ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋವಿನ ಹಾಡು : ಪುಣ್ಯಕೋಟಿಯ ಕಥೆಯಿದು

By Super
|
Google Oneindia Kannada News

Govina Haadu - The Song of Punyakoti....
ಜನಪದರ ದೈತ್ಯ ಪ್ರತಿಭೆಗೆ '’ ಉತ್ತಮ ನಿದರ್ಶನ. ಯಾವ ಶಿಷ್ಟ ಕಾವ್ಯಕ್ಕೂ ಸೆಡ್ಡು ಹೊಡೆದು ನಿಲ್ಲಬಲ್ಲ ಸತ್ವದ ಈ ಕವಿತೆ ಬದುಕಿನ ಮೌಲ್ಯಗಳ ಕುರಿತು ಹೇಳುತ್ತದೆ. ಮಹಾಭಾರತ/ರಾಮಾಯಣಗಳಂಥ ಮಾಹಾಕಾವ್ಯಗಳು ದೀರ್ಘವಾಗಿ ಹೇಳುವುದನ್ನು, '’ ಸರಳವಾಗಿ ಹೇಳುತ್ತದೆ. ಆ ದೃಷ್ಟಿಯಿಂದ '’ ಜನ ಸಾಮಾನ್ಯರ ಭಗವದ್ಗೀತೆ. ಸತ್ಯವಾಕ್ಯಕೆ ತಪ್ಪಿ ನಡೆಯದ ಪುಣ್ಯಕೋಟಿಯ ಕತೆಯಿದು.

ಧರಣಿಮಂಡಲ ಮಧ್ಯದೊಳಗೆ
ಮೆರೆಯುತಿಹ ಕರ್ನಾಟ ದೇಶದೊ
ಳಿರುವ ಕಾಳಿಂಗನೆಂಬ ಗೊಲ್ಲನ
ಪರಿಯನೆಂತು ಪೇಳ್ವೆನೊ

ಗೊಲ್ಲ ದೊಡ್ಡಿಯಲಿರುವ ಪಶುಗಳ
ಎಲ್ಲ ಬೆಟ್ಟದ ಮೇಲೆ ಮೇಯುತ
ಹುಲ್ಲುವೊಳ್ಳೆ ನೀರ್ಗಳಿಂದಲೆ
ಅಲ್ಲಿ ಮೆರೆದವರಣ್ಯದಿ

ಎಳೆಯ ಮಾವಿನ ಮರದ ಕೆಳಗೆ
ಕೊಳಲನೂದುತ ಗೊಲ್ಲ ಗೌಡನು
ಬಳಸಿ ನಿಂದ ತುರುಗಳನ್ನು
ಬಳಿಗೆ ಕರೆದನು ಹರುಷದಿ

ಗಂಗೆ ಬಾರೆ ಗೌರಿ ಬಾರೆ
ತುಂಗಭದ್ರೆ ತಾಯಿ ಬಾರೆ
ಪುಣ್ಯಕೋಟಿ ನೀನು ಬಾರೆ
ಎಂದು ಗೊಲ್ಲನು ಕರೆದನು

ಗೊಲ್ಲ ಕರೆದಾ ದನಿಯ ಕೇಳಿ
ಎಲ್ಲ ಹಸುಗಳು ಬಂದು ನಿಂದು
ಚೆಲ್ಲಿ ಸೂಸಿ ಹಾಲು ಕರೆಯಲು
ಅಲ್ಲಿ ತುಂಬಿತು ಬಿಂದಿಗೆ

ಹಬ್ಬಿದಾಮಲೆ ಮಧ್ಯದೊಳಗೆ
ಅರ್ಭುತಾನೆಂದೆಂಬ ವ್ಯಾಘ್ರನು
ಅಬ್ಬರಿಸಿ ಹಸಿಹಸಿದು ಬೆಟ್ಟದ
ಕಿಬ್ಬಿಯಾಳು ತಾನಿದ್ದನು

ಸಿಡಿದು ರೋಷದಿ ಗುಡುಗುತಾ ಹುಲಿ
ಘುಡುಘುಡಿಸಿ ಭೋರಿಡುತವ್ಯಾಘ್ರನು
ತುಡುಕಿ ಎರಗಿದ ರಭಸ ಕೇಳಿ
ಓಡಿಹೋದವು ಹಸುಗಳು

ತನ್ನ ಮಗನಾ ಪಡೆದ ಪಶುವು
ತನ್ನ ಕಂದನ ನೆನೆದುಕೊಂಡು
ಪುಣ್ಯಕೋಟಿಯೆಂಬ ಹಸುವು
ಚೆಂದದಿಂದ ತಾ ಬರುತಿರೆ

ಇಂದೆನಗೆ ಆಹಾರ ಸಿಕ್ಕಿತು
ಎಂದು ಬೇಗನೆ ದುಷ್ಟ ವ್ಯಾಘ್ರನು
ಬಂದು ಬಳಸಿ ಅಡ್ಡಗಟ್ಟಿ
ನಿಂದನಾ ಹುಲಿರಾಯನು

ಮೇಲೆ ಬಿದ್ದು ನಿನ್ನನೀಗಲೆ
ಬೀಳಹೊಯ್ವೆನು ನಿನ್ನ ಹೊಟ್ಟೆಯ
ಸೀಳಿಬಿಡುವೆನು ಎನುತ ಕೋಪದಿ
ಖೂಳವ್ಯಾಘ್ರನು ಕೂಗಲು

ಒಂದು ಬಿನ್ನಹ ಹುಲಿಯೆ ಕೇಳು
ಕಂದನಿರುವನು ದೊಡ್ಡಿಯಾಳಗೆ
ಒಂದು ನಿಮಿಷದಿ ಮೊಲೆಯ ಕೊಟ್ಟು
ಬಂದು ಸೇರುವೆನಿಲ್ಲಿಗೆ

ಹಸಿದವೇಳೆಗೆ ಸಿಕ್ಕಿದೊಡವೆಯ
ವಶವ ಮಾಡದೆ ಬಿಡಲು ನೀನು
ನುಸುಳಿ ಹೋಗುವೆ ಮತ್ತೆ ಬರುವೆಯ
ಹುಸಿಯ ನುಡಿಯುವೆನೆಂದಿತು

ಸತ್ಯವೆ ನಮ್ಮ ತಾಯಿ ತಂದೆ
ಸತ್ಯವೆ ನಮ್ಮ ಬಂಧು ಬಳಗ
ಸತ್ಯವಾಕ್ಯಕೆ ತಪ್ಪಿ ನಡೆದರೆ
ಮೆಚ್ಚನಾ ಪರಮಾತ್ಮನು

ಕೊಂದು ತಿನ್ನುವೆನೆಂಬ ಹುಲಿಗೆ
ಚಂದದಿಂದ ಭಾಷೆಕೊಟ್ಟು
ಕಂದ ನಿನ್ನನು ನೋಡಿ ಪೋಗುವೆ
ನೆಂದು ಬಂದಿತು ದೊಡ್ಡಿಗೆ

ಅಮ್ಮ ನೀನು ಸಾಯಲೇಕೆ
ನಮ್ಮ ತಬ್ಬಲಿ ಮಾಡಲೇಕೆ
ಸುಮ್ಮನಿಲ್ಲಿಯೆ ನಿಲ್ಲು ಎಂದು
ಅಮ್ಮನಿಗೆ ಕರು ಹೇಳಿತು

ಆರ ಮೊಲೆಯನು ಕುಡಿಯಲಮ್ಮ
ಆರ ಬಳಿಯಲಿ ಮಲಗಲಮ್ಮ
ಆರ ಸೇರಿ ಬದುಕಲಮ್ಮ
ಆರು ನನಗೆ ಹಿತವರು

ಕೊಟ್ಟ ಭಾಷೆಯ ತಪ್ಪಲಾರೆನು
ಕೆಟ್ಟ ಯೋಚನೆ ಮಾಡಲಾರೆನು
ನಿಷ್ಠೆಯಿಂದಲಿ ಪೋಪೆನಲ್ಲಿಗೆ
ಕಟ್ಟ ಕಡೆಗಿದು ಖಂಡಿತಾ

ಅಮ್ಮಗಳಿರ ಅಕ್ಕಗಳಿರ
ಎನ್ನ ತಾಯಾಡಹುಟ್ಟುಗಳಿರಾ
ಕಂದ ನಿಮ್ಮವನೆಂದು ಕಾಣಿರಿ
ತಬ್ಬಲಿಯನೀ ಕರುವನೂ

ಮುಂದೆ ಬಂದರೆ ಹಾಯಬೇಡಿ
ಹಿಂದೆ ಬಂದರೆ ವೊದೆಯಬೇಡಿ
ಕಂದ ನಿಮ್ಮವನೆಂದು ಕಾಣಿರಿ
ತಬ್ಬಲಿಯನೀ ಕರುವನೂ

ತಬ್ಬಲಿಯು ನೀನಾದೆ ಮಗನೆ
ಹೆಬ್ಬುಲಿಯ ಬಾಯನ್ನು ಹೊಗುವೆನು
ಇಬ್ಬರಾ ಋಣ ತೀರಿತೆಂದು
ತಬ್ಬಿಕೊಂಡಿತು ಕಂದನಾ

ಗೋವು ಸ್ನಾನವ ಮಾಡಿಕೊಂಡು
ಗವಿಯಬಾಗಿಲ ಸೇರಿನಿಂತು
ಸಾವಕಾಶವ ಮಾಡದಂತೆ
ತವಕದಲಿ ಹುಲಿಗೆಂದಿತು

ಖಂಡವಿದೆಕೋ ಮಾಂಸವಿದೆಕೋ
ಗುಂಡಿಗೆಯ ಬಿಸಿರಕ್ತವಿದೆಕೋ
ಚಂಡವ್ಯಾಘ್ರನೆ ನೀನಿದೆಲ್ಲವ
ನುಂಡು ಸಂತಸದಿಂದಿರು

ಪುಣ್ಯಕೋಟಿಯ ಮಾತಕೇಳಿ
ಕಣ್ಣನೀರನು ಸುರಿಸಿ ನೊಂದೂ
ಕನ್ನೆಯಿವಳನು ಕೊಂದು ತಿಂದರೆ
ಮೆಚ್ಚನಾ ಪರಮಾತ್ಮನೂ

ಎನ್ನವೊಡಹುಟ್ಟಿದಕ್ಕ ನೀನು
ನಿನ್ನ ಕೊಂದು ಏನ ಪಡೆವೆನು
ಅನ್ನೆಕಾರಿ ನಾನು ಎನುತಲಿ
ತನ್ನ ಮನದೊಳು ನೊಂದಿತು

ಮೂರುಮೂರ್ತಿಗೆ ಕೈಯಮುಗಿದು
ಸೇರಿ ಎಂಟುದಿಕ್ಕು ನೋಡಿ
ಹಾರಿ ಆಕಾಶಕ್ಕೆ ನೆಗೆದು
ಮೀರಿ ಪ್ರಾಣವ ಬಿಟ್ಟಿತೂ.


ಮುಖಪುಟ / ಸಾಹಿತ್ಯ-ಸಂಸ್ಕೃತಿ

English summary
‘Govina Haadu’ Poem from the pages of Kannada Folklore
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X