Englishবাংলাગુજરાતીहिन्दीമലയാളംதமிழ்తెలుగు
Filmibeat Kannada

‘ಗಡಿನಾಡಿನ ಕಿಡಿ’ ಕಯ್ಯಾರರಿಗೆ 90

Published: Tuesday, June 11, 2002, 5:30 [IST]
 

  • ಅನಂತ ಪದ್ಮನಾಭ, ಮಂಗಳೂರು
Kayyara Kinhanna rai with his beloved wife‘ಕಾಸರಗೋಡು ಕನ್ನಡನಾಡು’.

ಇಂಥದೊಂದು ಘೋಷಣೆಯಾಂದಿಗೆ, ಕಾಸರಗೋಡನ್ನು ಕರ್ನಾಟಕಕ್ಕೆ ಸೇರಿಸುವ ಕನಸು ಹೊತ್ತು ಹೋರಾಡಿದ/ ಹೋರಾಡುತ್ತಿರುವ ಕವಿ ಕಯ್ಯಾರ ಕಿಞ್ಞಣ್ಣ ರೈಗೆ ಈಗ 90 ಹರೆಯ. ಕಾಸರಗೋಡು ಕನ್ನಡನಾಡಾಗುವ ತನ್ನ ಧ್ಯೇಯ ಈಡೇರದೆ ನಾನು ವಿಶ್ರಮಿಸುವುಲ್ಲ ಎಂದು ಹೇಳುವಾಗ ಕಯ್ಯಾರರ ಧ್ವನಿ ಗದ್ಗದಿತವಾಗುತ್ತದೆ, ಜರ್ಝರಿತ ದೇಹ ಸೆಟೆದು ನಿಲ್ಲುತ್ತದೆ. ಈ ಕಂಚಿನ ಕಂಠದ ಅಜಾನುಬಾಹು ತನ್ನ ಜೀವನವನ್ನೇ ಹೋರಾಟಕ್ಕೆ ಮೀಸಲಿಟ್ಟವರು.

ಈ 90ರ ಚಿರ ಯುವಕ ಕಯ್ಯಾರರು ಮೊನ್ನೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ ಮನೆಯಂಗಳದಲ್ಲಿ ಮಾತುಕತೆಯಲ್ಲಿ ರಾಜಧಾನಿಯಲ್ಲಿರುವ ಕನ್ನಡಿಗರಿಗೆ ಮುಖಾಮುಖಿಯಾದರು. ಬೆಂಗಳೂರಲ್ಲಿ ಕಯ್ಯಾರರು ಹಂಚಿಕೊಂಡಿದ್ದು ತಮ್ಮ ಎಂದೂ ಹಳೆಯದಾಗದ ಕನಸನ್ನೇ!

ರಾಜ್ಯ ಗುರುತಿಸುವಿಕೆಯು ಭಾಷಾವಾರು ಆದ್ಯತೆಯ ಮೇಲೆ ಸರಿಯಾಗಿ ಆಗಿಲ್ಲ. ತುಳುನಾಡು ಕರ್ನಾಟಕದ ಭಾಗ ಎಂಬ ಮಹಾಜನ ಆಯೋಗ ವರದಿಗೆ ಯಾವುದೇ ಪುಷ್ಠಿ ದೊರೆತಿಲ್ಲ ಎನ್ನುವಾಗ ಅವರ ಮೊಗದಲ್ಲಿ ವಿಷಾದದ ಕಳೆ. ಈಗೀಗ ಆಶ್ವಾಸನೆಗಳ ಮೇಲೆ ವಿಶ್ವಾಸವೇ ಹೋಗಿದೆ. ಏನಿದ್ದರೂ ಕೆಲಸ ಆಗಬೇಕಷ್ಟೆ ಎಂದು ಕಿಞ್ಞಣ್ಣ ಕೇಳುತ್ತಾರೆ. ಇಲ್ಲವೆನ್ನುವ ಧೈರ್ಯ ಯಾರಿಗಿದೆ.

ಮಂಗಳೂರಿನಲ್ಲಿ ನಡೆದ 66ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪೀಠದಿಂದಲೂ ಅವರು ತಮ್ಮ ಹೋರಾಟದ ಕಹಳೆ ಮೊಳಗಿಸಿದ್ದರು. ಕನ್ನಡ, ತಮಿಳು, ಮಲೆಯಾಳಂ ಸಾಹಿತ್ಯ ಅಕಾಡೆಮಿಗಳ ಪುರಸ್ಕಾರಗಳು ಇವರನ್ನು ಅರಸಿ ಬಂದಿವೆ. ಅವರ ಸಾಧನೆಯ ಮುಕುಟಕ್ಕೆ ಹಲವು ಪ್ರಶಸ್ತಿಗಳು ಗರಿ ತೊಡಿಸಿವೆ. ಅಷ್ಟಲ್ಲದೇ ಶ್ರೇಷ್ಠ ಶಿಕ್ಷಕ ರಾಷ್ಟ್ರ ಪ್ರಶಸ್ತಿಯ ಗೌರವವೂ ಸಂದಿದೆ. ಆದರೆ ಕಯ್ಯಾರರಿಗೆ ಇದಾವುದು ಮುಖ್ಯವಲ್ಲ ; ಕಾಸರಗೋಡು ಕರ್ನಾಟಕವಾದರೆ ಅದೇ ಅವರಿಗೆ ದೊಡ್ಡ ಪುರಸ್ಕಾರ.

ಹುಟ್ಟು ಹೋರಾಟಗಾರರಾದ ಕಯ್ಯಾರರು ತಮ್ಮ ಬಾಲ್ಯದಲ್ಲಿ ಗಾಂಧೀಜಿಯ ಪ್ರಭಾವಕ್ಕೊಳಗಾಗಿ ದೇಶಕ್ಕಾಗಿ ಹೋರಡಿದ ಸ್ವಾತಂತ್ರ್ಯ ಪ್ರೇಮಿ. ಈ ಸ್ವಾತಂತ್ರ್ಯ ಹೋರಾಟಗಾರ ಸ್ವಾತಂತ್ರ್ಯ ಬಂದ ಐವತ್ತು ವರ್ಷಗಳ ಬಳಿಕವೂ ಹೋರಾಡಬೇಕಾಗಿ ಬಂದದ್ದು ನಮ್ಮ ಆಡಳಿತದ ವೈಫಲ್ಯತೆಯನ್ನು ತೋರಿಸುತ್ತದೆ.

ಕವಿ ಕಯ್ಯಾರರು ತಮ್ಮ ‘ಶ್ರಿಮುಖ’ ‘ಐಕ್ಯಗಾನ’, ‘ಪುನರ್ನವ’, ‘ಶಾಂತಮಾನ’ ಕೃತಿಗಳಿಂದ ಪ್ರಖ್ಯಾತರಾದರು. ಜೀವನ ಚರಿತ್ರೆ, ಮಕ್ಕಳ ಸಾಹಿತ್ಯ, ನಾಟಕ, ವ್ಯಾಕರಣ ಮುಂತಾದ ಕ್ಷೇತ್ರಗಳಲ್ಲಿಯೂ ಕಯ್ಯಾರರು ಪ್ರಸಿದ್ಧರು. ಅವರು ಕನ್ನಡ ಮತ್ತು ತುಳು ಸಾಹಿತ್ಯದಲ್ಲಿ ಪ್ರವೀಣರು.

ಬಾಲ್ಯದಲ್ಲಿ ತಾಯಿಯ ತೆಕ್ಕೆಯಲ್ಲಿ ಮಲಗಿ ತುಳು ಗೀತೆ-ಸಾಹಿತ್ಯವನ್ನು ಸವಿದೆ. ಬೆಳೆಯುತ್ತಾ ಕನ್ನಡ ಕಲಿತೆ ಎಂದು ತಮ್ಮ ಬಾಲ್ಯವನ್ನು ಕಯ್ಯಾರರು ನೆನಪಿಸಿಕೊಳ್ಳುತ್ತಾರೆ. ಕರಾವಳಿಯ ಮಂಗಳೂರಿನ ಯಕ್ಷಗಾನ ಬಯಲಾಟವು ಇವರನ್ನು ಆಕರ್ಷಿಸದೆ ಬಿಡಲಿಲ್ಲ. ತಾಳ-ಮದ್ದಳೆಯ ಇಂಪು, ಪಾರ್ತಿಸುಬ್ಬನ ಕಂಪು ಇವರಿಗೆ ಯಕ್ಷಗಾನದಲ್ಲಿ ಆಸಕ್ತಿ ಕೆರಳಿಸುವಂತೆ ಮಾಡಿದೆ.

ಕಾಸರಗೋಡಿನ ಪೆರಡಾಲ ಹಳ್ಳಿಯಲ್ಲಿ ದುಗ್ಗಪ್ಪ ರೈ ಮತ್ತು ದೇಯ್ಯಕ್ಕ ರೈ ದಂಪತಿಗಳಿಗೆ 1915ರಲ್ಲಿ ಜನಿಸಿದರು. ಇವರು ಕನ್ನಡಿಗರಾದ ಮಂಜೇಶ್ವರ ಗೋವಿಂದ ಪೈ, ನಿರಂಜನ, ವಿಠಲದಾಸ ಶೆಟ್ಟಿ, ರಾಮಕೃಷ್ಣಕಾರಂತ, ಇದಿನಬ್ಬನವರ ಕರ್ತವ್ಯ ಪರತೆಯನ್ನು ಸ್ಮರಿಸುತ್ತಾರೆ.

ವೃತ್ತಿಯಲ್ಲಿ ನವಜೀವನ ಹೈಸ್ಕೂಲಿನ ಶಿಕ್ಷಕರಾಗಿದ್ದ ಕಯ್ಯಾರರು ಪ್ರವೃತ್ತಿಯಲ್ಲಿ ಪತ್ರಿಕೋದ್ಯಮಿಯೂ ಹೌದು. ತನ್ನ 12 ವರ್ಷದಲ್ಲೇ ‘ಸುಶೀಲ’ ಎಂಬ ಕೈಬರಹ ಪತ್ರಿಕೆ ಹೊರತಂದಿದ್ದರು. ಮುಂದೆ ಸ್ವಾಭಿಮಾನ , ಮದ್ರಾಸ್‌ಮೈಲ್‌ , ಹಿಂದು ಮುಂತಾದ ಪತ್ರಿಕೆಗಳಿಗೆ ಬರೆಯುತ್ತಿದ್ದರು.

ಕಯ್ಯಾರರಿಗೆ 75 ತುಂಬಿದಾಗ ಕಾಸರುಗೋಡು ಕನ್ನಡಿಗರೆಲ್ಲ ಸೇರಿ ‘ಗಡಿನಾಡಿನ ಕಿಡಿ’ ಎಂಬ ದೊಡ್ಡ ಪುಸ್ತಕವನ್ನು ಅರ್ಪಿಸಿದರು. ಪತ್ನಿ ಉಞ್ಞಕ್ಕ ಮತ್ತು ಎಂಟು ಮಕ್ಕಳ ಸುಖೀ ಸಂಸಾರ ಅವರದು. ಬಂಟರ ಸಂಘಕ್ಕೂ ಅವರ ಕೊಡುಗೆ ಅಪಾರ.

ಕಯ್ಯಾರರಿಗೀಗ 90. ಕಾಸರಗೋಡು ಕರ್ನಾಟಕಕ್ಕೆ ಸೇರ್ಪಡೆಯಾಗುವ ಅವರ ಕನಸಿಗೆ ಐವತ್ತು ತುಂಬುತ್ತಿದೆ. ಆ ಕನಸು ನನಸಾಗುವುದು ಯಾವಾಗ ?

ಕಯ್ಯಾರರ ವಿಳಾಸ: ‘ಕವಿತಾ ಕುಟೀರ’, ಪೆರಡಾಲ, ಕಾಸರಗೋಡು- 670551

ಮುಖಪುಟ / ಸಾಹಿತ್ಯ-ಸಂಸ್ಕೃತಿ

ಅಭಿಪ್ರಾಯ ಬರೆಯಿರಿ

Please read our comments policy before posting

Subscribe Newsletter
Videos You May Like