National Highway: ರಾಜ್ಯದಲ್ಲಿ ರಾಷ್ಟ್ರೀಯ ಹೆದ್ದಾರಿ ಜಾಲ ವಿಸ್ತರಣೆ ಆಗುತ್ತಲಿದೆ. ಇದೀಗ ಮೈಸೂರು - ಕುಶಾಲನಗರ NH-275 ಕಾಮಗಾರಿ ಯಾವಾಗ ಪೂರ್ಣಗೊಳ್ಳಲಿದೆ ಎನ್ನುವ ಮಹತ್ವದ ಮಾಹಿತಿ ಹೊರಬಿದ್ದಿದೆ. ಹಾಗಾದ್ರೆ ಇದರಿಂದ ಯಾರಿಗೆಲ್ಲಾ ಹೆಚ್ಚು ಪ್ರಯೋಜವಾಗಲಿದೆ ಹಾಗೂ ಯಾವೆಲ್ಲ ಜಿಲ್ಲೆಗಳ ಮೇಲೆ ಹಾದುಹೋಗಲಿದೆ ಎಂದು ಇಲ್ಲಿ ಗಮನಿಸಿ.
ರಾಜ್ಯದಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ, ಅಭಿವೃದ್ಧಿಯಲ್ಲಿ ದೊಡ್ಡ ಮಟ್ಟದ ಕ್ರಾಂತಿಯೇ ಆಗುತ್ತಿದೆ. ಈ ನಡುವೆಯೇ ಇದೀಗ ಬಹುನಿರೀಕ್ಷಿತ ನಾಲ್ಕು ಪಥಗಳ ಮೈಸೂರು - ಕುಶಾಲನಗರ ರಾಷ್ಟ್ರೀಯ ಹೆದ್ದಾರಿ 275 ಕಾಮಗಾರಿ ಯಾವಾಗ ಮುಕ್ತಾಯ ಆಗಲಿದೆ ಎನ್ನುವ ಬಿಗ್ ಅಪ್ಡೇಟ್ ಹೊರಬಿದ್ದಿದೆ.
* ಒಟ್ಟು ಉದ್ದ - 92.3 ಕಿಲೋ ಮೀಟರ್ * ಅಂದಾಜು ವೆಚ್ಚ: 4,126 ಕೋಟಿ ರೂಪಾಯಿ * ನಿಗದಿತ ಗಡುವು: ಡಿಸೆಂಬರ್ 2027 ಭೂಸ್ವಾಧೀನ ಪ್ರಕ್ರಿಯೆಯು ಬಹುತೇಕ ಮುಕ್ತಾಯದ ಹಂತಕ್ಕೆ ತಲುಪಿದ್ದು, ನಿಗದಿಪಡಿಸಿದ ಡಿಸೆಂಬರ್ 2027ರ ಗಡುವುಗಿಂತ ಮುಂಚಿತವಾಗಿಯೇ ಯೋಜನೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ಮತ್ತು ಮೈಸೂರು ಸಂಸದ ಯದುವೀರ್ ಒಡೆಯರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಈ ಪ್ರವೇಶ ನಿಯಂತ್ರಿತ ಹೆದ್ದಾರಿಯು ಕೊಡಗಿನ ಕುಶಾಲನಗರವನ್ನು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಬಳಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಗೆ ಸಂಪರ್ಕ ಕಲ್ಪಿಸುತ್ತದೆ. ಇದು ಸಂಚಾರಕ್ಕೆ ಮುಕ್ತವಾದರೆ ಮೈಸೂರು ಮತ್ತು ಕುಶಾಲನಗರ ನಡುವಿನ ಪ್ರಯಾಣದ ಅವಧಿ ಒಂದು ಗಂಟೆಗಿಂತ ಕಡಿಮೆ ಆಗಲಿದೆ. ಅಷ್ಟೇ ಅಲ್ಲದೆ ಬೆಂಗಳೂರು ಮತ್ತು ಕೊಡಗು ನಡುವಿನ ಒಟ್ಟು ಪ್ರಯಾಣದ ಅವಧಿ ಮೂರು ಗಂಟೆಗಿಂತ ಕಡಿಮೆಯಾಗಲಿದೆ. ಈವರೆಗೆ ಶೇಕಡ 18.3ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಯೋಜನೆಗೆ ಒಟ್ಟು 560.4 ಎಕರೆ ಭೂಮಿಯ ಅಗತ್ಯವಿದ್ದು, ಪ್ಯಾಕೇಜ್ 2 ಮತ್ತು 3ಕ್ಕೆ ಶೇಕಡ 98ರಷ್ಟು, ಪ್ಯಾಕೇಜ್ 4ಕ್ಕೆ ಶೇಕಡ 97ರಷ್ಟು ಮತ್ತು ಪ್ಯಾಕೇಜ್ 5ಕ್ಕೆ ಶೇಕಡ 96ರಷ್ಟು ಭೂಮಿಯನ್ನು ಈಗಾಗಲೇ ವಶಪಡಿಸಿಕೊಳ್ಳಲಾಗಿದ ಎಂದು ತಿಳಿದುಬಂದಿದೆ. * ಪ್ಯಾಕೇಜ್ 2 (22.7 ಕಿಲೋ ಮೀಟರ್) - ಶೇಕಡ 13.6ರಷ್ಟು ಪ್ರಗತಿ * ಪ್ಯಾಕೇಜ್ 3 (24.1 ಕಿಲೋ ಮೀಟರ್) - ಶೇಕಡ 24.5ರಷ್ಟು ಪ್ರಗತಿ * ಪ್ಯಾಕೇಜ್ 4 (26.5 ಕಿಲೋ ಮೀಟರ್) - ಶೇಕಡ 18.4ರಷ್ಟು ಪ್ರಗತಿ * ಪ್ಯಾಕೇಜ್ 5 (18.9 ಕಿಲೋ ಮೀಟರ್) - ಶೇಕಡ 16.6ರಷ್ಟು ಪ್ರಗತಿ ಪಿರಿಯಾಪಟ್ಟಣದ 8.5 ಕಿಲೋ ಮೀಟರ್ ವ್ಯಾಪ್ತಿಯನ್ನು ಹೊರತುಪಡಿಸಿ ಉಳಿದ ಇಡೀ ರಸ್ತೆಯನ್ನು ಸಂಪೂರ್ಣವಾಗಿ ಗ್ರೀನ್‌ಫೀಲ್ಡ್ ಹೆದ್ದಾರಿಯಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಇದು ಪ್ರಯಾಣಿಕರಿಗೆ ಸುರಕ್ಷಿತ ಹಾಗೂ ತಡೆರಹಿತ ಸಂಚಾರವನ್ನು ಒದಗಿಸಲಿದೆ. ಈ ರಾಷ್ಟ್ರೀಯ ಹೆದ್ದಾರಿಯು ಪ್ರಮುಖವಾಗಿ ಮೈಸೂರು ಮತ್ತು ಕೊಡಗು ಜಿಲ್ಲೆಗಳ ಮೂಲಕ ಹಾದುಹೋಗುತ್ತದೆ. ಈ ಹೆದ್ದಾರಿಯಯು ಮಂಡ್ಯ ಜಿಲ್ಲೆಯ ಗಡಿಯಿಂದ ಆರಂಭವಾಗಲಿದೆ. ಈ ಗ್ರೀನ್‌ಫೀಲ್ಡ್ ಹೆದ್ದಾರಿಯು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ನಗುವನಹಳ್ಳಿ ಬಳಿಯಿಂದ ಆರಂಭವಾಗುತ್ತದೆ. ಮೈಸೂರು ಹೊರವರ್ತುಲ ರಸ್ತೆಯ ಸಂಪರ್ಕದೊಂದಿಗೆ ಹುಣಸೂರು ಮತ್ತು ಪಿರಿಯಾಪಟ್ಟಣ ತಾಲ್ಲೂಕುಗಳ ಮೂಲಕ ಸಾಗುತ್ತದೆ. ಬೈಲಕುಪ್ಪೆ ಮಾರ್ಗವಾಗಿ ಕೊಡಗು ಜಿಲ್ಲೆಯ ಕುಶಾಲನಗರದ ಆನೇಕಾಡು ಬಳಿ ಕೊನೆಗೊಳ್ಳುತ್ತದೆ. ಒಟ್ಟಿನಲ್ಲಿ ಈ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಮುಕ್ತಾಯವಾದರೆ ಮೈಸೂರು ಮತ್ತು ಕುಶಾಲನಗರ ನಡುವಿನ ಪ್ರಯಾಣದ ಅವಧಿ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಲಿದೆ.ಉದ್ದ, ವೆಚ್ಚ, ಕಾಮಗಾರಿ ಮುಕ್ತಾಯದ ದಿನಾಂಕದ ವಿವರ
ವೇಗ ಪಡೆದ ಹೆದ್ದಾರಿ ಕಾಮಗಾರಿ
ಪ್ರಯಾಣ ಸಮಯದ ಅವಧಿ ಕಡಿತ
ಪ್ಯಾಕೇಜ್‌ವಾರು ಕಾಮಗಾರಿ ಮಾಹಿತಿ