ಕಾರವಾರ: ರೈಲ್ವೆ ಗೋದಾಮಿಗೆ ಆಕಸ್ಮಿಕ ಬೆಂಕಿ
ಕಾರವಾರ, ಫೆ. 13: ಉತ್ತರ ಕನ್ನಡ ಜಿಲ್ಲೆ ಕಾರವಾರದ ಶಿರವಾಡದಲ್ಲಿನ ಕೊಂಕಣ ರೈಲ್ವೆಗೆ ಸೇರಿದ ಗೋಡೌನ್ ಗೆ ಆಕಸ್ಮಿಕ ಬೆಂಕಿ ತಗುಲಿ 60 ಲಕ್ಷ ರೂ. ಹಾನಿಯಾಗಿದೆ.
ಗೋದಾಮಿನಲ್ಲಿದ್ದ 35 ಬ್ಯಾರಲ್ ಗ್ರೀಸ್, ರೇಲ್ವೆಯೊಳಗೆ ಅಳವಡಿಸುವ ಉಪಕರಣಗಳು, ಟೆಂಪೋ ಮತ್ತು ತೈಲಗಳು ಬೆಂಕಿಗೆ ಆಹುತಿಯಾಗಿವೆ. ಇದ್ದಕ್ಕಿದ್ದಂತೆ ಭಾನುವಾರ ರಾತ್ರಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಎಚ್ಚೆತ್ತುಕೊಂಡ ಜನ ಪೊಲೀಸರು ಮತ್ತು ಅಗ್ನಿಶಾಮಕ ದಳಕ್ಕೆ ಸುದ್ದಿ ಮುಟ್ಟಿಸಿದ್ದಾರೆ.[ಹೊತ್ತಿ ಉರಿದ ಕರಾವಳಿ ಕಾವಲು ಪೊಲೀಸ್ ಪಡೆ ದೋಣಿ]

ರಾತ್ರಿಯೆಲ್ಲ ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸ ಮಾಡಿ ಬೆಂಕಿ ನಂದಿಸಿದ್ದಾರೆ. ಬೆಂಕಿಯ ಕೆನ್ನಾಲಿಗೆಗಳು ಮುಗಿಲೆತ್ತರಕ್ಕೆ ಚಾಚಿಕೊಂಡಿದ್ದರಿಂದ ಜನ ಭಯಭೀತರಾಗುವಂತೆ ಮಾಡಿತು.
ಅಗ್ನಿ ಅನಾಹುತಕ್ಕೆ ಶಾರ್ಟ್ ಸರ್ಕ್ಯೂಟ್ ಕಾರಣ ಎಂದು ಮೇಲ್ನೋಟಕ್ಕೆ ಹೇಳಲಾಗಿದೆ. ಈ ಬಗ್ಗೆ ತನಿಖೆ ನಡೆಸಿ ಸಂಬಂಧಿಸಿದವರಿಗೆ ವರದಿ ಸಲ್ಲಿಸಲಾಗುವುದು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications