ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾರು ಕೊಳ್ಳಬೇಕೆಂಬ ಕನಸಿನ ಕುದುರೆಯನೇರಿ

By * ಯಶ್
|
Google Oneindia Kannada News

ನನ್ನ ಬಳಿ ಹೀರೋ ಹೊಂಡಾ ಸ್ಪೆಂಡರ್ ಇದೆ. ಕಳೆದ ಹತ್ತು ವರ್ಷಗಳಿಂದ ಅದು ನನ್ನ ಅನುದಿನದ ಸಂಗಾತಿ. ಅಲ್ಲಲ್ಲಿ ತರಚಿದ ಗಾಯಗಳಾಗಿದ್ದರೂ ನನ್ನ 'ಹೀರೋ'ನನ್ನು ಜತನದಿಂದ ಕಾಯ್ದುಕೊಂಡು ಬಂದಿದ್ದೇನೆ. ಅದೂ ಕೂಡ ನನ್ನನ್ನು ಸಲಹಿಕೊಂಡು ಬಂದಿದೆ. ನಮ್ಮಿಬ್ಬರಲ್ಲಿ ಒಂದು ಬಗೆಯ ಭಾವನಾತ್ಮಕ ಸಂಬಂಧ ಬೆಳೆದುಬಿಟ್ಟಿದೆ.

ಆ ಗಾಡಿಯ ಮೇಲೆ ನಾನು ನನ್ನ ಸಂಸಾರ ಬೆಂಗಳೂರಿನ ಗಲ್ಲಿಗಲ್ಲಿಗಳನ್ನು ಸತ್ತಾಡಿದೆ. ಮೀಟರು ಒಂದು ಬಾರಿ ಎಲ್ಲಾ ಅಂಕಿಗಳನ್ನು ಕಂಡ ಮತ್ತೆ ಸೊನ್ನೆಯೊಂದಿಗೆ ಮತ್ತೆ ತನ್ನ ಪಯಣ ಆರಂಭಿಸಿದೆ. ಗಾಡಿ ಸರ್ವೀಸ್ ಮಾಡುವ ಮೆಕ್ಯಾನಿಕ್ ಮುನಿರತ್ನನಿಂದ ಶಭಾಸ್‌ಗಿರಿಯನ್ನೂ ಪಡೆದಂಥ ಜಾಣಮರಿ ನನ್ನ ಹೀರೋ ಹೊಂಡಾ.

ಹತ್ತು ವರ್ಷದ ಕನಸು ನನಸಾಗಿ ನಾನು ಮೊದಲ ಕಾರು ಖರೀದಿಸಿದ ಆ ಕ್ಷಣಹತ್ತು ವರ್ಷದ ಕನಸು ನನಸಾಗಿ ನಾನು ಮೊದಲ ಕಾರು ಖರೀದಿಸಿದ ಆ ಕ್ಷಣ

ಹಿಂದೆ ಹೆಂಡತಿ, ಮುಂದೆ ಮಗಳು, ಹೆಂಡತಿ ಕಂಕುಳಲ್ಲಿ ಮುದ್ದು ಮಗ, ಮಧ್ಯದಲ್ಲಿ ಕುಳಿತು ಸರ್ಕಸ್ ಮಾಡುತ್ತ ಗಾಡಿ ಓಡಿಸುವ ನಾನು. ಆರಂಭದಲ್ಲಿ ಚೆನ್ನಾಗಿತ್ತು. ಈಗ ಮಗಳು ದೊಡ್ಡವಳಾಗಿದ್ದಾಳೆ, ನಾನು ಇಪ್ಪತ್ತು ವರ್ಷಗಳಿಂದ ಎಷ್ಟು ಎತ್ತರವಿದ್ದೆನೋ ಅಷ್ಟೇ ಇದ್ದೇನೆ, ಐದು ಅಡಿ ನಾಲ್ಕು ಇಂಚು. ಮಗಳು ಮುಂದೆ ಕುಳಿತರೆ ಸರಿಯಾಗಿ ಓಡಿಸಲು ಆಗಬೇಕಲ್ಲ? ಬೆಳೆಯುತ್ತಿರುವ ಮಗ ಕೂಡ ಮುಂದೆಯೇ ಕೂಡುತ್ತೇನೆಂದು ಗಲಾಟೆ ಮಾಡುತ್ತಾನೆ. ಯಾರನ್ನು ಎಲ್ಲಿ ಕೂಡಿಸುವುದು?

Dreaming to buy a car

ನಮ್ಮ ಈ ಪೀಕಲಾಟವನ್ನು ನೋಡಿ ಹಿರಿಯರೊಬ್ಬರು "ಸಂಸಾರ ದೊಡ್ಡದಾತು ಕಾರು ತೊಗೊಳ್ರೀ ಇನ್ನ" ಅಂತ ಪುಗಸಟ್ಟೆ ಸಲಹೆ ಕೊಟ್ಟು ಕನಸಿನ ಬೀಜ ಬಿತ್ತಿದರು. ವಾಜಮೈತಿ ಮಾತು ಅಂದ್ಕೊಂಡೆ. ಪಾಪ ನನ್ನ ಹೀರೋಗೂ ವಯಸ್ಸಾಯಿತು. ಹಾರ್ನ್ ಹೊಡೆದಾಗ ಅವನ ಕಿವಿಗೇ ಸರಿಯಾಗಿ ಕೇಳಿಸಲ್ಲ, ಕಣ್ಣು ಮೊದಲಿಂದಲೂ ಮಂದ, ಕೀಲುಗಳು ಸಾಕಷ್ಟು ಸವೆದಿವೆ, ಏರಿ ಹತ್ತುವಾಗ ಏದುಸಿರು ಬಿಡುತ್ತಾನೆ. ಕಾರು ಕೊಂಡು ನನ್ನ ಹೀರೋಗೂ ಸ್ವಲ್ಪ ರೆಸ್ಟ್ ನೀಡಬೇಕೆಂದು ಅನ್ನಿಸಿದ್ದೇ ಆವಾಗ.

ಕಾರು ಕೊಳ್ಳಬೇಕೆಂಬ ಕನಸಿನ ಬೀಜವೇನೋ ಮೊಳಕೆಯೊಡೆದಿದೆ. ಯಾವ ಕಾರು ಕೊಳ್ಳುವುದು? ಎಷ್ಟು ಬೆಲೆಯದ್ದು? ಸದ್ಯಕ್ಕೆ ನನ್ನನ್ನು ಕಾಡುತ್ತಿರುವ ಪ್ರಶ್ನೆ. ಮನೆ ಸಾಲದ ಇಎಂಐ ಸೇರಿದಂತೆ ನಾನಾ ಇಎಂಐಗಳು ನನ್ನ ಜೇಬಿಗೆ ಸಾಕಷ್ಟು ಕನ್ನ ಕೊರೆದಿವೆ. ಈ ಸಣ್ಣಪುಟ್ಟ ಕನಸೆಂಬ ಕುದುರೆಯ ಬೆನ್ನು ಹತ್ತಿದ ಮೇಲೆ ನನ್ನ ಜೀವನವೇ ಇಎಂಐ ಕಟ್ಟುವುದರಲ್ಲಿ ಕಳೆದುಹೋಗುತ್ತದಾ ಎಂಬ ದಿಗಿಲೂ ಕಾಡುತ್ತಿದೆ.

ಕನಸಿನ ಕುದುರೆ ಏರೆ ಸವಾರಿ ಹೊರಡಬೇಕು ಎಂಬಷ್ಟರಲ್ಲಿ ಬಜೆಟ್ಟು ಬಂದಿದೆ, ಸಣ್ಣ ಮತ್ತು ದೊಡ್ಡ ಕಾರುಗಳು ತುಟ್ಟಿಯಾಗಲಿವೆ ಎಂಬ ಸುದ್ದಿ ಬಂದು ನನ್ನ ಕನಸಿನ ಕುದುರೆಗೆ ಲಗಾಮು ಹಾಕಿದೆ. ರೇಟು ಏರಲಿ ಬಿಡಲಿ, ನನ್ನ ಹೆಂಡತಿಯಂತೂ ಕುದುರೆಗೆ ಬಾರಿಸಲು ಬಾರಿಕೋಲು ಹಿಡಿದು ನಿಂತುಬಿಟ್ಟಿದ್ದಾಳೆ. ಪೆಟ್ರೋಲ್, ಡೀಸೆಲ್ ದರಗಳು ಮೊದಲೇ ಏರುಮುಖದಲ್ಲಿವೆ. ಏನೇ ಆಗಲಿ, ಈ ವರ್ಷ ಕಾರು ಕೊಳ್ಳಬೇಕೆಂಬ ತೀರ್ಮಾನಕ್ಕೆ ಬಂದಿದ್ದೇನೆ. ಮಧ್ಯಮ ವರ್ಗದವನ ನನ್ನ ಬಜೆಟ್ಟಿಗೆ ಯಾವ ಕಾರು ಸೂಕ್ತ ಎಂದು ನೀವೇ ಪ್ಲೀಸ್ ಸಜೆಸ್ಟ್ ಮಾಡಿರಿ.

English summary
Inflation has put a hold on my dream of buying a car. I want to give rest to my Hero Honda Splender bike and take risk of buying a small car. Hope, in Nandana samvatsara the dream of buying a car will come true.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X