ಯುವತಿ ಮೈಮುಟ್ಟಿದ ಕಾಮುಕನಿಗೆ KSRTC ಬಸ್‌ನಲ್ಲೇ ತಗೋ ತಗೋ ಅಂತ ಗೂಸಾ ಕೊಟ್ಟ ಪ್ರಯಾಣಿಕರು


ನೆಲಮಂಗಲದ ಬಳಿ ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ (KSRTC) ಬಸ್‌ನಲ್ಲಿ ಯುವತಿಗೆ ಕಾಮುಕನೊಬ್ಬ ಅಸಭ್ಯವಾಗಿ ಸ್ಪರ್ಶಿಸಿ, ವಿಕೃತಿ ಮೆರೆಯಲು ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ವೇಳೆ ಸಂತ್ರಸ್ತೆಯ ನೆರವಿಗೆ ಧಾವಿಸಿದ ಸಹಪ್ರಯಾಣಿಕರು ಸರಿಯಾಗಿ ಧರ್ಮದೇಟು ನೀಡಿದ್ದಾರೆ. ಬಸ್ ಅಂದ್ರೆ ಸಾಕು ಹೆಣ್ಣುಮಕ್ಕಳಿಗೆ ಸುರಕ್ಷತೆ ಇಲ್ಲ ಅಂದುಕೊಳ್ಳುವ ಕಿಡಿಗೇಡಿಗಳಿಗೆ, ನಮ್ಮ ಜನ ಲೈವ್ ಆಗಿ ಭರ್ಜರಿ ಪಾಠ ಕಲಿಸಿದ್ದಾರೆ. ರಾತ್ರಿ ಸುಮಾರು 8 ಗಂಟೆಯ ಅವಧಿಯಲ್ಲಿ ಬಸ್ ನೆಲಮಂಗಲದ ಕಡೆಗೆ ಸಂಚರಿಸುತ್ತಿದ್ದಾಗ ಈ ಘಟನೆ ನಡೆದಿದೆ.

ಯುವತಿ ಕಣ್ಣೀರು ನೋಡಿ ಬಂದ ಪ್ರಯಾಣಿಕರು

ಬಸ್‌ನಲ್ಲಿದ್ದ ಯುವತಿಯೊಬ್ಬಳಿಗೆ, ಆಕೆಯ ಹಿಂಭಾಗದಲ್ಲಿದ್ದ ವ್ಯಕ್ತಿ ಪದೇ ಪದೇ ಅಸಭ್ಯವಾಗಿ ಸ್ಪರ್ಶಿಸುತ್ತಿದ್ದ ಎನ್ನಲಾಗಿದೆ. ಇದರಿಂದ ತೀವ್ರ ಮುಜುಗರ ಹಾಗೂ ಆಘಾತಕ್ಕೊಳಗಾದ ಯುವತಿ ಬಸ್‌ನಲ್ಲೇ ಕಣ್ಣೀರಿಡಲು ಆರಂಭಿಸಿದ್ದಾಳೆ. ಆರಂಭದಲ್ಲಿ ಭಯದಿಂದ ಆಕೆ ಯಾರಿಗೂ ವಿಷಯ ತಿಳಿಸಿರಲಿಲ್ಲ. ಆದರೆ, ಆಕೆಯ ಪಕ್ಕದ ಸೀಟಿನಲ್ಲಿದ್ದ ಪ್ರಯಾಣಿಕರೊಬ್ಬರು ಯುವತಿ ಅಳುತ್ತಿರುವುದನ್ನು ಗಮನಿಸಿ, ಏನಾಯಿತು? ಎಂದು ವಿಚಾರಿಸಿದಾಗ ಕಾಮುಕನ ಅಸಭ್ಯ ವರ್ತನೆಯ ಅಸಲಿ ವಿಷಯ ಹೊರಬಂದಿದೆ.

ಬಸ್‌ನಿಂದ ಹೊರಹಾಕಿದ ಕಂಡಕ್ಟರ್

ಯುವತಿಯ ಸಂಕಷ್ಟ ಕೇಳಿದ ತಕ್ಷಣ ಬಸ್‌ನಲ್ಲಿದ್ದ ಮತ್ತೊಬ್ಬ ಮಹಿಳಾ ಪ್ರಯಾಣಿಕರು ತಕ್ಷಣವೇ ಮಧ್ಯಪ್ರವೇಶಿಸಿ ಚಾಲಕನಿಗೆ ಬಸ್ ನಿಲ್ಲಿಸುವಂತೆ ತಿಳಿಸಿದ್ದಾರೆ. ತಕ್ಷಣವೇ ಆರೋಪಿ ವ್ಯಕ್ತಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಬಸ್‌ನಲ್ಲಿದ್ದ ಇತರ ಪ್ರಯಾಣಿಕರೂ ಯುವತಿಯ ಬೆಂಬಲಕ್ಕೆ ನಿಂತು ಕಂಡಕ್ಟರ್‌ಗೆ ತಿಳಿಸಿದ್ದಾರೆ. ಬಳಿಕ ಪ್ರಯಾಣಿಕರೆಲ್ಲರೂ ಒಟ್ಟಾಗಿ ಕಾಮುಕನಿಗೆ ತಕ್ಕ ಶಾಸ್ತಿ ಮಾಡಿದ್ದಾರೆ.

ಕಿರುಕುಳ ನೀಡಿದ ವ್ಯಕ್ತಿಗೆ ಕಪಾಳಮೋಕ್ಷ ಮಾಡುವಂತೆ ಯುವತಿಗೆ ಧೈರ್ಯ ತುಂಬಲಾಗಿದ್ದು, ಅದರಂತೆ ಆಕೆ ತಕ್ಕ ಪಾಠ ಕಲಿಸಿದ್ದಾಳೆ. ತಕ್ಷಣವೇ ಎಚ್ಚೆತ್ತ ಬಸ್ ಕಂಡಕ್ಟರ್ ಆರೋಪಿಯ ಟಿಕೆಟ್ ಅನ್ನು ವಾಪಸ್ ಪಡೆದು, ನೆಲಮಂಗಲದ ಟೋಲ್ ರಸ್ತೆ ಬಳಿಯೇ ಆತನನ್ನು ಬಸ್‌ನಿಂದ ಕೆಳಗೆ ಇಳಿಸಿ ಸಾರ್ವಜನಿಕವಾಗಿ ತಕ್ಕ ಶಿಕ್ಷೆ ನೀಡಿದ್ದಾರೆ. ಪ್ರತ್ಯಕ್ಷದರ್ಶಿಯೊಬ್ಬರು ನೀಡಿರುವ ಮಾಹಿತಿಯ ಪ್ರಕಾರ ಈ ಘಟನೆಗೆ ಸಂಬಂಧಿಸಿದಂತೆ ನೆಲಮಂಗಲ ಪೊಲೀಸ್ ಠಾಣೆಯಲ್ಲಾಗಲಿ ಅಥವಾ ಕೆಎಸ್‌ಆರ್‌ಟಿಸಿ ಇಲಾಖೆಯಲ್ಲಾಗಲಿ ಯಾವುದೇ ದೂರು ದಾಖಲಾಗಿಲ್ಲ.

Bengaluru-Mysuru Expressway: ಹೆದ್ದಾರಿಯಲ್ಲಿ KSRTC ಸಿಬ್ಬಂದಿ ಮೇಲೆ ಹಲ್ಲೆ; ಇಬ್ಬರ ಬಂಧನ, ವಿಡಿಯೋ ವೈರಲ್

ಸೋಷಿಯಲ್‌ ಮೀಡಿಯಾದಲ್ಲಿ ಈ ವಿಡಿಯೋ ವೈರಲ್‌ ಆಗಿದ್ದು, ಬೀದಿಗಳಲ್ಲಿ ಅಥವಾ ಸಾರ್ವಜನಿಕ ಸಾರಿಗೆಗಳಲ್ಲಿ ಮಹಿಳೆಯರಿಗೆ ಕಿರುಕುಳ ನೀಡುವ ಇಂತಹ ಘಟನೆಗಳನ್ನು ಯಾರೂ ನಿರ್ಲಕ್ಷಿಸಬಾರದು ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಈ ರೀತಿಯ ಕೆಟ್ಟ ಅನುಭವಗಳಾದ ತಕ್ಷಣವೇ ಮಹಿಳೆಯರು ಧ್ವನಿ ಎತ್ತಬೇಕು ಮತ್ತು ಇಂತಹ ಸಂದರ್ಭಗಳಲ್ಲಿ ಸಹಪ್ರಯಾಣಿಕರು ಸುರಕ್ಷಿತವಾಗಿ ಮಧ್ಯಪ್ರವೇಶಿಸಿ ಬೆಂಬಲ ನೀಡಿದರೆ ಇಂತಹ ಅಪರಾಧಗಳಿಗೆ ಬ್ರೇಕ್ ಹಾಕಬಹುದು ಎಂದು ಸಾರ್ವಜನಿಕರು ಕಾಮೆಂಟ್‌ ಮಾಡಿದ್ದಾರೆ.

ಬಸ್‌ನಲ್ಲಿ ಕಿರುಕುಳ ಕೊಟ್ಟರೆ ಏನು ಮಾಡಬೇಕು?

ಬಸ್‌ಗಳಲ್ಲಿ ಪ್ರಯಾಣಿಸುವಾಗ ಇಂತಹ ಘಟನೆಗಳು ಸಂಭವಿಸಿದರೆ ಮೊದಲು ಬಸ್‌ನಲ್ಲಿರುವವರಿಗೆ ಮಾಹಿತಿ ನೀಡಿ. ತಕ್ಷಣದ ನೆರವಿಗಾಗಿ ಸಾರ್ವಜನಿಕರು ಹಾಗೂ ಮಹಿಳೆಯರು ತುರ್ತು ಸಹಾಯವಾಣಿಗೆ ಕರೆ ಮಾಡುವುದು ಒಳ್ಳೆಯದು. ಯಾವುದೇ ಕಿರುಕುಳ ಎದುರಾದರೆ ತಕ್ಷಣವೇ 112 ಪೊಲೀಸ್ ತುರ್ತು ಸೇವೆ, ಮಹಿಳಾ ಸಹಾಯವಾಣಿ 1091ಕ್ಕೆ ಕರೆ ಮಾಡಬಹುದು. ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಇಂತಹ ಘಟನೆಗಳು ನಡೆದರೆ ಸಂಸ್ಥೆಯ ಮುಖ್ಯ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಬಸ್ ಸಂಖ್ಯೆಯೊಂದಿಗೆ ದೂರು ದಾಖಲಿಸಬಹುದು. ಸಾರಿಗೆ ಬಸ್‌ಗಳಲ್ಲಿ ಯಾರಾದರೂ ತೊಂದರೆಗೆ ಸಿಲುಕಿರುವುದು ಕಂಡುಬಂದಲ್ಲಿ ಪ್ರತ್ಯಕ್ಷದರ್ಶಿಗಳು ತಕ್ಷಣವೇ ನಿರ್ವಾಹಕರ ಗಮನಕ್ಕೆ ತರಬೇಕು. ಸಂತ್ರಸ್ತರಿಗೆ ಮಾನಸಿಕ ಧೈರ್ಯ ತುಂಬುವುದು ಮುಖ್ಯ.

English Summary

A man accused of molesting a woman on a KSRTC bus near Nelamangala was confronted and beaten by fellow passengers after the victim reported the alleged harassment.