ತರಕಾರಿ ಬೆಲೆ ಏರಿಕೆಗೆ ತರಾವರಿ ಕಾರಣಗಳು

ಅಯೋಧ್ಯಾ ಬಾಬ್ರಿ ಮಸೀದಿ ವಿವಾದದ ಪರಿಣಾಮ ಜನ ಸಾಮಾನ್ಯರ ಮೇಲಂತೂ ನೇರವಾಗಿ ಆಗುತ್ತದೆ ಅದನ್ನು ತಪ್ಪಿಸಲು ಸಾಧ್ಯವಿಲ್ಲ. ತೀರ್ಪು ವಿಳಂಬವಾಗಲಿ, ಮುಂದೂಡಲಿ ಜನ ಸಾಮಾನ್ಯರ ರಥ ಮಾತ್ರ ಸಾಗಲೇಬೇಕು. ಕಳೆದ ವಾರ ಆಹಾರದುಬ್ಬರ ಸುಮಾರು ಶೇ.15.16ಕ್ಕೆ ಏರಿಕೆ ಕಂಡ ಪರಿಣಾಮ ಆಹಾರ ಧಾನ್ಯ, ಹಾಲು, ಹಣ್ಣು, ತರಕಾರಿಗಳ ಬೆಲೆ ಪೈಪೋಟಿಯ ಮೇಲೆ ಏರಿಕೆ ಕಂಡವು.
ದೆಹಲಿ, ಹರ್ಯಾಣ, ಪಂಜಾಬ್, ಹಿಮಾಚಲ ಪ್ರದೇಶ, ಅಸ್ಸಾಂ, ರಾಜಸ್ತಾನ ಹಾಗೂ ಉತ್ತರ ಪ್ರದೇಶ ಸೇರಿದಂತೆ ಹಲವೆಡೆ ಸುರಿಯುತ್ತಿರುವ ಮಳೆಯ ಕಾರಣದಿಂದ ಆಹಾರ ಸರಂಜಾಮುಗಳನ್ನು ಹೊತ್ತು ತರುವ ಟ್ರಕ್ ಗಳು ನಿಂತಲ್ಲೇ ನಿಂತಿದ್ದವು. ಪರಿಣಾಮ ಬೆಂಗಳೂರು ಸೇರಿದಂತೆ ದಕ್ಷಿಣ ಭಾಗದ ತರಕಾರಿ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ, ಮತ್ತದೇ ಗೊಣಗಾಟ, ಮಾರಾಟಗಾರ ಪೇಚಾಟ.
ಧಾನ್ಯಗಳು ಶೇ.6.75, ಬೆಳೆ ಕಾಳುಗಳು ಶೇ. 4.01, ಗೋಧಿ ಶೇ 9.21, ಅಕ್ಕಿ ಶೇ 5.52ರಷ್ಟು ಏರಿಕೆ ಕಂಡಿವೆ. ಇದರ ಜೊತೆಗೆ ಕಳೆದ ವರ್ಷಕ್ಕೆ ಇದೇ ಅವಧಿಗೆ ಹೋಲಿಸಿದರೆ ಹಾಲಿನ ದರ ಶೇ. 23.41 ಏರಿದ್ದು, ಹಣ್ಣುಗಳು ಶೇ. 10.33ರಷ್ಟು ಏರಿಕೆ ಕಂಡಿವೆ. ಆದರೆ, ಅಲೂಗೆಡ್ಡೆ ಬೆಲೆ ಶೇ.48.56 ಮತ್ತು ಈರುಳ್ಳಿ ಶೇ. 1.97ರಷ್ಟು ಇಳಿಕೆಯಾಗಿರುವುದು ಸಮಾಧಾನದ ಸಂಗತಿ.
ಬೆಂಗಳೂರಿನಲ್ಲಿ ಕೆಜಿ ಈರುಳ್ಳಿ ಬೆಲೆ 15 ರು. ಹಾಗೂ ಆಲೂಗೆಡ್ಡೆ ಬೆಲೆ 20 ರು. ತಲುಪಿದೆ. ನಿಂಬೆಹಣ್ಣು ಒಂದಕ್ಕೆ ಬೆಲೆ 5 ರು. ದಾಟಿದ್ದು ಹುಳಿಯಿಲ್ಲದೆ ಅಡುಗೆ ಮಾಡುವಂತಾಗಿದೆ. ಟೊಮಾಟೋ 23ರಿಂದ 25ರ ಆಸುಪಾಸಿನಲ್ಲಿದೆ. ಕುಂಬಳಕಾಯಿ ಕೆಜಿಗೆ 6 ರು. ತಲುಪಿರುವುದರಿಂದ ವಾರದ ಎಲ್ಲಾ ದಿನಗಳಲ್ಲಿ ಕುಂಬಳಕಾಯಿ ಹುಳಿಗೆ ಜನ ಮೊರೆಹೋಗುವಂತಾಗಿದೆ. ಇಲ್ಲದಿದ್ದರೆ ದಂರೋಟೇ ಗತಿ!












Click it and Unblock the Notifications