೂಡ ನೀರಿನ ವ್ಯವಸ್ಥೆ ಹೊಂದಿದವರು ತೋಟಗಳಿಗೆ ನೀರು ಹಾಯಿಸಿ ಕಾಫಿ ಹೂ ಅರಳುವಂತೆ ನೋಡಿಕೊಳ್ಳುತ್ತಾರೆ. ಆದರೆ, ನೀರು ಹಾಯಿಸಲು ಅವಕಾಶವಿಲ್ಲದವರು ಮಳೆಯನ್ನೇ ಕಾಯಬೇಕಾಗುತ್ತದೆ. ನಿಗದಿತ ಸಮಯಕ್ಕೆ ಮಳೆ ಬಾರದೆ ಹೋದರೆ ಕೆಲವೊಮ್ಮೆ ಇಬ್ಬನಿಗೆ ಹೂ ಅರಳಿ ಅಥವಾ ಮೊಗ್ಗಿನಲ್ಲಿಯೇ ಬಿಸಿಲಿಗೆ ಒಣಗಿ ಹೋಗುವ ಸಾಧ್ಯತೆ ಇರುತ್ತದೆ. ಹೀಗೆ ಆದರೆ ಬೆಳೆಗಾರರಿಗೆ ನಷ್ಟ ಕಟ್ಟಿಟ್ಟ ಬುತ್ತಿ.
ದೇವರ ಮೊರೆ ಹೋಗುತ್ತಿರುವ ಬೆಳೆಗಾರರು: ಈ ಸಮಯದಲ್ಲಿ ಮಳೆಯ ಅಗತ್ಯವಿರುವ ಕಾರಣದಿಂದಾಗಿ ಬೆಳೆಗಾರರು ದೇವರ ಮೊರೆ ಹೋಗುವುದು ಎಲ್ಲೆಡೆ ಕಂಡು ಬರುತ್ತದೆ. ಮಳೆಗಾಗಿ ದೇಗುಲಗಳಲ್ಲಿ ಪೂಜೆ ನಡೆಯುತ್ತದೆ. ಮಳೆದೇವರು ಎಂದೇ ಕರೆಯುವ ಕೊಡಗಿನ ಇಗ್ಗುತ್ತಪ್ಪ ದೇಗುಲದಿಂದ ಆರಂಭವಾಗಿ ಗ್ರಾಮ ದೇವತೆಗಳಿಗೂ ಪೂಜೆ ಸಲ್ಲಿಸಿ ಮಳೆ ಸುರಿಸುವಂತೆ ಪ್ರಾರ್ಥನೆ ಮಾಡಲಾಗುತ್ತದೆ.
ಇನ್ನು ವನದೊಳಗಿರುವ ನಿಸರ್ಗ ದೇಗುಲಗಳಲ್ಲಿ ಪ್ರಾರ್ಥನೆ ಮಾಡುವುದರಿಂದ ಮಳೆ ಬರುತ್ತದೆ ಎಂಬ ನಂಬಿಕೆ ಹಿಂದಿನಿಂದಲೂ ಇದ್ದು ಅದರಂತೆ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗುತ್ತದೆ. ದೇವರು ಕಣ್ತೆರೆದು ಮಳೆ ಸುರಿಸಿದರೆ ಕಾಫಿ ಬೆಳೆಗಾರರು ನೆಮ್ಮದಿಯುಸಿರು ಬಿಡಬಹುದಾಗಿದೆ. ಈಗಾಗಲೇ ಬಿಸಿಲಿನ ಪ್ರಖರತೆ ಹೆಚ್ಚಿದ್ದು, ಮಳೆ ಬಾರದೆ ಹೋದರೆ ಇನ್ನಷ್ಟು ತೊಂದರೆ ಎದುರಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಕಳೆದ ವರ್ಷ ಬಿಸಿಲಿಗೆ ಕಾಫಿ ಗಿಡಗಳು ಒಣಗಿದ್ದಲ್ಲದೆ, ನೀರಿನ ಸೆಲೆಗಳು ಬತ್ತಿಹೋಗಿದ್ದವು. ಇದರಿಂದ ನೀರಿನ ಸಮಸ್ಯೆಯೂ ಎದುರಾಗಿತ್ತು. ಕಾವೇರಿ ಸೆರಗಿನಲ್ಲಿರುವ ಕೊಡಗಿನಲ್ಲಿ ನೀರಿಗೆ ಸಮಸ್ಯೆಯಾಗುವುದು ಹೊಸದೇನಲ್ಲ. ನೀರಿಗೆ ಸಮಸ್ಯೆಯಾಗದಂತೆ ತಡೆಯಬೇಕಾದರೆ ವರುಣನಿಂದ ಮಾತ್ರ ಸಾಧ್ಯ. ಆತ ಕರುಣೆ ತೋರಿ ಮಳೆ ಸುರಿಸಿದರೆ ಕೊಡಗು ಮಾತ್ರವಲ್ಲದೆ ಕಾವೇರಿ ನೀರನ್ನು ಬಳಸುವ ಎಲ್ಲರೂ ನೆಮ್ಮದಿಯಾಗಿರಲು ಸಾಧ್ಯವಾಗಲಿದೆ.












Click it and Unblock the Notifications