ಜೀವನ್ಮುಖಿ-ಇದು ಜೀವಂತ ಕವಿತೆಗಳ ಸಂಗ್ರಹ

Posted By: Staff
Subscribe to Oneindia Kannada
Jeevanmukhi book
ಚೈತ್ರರಶ್ಮಿ ಪತ್ರಿಕೆಯ ಸಂಪಾದಕ ರಾಮಚಂದ್ರ ಹೆಗಡೆ ಅವರ ಮೂಲಕ ಜೀವನ್ಮುಖಿ ಕವನ ಸಂಕಲನ ನನ್ನ ಕೈ ಸೇರಿತು. ಓದುತ್ತಾ ಹೋದಂತೆ ನನಗರಿವಿಲ್ಲದೆ ಮನ ಮುಟ್ಟಿತು.

*ಮಲೆನಾಡಿಗ

ಜೀವನ್ಮುಖಿ ಇದು ಜೀವಂತ ಕವಿತೆಗಳ ಸಂಗ್ರಹ ಹೌದು.. ಇದರಲ್ಲಿರುವ ಕವನದ ಸಾಲುಗಳು ಜೀವನ, ಹೊಸ ನೆಲೆ, ನಾಡು ನುಡಿಯ ಪ್ರೇಮಗಳಿಂದ ಕೂಡಿವೆ. ಒಂದಷ್ಟು ಭಾವನಾತ್ಮಕವಾಗಿ, ಕೆಲವು ಹಸಿಹಸಿಯಾಗಿ, ಮತ್ತೆ ಹಲವು ಅನುಭವಾತ್ಮಕವಾಗಿ, ಓದುತ್ತಾ ಹೋದಂತೆ ನಿರೀಕ್ಷಿತವಾಗಿ ಮೂಡಿ ಬಂದಿವೆ. ಕಡಲಿನ ಅಲೆ, ಮಲೆನಾಡಿನ ಮಳೆ, ಕನ್ನಡದ ಸವಿ ನುಡಿ, ಅಮ್ಮನ ಪ್ರೀತಿ, ಗೆಳತಿಯ ಸನಿಹ, ಇನಿಯನಿಗಾಗಿ ಕಾತುರ ಎಲ್ಲೆಡೆ ಎಲ್ಲೆ ಮೀರದಂತೆ ಸ್ಫುಟವಾಗಿ, ಸರಳವಾಗಿ ಅರಳಿದೆ. ಸರಳತೆಯಿಂದ ಕೂಡಿರುವ ಸಾಲುಗಳು ಮತ್ತೆ ಮತ್ತೆ ಓದುವಂತೆ ಮಾಡುತ್ತವೆ.

ಶಬ್ದಕೋಶವನ್ನು ಬದಿಗಿಟ್ಟುಕೊಂಡು ಕುವೆಂಪು ಸಾಹಿತ್ಯ ಓದುವ ನನ್ನಂತ ಪಾಮರನಿಗೆ ಶ್ರೀಮತಿ ಪ್ರಿಯಾ ಎಂ ಕಲ್ಲಬ್ಬೆ ಅವರ ಕವಿತೆಗಳು ಇಷ್ಟವಾಗಿದ್ದು ಅದರ ಸರಳತೆಯಿಂದ. ಕವನ ಸಂಕಲನದ ಮುಖಪುಟದಲ್ಲಿನ ಸರಳತೆ ಅವರ ಕವನಕ್ಕೆ ಹಿಡಿದ ಕನ್ನಡಿ. ಒಳಪುಟಗಳಲ್ಲಿ ಮೂಡಿರುವ ರೇಖಾಕೃತಿಗಳು ಕಲಾವಿದ ಮಿತ್ರ ಪ್ರಮೋದ್ ಅವರ ಕಲಾವಂತಿಕೆಯ ಸೃಜನಶೀಲತೆಯನ್ನು ತೋರಿಸುತ್ತದೆ. ಅದರಲ್ಲೂ ಅಮ್ಮ, ಮನಸೇ ನೀನ್ಯಾಕೆ ಹೀಗೆ ಮುಂತಾದೆಡೆ ಮೂಡಿದ ರೇಖೆಗಳು ಅಕ್ಷರಕ್ಕೆ ಹೊಂದಿಕೊಂಡಿವೆ. ವಂದೇ ಮಾತರಂ, ಯಕ್ಷಗಾನದ ಕವನಗಳು ರೇಖಾಚಿತ್ರದಿಂದ ವಂಚಿತವಾಗಿವೆ.

ಮೊದಲ ಕವಿತೆಯಲ್ಲಿ ಬರುವ 'ಕವಿಯ ಮುಖಕ್ಕೆ ಹಿಡಿದ ನಿಜದ ಕನ್ನಡಿ ಕವಿತೆ' ಅದ್ಭುತ ಸಾಲು. ಬಹಳಷ್ಟು ಕವನಗಳು ಮನಸೆಳೆದರೂ, ಮತ್ತೆ ಕಾಡುವುದು, ಓದುವಂತೆ ಮಾಡುವುದು ಅಮ್ಮ, ಗುರು, ಮಸಣ, ಬೆಳಕಿನೋಕುಳಿ, ಬಾಲ್ಯ, ಕಲೆಗಾರನಾಗು ನೀ, ಜೀವನ್ಮುಖಿ, ನನ್ನ ಕವಿತೆ, ದಾಸಿ, ಸೋನೆ..ಇತ್ಯಾದಿ.. ಇದರಲ್ಲಿ ಬೆಳಕಿನೋಕುಳಿಯ ಮೊದಲೆರಡು ಚರಣಗಳು, 'ಮಸಣ' ಕವನದ
'ನಾನು ಸುಟ್ಟರೆ ಬೂದಿ
ಹೂತರೆ ಮಣ್ಣು
ನನಗಿಲ್ಲ ಬೇಧ' ಸಾಲುಗಳು ಮೆಚ್ಚುವಂಥದ್ದು.

ಮಸಣಕ್ಕೂ ಬೆಲೆ ತಂದುಕೊಟ್ಟಿರುವುದು ಅಚ್ಚರಿ ಮೂಡಿಸುತ್ತದೆ. ಜೀವನ್ಮುಖಿಯಸಾಲುಗಳನ್ನು ಇನ್ನಷ್ಟು ದೀರ್ಘವಾಗಿಸಬಹುದಿತ್ತು. ವಂದೇ ಮಾತರಂ ಒಳ್ಳೆ ಪ್ರಯತ್ನ...ನನ್ನ ಕವಿತೆ ಯಾಕೆ ಪುಟ 29 ಕ್ಕೆ ಹೋಯಿತು ಗೊತ್ತಿಲ್ಲ. ಅಗ್ರಶ್ರೇಯಾಂಕಕ್ಕೆ ಏರುವ ಸಾಲುಗಳಿವೆ ಅದರಲ್ಲಿ. ದಾಸಿ ಕವನಕ್ಕೆ ಯಾಕೆ ಆ ಹೆಸರು ತಿಳಿಯಲಿಲ್ಲ. ಕವನ ಚೆನ್ನಾಗಿದೆ. ಮೊದಲ ಕವನ ಅದ್ಭುತ. ಆದರೆ ಕೊನೆ ಕವನ ಯಾಕೆ ಸಾಧಾರಣ ತಿಳಿಯಲಿಲ್ಲ ಇರಲಿ.

ಕಲೆ , ನಾಡು ನುಡಿಯ ಬಗ್ಗೆ ಕವನಗಳಿರುವುದು ಸ್ವಾಗತಾರ್ಹ. ಕವನ ಎಂದರೆ ಬರೀ ಪ್ರೀತಿ ಪ್ರೇಮದ ಅವ್ಯಕ್ತ ಭಾವನೆಗಳ ಸಾಲು ಎಂಬುದನ್ನು ಅಲ್ಲಗೆಳೆಯುವಂತೆ ಬದುಕಿನ ವಿವಿಧ ಮಜಲುಗಳತ್ತ ಕವಯಿತ್ರಿಯ ನೋಟ ಹೊರಳಿರುವುದು ಒಳ್ಳೆಯ ಬೆಳವಣಿಗೆ. ಆದರೆ, ಇನ್ನಷ್ಟು ಆಳವಾಗಿ ಮಣ್ಣಿನ ಮಕ್ಕಳ ಬಗ್ಗೆ, ಹಬ್ಬ ಹರಿದಿನಗಳ ಬಗ್ಗೆ, ಮಮತೆ ವಾತ್ಸಲ್ಯದ ಬಗ್ಗೆ, ಮಕ್ಕಳ ಬಗ್ಗೆ ಹೆಚ್ಚೇಕೆ ತಮ್ಮ ಕಡಲ ನಾಡಿನ ಬಿಸಿಲಿನ ಬಗ್ಗೆ ಕವನಗಳು ಹೊರ ಹೊಮ್ಮಲಿ.. ಮಲೆನಾಡಿನ/ಕರಾವಳಿಯ ಲೇಖಕರಿಗೆ ಕಡಲು, ಮಳೆ, ಹಸಿರು ಬಿಟ್ಟರೆ ಬೇರೇನೂ ಕಾಣುವುದಿಲ್ಲ ಎಂಬ ಅಘೋಷಿತ ಟೀಕೆಯನ್ನು ಪ್ರಿಯಾ ಅವರು ಸುಳ್ಳು ಮಾಡಲಿ... ಒಳ್ಳೆಯದಾಗಲಿ

ಸೂಚನೆ: ಕನ್ನಡ ಪುಸ್ತಕ ಪ್ರಾಧಿಕಾರವು ಯುವ ಬರಹಗಾರರ ಚೊಚ್ಚಲ ಕೃತಿಗಳ ಲೋಕಾರ್ಪಣೆ ಮತ್ತು ಪ್ರೋತ್ಸಾಹ ವಿತರಣಾ ಸಮಾರಂಭ ಹಮ್ಮಿಕೊಳ್ಳಲಾಯಿತು. ನಗರದ ಜೆ.ಸಿ.ರಸ್ತೆಯಲ್ಲಿರುವ ಕನ್ನಡ ಭವನದ ನಯನ ಸಭಾಂಗಣದಲ್ಲಿ ಆಗಸ್ಟ್ 29 ರಂದು ನಡೆದ ಸಮಾರಂಭದಲ್ಲಿ ಪ್ರಿಯಾ ಅವರ "ಜೀವನ್ಮುಖಿ" ಕವನಸಂಕಲನವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಮನು ಬಳಿಗಾರ್ ಅವರು ಕೃತಿಗಳ ಲೋಕಾರ್ಪಣೆ ಮಾಡಿದರು. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ ಸಿದ್ಧಲಿಂಗಯ್ಯ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಹಾಗೂ ವಾರ್ತಾ ಇಲಾಖೆ ಕಾರ್ಯದರ್ಶಿ ಬಿ. ಆರ್. ಜಯರಾಮರಾಜೇ ಅರಸ್, ಹಿರಿಯ ಕವಿ ಡಾ ಸುಮತೀಂದ್ರ ನಾಡಿಗ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Please Wait while comments are loading...