E Swathu: ಇ-ಸ್ವತ್ತು 2.0ನಾ, ಇ-ಸಂಕಷ್ಟನಾ? ಇ-ಖಾತಾ ವಿತರಣೆ ವಿಳಂಬ, ಗ್ರಾಮೀಣ ಆಸ್ತಿ ಮಾಲೀಕರ ಸಂಕಷ್ಟ'


ಬೆಂಗಳೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾದರೂ, ಕಂದಾಯ ಸಚಿವರು ಬದಲಾದರೂ... ಕಾಂಗ್ರೆಸ್ ಸರ್ಕಾರದ 'ಸರ್ವರ್ ಡೌನ್' ಆಡಳಿತ ಮಾತ್ರ ಬದಲಾಗಲಿಲ್ಲ. ಸ್ಥಿರಾಸ್ತಿ ನೋಂದಣಿಗೆ ಇ-ಖಾತಾ ಕಡ್ಡಾಯ ಮಾಡಿ ಎರಡು ವರ್ಷಗಳ ಹಿಂದೆ ಸರ್ಕಾರ ಆದೇಶಿಸಿತ್ತು. ಆದರೆ ಇ-ಸ್ವತ್ತು 2.0 ತಂತ್ರಾಂಶ ಸಮಸ್ಯೆ ಮುಂದುವರಿದಿದೆ. ಇದರಿಂದ ಗ್ರಾಮೀಣ ಭಾಗದ ಜನರಿಗೆ ಸಾಕಷ್ಟು ತೊಂದರೆ ಆಗುತ್ತಿದೆ.

Advertisement

ಗ್ರಾಮ ಪಂಚಾಯಿತಿ ಆಸ್ತಿಗಳಿಗೆ ಡಿಜಿಟಲ್ ಇ- ಖಾತಾ ನೀಡುವ ಯೋಜನೆ ಆರಂಭಿಸಲಾಯಿತು. ಅದಾದ ಬಳಿಕ ಇ-ಖಾತಾ ನಿಡುವ ತಂತ್ರಾಂಶದ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಆರೇಳು ತಿಂಗಳುಗಳಿಂದ ಜನರಿಗೆ ಡಿಜಿಟಲ್ ಖಾತೆ ವಿತರಣೆ ವಿಳಂಬವಾಗುತ್ತಿದೆ. ಸೈಟ್ ಖರೀದಿ, ಮಾರಾಟ ಪ್ರಕ್ರಿಯೆಗೆ ಇದರಿಂದ ಪೆಟ್ಟು ಬಿದ್ದಿದೆ. ಆಸ್ತಿ ಮಾಲೀಕರು ಕಚೇರಿಗೆ ಎಡತಾಕುತ್ತಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ.

Advertisement

ಈ ಕುರಿತು ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಆರ್.ಅಶೋಕ್ ಅವರು, ಸಿಎಂ, ಕಂದಾಯ ಸಚಿವರು ಬದಲಾದರೂ ಸಹಿತ ಸಮಸ್ಯೆಗಳಿಗೆ ಪರಿಹಾರ ಮಾತ್ರ ಸಿಕ್ಕಿಲ್ಲ ಎಂದ ಎಕ್ಸ್ ಮೂಲಕ ಕಾಂಗ್ರೆಸ್ ಆಡಳಿತವನ್ನು ದೂರಿದ್ದಾರೆ.

ಜನರ ಆಸ್ತಿ ಹಕ್ಕು ಕಾಪಾಡದ ಇ-ಸ್ವತ್ತು!

ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೇ ನಿಮ್ಮ ಸರ್ಕಾರದ 'ಇ-ಸ್ವತ್ತು 2.0' ಯೋಜನೆ ಇಂದು ಜನರ ಆಸ್ತಿ ಹಕ್ಕನ್ನು ಕಾಪಾಡುವ ವ್ಯವಸ್ಥೆಯಾಗಿಲ್ಲ. ಜನರನ್ನು ಸರ್ಕಾರಿ ಕಚೇರಿಗಳ ಮುಂದೆ ಅಲೆದಾಡಿಸುವ 'ಇ-ಸಂಕಷ್ಟ'ವಾಗಿ ಪರಿಣಮಿಸಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಕ್ಷಾಂತರ ಆಸ್ತಿ ಮಾಲೀಕರು ಇ-ಖಾತೆಗಾಗಿ ತಿಂಗಳುಗಟ್ಟಲೆ ಪರದಾಡುತ್ತಿದ್ದಾರೆ. ಸರ್ವರ್ ಸಮಸ್ಯೆ, ಲಾಗಿನ್ ವೈಫಲ್ಯ, ಜಿಪಿಎಸ್ ದೋಷ, ತಾಂತ್ರಿಕ ಗೊಂದಲಗಳಿಂದ ಜನರ ಬದುಕೇ ಸ್ಥಗಿತಗೊಂಡಿದೆ ಎಂದು ಅವರು ವಿವರಿಸಿದ್ದಾರೆ.

Advertisement
E-Bus: 'ಸೋಮಾರಿ-ಕಮಿಷನ್' ಕಾಂಗ್ರೆಸ್ ಸರ್ಕಾರದಿಂದ ಬೆಂಗಳೂರಿಗೆ 4,500 ಇ-ಬಸ್ ಕೈತಪ್ಪುವ ಸಾಧ್ಯತೆ! ಜೆಡಿಎಸ್

ಇದು ಡಿಜಿಟಲ್ ದುರಾಡಳಿತ

ಡಿಜಿಟಲ್ ಖಾತೆ ವಿತರಣೆ ಕ್ರಮ ಜಾರಿಗೆ ಬಂದಾಗಿನಿಂದ ಕೆಲವರಿಗೆ ಇ-ಖಾತಾಗಳು ಸಿಕ್ಕಿವೆ. ಅನೇಕ ಮಂದಿಯ ಅರ್ಜಿಗಳು ವಿಲೇವಾರಿ ಆಗಿಲ್ಲ. ಸರ್ವರ್ ಇನ್ನಿತರ ತಾಂತ್ರಿಕ ಸಮಸ್ಯೆಗಳಿಂದ ತಿಂಗಳಾದರೂ ಆಸ್ತಿ ಮಾಲೀಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ಇದರಿಂದ ಅವರಿಗೆ

* ಆಸ್ತಿ ಮಾರಾಟ ಸಾಧ್ಯವಿಲ್ಲ.
* ಬ್ಯಾಂಕ್ ಸಾಲ ಪಡೆಯಲು ಸಾಧ್ಯವಿಲ್ಲ.
* ವಾರಸುದಾರಿಕೆ ದಾಖಲೆ ಪೂರ್ಣಗೊಳ್ಳುತ್ತಿಲ್ಲ.
* ಜನ ಸರ್ಕಾರಿ ಕಚೇರಿಗಳಿಗೆ ನಿರಂತರ ಅಲೆದಾಟ

ಇನ್ನೂ ವಿಪರ್ಯಾಸವೇನೆಂದರೆ, ಸರ್ಕಾರದ ವೈಫಲ್ಯದ ಬೆಲೆಯನ್ನು ಅಮಾಯಕ ಗ್ರಾಮೀಣ ಜನರೇ ಕಟ್ಟುತ್ತಿದ್ದಾರೆ. ಕೂಡಲೇ ಇ-ಸ್ವತ್ತು 2.0 ವ್ಯವಸ್ಥೆಯನ್ನು ಸುಧಾರಿಸಿ, ಬಾಕಿ ಇರುವ ಅರ್ಜಿಗಳನ್ನು ಯುದ್ಧೋಪಾದಿಯಲ್ಲಿ ವಿಲೇವಾರಿ ಮಾಡಿ, ತಪ್ಪಿತಸ್ಥ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

Advertisement

ಸರ್ವರ್‌ನ್ನೇ ನೆಟ್ಟಗೆ ನಡೆಸಲಾಗದ ನಿಮ್ಮ ಕಾಂಗ್ರೆಸ್ ಸರ್ಕಾರ ರಾಜ್ಯವನ್ನು ನಡೆಸುವ ಸಾಮರ್ಥ್ಯವಿದೆ ಎಂದು ಕನ್ನಡಿಗರು ಹೇಗೆ ನಂಬಬೇಕು? ಎಂದು ರಾಜ್ಯ ಸರ್ಕಾರವನ್ನು ಅವರು ತರಾಟೆಗೆ ತೆಗೆದುಕೊಂಡಿದ್ದಾರೆ. ಸರ್ಕಾರ, ಕಂದಾಯ ಸಚಿವರು ಶೀಘ್ರವೇ ಸಮಸ್ಯೆ ಬಗೆಹರಿಸುವುದಾಗಿ ಹೇಳುತ್ತಲೇ ಇದ್ದಾರೆ. ಆದರೆ ಈವರೆಗೂ ಸಮಸ್ಯೆ ಬಗೆಹರಿಸಿಲ್ಲ ಎಂಬ ದೂರುಗಳು ಜನರಿಂದ ಕೇಳಿ ಬರುತ್ತಿವೆ. ಆಸ್ತಿ ಮಾಲೀಕರು ಹಾಗೂ ಗ್ರಾ.ಪಂಚಾಯಿತಿ ಅಧಿಕಾರಿಗಳ ಸಂಪರ್ಕವೇ ಕಡಿತಗೊಂಡಂತಾಗಿದೆ.

English Summary

R. Ashoka accused the Karnataka government of failing to resolve e-Swathu 2.0 issues affecting rural property owners,