Kannada: ಕರ್ನಾಟಕದಲ್ಲಿ ಕನ್ನಡಕ್ಕೆ ಸಂಕಷ್ಟ; ಕರುನಾಡಲ್ಲಿ ಕನ್ನಡ ಮೇಷ್ಟ್ರುಗಳಿಗೆ ಕತ್ತರಿ ಆರೋಪ, ಜೆಡಿಎಸ್ ಹೇಳಿದ್ದೇನು


Kannada: ಕರ್ನಾಟಕ ಕಾಂಗ್ರೆಸ್ ಸರ್ಕಾರದಿಂದ ಕನ್ನಡಕ್ಕೆ ಸಂಕಷ್ಟ ಎದುರಾಗಿದೆ ಎಂದು ಜೆಡಿಎಸ್ ಆರೋಪಿಸಿದೆ. ಕನ್ನಡ ಮೇಷ್ಟ್ರುಗಳಿಗೆ ಕತ್ತರಿ ಹಾಕಲು ಹೊರಟಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ "ಕನ್ನಡಕ್ಕೇ ಕಂಟಕ" ಎದುರಾಗಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ. ಈ ಸಂಬಂಧ ಸೋಶಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಜೆಡಿಎಸ್ ಪಕ್ಷವು, 15 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯಲ್ಲಿ ಕನ್ನಡ ಭಾಷೆ ಶಿಕ್ಷಕರನ್ನೇ ಕೈಬಿಟ್ಟಿರುವುದು, ಕನ್ನಡ ಮಾಧ್ಯಮದಲ್ಲಿ ಓದಿದ ಸಾವಿರಾರು ನಿರುದ್ಯೋಗಿ ಯುವಕ-ಯುವತಿಯರಿಗೆ ಮಾಡಿದ ದೊಡ್ಡ ಅನ್ಯಾಯ ಎಂದು ದೂರಿದೆ.

Advertisement

ಮುಂದುವರಿದು ಈಗಾಗಲೇ ರಾಜ್ಯಾದ್ಯಂತ ಸಾವಿರಾರು ಸರ್ಕಾರಿ ಶಾಲೆಗಳಿಗೆ ಬೀಗ ಜಡಿದಿರುವ ಕಾಂಗ್ರೆಸ್ ಸರ್ಕಾರ, ಶಿಕ್ಷಕರನ್ನು ನೇಮಿಸದೆ ಕನ್ನಡ ಭಾಷೆಯ ಮೇಲೆ ಮಾಡುತ್ತಿರುವ ಗಧಾಪ್ರಹಾರವನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ಕರುನಾಡಿನಲ್ಲಿ ಕನ್ನಡದ ಶಿಕ್ಷಕರಿಗೇ ಬೆಲೆ ಇಲ್ಲವೇ, ಸ್ವತಃ ಕನ್ನಡ ಅಭಿವೃದ್ಧಿ ಪ್ರಾಧಿಕಾರವೇ ಸರ್ಕಾರದ ಈ ನಿಲುವನ್ನು ಕಟುವಾಗಿ ಖಂಡಿಸಿದೆ ಎಂದರೆ, ಈ ಸರ್ಕಾರದ ಕನ್ನಡ ವಿರೋಧಿ ಧೋರಣೆ ಎಷ್ಟಿರಬೇಕು. ಮಾತೃಭಾಷೆಯನ್ನು ಮೂಲೆಗುಂಪು ಮಾಡಿ, ಕನ್ನಡವನ್ನು ಕಗ್ಗೊಲೆ ಮಾಡುತ್ತಿರುವ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಸರ್ಕಾರದ ನಡೆ ಅಕ್ಷಮ್ಯ. ಮುಖ್ಯಮಂತ್ರಿಗಳೇ ಕನ್ನಡಿಗರ ಸಹನೆಯನ್ನು ಪರೀಕ್ಷಿಸಲು ಹೋಗಬೇಡಿ ಎಂದೂ ಹೇಳಿದೆ. ಈ ಅವೈಜ್ಞಾನಿಕ ಹಾಗೂ ಹಿಡನ್ ಅಜೆಂಡಾದ ನೀತಿಯನ್ನು ರಾಜ್ಯ ಸರ್ಕಾರ ಈ ಕೂಡಲೇ ಕೈಬಿಟ್ಟು, ಕನ್ನಡ ಭಾಷಾ ಶಿಕ್ಷಕರ ನೇಮಕಾತಿ ನಡೆಸಬೇಕು ಎಂದು ಜೆಡಿಎಸ್‌ ಪಕ್ಷವು ಆಗ್ರಹಿಸುತ್ತದೆ ಎಂದು ಹೇಳಲಾಗಿದೆ.

Advertisement

NEET ಪ್ರಶ್ನೆಪತ್ರಿಕೆ ಸೋರಿಕೆ: ದೇಶದಲ್ಲಿ 152ಕ್ಕೂ ಹೆಚ್ಚು ಪೇಪರ್ ಲೀಕ್ ಪ್ರಕರಣ, ಕಾಂಗ್ರೆಸ್ ಗಂಭೀರ ಪ್ರಶ್ನೆ

ಸುಳ್ಳನ್ನು ಸತ್ಯ ಮಾಡಲು ಸಾಧ್ಯವಿಲ್ಲ ಎಂದ ಜೆಡಿಎಸ್!

ಇನ್ನು ಬಣ್ಣದ ಪೋಸ್ಟರ್‌ಗಳ ಮೂಲಕ ಸುಳ್ಳನ್ನು ಸತ್ಯ ಮಾಡಲು ಸಾಧ್ಯವಿಲ್ಲ. ಕರ್ನಾಟಕ ಕಾಂಗ್ರೆಸ್ ಸರ್ಕಾರವು ಇಸ್ರೋ (ISRO) ಮತ್ತು ಗೇಲ್ (GAIL) ನಂತಹ ರಾಷ್ಟ್ರದ ಹೆಮ್ಮೆಯ ಸರಕಾರಿ ಸ್ವಾಮ್ಯದ ಸಂಸ್ಥೆಗಳಿಗೆ ಭೂಮಿ ನೀಡುವುದಕ್ಕೂ, ನಿಮ್ಮ ಕಾಲದಲ್ಲಿ ಖಾಸಗಿ ಬಿಲ್ಡರ್‌ಗಳಿಗೆ ಕಬಳಿಸಲು ಬಿಡುವುದಕ್ಕೂ ಇರುವ ವ್ಯತ್ಯಾಸವೇ ತಿಳಿಯದಷ್ಟು ದಡ್ಡರಾಗಿದ್ದೀರಾ ನೀವು. ಕೇಂದ್ರ ಸಚಿವರಾದ ಎಚ್.ಡಿ ಕುಮಾರಸ್ವಾಮಿ ಅವರು, ಹೆಚ್‌ಎಂಟಿ (HMT) ಹಗರಣದ ಕಡತಗಳನ್ನು ಪರಿಶೀಲಿಸುತ್ತಿದ್ದಾರೆ.‌ ಅಕ್ರಮಗಳೆಲ್ಲವೂ ಶೀಘ್ರದಲ್ಲೇ ಬಯಲಾಗಲಿವೆ ಎಂಬ ಭಯವೇ ನಿಮ್ಮ ಈ ಗ್ರಾಫಿಕ್ಸ್ ನಾಟಕಕ್ಕೆ ಕಾರಣ. 'ಕಳ್ಳನ ಮನಸ್ಸು ಹುಳ್ಳ ಹುಳ್ಳಗೆ' ಎನ್ನುವಂತೆ ಈಗಲೇ ಯಾಕೆ ಬೆಚ್ಚಿಬಿದ್ದಿದ್ದೀರಿ? ಸತ್ಯ ಶೀಘ್ರದಲ್ಲೇ ಹೊರಬರಲಿದೆ, ಕಾಯುತ್ತಿರಿ.

Advertisement

ಅಪಪ್ರಚಾರವನ್ನೇ ಬಂಡವಾಳ ಮಾಡಿಕೊಂಡಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರದ 'ಸುಳ್ಳಿನ ಪೋಸ್ಟರ್' ಹಿಂದಿನ ಅಸಲಿ ಸತ್ಯ ಇಲ್ಲಿದೆ:

ಅಂದು ಹೆಚ್ಎಂಟಿ ಭೂಮಿ ಕೇಂದ್ರದ್ದಾಗಿತ್ತು, ರಾಜ್ಯಕ್ಕೆ ಅಧಿಕಾರವಿರಲಿಲ್ಲ ಎನ್ನುವ ನೀವು, ಇಂದು ದಿಢೀರನೆ ರಾಜ್ಯ ಅರಣ್ಯ ಇಲಾಖೆ ಮೂಲಕ ಒತ್ತುವರಿ ನಾಟಕ ಆಡುತ್ತಿರುವುದು ಯಾಕೆ. ಎನ್‌ಡಿಎ ಸರಕಾರ ಭೂಮಿ ನೀಡಿದ್ದು ನಮ್ಮದೇ ಹೆಮ್ಮೆಯ ISRO ಸಂಸ್ಥೆಗೆ ಹೊರತು ನಿಮ್ಮಂತೆ ರಿಯಲ್ ಎಸ್ಟೇಟ್ ಲ್ಯಾಂಡ್ ಮಾಫಿಯಾಗಲ್ಲ! ಹೆಚ್‌ಎಂಟಿ ಉಳಿಸುವ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್‌ಗೆ ಇಲ್ಲ. ಕಡತಗಳು ಈಗ ಸಚಿವರ ಬಳಿಯೇ ಇವೆ, ತನಿಖೆಯೂ ನಡೆಯುತ್ತದೆ. ಯಾರು ಎಷ್ಟು ಜಾಗವನ್ನು ನುಂಗಿ ನೀರು ಕುಡಿದಿದ್ದಾರೆ ಎಂಬುದು ಕಡತಗಳ ಮೂಲಕವೇ ಶೀಘ್ರದಲ್ಲಿಯೇ ರಾಜ್ಯದ ಜನತೆಗೆ ತಿಳಿಯಲಿದೆ. ಆ ಮಹಾನ್ ನಾಯಕನ ಕರಾಳ ಮುಖವೂ ಕಳಚಿ ಬೀಳಲಿದೆ ಎಂದೂ ಜೆಡಿಎಸ್ ಹೇಳಿದೆ.

English Summary

Trouble for Kannada in Karnataka JDS Alleges Cut in Kannada Teacher Posts