ಕೊಯ್ಲುನಿಂದಲೇ ಕಾಫಿ ಗುಣಮಟ್ಟ ಕಾಪಾಡಿಕೊಳ್ಳುವುದು ಹೇಗೆ?
ಮಡಿಕೇರಿ, ಜನವರಿ, 24: ಇದು ಕಾಫಿಯ ಕಾಲವಾಗಿರುವುದರಿಂದ ಕೊಡಗು ಸೇರಿದಂತೆ ಕಾಫಿ ಬೆಳೆಯುವ ಪ್ರದೇಶಗಳಲ್ಲಿ ಕಾಫಿ ಕೊಯ್ಲುನ ಭರಾಟೆ ಜೋರಾಗಿದೆ. ಏಕ ಕಾಲದಲ್ಲಿ ಕಾಫಿ ಹಣ್ಣಾಗುವುದರಿಂದ ಆದಷ್ಟು ಬೇಗ ಕೊಯ್ಲು ಮುಗಿಸಲು ಬೆಳೆಗಾರರು ಮುಂದಾಗಿದ್ದಾರೆ. ಹೀಗಾಗಿ ಕಾರ್ಮಿಕರಿಗೆ ಬೇಡಿಕೆ ಜಾಸ್ತಿಯಾಗಿದೆ.
ಇದೀಗ ಕೊಡಗಿಗೆ ಭೇಟಿ ನೀಡಿದ್ದೇ ಆದರೆ ಗಿಡಗಳಲ್ಲಿ ತೂಗಿತೊನೆಯುವ ಕೆಂಪಗಿನ ಕಾಫಿ ಹಣ್ಣುಗಳು, ಅದರ ಕೊಯ್ಲಲ್ಲಿ ನಿರತರಾದ ಕಾರ್ಮಿಕರು, ಕಣದಲ್ಲಿ ರಾಶಿ ಬಿದ್ದಿರುವ ಮತ್ತು ಒಣಗುತ್ತಿರುವ ಕಾಫಿ, ಮತ್ತೊಂದೆಡೆ ವ್ಯಾಪಾರ, ವ್ಯವಹಾರದಲ್ಲಿ ತೊಡಗಿರುವ ಮಾರಾಟಗಾರರು. ಹೀಗೆ ಕಾಫಿಯ ಸುತ್ತಲೂ ಗಿರಕಿ ಹೊಡೆಯುತ್ತಿರುವ ದೃಶ್ಯಗಳು ಕಣ್ಣಿಗೆ ರಾಚುತ್ತವೆ.
ಸಾಮಾನ್ಯವಾಗಿ ಜನವರಿಯಿಂದ ಮಾರ್ಚ್‌ವರೆಗೆ ಇಂತಹ ದೃಶ್ಯಗಳೇ ಕೊಡಗಿನಲ್ಲಿ ಕಾಣ ಸಿಗುತ್ತವೆ. ಕಾಫಿ ಕೊಯ್ಲು ನಂತರ ಅದನ್ನ ಕಣದಲ್ಲಿ ಒಣಗಿಸಿ ಮಾರಾಟ ಮಾಡುವ ತನಕ ಬೆಳೆಗಾರರಿಗೆ ನೆಮ್ಮದಿಯಿಲ್ಲದಂತಾಗಿದೆ. ನಂತರ ದಾಸ್ತಾನಿಟ್ಟು ತಮ್ಮ ಅನುಕೂಲಕ್ಕೆ ತಕ್ಕಂತೆ ಮಾರಾಟ ಮಾಡುವುದು ಬೆಳೆಗಾರರದ್ದಾಗಿದೆ. ಕೆಲವರು ಕಾಫಿ ಕೊಯ್ಲು ಮುಗಿಸಿ ಒಣಗಿದ ತಕ್ಷಣವೇ ಅವತ್ತಿನ ಮಾರುಕಟ್ಟೆ ಬೆಲೆಗೆ ಮಾರಾಟ ಮಾಡಿದರೆ, ಮತ್ತೆ ಕೆಲವರು ದಾಸ್ತಾನಿಟ್ಟು ಉತ್ತಮ ಬೆಲೆ ಬರುವ ತನಕ ಕಾಯುವುದಿದೆ.
ಈ ಬಾರಿ ಕಾಫಿಯ ಬೆಲೆ ಉತ್ತಮವಾಗಿದೆಯಾದರೂ ಕಳೆದ ವರ್ಷಕ್ಕೆ ಹೋಲಿಸಿದರೆ ಇಳುವರಿಯಲ್ಲಿ ಕುಸಿತ ಕಂಡಿದೆ.
ಈಗ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಾಫಿಗೆ ಹೆಚ್ಚಿನ ಬೇಡಿಕೆ ಬಂದಿರುವ ಕಾರಣ ಮುಂದಿನ ದಿನಗಳಲ್ಲಿ ಕಾಫಿ ಬೆಲೆ ಗಗನಕ್ಕೇರಬಹುದು ಎಂದು ವಿಶ್ಲೇಷಿಸಲಾಗುತ್ತದೆ. ಯಾವಾಗ ಬೆಲೆ ಜಾಸ್ತಿಯಾಗುತ್ತದೆಯೋ ಕಾಫಿ ಪುಡಿಗಳನ್ನು ಕಲಬೆರಕೆ ಮಾಡುವುದು ಕೂಡ ನಡೆಯುತ್ತದೆ.
ಮತ್ತೊಂದೆಡೆ ನಮ್ಮ ಕಾಫಿ ಹೊರ ದೇಶಗಳಿಗೆ ರಫ್ತು ಆಗುವುದರಿಂದ ನಾವು ಕೊಯ್ಲು ಮಾಡುವುದು, ಒಣಗಿಸುವುದು, ದಾಸ್ತಾನಿಡುವುದು ಹೀಗೆ ಎಲ್ಲ ಹಂತದಲ್ಲಿ ಗುಣಮಟ್ಟವನ್ನು ಕಾಪಾಡುವುದು ಬಹುಮುಖ್ಯ ಆಗುತ್ತದೆ. ಬಹಳಷ್ಟು ಸಲ ಗುಣಮಟ್ಟದ ಕೊರತೆಯಿಂದಾಗಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಗುಣಮಟ್ಟ ಕಾಪಾಡಿಕೊಳ್ಳುವುದು ಹೇಗೆ?; ಕಾಫಿಮಂಡಳಿ ಹೇಳುವ ಪ್ರಕಾರ ಕೊಯ್ಲು ಹಂತದಿಂದಲೇ ಕಾಫಿಯ ಗುಣಮಟ್ಟವನ್ನು ಕಾಪಾಡಿಕೊಳ್ಳುವುದು ಬಹುಮುಖ್ಯವಾಗಿದೆ. ನಮ್ಮ ಕಾಫಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಹೆಸರು ಪಡೆಯಬೇಕಾದರೆ ಗುಣಮಟ್ಟ ಕಾಪಾಡಿಕೊಳ್ಳುವುದು ಬೆಳೆಗಾರರ ಕರ್ತವ್ಯವಾಗುತ್ತದೆ. ಇದರಿಂದ ಲಾಭ ಮಾತ್ರವಲ್ಲದೆ, ರಾಜ್ಯ ಮತ್ತು ರಾಷ್ಟ್ರದ ಗೌರವವೂ ಹೆಚ್ಚಾಗುತ್ತದೆ.
ಇವತ್ತಿನ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬರೂ ಪ್ರತಿಯೊಂದು ವಸ್ತುವಿನ ಗುಣಮಟ್ಟವನ್ನು ಅರಿತೇ ಅದನ್ನು ಖರೀದಿಸುತ್ತಾರೆ. ಹೀಗಿರುವಾಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾರಾಟವಾಗುವ ಕಾಫಿಯ ಗುಣಮಟ್ಟವನ್ನು ನಾವು ಕಾಪಾಡದೆ ಹೋದರೆ ಅದರ ನಷ್ಟವನ್ನು ನಾವೇ ಅನುಭವಿಸಬೇಕಾಗುತ್ತದೆ. ಇಷ್ಟಕ್ಕೂ ಕಾಫಿಯ ಗುಣಮಟ್ಟವನ್ನು ಕಾಪಾಡುವುದು ಹೇಗೆ ಎಂಬ ಪ್ರಶ್ನೆ ಬೆಳೆಗಾರರನ್ನು ಕಾಡದಿರದು.
ಇದಕ್ಕೆ ಉತ್ತರವಾಗಿ ಕಾಫಿ ಮಂಡಳಿಯು ಹಲವಾರು ಸಲಹೆಗಳನ್ನು ನೀಡಿದೆ. ಆ ಪ್ರಕಾರವಾಗಿ ಹೇಳುವುದಾದರೆ, ಕಾಫಿ ತೋಟಗಳ ಗಿಡಗಳಲ್ಲಿನ ಕಾಫಿ ಸಂಪೂರ್ಣ ಅಲ್ಲದಿದ್ದರೂ ಶೇಕಡ 80ರಷ್ಟು ಹಣ್ಣಾದ ಬಳಿಕ ಬೆಳೆಗಾರರು ಕೊಯ್ಲು ಮಾಡಬೇಕು. ಅದರಲ್ಲೂ ಹಣ್ಣು ಮತ್ತು ಕಾಯಿಯನ್ನು ಪ್ರತ್ಯೇಕ ಮಾಡಿ ಒಣಗಿಸಿದರೆ ಇನ್ನು ಉತ್ತಮ.
ಕಣದಲ್ಲಿ ಒಣಗಿಸಲು ಹರಡುವಾಗ 8 ಸೆಂಟಿ ಮೀಟರ್‌ನಷ್ಟು ದಪ್ಪ ಇರಬೇಕಾಗುತ್ತದೆ. ಕಾಂಕ್ರಿಟ್ ಕಣದಲ್ಲಿ ಒಣಗಿಸುವುದಾದರೆ, ತೊಂದರೆ ಇಲ್ಲ. ಅದನ್ನು ಹೊರತು ಪಡಿಸಿ ಬಯಲಲ್ಲಿ ಹಾಕಿ ಒಣಗಿಸುವಾಗ ಎಚ್ಚರ ವಹಿಸಬೇಕು. ಕಲ್ಲು ಮಣ್ಣು ಸೇರದಂತೆ ನೋಡಿಕೊಳ್ಳಬೇಕು.
ಕಾಫಿ ಒಣಗಿಸುವ ಕ್ರಮ ಹೇಗಿರಬೇಕು?: ಕಾಫಿ ಕೊಯ್ಲು ಮಾಡುವಾಗ ಕಸಗಳು ಹೆಚ್ಚಿನ ಪ್ರಮಾಣದಲ್ಲಿ ಬರುವುದರಿಂದ ಅವುಗಳನ್ನು ತೆಗೆದು ಶುದ್ಧಗೊಳಿಸಬೇಕಾಗುತ್ತದೆ. ಹರಡಿದ ಕಾಫಿಯನ್ನು ದಿನಕ್ಕೆ ನಾಲ್ಕೈದು ಬಾರಿಯಾದರೂ ಕದಲಿಸುತ್ತಿರಬೇಕು. ಹೀಗೆ ಮಾಡುವುದರಿಂದ ಬಿಸಿಲು ಚೆನ್ನಾಗಿ ಬೀಳಲು ಅನುಕೂಲ ಆಗುತ್ತದೆ.
ರಾತ್ರಿ ವೇಳೆ ಹೆಚ್ಚಿನ ಪ್ರಮಾಣದಲ್ಲಿ ಮಂಜು ಬೀಳುವುದರಿಂದ ರಾತ್ರಿ ವೇಳೆ ಮುಚ್ಚಿಟ್ಟು ಬೆಳಗ್ಗೆ ಸೂರ್ಯನ ಶಾಖ ಹೆಚ್ಚಾಗಿ ಮಂಜು ಕರಗಿದ ಬಳಿಕ ಕಾಫಿಯನ್ನು ಹರಡುವುದು ಒಳ್ಳೆಯದು. ಹೀಗೆ ಮಾಡುತ್ತಾ ಬಂದರೆ ಕಾಫಿ ಬೇಗ ಒಣಗಲು ಸಹಕಾರಿಯಾಗುತ್ತದೆ. ಒಂದು ಹಿಡಿಯಷ್ಟು ಚೆರ್ರಿ ಕಾಫಿಯನ್ನು ತೆಗೆದುಕೊಂಡು ಅಲ್ಲಾಡಿಸಿದರೆ ಒಳಗಿನ ಬೀಜ ಅಲ್ಲಾಡುವ ಶಬ್ದ ಕೇಳಿಸಿದರೆ ಕಾಫಿ ಒಣಗಿದೆ ಎಂದರ್ಥ.
ಕಾಫಿಮಂಡಳಿ ಪ್ರಕಾರ ಒಣಗಿದ ಕಾಫಿಯ ತೇವಾಂಶವು ತೇವಾಂಶದ ಮಾಪಕದಲ್ಲಿ ತೋರಿಸುವಂತೆ ಅರೇಬಿಕಾ ಮತ್ತು ರೋಬಸ್ಟಾ ಪಾರ್ಚ್‌ಮೆಂಟ್ ಶೇಕಡ 10, ಅರೇಬಿಕಾ ಚೆರ್ರಿ ಶೇಕಡ 10.5, ರೋಬಸ್ಟಾ ಚೆರ್ರಿ ಶೇಕಡ 11 ಇರಬೇಕಂತೆ. ಇನ್ನು ಫಾರ್ಲಿಟ್ ಮೂಲಕವೂ ಅಂದಾಜು ಮಾಡಬಹುದಾಗಿದ್ದು, ಒಂದು ಫಾರ್ಲಿಟ್‌ಗೆ ಅರೇಬಿಕಾ, ರೋಬಸ್ಟಾ ಪಾರ್ಚ್ ಮೆಂಟ್ 15.5ಕೆಜಿ, ಅರೇಬಿಕಾ ಚೆರ್ರಿ 16ಕೆಜಿ, ರೋಬಸ್ಟಾ ಚೆರ್ರಿ 18 ಕೆಜಿ ಇರಬೇಕಂತೆ. ಹಾಗೆಂದು ಇದೇ ಖಚಿತವಲ್ಲ ಬದಲಾವಣೆಗಲಾಗುವ ಸಾಧ್ಯತೆ ಇರುತ್ತದೆ. ಆದರೆ, ಇಷ್ಟಿದ್ದರೆ ಉತ್ತಮವಾಗಿ ಒಣಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಬಹುದಾಗಿದೆ.
ದಾಸ್ತಾನಿಡುವಾಗ ಎಚ್ಚರಿಕೆ ವಹಿಸುವುದು ಅಗತ್ಯ: ಕಾಫಿಯನ್ನು ದಾಸ್ತಾನಿಡಲು ಚೀಲಕ್ಕೆ ತುಂಬುವಾಗಲೂ ಎಚ್ಚರಿಕೆ ವಹಿಸಬೇಕಾಗುತ್ತದೆ. ಬೇರೆ, ಬೇರೆ ದಿನಗಳಲ್ಲಿ ಒಣಗಿದ ಕಾಫಿಯನ್ನು ಪ್ರತ್ಯೇಕ ಚೀಲಗಳಲ್ಲೇ ತುಂಬಿಡುವುದು ಉತ್ತಮ. ಹಾಗೆಯೇ ದಾಸ್ತಾನಿಡುವ ಗೋದಾಮು ಕೂಡ ಶುದ್ಧವಾಗಿರಬೇಕು. ಕೀಟ ನಾಶಕಗಳು ಶೇಖರಿಸಿದ ಗೋದಾಮು ಆಗಿರಬಾರದು. ಜೊತೆಗೆ ತೇವಾಂಶವೂ ಇರಬಾರದು.

ಕಾಫಿ ತುಂಬಿದ ಚೀಲಗಳನ್ನು ನೆಲದ ಮೇಲೆ ಇಡದೆ ಮರದ ಹಲಗೆ ಮೇಲೆ ಕಟ್ಟಿಡುವುದು ಸೂಕ್ತ. ಕಾಫಿ ಬೇಳೆ ಮಾಡುವ ಮುನ್ನ ಚೆರ್ರಿ ಚೆನ್ನಾಗಿ ಒಣಗಿಸುವುದು ಒಳ್ಳೆಯದು. ಒಟ್ಟಾರೆಯಾಗಿ ಹೇಳಬೇಕೆಂದರೆ ಕಾಫಿಬೆಳೆಗಾರರು ಕೊಯ್ಲುನಿಂದಲೇ ಗುಣಮಟ್ಟವನ್ನು ಕಾಯ್ದುಕೊಂಡು ಬಂದರೆ ಖರೀದಿಸುವ ವ್ಯಾಪಾರಸ್ಥರಿಗೂ, ಅದನ್ನು ಬೇರೆ ದೇಶಗಳಿಗೆ ರಫ್ತು ಮಾಡುವ ರಫ್ತುದಾರರಿಗೂ ಅನುಕೂಲವಾಗಲಿದೆ.
ಜೊತೆಗೆ ಗುಣಮಟ್ಟದ ಕಾಫಿಯನ್ನು ನಾವು ನೀಡಿದ್ದೇ ಆದರೆ ದೇಶದ ಗೌರವ ಉಳಿಯುವುದರೊಂದಿಗೆ ಬೇಡಿಕೆ ಹೆಚ್ಚಲು ಕಾರಣವಾಗಲಿದೆ. ಕಾಫಿಯ ಬಗ್ಗೆ ಅರಿತು ಒಂದಷ್ಟು ಮುಂಜಾಗ್ರತೆ ವಹಿಸಿದ್ದೇ ಆದರೆ ಕಾಫಿಯ ಗುಣಮಟ್ಟವನ್ನು ಕಾಪಾಡಿಕೊಳ್ಳಲು ಸಾಧ್ಯವಾಗಲಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.
-
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು












Click it and Unblock the Notifications