ಧಾರವಾಡದಲ್ಲಿ ಸಿಎಂ ಮುಂದೆಯೇ ಬೆಳೆಹಾನಿ ಪರಿಹಾರ ಬಂದಿಲ್ಲ ಎಂದು ಘೋಷಣೆ ಕೂಗಿದ ರೈತರು
ನಮಗೆ ಬೆಳೆಹಾನಿ ಪರಿಹಾರವನ್ನೇ ಕೊಟ್ಟಿಲ್ಲ ಎಂದು ಧಾರವಾಡದಲ್ಲಿ ರೈತರು ಸಿಎಂ ಬಸವರಾಜ ಬೊಮ್ಮಾಯಿ ಎದುರೇ ಆಕ್ರೋಶ ಹೊರಹಾಕಿದರು. ಇದಕ್ಕೆ ಸಿಎಂ ಪ್ರತಿಕ್ರಿಯೆ ಹೇಗಿತ್ತು ನೋಡಿ.
ಧಾರವಾಡ, ಜನವರಿ, 31: ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಮೈದಾನಲ್ಲಿ ಕೃಷಿ ಇಲಾಖೆಯ ವಿವಿಧ ಯೋಜನೆಗಳಿಗೆ ಚಾಲನೆ ನೀಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪಾಲ್ಗೊಂಡಿದ್ದ ವೇಳೆಯೇ ಕೆಲ ರೈತರು ತಮಗೆ ಬೆಳೆಹಾನಿಯ ಪರಿಹಾರವೇ ಜಮಾ ಆಗಿಲ್ಲ ಎಂದು ಘೋಷಣೆ ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ರೈತರು ಅಸಮಾಧಾನಗೊಂಡಿದ್ದೇಕೆ?
ಕೃಷಿ ಸಚಿವ ಬಿ.ಸಿ.ಪಾಟೀಲ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಹೋಗುತ್ತಿದ್ದ ವೇಳೆ ಕೆಲ ರೈತರು ಎದ್ದು ನಿಂತು ತಮಗೆ ಬೆಳೆಹಾನಿಯ ಪರಿಹಾರವೇ ಜಮಾ ಆಗಿಲ್ಲ ಎಂದು ಘೋಷಣೆಗಳನ್ನು ಕೂಗಲಾರಂಭಿಸಿದರು. ಇದಕ್ಕೆ ಬಿ.ಸಿ.ಪಾಟೀಲ ಅವರು ಎಷ್ಟೆಷ್ಟು ಪರಿಹಾರ ಜಮಾ ಆಗಿದೆ ಎಂದು ಮಾಹಿತಿ ನೀಡಿದರು. ಆದರೂ ಸಮಾಧಾನಗೊಳ್ಳದ ರೈತರು, ತಮ್ಮ ಬ್ಯಾಂಕ್ ಖಾತೆಗಳಿಗೆ ಬೆಳೆ ಹಾನಿಯೇ ಜಮಾ ಆಗಿಲ್ಲ. ಬೇರೆಯವರಿಗೆ ಜಮಾ ಆಗಿರಬಹುದು ಎಂದು ಘೋಷಣೆ ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ನಂತರ ಸಿಎಂ ಬಸವರಾಜ ಬೊಮ್ಮಾಯಿ ಅವರೇ ಮಾತನಾಡಿ, ನಿಮ್ಮ ಸಮಸ್ಯೆ ಏನು ಎಂದು ನಾನೇ ಪ್ರತ್ಯೇಕವಾಗಿ ಈ ಕಾರ್ಯಕ್ರಮದ ನಂತರ ಕೇಳುತ್ತೇನೆ. ನೀವು ಪ್ರತ್ಯೇಕವಾಗಿ ಹೊರಗಡೆ ಬನ್ನಿ ಎಂದು ಸಮಾಧಾನಪಡಿಸಿದರು.

ರಾಜ್ಯ ಇಲಾಖೆ ಜಾರಿಗೆ ತಂದ ರೈತ ಶಕ್ತಿ, ಭೂರಹಿತ ಕೃಷಿ ಕಾರ್ಮಿಕ ಹಾಗೂ ರೈತರ ಮಕ್ಕಳಿಗೆ ರೈತ ವಿದ್ಯಾನಿಧಿ, ಕೃಷಿ ಪಂಡಿತ, ಕೃಷಿ ಪ್ರಶಸ್ತಿ ಪ್ರದಾನ, ಕೃಷಿ ಸಂಜೀವಿನಿ ವಾಹನ ಲೋಕಾರ್ಪಣೆ, ಮುಖ್ಯಮಂತ್ರಿಗಳ ನೈಸರ್ಗಿಕ ಕೃಷಿ, ಡಾ.ಎಸ್.ವಿ.ಪಾಟೀಲ ಕೃಷಿ ಸಂಶೋಧನೆ, ತರಬೇತಿ ಹಾಗೂ ರೈತರ ಶ್ರೇಯೋಭಿವೃದ್ಧಿ ಪೀಠ ಲೋಕಾರ್ಪಣೆ ಕಾರ್ಯಕ್ರಮಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹುಬ್ಬಳ್ಳಿಯಲ್ಲಿ ಚಾಲನೆ ನೀಡಿದರು.

ನೂತನ ಯೋಜನೆಗಳ ವಿವರ
ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಮೈದಾನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ಈ ಎಲ್ಲಾ ಯೋಜನೆಗಳಿಗೆ ಚಾಲನೆ ನೀಡಿದರು. ರಾಜ್ಯದ ಎಲ್ಲಾ ವರ್ಗದ ರೈತರಿಗೆ ಪ್ರತಿ ಹೆಕ್ಟೇರ್‌ಗೆ 250 ರೂಪಾಯಿಗಳಂತೆ ಗರಿಷ್ಠ 5 ಹೆಕ್ಟೇರ್‌ಗೆ 1,250 ರೂಪಾಯಿಗಳನ್ನು ಕೃಷಿ ಯಂತ್ರೋಪಕರಣಗಳ ಬಳಕೆಯ ಪ್ರೋತ್ಸಾಹಕ್ಕೆ ಸಹಾಯಧನವನ್ನು ನೀಡಲಾಗುತ್ತದೆ. ಹಾಗೂ ಇಂಧನ ವೆಚ್ಚದ ಭಾರವನ್ನು ಕಡಿತಗೊಳಿಸಲು ಡೀಸೆಲ್‌ಗೆ 51.80 ಲಕ್ಷ ಫಲಾನುಭವಿಗಳಿಗೆ 383.15 ಕೋಟಿಗಳ ರೂಪಾಯಿಗಳ ಸಹಾಯಧನ ನೀಡಲಾಗುವುದು. ರೈತರ, ಕೃಷಿ ಕಾರ್ಮಿಕರ ಮಕ್ಕಳ ಹೆಚ್ಚಿನ ಹಾಗೂ ಉನ್ನತ ಶಿಕ್ಷಣವನ್ನು ಪ್ರೋತ್ಸಾಹಿಸಲು 8 ರಿಂದ 10ನೇ ತರಗತಿಯ ವಿದ್ಯಾರ್ಥಿನಿಯರಿಗೆ ಹಾಗೂ10ನೇ ತರಗತಿ ನಂತರದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ 2,000 ರೂಪಾಯಿಯಿಂದ 11,000 ಸಾವಿರದವರೆಗೆ ವಿದ್ಯಾರ್ಥಿವೇತನ ನೀಡುವ ಯೋಜನೆಗೆ ಚಲಾನೆ ನೀಡಲಾಯಿತು.












Click it and Unblock the Notifications