ದಕ್ಷಿಣ ಭಾರತದ ಖ್ಯಾತ ಹಿನ್ನೆಲೆ ಗಾಯಕಿ, 'ಗಾನಕೋಗಿಲೆ' ಎಂದೇ ಹೆಸರಾಗಿರುವ ಎಸ್. ಜಾನಕಿ ಅವರ ನಿಧನ ಸುದ್ದಿ ಇಡೀ ಕಲಾ ಲೋಕವನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ. ಸುಮಾರು ಆರು ದಶಕಗಳ ಕಾಲ ತಮ್ಮ ಸುಮಧುರ ಕಂಠದಿಂದ ಕೋಟ್ಯಂತರ ಅಭಿಮಾನಿಗಳ ಮನಗೆದ್ದಿದ್ದ ಜಾನಕಮ್ಮನವರ ಅಗಲಿಕೆಗೆ ರಾಜ್ಯದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಹಿರಿಯ ನಾಯಕ ಸಿದ್ದರಾಮಯ್ಯ ಸೇರಿದಂತೆ ಅನೇಕ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಎಸ್ ಜಾನಕಿ ನಿಧನ: ಸಿಎಂ ಡಿ ಕೆ ಶಿವಕುಮಾರ್ ತೀವ್ರ ಸಂತಾಪ
"ಭಾರತೀಯ ಚಿತ್ರರಂಗದ ಅಪ್ರತಿಮ ಹಿನ್ನೆಲೆ ಗಾಯಕಿ, ಗಾನಕೋಗಿಲೆ ಖ್ಯಾತಿಯ ಬಹುಭಾಷಾ ಗಾಯಕಿ ಶ್ರೀಮತಿ ಎಸ್. ಜಾನಕಿ ಅವರ ನಿಧನದ ಸುದ್ದಿ ತೀವ್ರ ಆಘಾತವನ್ನುಂಟು ಮಾಡಿದೆ. ಕನ್ನಡ ಭಾಷೆ ಇರುವ ತನಕ ಎಸ್ ಜಾನಕಿ ಅವರ ಹಾಡುಗಳು ಅಜರಾಮರ. ಅವರ ದನಿಯಲ್ಲಿ ಕನ್ನಡ ಹಾಡುಗಳನ್ನು ಕೇಳಿ ಬೆಳೆದವರು ನಾವು. ಕನ್ನಡದ ಸೊಬಗಿಗೆ ಮಾಧುರ್ಯ ತುಂಬಿದವರು ಅವರು" ಎಂದು ಸಿಎಂ ಅವರು ಸ್ಮರಿಸಿದ್ದಾರೆ.
"ಸರಳತೆಯ ಸಾಕಾರಮೂರ್ತಿ ಜಾನಕಮ್ಮನವರ ಅಪ್ರತಿಮ ಕಂಠಸಿರಿ ಕನ್ನಡ ನಾಡಿನ ಸಾಂಸ್ಕೃತಿಕ ಕ್ಷೇತ್ರದಲ್ಲಿ ಎಂದೆಂದಿಗೂ ಅಮರ. ಅವರು ಮೂಲತಃ ಆಂಧ್ರಪ್ರದೇಶದವರಾದರೂ ಕನ್ನಡದ ಮೇಲಿನ ಅಭಿಮಾನಕ್ಕೆ ಮೈಸೂರಿನಲ್ಲಿ ನೆಲೆಸಿದ್ದರು. 20 ಕ್ಕೂ ಹೆಚ್ಚು ಭಾಷೆಗಳಲ್ಲಿ ಸುಮಾರು 48 ಸಾವಿರಕ್ಕೂ ಹೆಚ್ಚು ಗೀತೆಗಳನ್ನು ಹಾಡಿರುವ ಹೆಗ್ಗಳಿಕೆ ಇವರದು.ಜಾನಕಮ್ಮನವರ ನಿಧನದಿಂದ ಸಂಗೀತ ಕ್ಷೇತ್ರದ ಮಹಾನ್ ಸ್ವರಮಾಧುರ್ಯ ಮೌನವಾದಂತಾಗಿದೆ" ಎಂದು ನೋವು ವ್ಯಕ್ತಪಡಿಸಿದ್ದಾರೆ. ಪದ್ಮ ಭೂಷಣ ಪ್ರಶಸ್ತಿ ಸೇರಿದಂತೆ ಅನೇಕ ರಾಷ್ಟ್ರೀಯ ಪ್ರಶಸ್ತಿ, ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಕೇರಳ ಮತ್ತಿತರ ರಾಜ್ಯಗಳ ಪ್ರಶಸ್ತಿ ಇವರ ಮುಡಿಗೇರಿದ್ದವು. ಜಾನಕಮ್ಮನವರ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ಅವರ ಅಭಿಮಾನಿಗಳು ಹಾಗೂ ಕುಟುಂಬಸ್ಥರಿಗೆ ನೀಡಲಿ ಎಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ" ಎಂದು ಶಿವಕುಮಾರ್ ಅವರು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ. ಖ್ಯಾತ ಹಿನ್ನೆಲೆ ಗಾಯಕಿ ಎಸ್. ಜಾನಕಿ ಅವರ ನಿಧನಕ್ಕೆ ಹಿರಿಯ ನಾಯಕ ಸಿದ್ದರಾಮಯ್ಯ ಕೂಡ ತೀವ್ರ ಸಂತಾಪ ಸೂಚಿಸಿದ್ದಾರೆ. "ಖ್ಯಾತ ಹಿನ್ನೆಲೆ ಗಾಯಕಿ ಎಸ್. ಜಾನಕಿ ಅವರ ನಿಧನದ ಸುದ್ದಿ ನನಗೆ ಅತೀವ ನೋವುಂಟು ಮಾಡಿದೆ. ಕನ್ನಡ ಸೇರಿದಂತೆ ಬರೋಬ್ಬರಿ 20 ಭಾಷೆಗಳಲ್ಲಿ 48,000ಕ್ಕೂ ಅಧಿಕ ಗೀತೆಗಳನ್ನು ಹಾಡಿದ್ದ, ಆರು ದಶಕಗಳ ಕಾಲ ತಮ್ಮ ಕಂಠಸಿರಿಯ ಮೂಲಕ ಸಂಗೀತ ಸೇವೆಗೈದ ಮೇರು ಪ್ರತಿಭೆಯೊಂದು ನಮ್ಮನ್ನಗಲಿರುವುದು ಕಲಾ ಜಗತ್ತಿಗೆ ಎಂದಿಗೂ ತುಂಬಲಾರದ ನಷ್ಟ" ಎಂದು ಅವರು ತಮ್ಮ ಶೋಕ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. S Janaki Passes Away: ತಮ್ಮಿಚ್ಛೆಯಂತೆ ಕನ್ನಡ ನಾಡಲ್ಲೇ ಕೊನೆಯುಸಿರೆಳೆದ ಗಾನಕೋಗಿಲೆ ಎಸ್.ಜಾನಕಿ
ಕಲಾ ಜಗತ್ತಿಗೆ ತುಂಬಲಾರದ ನಷ್ಟ: ಸಿದ್ದರಾಮಯ್ಯ ಶೋಕ