ಕೈಯಲ್ಲಿ ಬಾರುಕೋಲು ಹಿಡಿದು ಹೈಹೈ ಅಂದ ಸಿದ್ದರಾಮಯ್ಯ
ಮೈಸೂರು, ಅಕ್ಟೋಬರ್, 14 : ರೈತರು ತಮ್ಮ ಕೃಷಿ ಪದ್ಧತಿಯಲ್ಲಿ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡರೆ ಬರಗಾಲದಂತಹ ಪ್ರಕೃತಿ ವಿಕೋಪ ಎದುರಿಸಲು ಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.
ನಾಗನಹಳ್ಳಿ ಕೃಷಿ ತರಬೇತಿ ಕೇಂದ್ರದಲ್ಲಿ ಅಕ್ಟೋಬರ್ 13ರ ಮಂಗಳವಾರ ಆಯೋಜಿಸಲಾಗಿದ್ದ ರೈತ ದಸರಾ ಕಾರ್ಯಕ್ರಮವನ್ನು ಹೊಲದಲ್ಲಿ ಉಳುಮೆ ಮಾಡುವ ಮೂಲಕ ಚಾಲನೆ ನೀಡಿದರು. ಬಳಿಕ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ,' ರಾಜ್ಯದಲ್ಲಿ ಸುಮಾರು ದಿನಗಳಿಂದ ರಾಜ್ಯದಲ್ಲಿ ಬರಗಾಲ ತಾಂಡವಾಡುತ್ತಿದೆ. ಹಾಗಾಗಿ ಈ ಬಾರಿ ದಸರಾವನ್ನು ಸರಳ ಹಾಗೂ ಸಾಂಪ್ರದಾಯಿಕವಾಗಿ ಆಚರಿಸಲಾಗುತ್ತಿದೆ' ಎಂದರು.[ಮತ್ತೆ ಬಂದಿದೆ ಮೈಸೂರು ದಸರಾ, ಹೋಗೋಣ ಬರ್ತಿರಾ?]

ದಸರಾ ಉದ್ಘಾಟನೆ ಮಾಡಿದ ಪ್ರಗತಿ ಪರ ರೈತ ಪುಟ್ಟಯ್ಯ 40 ಎಕರೆ ಜಮೀನು ಹೊಂದಿದ್ದಾರೆ. ಇದರಲ್ಲಿ ಭತ್ತ, ರಾಗಿ, ಕಬ್ಬು, ತೆಂಗು, ಬೆಳೆಯುವುದರ ಜೊತೆಗೆ ಉಪಕಸುಬುಗಳಾದ ರೇಷ್ಮೆ, ಹೈನುಗಾರಿಕೆಯನ್ನು ನಡೆಸುತ್ತಿದ್ದಾರೆ. ಈವರೆಗೂ ಕೃಷಿಗಾಗಿ ಸಾಲ ಮಾಡದೆ ಕೃಷಿಯನ್ನು ಲಾಭದಾಯಕವಾಗಿ ಮಾಡಿಕೊಂಡಿದ್ದಾರೆ.
ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ವಿವಿಧ ಯೋಜನೆಯಡಿ 2,500 ಕೋಟಿ ರೂ. ಸಾಲ ಮನ್ನಾ ಮಾಡಲಾಗಿದೆ. ಸಹಕಾರ ಸಂಘಗಳಿಂದ ರೈತರಿಗೆ ಯಾವುದೇ ಬಡ್ಡಿ ಇಲ್ಲದೇ 3ಲಕ್ಷ ರೂ. ವರೆಗೆ ಸಾಲ ನೀಡಲಾಗುತ್ತಿದೆ ಎಂದರು.[ಕೆಎಸ್ ಆರ್ ಟಿಸಿಯಿಂದ ದಸರಾ ವಿಶೇಷ ಪ್ಯಾಕೇಜ್ ಟೂರ್]
ಉಪಕಸುಬುಗಳನ್ನು ಅಳವಡಿಸಿಕೊಳ್ಳಲು ಪಶುಭಾಗ್ಯ ಯೋಜನೆಯನ್ನು ಜಾರಿಗೆ ತಂದಿದ್ದು, ಇದರ ಅಡಿಯಲ್ಲಿ ರೈತರು ವಾಣಿಜ್ಯ ಬ್ಯಾಂಕುಗಳಿಂದ ರೂ.1.20 ಲಕ್ಷಗಳವರೆಗೆ ಸಾಲ ಪಡೆದು ಪ್ರಾಣಿ ಘಟಕಗಳನ್ನು ಸ್ಥಾಪಿಸಬಹುದು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಶೇ 50 ರಷ್ಟು ಹಾಗೂ ಸಾಮಾನ್ಯ ವರ್ಗದವರಿಗೆ ಶೇ 25ರಷ್ಟು ಸಹಾಯಧನ ಒದಗಿಸಲಾಗುವುದು ಎಂದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್, ಸಹಕಾರ ಸಚಿವ ಹೆಚ್.ಎಸ್.ಮಹದೇವಪ್ರಸಾದ್, ಲೋಕಸಭಾ ಸದಸ್ಯ ಆರ್. ಧ್ರುವನಾರಾಯಣ, ಶಾಸಕರಾದ ಜಿ.ಟಿ.ದೇವೇಗೌಡ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಡಾ. ಬಿ.ಪುಷ್ಪ ಅಮರನಾಥ್, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮೋಹನ್ ಕುಮಾರ್ ಹಾಗೂ ಇತರೆ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.












Click it and Unblock the Notifications