ಬೆಣ್ಣೆ ಹಣ್ಣು ಕೃಷಿಗೆ ತೋಟಗಾರಿಕಾ ಇಲಾಖೆ ಪ್ರೋತ್ಸಾಹ: ರೈತರು ತಿಳಿಯಲೇಬೇಕಾದ ಅಂಶಗಳು ಇಲ್ಲಿವೆ
ಚಾಮರಾಜನಗರ, ಆಗಸ್ಟ್ 23: ಇಪ್ಪತ್ತನೇ ಶತಮಾನದ ಆದಿಯಲ್ಲಿ ಅಮೇರಿಕಾದ ರಾಯಲ್ ಬೋಟಾನಿಕಲ್ ಗಾರ್ಡನ್‌ನಿಂದ ಪಾದ್ರಿಯೊಬ್ಬರ ಮೂಲಕ ಬೆಂಗಳೂರಿಗೆ ಬಂದ ಬೆಣ್ಣೆ ಹಣ್ಣು (ಅವೊಕಾಡೊ) ಇವತ್ತು ರಾಜ್ಯದಲ್ಲಿ ಜನಪ್ರಿಯ ಹಣ್ಣಾಗಿ ಬೆಳೆಯುತ್ತಿದ್ದು, ತೋಟಗಾರಿಕಾ ಇಲಾಖೆಯೇ ಇದರ ಕೃಷಿಗೆ ಪ್ರೋತ್ಸಾಹ ನೀಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ.
ಸಾಮಾನ್ಯವಾಗಿ ಬೆಣ್ಣೆ ಹಣ್ಣನ್ನು ಮಲೆನಾಡಿನ ಅಡಿಕೆ ತೋಟ, ಕಾಫಿ ತೋಟಗಳ ನಡುವೆ ಅಥವಾ ಮನೆಯ ಹಿತ್ತಿಲಲ್ಲಿ ಬೆಳೆಗಾರರು ನೆಟ್ಟು ಬೆಳೆಸುತ್ತಾರೆ. ಕೊಡಗಿನಲ್ಲಿ ಬೆಳೆಗಾರರು ಕೃಷಿಯ ಉದ್ದೇಶದಿಂದ ಬೆಳೆಸದಿದ್ದರೂ ತಮ್ಮ ಮನೆಯ ಬಳಿ, ತೋಟಗಳ ನಡುವೆ ಇದಕ್ಕೊಂದು ಜಾಗ ನೀಡಿದ್ದಾರೆ. ತೋಟಗಾರಿಕಾ ಇಲಾಖೆ ಕೂಡ ಇದನ್ನು ಚಾಮರಾಜನಗರ ಜಿಲ್ಲೆಯಲ್ಲಿ ಬೆಳೆಸಲು ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ.

ಇನ್ನು ಮಲೆನಾಡು ಮಾತ್ರವಲ್ಲದೆ, ದಕ್ಷಿಣ ಭಾರತದ ಸಮಶೀತೋಷ್ಣ ಹವಾಮಾನ ಬೆಣ್ಣೆಹಣ್ಣಿಗೆ ಸೂಕ್ತವಾಗಿದ್ದು, ಈ ಹವಾಗುಣಕ್ಕೆ ಹೊಂದಿ ಕೊಂಡಿರುವುದರಿಂದ ಎಲ್ಲ ಕಡೆಯೂ ಬೆಳೆಯಬಹುದಾಗಿದೆ. ಹೀಗಾಗಿ ಇದೀಗ ಚಾಮರಾಜನಗರದಲ್ಲಿ ಇದನ್ನು ಬೆಳೆಯಲು ಉತ್ತೇಜನ ನೀಡಿದ್ದಲ್ಲದೆ, ಕೃಷಿ ಮಾಡಲು ಮುಂದೆ ಬರುವ ರೈತರಿಗೆ ಸಹಾಯಧನ ನೀಡುವ ವಾಗ್ದಾನ ಮಾಡಿರುವುದು ಖುಷಿಯ ವಿಚಾರವಾಗಿದೆ.
ಬೀಜದಿಂದ ಗಿಡಗಳ ತಯಾರಿ
ಇನ್ನು ನಗರ ಪ್ರದೇಶ ಅಥವಾ ಗ್ರಾಮೀಣ ಪ್ರದೇಶವೇ ಆಗಿರಲಿ ತಮ್ಮ ಮನೆ ಬಳಿ ಒಂದಷ್ಟು ಜಾಗವಿದ್ದರೆ ಅಲ್ಲಿ ಬೆಣ್ಣೆಹಣ್ಣು ಗಿಡವನ್ನು ನೆಟ್ಟು ಬೆಳೆಸುವುದರಿಂದ ಮುಂದೆ ಅದರಿಂದ ಪೌಷ್ಠಿಕಾಂಶವುಳ್ಳ ಆರೋಗ್ಯದಾಯಕ ಹಣ್ಣನ್ನು ಪಡೆಯಲು ಸಾಧ್ಯವಾಗುತ್ತದೆ. ಎಲ್ಲ ಕಾಲದಲ್ಲಿಯೂ ಹಣ್ಣಿಗೆ ಬೇಡಿಕೆ ಇರುವುದರಿಂದ ವಾಣಿಜ್ಯ ದೃಷ್ಟಿಯಿಂದ ಬೆಳೆಸಿದರೂ ನಷ್ಟವಾಗಲಾರದು.
ಇನ್ನು ಬೆಣ್ಣೆ ಹಣ್ಣಿನ ಮರಗಳ ಬಗ್ಗೆ ಹೇಳಬೇಕೆಂದರೆ ಇದರಲ್ಲಿ ಹ್ಯಾಸ್, ಪ್ಯೂರೇಟ್, ಸಿಂಕೆರ್ ಟನ್ ಹಾಗೂ ಫ್ಲೋರಿಡಾ ಗೋಲ್ಡ್, ಅರ್ಕಾ ಸುಪ್ರೀಂ, ಕಾವೇರಿ ಗೋಲ್ಡ್, ಜಿ.ಎಸ್.ಗೋಲ್ಡ್, ಬೆಂಗಳೂರು ಗ್ರ್ಯಾಂಡ್ ಎಂಬ ತಳಿಗಳಿದ್ದು, ಗಿಡಗಳನ್ನು ಬೀಜದಿಂದ ಸಂತನೋತ್ಪತ್ತಿ ಮಾಡಬಹುದಾಗಿದೆ. ಗಿಡವು ಹೆಚ್ಚು ಗೊಬ್ಬರ ನೀರು ಬಯಸದೆ ಶೀಘ್ರವಾಗಿ ಬೆಳೆದು ಫಸಲು ನೀಡುತ್ತದೆ.

ಬೆಣ್ಣೆ ಹಣ್ಣಿಗೆ ಎಂತಹ ವಾತಾವರಣ ಬೇಕು?
ಮರಳು ಮಿಶ್ರಿತ ಮಣ್ಣು ಮತ್ತು ತಂಪು ಹಾಗೂ ತೇವಾಂಶದಿಂದ ಕೂಡಿದ ವಾತಾವರಣ, ಜತೆಗೆ ಸಮುದ್ರ ಮಟ್ಟದಿಂದ 600-900 ಮೀ ಎತ್ತರದ ಪ್ರದೇಶ ಹಾಗೂ ಉಷ್ಣಾಂಶವು ಕನಿಷ್ಠ 12 ಡಿಗ್ರಿ ಯಿಂದ 35 ಡಿಗ್ರಿ ಸೆಲ್ಸಿಯಸ್ ವರೆಗಿದ್ದು, ಮಣ್ಣಿನ ರಸಸಾರ 5.5 ರಿಂದ 7.0 ರವರೆಗಿದ್ದರೆ ಅಂತಹ ಪ್ರದೇಶಗಳಲ್ಲಿ ಬೆಣ್ಣೆಹಣ್ಣು ಹುಲುಸಾಗಿ ಬೆಳೆದು ಫಸಲು ನೀಡುತ್ತದೆ.
ಬೆಣ್ಣೆ ಹಣ್ಣು ಆರೋಗ್ಯಕ್ಕೆ ಉತ್ತಮವಾಗಿದ್ದು, ಹಣ್ಣಿನಲ್ಲಿ ನಾರಿನ ಅಂಶ, ಪೊಟ್ಯಾಷಿಯಂ, ವಿಟಮಿನ್ ಸಿ ಮತ್ತು ಬಿ ಇದೆ. ಶೇ. 4 ರಷ್ಟು ಪ್ರೊಟೀನ್ ಹಾಗೂ ಶೇ.3ರಷ್ಟು ಕೊಬ್ಬಿನ ಅಂಶ, ಅಲ್ಪಪಿಷ್ಟ ಶಾಕರ ಗುಣ ಸೇರಿದಂತೆ ಹಲವಾರು ವಿಟಮಿನ್, ಖನಿಜಾಂಶಗಳ ಸಂಗ್ರಹವಲ್ಲದೆ ಅತೀ ಹೆಚ್ಚು ಶಕ್ತಿಯ (245 ಕಿ.ಕ್ಯಾಲರಿ/ 100 ಗ್ರಾಂ) ಮೂಲವಾಗಿದೆ. ಇದರ ತಿರುಳು ಹೆಚ್ಚಿನ ಪ್ರೋಟಿನ್ ಮತ್ತು ಕೊಬ್ಬಿನಾಂಶ ಹೊಂದಿದ್ದು, ಕಾರ್ಬೋಹೈಡ್ರೈಟ್ ಗಳ ಪ್ರಮಾಣ ಕಡಿಮೆ ಇರುತ್ತದೆ.
ಮೂಲತಃ ಇದು ಅಮೇರಿಕಾದ ಹಣ್ಣು
ಬೆಣ್ಣೆಹಣ್ಣನ್ನು ತಿನ್ನುವುದರಿಂದ ಕಣ್ಣಿನ ಆರೋಗ್ಯಕ್ಕೆ ಅವಶ್ಯಕತೆಯಿರುವ ಬಣ್ಣದ ಕ್ಯಾರೋಟಿನಾಯ್ಡ್ ಗಳನ್ನು ಹೀರಿಕೊಳ್ಳುವುದಕ್ಕೆ ಸಹಕರಿಸುತ್ತದೆ. 2ನೇ ಹಂತದ ಸಕ್ಕರೆ ಕಾಯಿಲೆ ಅಥವಾ ಮಧುಮೇಹ ಇರುವವರು ಸೇವಿಸುವುದರಿಂದ ಗ್ಲೂಕೋಸ್ ಪ್ರಮಾಣವನ್ನು ನಿಯಂತ್ರಿಸುತ್ತದೆ. ತೂಕ ನಿರ್ವಹಣೆಯಲ್ಲೂ ಸಹಕಾರಿಯಾಗಿದ್ದು, ಹೃದಯ ರಕ್ತನಾಳದ ಆರೋಗ್ಯವನ್ನು ಕಾಪಾಡುತ್ತದೆ.
ಬೆಣ್ಣೆ ಹಣ್ಣು ಮೂಲತಃ ಅಮೇರಿಕಾದ ಉಷ್ಣವಲಯದ್ದಾಗಿದ್ದು ಇದರ ಹೆಸರು ಅವೊಕಡೊ. ಬಹುಶಃ ಒಂದಕ್ಕಿಂತ ಹೆಚ್ಚಿನ ಕಾಡು ಪ್ರಭೇದಗಳಿಂದಾಗಿ ಇದು ಮೆಕ್ಸಿಕೊ ಮತ್ತು ಮಧ್ಯ ಅಮೇರಿಕಾ ಭಾಗದಲ್ಲಿ ಜನಜನಿತವಾಗಿ ಮುಂದೆ ವಿಶ್ವದ ಇತರ ಭಾಗಗಳಿಗೂ ಹರಡಿತು ಎಂದು ಹೇಳಲಾಗಿದೆ. ಇಪ್ಪತ್ತನೇ ಶತಮಾನದ ಆದಿಯಲ್ಲಿ ರಾಯಲ್ ಬೋಟಾನಿಕಲ್ ಗಾರ್ಡನ್ ನಿಂದ ಅಮೇರಿಕನ್ ಪಾದ್ರಿಯೊಬ್ಬರು ಬೆಂಗಳೂರಿಗೆ ತಂದರು. ಮುಂದೆ ಇದೇ ಪಾದ್ರಿ ಶ್ರೀಲಂಕಾದಲ್ಲೂ ಪರಿಚಯಿಸಿದರು.
ಚಾಮರಾಜನಗರದಲ್ಲಿ ಬೆಳೆಸಲು ಪ್ರೋತ್ಸಾಹ
ಈ ನಡುವೆ ಬೆಂಗಳೂರಿಗೆ ಬಂದ ಬೆಣ್ಣೆಹಣ್ಣು ಮುಂದೆ ಕರ್ನಾಟಕ ಮಾತ್ರವಲ್ಲದೆ ಕೇರಳ, ತಮಿಳುನಾಡು, ಸಿಕ್ಕಿಂ ಹಾಗೂ ಇನ್ನಿತರ ರಾಜ್ಯಗಳಿಗೂ ಹರಡಿತು ಎಂದು ಹೇಳಲಾಗಿದೆ. ಹಣ್ಣಿನ ಸಿಪ್ಪೆ ಮತ್ತು ಬೀಜದ ನಡುವಿನ ಮೃದುವಾದ ತಿರುಳನ್ನು ತಿನ್ನಲು ಬಳಸಬಹುದು. ಇದು ಸಪ್ಪೆಯಾಗಿದ್ದು, ಸಕ್ಕರೆ ಸೇರಿಸಿ ಚೆನ್ನಾಗಿ ಕಲಸಿ ಸೇವಿಸಬಹುದು. ಇದರಿಂದ ಮಾಡುವ ಮಿಲ್ಕ್ ಶೇಕ್ ರುಚಿಕರವಾಗಿರುತ್ತದೆ.
ಬೆಣ್ಣೆ ಹಣ್ಣಿಗೆ ಹೆಚ್ಚಿನ ಬೇಡಿಕೆಗಳಿರುವ ಕಾರಣ ಮತ್ತು ಚಾಮರಾಜನಗರ ಜಿಲ್ಲೆಯ ಹವಾಗುಣ ಹೊಂದಿಕೊಳ್ಳುವ ಸಾಧ್ಯತೆಯಿರುವುದರಿಂದ ಚಾಮರಾಜನಗರ ಜಿಲ್ಲೆಯಲ್ಲಿ ಅದರ ಕೃಷಿಗೆ ಉತ್ತೇಜನ ನೀಡಲು ತೋಟಗಾರಿಕಾ ಇಲಾಖೆ ಮುಂದಾಗಿದ್ದು, 2023-24ನೇ ಸಾಲಿಗೆ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ರೈತರಿಗೆ ಸಹಾಯಧನ ನೀಡಲು ಕ್ರಮ ಕೈಗೊಂಡಿದೆ.
ತೋಟಗಾರಿಕೆ ಇಲಾಖೆಯಿಂದ ಸಹಾಯಧನ
ಬೆಣ್ಣೆ ಹಣ್ಣು ಬೆಳೆಯುವ ಪ್ರತಿ ಹೆಕ್ಟೇರ್ ಗೆ 18 ಸಾವಿರ ರೂ.ಗಳ ಸಹಾಯಧನ ನೀಡಲಾಗುತ್ತಿದ್ದು, ನರೇಗಾ ಒಗ್ಗೂಡಿಸುವಿಕೆ ಯೋಜನೆಯಡಿಯಲ್ಲಿಯೂ ಕೂಲಿ ವೆಚ್ಚ ಪಡೆಯಲು ಅವಕಾಶ ಮಾಡಿಕೊಡಲಾಗಿದೆ. ಚಾಮರಾಜನಗರ ಜಿಲ್ಲೆಯ ಭೌಗೋಳಿಕ ಸ್ಥಿತಿ-ಗತಿಗಳು ಬೆಣ್ಣೆ ಹಣ್ಣು ಬೆಳೆಯಲು ಸೂಕ್ತವಾಗಿರುವುದರಿಂದ ಬೆಣ್ಣೆ ಹಣ್ಣು ಪ್ರದೇಶ ವಿಸ್ತರಣೆ ಮಾಡಬಹುದಾಗಿದೆ. ಪ್ರಸ್ತುತ ದಿನಗಳಲ್ಲಿ ಬೆಣ್ಣೆ ಹಣ್ಣು ಕೃಷಿಗೆ ಅತೀ ಹೆಚ್ಚಿನ ಬೇಡಿಕೆ ಇದ್ದು, ಏಕ ಬೆಳೆಯಾಗಿ ಸಮತಟ್ಟಾದ ಪ್ರದೇಶಗಳಲ್ಲಿ ಬೆಳೆಯಬಹುದು ಎಂಬುದು ತೋಟಗಾರಿಕೆ ಇಲಾಖೆಯ ಸಲಹೆಯಾಗಿದೆ.
ಬೆಣ್ಣೆಹಣ್ಣು ಬೆಳೆಯಲು ಆಸಕ್ತಿ ಇರುವ ರೈತರು ಸಹಾಯಧನಕ್ಕಾಗಿ ಚಾಮರಾಜನಗರ ತಾಲ್ಲೂಕಿನ ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸಿ ಅಗತ್ಯ ದಾಖಲಾತಿಗಳೊಂದಿಗೆ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಿ, ಯೋಜನೆಯ ಸದುಪಯೋಗಪಡಿಸಿಕೊಳ್ಳಲು ತೋಟಗಾರಿಕೆ ಉಪನಿರ್ದೆಶಕರು ಅವಕಾಶ ಮಾಡಿಕೊಟ್ಟಿದ್ದಾರೆ. ಆದರೆ ರೈತರು ಇದನ್ನು ಯಾವ ರೀತಿ ಉಪಯೋಗಿಸಿಕೊಂಡು ಬೆಣ್ಣೆಹಣ್ಣಿನ ಕೃಷಿ ಮಾಡುತ್ತಾರೆ ಎಂಬುದನ್ನು ಮುಂದೆ ನೋಡಬೇಕಿದೆ.












Click it and Unblock the Notifications