Rohit Sharma: ಕೊನೆಗೂ ರೋಹಿತ್ ಶರ್ಮಾ ನಿವೃತ್ತಿ ವದಂತಿಗಳಿಗೆ ತೆರೆ ಎಳೆದ ಬಿಸಿಸಿಐ


Rohit Sharma: ಹಿಟ್‌ ಮ್ಯಾನ್‌ ಅಂತಲೇ ಪ್ರಸಿದ್ಧಿಯಾಗಿರುವ ಟೀಂ ಇಂಡಿಯಾದ ಹಿರಿಯ ಆರಂಭಿಕ ಆಟಗಾರ ರೋಹಿತ್ ಶರ್ಮಾ ಅವರ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ನಿವೃತ್ತಿ ಕುರಿತು ವದಂತಿಗಳು ಹರಡಿದ್ದವು. ಇದೀಗ ಇದಕ್ಕೆ ಬಿಸಿಸಿಐ ಸ್ಪಷ್ಟನೆ ನೀಡಿದ್ದು, ಗೊಂದಲಗಳಿಗೆ ತೆರೆ ಎಳೆಯುವ ಕೆಲಸವನ್ನು ಮಾಡಿ ಅಭಿಮಾಗಳಿಗೆ ಗುಡ್‌ ನ್ಯೂಸ್‌ ನೀಡಿದೆ.

Advertisement

ಸಾಮಾಜಿಕ ಜಾಲತಾಣದಲ್ಲಿ ರೋಹಿತ್ ಶರ್ಮಾ ಅವರ ನಿವೃತ್ತಿ ಕುರಿತು ಹರಿದಾಡುತ್ತಿದ್ದ ಎಲ್ಲಾ ಊಹಾಪೋಹಗಳಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧಿಕೃತವಾಗಿ ತೆರೆ ಎಳೆದಿದೆ. ರೋಹಿತ್ ಶರ್ಮಾ ಸದ್ಯದಲ್ಲೇ ಕ್ರಿಕೆಟ್‌ಗೆ ಗುಡ್‌ಬೈ ಹೇಳಲಿದ್ದಾರೆ ಎಂಬ ವರದಿಗಳನ್ನು ಮಂಡಳಿಯು ಸಂಪೂರ್ಣವಾಗಿ ತಳ್ಳಿಹಾಕಿದೆ.

Advertisement

ವದಂತಿಗಳಿಗೆ ತೆರೆ ಎಳೆದ ಬಿಸಿಸಿಐ

ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್ ಮೈದಾನದಲ್ಲಿ ಭಾನುವಾರ (ಜುಲೈ 19) ನಡೆಯಲಿರುವ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯವು ರೋಹಿತ್ ಶರ್ಮಾ ಅವರ ವೃತ್ತಿಜೀವನದ ಕೊನೆಯ ಅಂತಾರಾಷ್ಟ್ರೀಯ ಪಂದ್ಯ ಆಗಲಿದೆ ಎಂಬ ಸುದ್ದಿಗಳು ಹರಿದಾಡಿದ್ದವು. ಆದರೆ ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರು ಸ್ಪಷ್ಟನೆ ನೀಡಿದ್ದಾರೆ.

ಕಾರ್ಯದರ್ಶಿ ದೇವಜಿತ್ ಸೈಕಿಯಾ ಹೇಳಿದ್ದೇನು?

ಪಿಟಿಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರುವ ದೇವಜಿತ್ ಸೈಕಿಯಾ ಅವರು, ಸಾಮಾಜಿಕ ಮಾಧ್ಯಮಗಳಲ್ಲಿ ರೋಹಿತ್ ಶರ್ಮಾ ಅವರ ನಿವೃತ್ತಿ ಬಗ್ಗೆ ಹರಡುತ್ತಿರುವ ಸುದ್ದಿಗಳು ಕೇವಲ ವದಂತಿಗಳಷ್ಟೇ ಎಂದು ಹೇಳಿದ್ದಾರೆ. 'ರೋಹಿತ್ ಅವರ ಕ್ರಿಕೆಟ್ ಭವಿಷ್ಯದ ಬಗ್ಗೆ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಆದರೆ ಲಾರ್ಡ್ಸ್‌ನಲ್ಲಿ ನಡೆಯಲಿರುವ ಪಂದ್ಯವೇ ಅವರ ಕೊನೆಯ ಪಂದ್ಯ ಎಂಬ ಬಗ್ಗೆ ಮಂಡಳಿಯೊಳಗೆ ಯಾವುದೇ ಚರ್ಚೆಗಳು ನಡೆದಿಲ್ಲ,' ಅವರು ಸ್ಪಷ್ಟಪಡಿಸಿದ್ದಾರೆ.

Advertisement

ರೋಹಿತ್ ಶರ್ಮಾ ಅಭಿಮಾನಿಗಳಿಗೆ ಸಿಹಿ ಸುದ್ದಿ

'ರೋಹಿತ್ ಶರ್ಮಾ ಅವರು ಭಾರತ ಏಕದಿನ ತಂಡದ ಪ್ರಮುಖ ಆಟಗಾರನಾಗಿದ್ದಾರೆ. ಅವರು ಮುಂದಿನ ದಿನಗಳಲ್ಲಿ ಅವರು ದೇಶದ ಪರ ಆಡುವುದನ್ನು ಮುಂದುವರೆಸಲಿದ್ದಾರೆ. ಭಾನುವಾರ ನಡೆಯುವ ಏಕದಿನ ಪಂದ್ಯ ಅವರ ಕೊನೆಯ ಪಂದ್ಯ ಖಂಡಿತಾ ಅಲ್ಲ,' ಎಂದು ಸೈಕಿಯಾ ದೃಢಪಡಿಸಿ ಗೊಂದಲಗಳಿಗೆ ತೆರೆ ಎಳೆಯುವ ಮೂಲಕ ಅಭಿಮಾಬಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.

ವದಂತಿಗಳು ಹರಡಲು ಪ್ರಮುಖ ಕಾರಣ ಏನು?

ರೋಹಿತ್ ಶರ್ಮಾ ಅವರು ಈಗಾಗಲೇ 2024ರಲ್ಲಿ ಟಿ20 ಹಾಗೂ ಮೇ 2025 ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಆದ್ದರಿಂದ ಅವರು ಏಕದಿನ ಮಾದರಿಗೂ ಶೀಘ್ರದಲ್ಲೇ ವಿದಾಯ ಹೇಳಬಹುದು ಎಂಬ ಚರ್ಚೆಗಳು ಶುರುವಾಗಿದ್ದವು. ಇದಕ್ಕೆ ಪೂರಕ ಎಂಬಂತೆ ಅವರು ಅವರು ಪ್ರಸಕ್ತ ವರ್ಷ ಆಡಿದ 8 ಏಕದಿನ ಪಂದ್ಯಗಳಲ್ಲಿ ಕೇವಲ ಒಂದು ಅರ್ಧಶತಕ ಗಳಿಸಲು ಮಾತ್ರ ಶಕ್ತರಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಉಂಟಾದ ಗಾಯದ ಸಮಸ್ಯೆಗಳು ಕೂಡ ಅವರ ಬ್ಯಾಟಿಂಗ್ ಲಯ ಮತ್ತು ತಂಡದಲ್ಲಿನ ಲಭ್ಯತೆಯ ಮೇಲೆ ಪರಿಣಾಮ ಬೀರಿದ್ದವು ಎಂದು ಹೇಳಲಾಗುತ್ತಿದೆ.

Advertisement

ಇತ್ತೀಚಿನ ಫಾರ್ಮ್ ಕುಸಿತವನ್ನು ಹೊರತುಪಡಿಸಿ ನೋಡುವುದಾದರೆ ರೋಹಿತ್ ಶರ್ಮಾ ಭಾರತದ ಅತ್ಯಂತ ಯಶಸ್ವಿ ಮತ್ತು ವಿಶ್ವಾಸಾರ್ಹ ಆರಂಭಿಕ ಬ್ಯಾಟರ್ ಆಗಿ ಸತತವಾಗಿ ಸಾಬೀತುಪಡಿಸಿದ ಉದಾಹರಣೆಗಳಿವೆ. ಅವರು 50 ಓವರ್‌ಗಳ ಕ್ರಿಕೆಟ್‌ನಲ್ಲಿ ಅಪಾರ ಅನುಭವ ಹೊಂದಿದ್ದು, ಐತಿಹಾಸಿಕ ದಾಖಲೆಗಳನ್ನು ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಯುವ ಆಟಗಾರರನ್ನು ಒಳಗೊಂಡ ಏಕದಿನ ತಂಡವನ್ನು ಕಟ್ಟಲು ಆಯ್ಕೆದಾರರು ಬಯಸಿದ್ದಾರೆ. ಆದರೂ ಸಹ ರೋಹಿತ್ ಅವರಂತಹ ದಿಗ್ಗಜ ಆಟಗಾರನ ನಿವೃತ್ತಿಯ ವಿಷಯದಲ್ಲಿ ಯಾವುದೇ ಅಂತಿಮ ತೀರ್ಮಾನ ತೆಗೆದುಕೊಳ್ಳುವ ಮುನ್ನ ಬಿಸಿಸಿಐ ಉನ್ನತ ಮಟ್ಟದ ಸುದೀರ್ಘ ಚರ್ಚೆಗಳನ್ನು ನಡೆಸಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಒಟ್ಟಿನಲ್ಲಿ ಕಳೆದ ಎರಡು ದಿನಗಳಿಂದ ಹಿಟ್‌ಮ್ಯಾನ್‌ ನಿವೃತ್ತಿ ಕುರಿತು ಹರಿದಾಡುತ್ತಿದ್ದ ವದಂತಿಗಳಿಗೆ ತೆರೆ ಬಿದ್ದಂತಾಗಿದೆ. ಇದರಿಂದ ಅಭಿಮಾನಿಗಳಲ್ಲಿದ್ದ ಗೊಂದಲ ನಿವಾರಣೆ ಆದಂತಾಗಿದೆ.

English Summary

BCCI has dismissed rumours about Rohit Sharma's ODI retirement, confirming that Indian captain is not retiring after England series. Read latest update and official clarification.