ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಮಂಡ್ಯಲ್ಲಿ ರೈತರಿಂದ ರಸ್ತೆ ತಡೆ ಪ್ರತಿಭಟನೆ

ಮಂಡ್ಯ, ಸೆಪ್ಟೆಂಬರ್‌, 01: ಜಿಲ್ಲೆಯ ಜೀವನಾಡಿ ಕೃಷ್ಣರಾಜಸಾಗರ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ವಿರೋಧಿಸಿ ರೈತರು ಮಂಡ್ಯದಲ್ಲಿ ರಸ್ತೆ ತಡೆ ನಡೆಸಿದರು.

ನಗರದ ಜೆ.ಸಿ. ವೃತ್ತದಲ್ಲಿ ಜಮಾಯಿಸಿದ ರೈತ ಸಂಘದ ಕಾಕರ್ತರು, ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಯನ್ನು ಖಂಡಿಸಿ ಕೆಲ ಕಾಲ ವೃತ್ತದಲ್ಲಿ ವಾಹನ ಸಂಚಾರಕ್ಕೆ ಅಡ್ಡಿಪಡಿಸಿದರು. ರೈತರ ದಿಢೀರ್ ಪ್ರತಿಭಟನೆ ಹಿನ್ನೆಲೆಯಲ್ಲಿ ಕೆಲ ಕಾಲ ವಾಹನ ಸಂಚಾರ ವ್ಯವಸ್ಥೆಯಲ್ಲಿ ಅಸ್ತವ್ಯಸ್ತ ಉಂಟಾಯಿತು. ಸರ್ಕಾರಿ ಬಸ್‌ಗಳು ಮುಂದೆ ಸಂಚರಿಸಲು ಮುಂದಾದಾಗ ಪ್ರತಿಭಟನಾಕಾರರು ಬಸ್ ಮುಂದೆ ಕುಳಿತು ಅಡ್ಡಿಪಡಿಸಿದರು.

farmers-protest-in-mandya-against-cauvery-water

ಅಲ್ಲದೆ ಕಾವೇರಿ ಕೊಳ್ಳದ ರೈತರ ಹಿತ ಬದಿಗೊತ್ತಿ ತಮಿಳುನಾಡಿಗೆ ನೀರು ಹರಿಸುತ್ತಿರುವ ರಾಜ್ಯ ಸರ್ಕಾರ ರೈತ ದ್ರೋಹಿಯಾಗಿದೆ ಎಂದು ಘೋಷಣೆ ಮೊಳಗಿಸಿದರು. ಇನ್ನು ಕೇಂದ್ರ ಸರ್ಕಾರ ಸಂಕಷ್ಟಕಾಲದಲ್ಲಿ ಮಧ್ಯಪ್ರವೇಶಿಸಬೇಕಾಗಿತ್ತು. ಆದರೆ ಕರ್ನಾಟಕದ ವಿಚಾರದಲ್ಲಿ ನಿರಂತರವಾಗಿ ಅನ್ಯಾಯ ಮಾಡುತ್ತಿದೆ ಎಂದು ಕಿಡಿಕಾರಿದರು.

ಆಗಸ್ಟ್‌ ತಿಂಗಳಿನಲ್ಲಿ 13 ಟಿಎಂಸಿ ನೀರು ಹರಿಸಿರುವ ಸರ್ಕಾರ ಇದೀಗ ಮತ್ತೆ ನೀರು ಬಿಟ್ಟಿದೆ. ಕೃಷ್ಣರಾಜಸಾಗರ ಜಲಾಶಯದಲ್ಲಿ ನೀರಿನ ಪ್ರಮಾಣ 100 ಅಡಿಗೆ ಕುಸಿದಿದೆ. ಇಲ್ಲಿನ ಬೆಳೆದು ನಿಂತಿರುವ ಬೆಳೆಗೆ ನೀರು ಕೊಡುತ್ತಿಲ್ಲ. ಹೊಸ ಬೆಳೆ ನಾಟಿ ಮಾಡಲು ಸಾಧ್ಯವಾಗಿಲ್ಲ, ಇದೇ ರೀತಿ ನೀರು ಹರಿಸುತ್ತಿದ್ದರೆ ಕುಡಿಯಲು ನೀರು ಸಹ ಇಲ್ಲದಂತಾಗುತ್ತದೆ. ಈ ಹಿನ್ನೆಲೆಯಲ್ಲಿ ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ಈ ತಕ್ಷಣ ನಿಲ್ಲಿಸುವಂತೆ ಒತ್ತಾಯಿಸಿದರು.

ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಮತ್ತಷ್ಟು ದಿನ ಮುಂದೂಡುವುದು, ತಮಿಳುನಾಡಿಗೆ ಹೆಚ್ಚಿನ ನೀರು ಹರಿಯಲಿ ಎಂಬ ಹುನ್ನಾರವಾಗಿದೆ. ರಾಜ್ಯದ ಜಲಾಶಯಗಳ ವಾಸ್ತವ ಪರಿಸ್ಥಿತಿ ಅರಿಯಲು ನೀರಾವರಿ ತಜ್ಞರ ತಂಡ ಕಳುಹಿಸಿಕೊಡಬೇಕು. ಜಲಾಶಯದಲ್ಲಿರುವ ನೀರಿನ ಲಭ್ಯತೆ ಬಗ್ಗೆ ತಿಳಿದುಕೊಳ್ಳಲಿ. ಅದನ್ನು ಬಿಟ್ಟು ನೀರು ಹರಿಸಲು ಪದೇ ಪದೇ ಆದೇಶ ಮಾಡುವುದು ಮಲತಾಯಿ ಧೋರಣೆ ಅಲ್ಲವೇ? ಎಂದು ಪ್ರಶ್ನಿಸಿದ ಪ್ರತಿಭಟನಾ ನಿರತ ರೈತರು ರಾಜ್ಯ ಸರ್ಕಾರ ಯಾವುದಕ್ಕೂ ಮಣಿಯದೆ ರೈತರ ಹಿತ ಕಾಪಾಡಲು ಮುಂದಾಗಬೇಕು ಎಂದು ಆಗ್ರಹಿಸಿದರು.

ಕಾವೇರಿ ಕೊಳ್ಳದ ಜಲಾಶಯಗಳಿಂದ ತಮಿಳುನಾಡಿಗೆ ಹರಿಸುತ್ತಿರುವ ನೀರು ನಿಲ್ಲಿಸುವವರೆಗೂ ಹೋರಾಟ ಮುಂದುವರಿಸುವುದಾಗಿ ರೈತರು ಎಚ್ಚರಿಸಿದರು. ಈ ವೇಳೆ ರೈತ ಸಂಘದ ಮರಿ ಚೆನ್ನಪ್ಪ, ವಿಜಯ್ ಕುರ್ಮಾ, ಬಿದರಕೋಟೆ ರಮೇಶ್, ಇಂಡುವಾಳು ಸಿದ್ದೇಗೌಡ, ಅಣ್ಣೂರು ಮಹೇಂದ್ರ, ರಾಮಕೃಷ್ಣೇಗೌಡ, ಜವರೇಗೌಡ ಪ್ರತಿಭಟನೆ ನೇತೃತ್ವ ವಹಿಸಿದ್ದರು.

ಶ್ರೀರಂಗಪಟ್ಟಣದಲ್ಲಿ ಬಾರ್ ಕೋಲು ಚಳವಳಿ

ಕಾವೇರಿ ಕಣಿವೆ ರೈತರ ಹಿತ ಕಡೆಗಣಿಸಿ ತಮಿಳುನಾಡಿಗೆ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಅನ್ನದಾತರ ಆಕ್ರೋಶ ತೀವ್ರ ಸ್ವರೂಪ ಪಡೆಯುತ್ತಿದ್ದು, ಶ್ರೀರಂಗಪಟ್ಟಣದಲ್ಲಿ ರೈತರು ಬಾರ್ ಕೋಲು ಚಳವಳಿ ನಡೆಸಿ ಆಳುವ ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ.

ರೈತ ವಿರೋಧಿ ಸರ್ಕಾರದ ವಿರುದ್ಧ ನಿರಂತರವಾಗಿ ಹೋರಾಟ ನಡೆಸುತ್ತಾ ಬಂದಿರುವ ಭೂಮಿತಾಯಿ ಹೋರಾಟ ಸಮಿತಿ ನೇತೃತ್ವದಲ್ಲಿ ಮೈಸೂರು ಬೆಂಗಳೂರು ಹೆದ್ದಾರಿಯ ಕುವೆಂಪು ವೃತ್ತದಲ್ಲಿ ರೈತರು ಬಾರ್ ಕೋಲು ಚಳವಳಿ ನಡೆಸಿ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ತಾಲೂಕು ಕಚೇರಿಗೆ ತೆರಳಿ ಧರಣಿ ನಡೆಸಿದರು.

ತಮಿಳುನಾಡಿಗೆ ನೀರು ಬಿಟ್ಟಿರುವುದಕ್ಕೆ ರೈತರು ವಿರೋಧ ಮಾಡುತ್ತಿದ್ದರೂ ಮಾನಗೇಡಿ ಸರ್ಕಾರ ನಿರಂತರವಾಗಿ ನೀರು ಹರಿಸುತ್ತಿದೆ. ಕೆಆರ್‌ಎಸ್ ಜಲಾಶಯವನ್ನು ಬರಿದು ಮಾಡುವ ಮೂಲಕ ರೈತರ ಜೀವನವನ್ನು ನಾಶ ಮಾಡಲು ಹೊರಟಿದೆ ಎಂದು ಕಿಡಿ ಕಾರಿದರು.

ಕಾವೇರಿ ನದಿಗೆ ಹೆಚ್ಚಿನ ಪ್ರಮಾಣದ ನೀರು ಬಿಡುಗಡೆ ಮಾಡುವ ಮೂಲಕ ನೆರೆ ರಾಜ್ಯದ ರೈತರನ್ನು ಕಾಪಾಡಲು ಮುಂದಾಗಿದ್ದು, ಕರ್ನಾಟಕ ರೈತರ ಬಗ್ಗೆ ಸರ್ಕಾರಕ್ಕೆ ಕಿಂಚಿತ್ತೂ ಕಾಳಜಿ ಇಲ್ಲದಂತಾಗಿದೆ. ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಪ್ರತಿನಿತ್ಯ 5,000 ಕ್ಯೂಸೆಕ್ ನೀರು ಬಿಡಲು ಆದೇಶಿಸಿದ್ದರೆ ಕೆಆರ್‌ಎಸ್‌ನಿಂದ 7,000ಕ್ಕೂ ಹೆಚ್ಚು ಕ್ಯೂಸೆಕ್ ನೀರು ಬಿಟ್ಟಿದ್ದರೆ, ಕಬಿನಿ ಜಲಾಶಯದಲ್ಲಿ ನೀರು ಹರಿಸಲಾಗುತ್ತಿದೆ ಎಂದು ಹೇಳಿದರು.

ಬೆಳೆದು ನಿಂತಿರುವ ಬೆಳೆ ರಕ್ಷಣೆಗೆ ನೀರಿಲ್ಲದ ಪರಿಸ್ಥಿತಿಯಲ್ಲಿ ಜಲಾಶಯ ಬರಿದು ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಲಿದೆ. ರೈತರ ಭವಿಷ್ಯದ ಜೊತೆಗೆ ಜನ ಜಾನುವಾರುಗಳಿಗೂ ಸರ್ಕಾರದ ನಿಲುವು ಸಂಕಷ್ಟ ತರಲಿದೆ ಎಂದು ಹೇಳಿದರು.

ಈ ವೇಳೆ ರೈತ ಮುಖಂಡ ಕೆ.ಎಸ್.ನಂಜುಂಡೇಗೌಡ, ಭೂಮಿತಾಯಿ ಹೋರಾಟ ಸಮಿತಿ ಅಧ್ಯಕ್ಷ ಕೃಷ್ಣೇಗೌಡ ಬಲ್ಲೆನಹಳ್ಳಿ ಮುಖಂಡರಾದ ಮಹದೇವು, ಕೃಷ್ಣ ಪ್ರತಿಭಟನೆ ನೇತೃತ್ವ ವಹಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+