ದಾವಣಗೆರೆ ಜಿಲ್ಲೆಯಲ್ಲಿ ಮತ್ತೆ ಮಳೆರಾಯನ ಅಟ್ಟಹಾಸ; ಅಡಿಕೆ ಬೆಳೆಗಾರರು ತತ್ತರ
ದಾವಣಗೆರೆ, ಅಕ್ಟೋಬರ್. 10: ದಾವಣಗೆರೆ ಜಿಲ್ಲೆಯಾದ್ಯಂತ ಮತ್ತೆ ಮಳೆ ಆರ್ಭಟ ಜೋರಾಗಿದೆ. ಈಗಾಗಲೇ ಸುರಿದ ಮಳೆಯಿಂದ ರೈತರ ಬದುಕು ಮೂರಾಬಟ್ಟೆ ಆಗಿದೆ. ಜಿಲ್ಲೆಯಲ್ಲಿ ತೋಟಗಳಿಗೆ ನೀರು ನುಗಿದ್ದು, ಇದೀಗ ಕೊಯ್ಲಿಗೆ ಬಂದಿರುವ ಅಡಿಕೆ ಅವನತಿಯತ್ತ ಸಾಗುವ ಎಲ್ಲ ಲಕ್ಷಣಗಳು ಎದ್ದು ಕಾಣುತ್ತಿವೆ. ಇದರಿಂದ ಅಡಿಕೆ ಬೆಳೆದ ರೈತರು ದಿಕ್ಕು ತೋಚದಂತೆ ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತಹ ವಾತವರಣ ನಿರ್ಮಾಣ ಆಗಿದೆ.
ಧಾರಾಕಾರವಾಗಿ ಮಳೆ ಸುರಿದ ಕಾರಣ ಅಡಿಕೆ ತೋಟಗಳಿಗೆ ಭಾರಿ ಪ್ರಮಾಣ ನೀರಿ ನುಗ್ಗಿದೆ. ಅದರಲ್ಲೂ ಚನ್ನಗಿರಿ ತಾಲೂಕಿನಲ್ಲಿ ಎಡಬಿಡದೇ ಮಳೆಯಾಗುತ್ತಿದ್ದು, ಮಲಹಾಳ್ ಗ್ರಾಮದಲ್ಲಿನ ಕೆರೆ ತುಂಬಿದೆ. ಪರಿಣಾಮ ಅಡಿಕೆ ತೋಟಗಳಿಗೆ ಭಾರಿ ಪ್ರಮಾಣದ ನೀರು ನುಗ್ಗಿ ಅವಾಂತರ ಸೃಷ್ಟಿ ಮಾಡಿದೆ. ಅಡಿಕೆ ತೋಟಗಳಲ್ಲಿ ನೀರು ನಿಂತಿರುವುದರಿಂದ ರೈತರು ಫಸಲು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಕಳೆದ ಒಂದು ತಿಂಗಳ ಹಿಂದೆ ಸುರಿದ ಮಳೆಯಿಂದ ಇದೇ ರೀತಿ ನೀರು ತೋಟಗಳಿಗೆ ನುಗ್ಗಿ ಅಡಿಕೆ ಮರಗಳಿಗೆ ಶೀತವಾಗಿತ್ತು.
ಮತ್ತೆ ನೀರು ನುಗ್ಗಿರುವುದರಿಂದ ಅಡಿಕೆ ತೋಟಗಳಲ್ಲಿ ತೇವಾಂಶ ಹೆಚ್ಚಾಗುವ ಸಾಧ್ಯತೆಗಳು ಇವೆ. ತೇವಾಂಶ ಹೆಚ್ಚಾದಂತೆ ಮರಗಳು ರೋಗಕ್ಕೆ ತುತ್ತಾಗಿ ನಾಶವಾಗುವ ಸಾಧ್ಯತೆ ಇದೆ ಎನ್ನುವ ಆತಂಕದಲ್ಲಿ ರೈತರು ಇದ್ದಾರೆ. ದಾವಣಗೆರೆ ತಾಲೂಕಿನ ಕಾಟೇಹಳ್ಳಿ ಹಾಗೂ ಹುಣಸೆ ಕಟ್ಟೆ ಗ್ರಾಮದಲ್ಲಿ ಅಬ್ಬರಿಸಿ ಬೊಬ್ಬೆರೆದ ಮಳೆಗೆ ಅಲ್ಲಿನ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಕಳೆದ ರಾತ್ರಿ ಹಾಗೂ ಬೆಳಗ್ಗೆ ಸುರಿದ ಮಳೆಗೆ ಕಾಟೆಹಳ್ಳಿ ಗ್ರಾಮದಿಂದ ಕಾಟೆಹಳ್ಳಿ ತಾಂಡ ಸಂಪರ್ಕ ರಸ್ತೆ ಬಂದ್ ಆಗಿದೆ. ಇದರಿಂದ ವಾಹನಗಳ ಸಂಚಾರ, ಜನರ ಓಡಾಟ ಸಂಪೂರ್ಣ ನಿರ್ಬಂಧ ಆಗಿದೆ.

ಕ್ಯಾರೆ ಅನ್ನದ ಜಿಲ್ಲೆಯ ಜನಪ್ರತಿನಿಧಿಗಳು
ಇಷ್ಟೆಲ್ಲಾ ಅನಾಹುತಗಳು ಆದರೂ ಕೂಡ ಯಾವೊಬ್ಬ ಜನಪ್ರತಿನಿಧಿಯು ಸ್ಥಳಕ್ಕೆ ಭೇಟಿ ನೀಡದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಕೂಡಲೇ ಸೇತುವೆ ನಿರ್ಮಾಣ ಮಾಡುವ ಮೂಲಕ ಶಾಶ್ವತ ಪರಿಹಾರ ದೊರಕಿಸಿ ಕೊಡಬೇಕು. ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಬೇಕು ಎಂದು ಅಲ್ಲಿನ ಸ್ಥಳೀಯರು ಒತ್ತಾಯಿಸಿದ್ದಾರೆ.

ತೋಟಗಳು ಜಲಾವೃತ; ರೈತರು ಕಂಗಾಲು
ಸಾವಿರಾರು ಎಕರೆ ಅಡಿಕೆ ತೋಟ ಜಲಾವೃತವಾಗಿದ್ದು, ಅಡಿಕೆ ಬೆಳೆಗಾರರು ಕಂಗಾಲಾಗಿದ್ದಾರೆ. ಈ ಬಾರಿ ಅಡಿಕೆಗೆ ಉತ್ತಮ ಧಾರಣೆ ಇದೆ. ಆದರೆ ಮಳೆಯಿಂದಾಗಿ ಫಸಲು ಕಡಿಮೆ ಬಂದಿರುವುದು ಒಂದೆಡೆ ಆದರೆ, ಮತ್ತೊಂದೆಡೆ ತೋಟಗಳಲ್ಲಿ ನಿಂತಿರುವ ನೀರನ್ನು ಹೊರಹಾಕುವುದೇ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಚನ್ನಗಿರಿ ತಾಲೂಕು ಒಂದರಲ್ಲಿಯೇ ಸುಮಾರು ಒಂದೂವರೆ ಸಾವಿರಕ್ಕೂ ಹೆಚ್ಚು ಎಕರೆ ಪ್ರದೇಶ ಜಲಾವೃತವಾಗಿದೆ. ತೋಟದ ಒಳಗೆ ಹೋಗಲೂ ಅಡಿಕೆ ಬೆಳೆಗಾರರು ಪರದಾಡುವಂತಾಗಿದೆ. ಅಡಿಕೆ ಕೊಯ್ಲಿನ ವೇಳೆಯಲ್ಲಿ ಸುರಿದಿರುವ ಭಾರಿ ಮಳೆಯು ದೊಡ್ಡ ಆಘಾತವನ್ನು ತಂದೊಡ್ಡಿದೆ.

ಮಳೆ ನೀರಿನಲ್ಲಿಯೇ ರೈತರ ಪೇಚಾಟ
ಇನ್ನು ಕೆಲವೆಡೆ ಯಾವುದೇ ಪರ್ಯಾಯ ದಾರಿ ಇಲ್ಲದೇ ರೈತರು ತೆಪ್ಪ ಬಳಸಿ ಅಡಿಕೆ ಕೊಯ್ಲು ಮಾಡುತ್ತಿದ್ದಾರೆ. ನೀರಿನಲ್ಲಿಯೇ ನಿಂತು ತೋಟಗಳಲ್ಲಿ ಅಡಿಕೆ ಕೊಯ್ಯುತ್ತಿರುವುದು ಸಾಮಾನ್ಯವಾಗಿಬಿಟ್ಟಿದೆ. ಕೆರೆ ಕಟ್ಟೆಗಳು ತುಂಬಿ ಹರಿಯುತ್ತಿದ್ದು, ಕೋಡಿಗಳು ಬಿದ್ದು ನೀರು ಜಮೀನು ಹಾಗೂ ತೋಟಗಳಿಗೆ ನುಗ್ಗುತ್ತಲೇ ಇದೆ. ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬ ಪರಿಸ್ಥಿತಿ ಅಡಿಕೆ ಬೆಳೆಗಾರರದ್ದಾಗಿದೆ. ಇದೇ ರೀತಿ ಮಳೆ ಮುಂದುವರೆದರೆ ಅಡಿಕೆ ಇಳುವರಿ ಭಾರಿ ಕಡಿಮೆ ಆಗುತ್ತದೆ. ಇದರಿಂದ ಯಾವ ಲಾಭವೂ ಸಿಗುವುದಿಲ್ಲ ಎಂದು ಅಡಿಕೆ ಬೆಳೆಗಾರರು ಅಳಲು ತೋಡಿಕೊಂಡಿದ್ದಾರೆ.

ವರುಣನ ಅಟ್ಟಹಾಸಕ್ಕೆ ನಲುಗಿದ ರೈತ
ಹೀಗೆ ಮಳೆ ಮುಂದುವರೆದರೆ ಅಡಿಕೆ ಮರಗಳು ಧರೆಶಾಹಿ ಆಗುವ ಆತಂಕವೂ ಎದುರಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹವಾಗುತ್ತಿರುವ ಮಳೆ ನೀರನ್ನು ತೋಟಗಳಿಂದ ಹೊರ ಹಾಕುವುದೇ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಒಟ್ಟಿನಲ್ಲಿ ಈ ಬಾರಿ ವರುಣನ ಅಬ್ಬರದಿಂದ ರೈತರ ಬೆಳೆ ನೀರಿನಲ್ಲಿ ಕೊಚ್ವಿ ಹೋದರೆ, ಮತ್ತೊಂದೆಡೆ ಇನ್ನು ಹೆಚ್ಚಿನ ಬೆಳೆಗಳು ಜಲಾವೃತವಾಗುವ ಆತಂಕದಲ್ಲಿ ರೈತರಿದ್ದಾರೆ.












Click it and Unblock the Notifications