ರೈತರು ಪಾಕಿಸ್ತಾನಿಗಳೇ ಅಥವಾ ಎಡಪಂಥೀಯರೇ, ಬಿಜೆಪಿ ನಿರ್ಧರಿಸಲಿ: ಉದ್ಧವ್ ಠಾಕ್ರೆ
ಮುಂಬೈ, ಡಿಸೆಂಬರ್ 14: ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಕಳಂಕ ತರಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಆರೋಪಿಸಿದ್ದಾರೆ.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಭಟನೆ ನಡೆಸುತ್ತಿರುವ ರೈತರು ಎಡಪಂಥೀಯರೇ, ಪಾಕಿಸ್ತಾನಿಗಳೇ ಅಥವಾ ಚೀನಾದಿಂದ ಬಂದವರೇ ಎಂಬುದನ್ನು ಬಿಜೆಪಿ ನಾಯಕರು ನಿರ್ಧರಿಸಬೇಕು ಎಂದು ವ್ಯಂಗ್ಯವಾಡಿದರು.
'ಅಂತಹ ಕೊರೆಯುವ ಚಳಿಯಲ್ಲಿ ರಸ್ತೆಗಳಲ್ಲಿ ಮಲಗಿ ರೈತರು ಹಗಲು ರಾತ್ರಿ ಕಳೆಯುತ್ತಿದ್ದಾರೆ. ಈ ರೈತರು ಎಡಪಂಥೀಯರೇ, ಪಾಕಿಸ್ತಾನಿಗಳೇ ಅಥವಾ ಚೀನಾದಿಂದ ಬಂದವರಾಗಿದ್ದಾರೆಯೇ ಎಂಬುದನ್ನು ಬಿಜೆಪಿ ನಾಯಕರು ನಿರ್ಧರಿಸಬೇಕು' ಎಂದರು.

ತಾವು ರೈತರಿಗೆ ಅನ್ಯಾಯ ಎಸಗುತ್ತಿದ್ದೇವೆ ಎಂಬುದನ್ನು ಬಿಜೆಪಿ ಅರ್ಥಮಾಡಿಕೊಳ್ಳಬೇಕಿದೆ. ರೈತರಿಗೆ ಸಹಾಯ ಮಾಡುವ ಬದಲು ಅವರು ಪಾಕಿಸ್ತಾನಿಗಳು ಮತ್ತು ದೇಶ ವಿರೋಧಿಗಳು ಎಂದು ಬಿಜೆಪಿ ಕರೆಯುತ್ತಿದೆ ಎಂದು ಟೀಕಿಸಿದರು.
'ನೀವು ರೈತರಿಗೆ ಅನ್ಯಾಯ ಮಾಡುತ್ತಿದ್ದೀರಿ ಎಂಬ ಒಂದು ಸಂಗತಿಯನ್ನು ನೀವು ಅರ್ಥಮಾಡಿಕೊಳ್ಳಬೇಕು. ಅವರನ್ನು ದೇಶ ವಿರೋಧಿಗಳೆಂದು ಕರೆಯುತ್ತಿದ್ದೀರಿ? ಇದು ನಮ್ಮ ಸಂಸ್ಕೃತಿಯಲ್ಲ. ನಮ್ಮ ರೈತರ ಜತೆ ಕುಳಿತು ಮಾತನಾಡುವ ಬದಲು ಬಿಜೆಪಿ ಅವರನ್ನು ಪಾಕಿಸ್ತಾನಿಗಳು, ದೇಶ ವಿರೋಧಿಗಳೆಂದು ಕರೆಯುತ್ತಿದೆ. ಪಾಕಿಸ್ತಾನದಿಂದ ಸಕ್ಕರೆ ಮತ್ತು ಈರುಳ್ಳಿಯನ್ನು ತರುತ್ತಿರುವ ಬಿಜೆಪಿಯ ಜನರಿದ್ದಾರೆ. ಈಗ ಅವರು ಪಾಕಿಸ್ತಾನದಿಂದ ರೈತರನ್ನೂ ಕರೆದುಕೊಂಡು ಬರುತ್ತಿದ್ದಾರೆ' ಎಂದರು.
'ರೈತರು ಮತ್ತು ಕಾರ್ಮಿಕರ ಪರವಾಗಿ ಯಾರೇ ಮಾತನಾಡಿದರೂ ಅವರು ದೇಶ ವಿರೋಧಿಗಳೇ? ಬಿಜೆಪಿ ನಾಯಕರಿಗೆ ಕೃಷಿ ಕಾಯ್ದೆಗಳ ಬಗ್ಗೆ ಚೆನ್ನಾಗಿ ಅರಿವಿದ್ದರೆ ಪ್ರತಿಭಟನೆ ನಡೆಸುತ್ತಿರುವ ರೈತರ ಜತೆ ಕುಳಿತು ಏಕೆ ಅವರಿಗೆ ವಿವರಿಸುತ್ತಿಲ್ಲ? ಅವರೇಕೆ ಕ್ಯಾಮೆರಾಗಳ ಮುಂದೆ ಮಾತ್ರ ಮಾತನಾಡುತ್ತಿದ್ದಾರೆ, ಸುದ್ದಿಗೋಷ್ಠಿಗಳನ್ನು ಏಕೆ ನಡೆಸುತ್ತಿದ್ದಾರೆ?' ಎಂದು ಪ್ರಶ್ನಿಸಿದರು.












Click it and Unblock the Notifications