ಸರ್ಕಾರಿ ಶಾಲೆಯ ಬಿಸಿಯೂಟದಲ್ಲಿ ನೀಡುವ ಮೊಟ್ಟೆಯನ್ನು ಪಶ್ಚಿಮ ಬಂಗಾಳ ಸರ್ಕಾರ ಈಗಾಗಲೇ ಕೈಬಿಡಲು ನಿರ್ಧಾರಿಸಿದೆ. ಇದರಿಂದಾಗಿ, ದೇಶಾದ್ಯಂತ ಪೌಷ್ಟಿಕಾಂಶ, ಆಹಾರದ ಆಯ್ಕೆಗಳು ಹಾಗೂ ಧಾರ್ಮಿಕ ಭಾವನೆಗಳ ಸುತ್ತ ಹಳೆಯ ಚರ್ಚೆಯನ್ನು ಮತ್ತೆ ಹುಟ್ಟುಹಾಕಿದೆ. ಆದರೆ, ಇದೇ ವೇಳೆ ಕರ್ನಾಟಕ ಈ ವಿಚಾರವನ್ನು ಕೇವಲ 'ಮೊಟ್ಟೆ vs ಸಸ್ಯಾಹಾರಿ ಆಹಾರ' ಎಂಬ ಚೌಕಟ್ಟು ಕಟ್ಟಿಕೊಳ್ಳುವ ಅಗತ್ಯವಿಲ್ಲ ಎಂಬುದನ್ನ ಸಾಬೀತುಪಡಿಸಿದೆ.
ಹಲವು ವರ್ಷಗಳಿಂದ ರಾಜಕೀಯ ವಿರೋಧ, ಧಾರ್ಮಿಕ ಮುಖಂಡರ ಆಕ್ಷೇಪಣೆಗಳು ಹಾಗೂ ಆಡಳಿತಾತ್ಮಕ ಅಡೆತಡೆಗಳನ್ನು ಎದುರಿಸಿಕೊಂಡು ಕರ್ನಾಟಕ ಸರ್ಕಾರವು, ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳ ಬಿಸಿಯೂಟದಲ್ಲಿ ಮೊಟ್ಟೆ ವಿತರಣೆಯನ್ನು ಅತ್ಯಂತ ಯಶಸ್ವಿಯಾಗಿ ಜಾರಿಗೊಳಿಸಿದೆ.
ವಿಶೇಷವೆಂದರೆ, ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 47 ಲಕ್ಷಕ್ಕೂ ಹೆಚ್ಚು ಮಕ್ಕಳ ಪೈಕಿ ಶೇ. 65ರಷ್ಟು ವಿದ್ಯಾರ್ಥಿಗಳು ಈಗ ಮೊಟ್ಟೆಯನ್ನು ತಿನ್ನುತ್ತಿದ್ದಾರೆ. ಇನ್ನೂ ಉಳಿದ ಮಕ್ಕಳಿಗೆ ಮೊಟ್ಟೆ ಬದಲಿಗೆ ಬಾಳೆಹಣ್ಣು ಅಥವಾ ಶೇಂಗಾ ಚಿಕ್ಕಿಯನ್ನು ಕೊಡಲಾಗುತ್ತೆ. ಇದು ಮಕ್ಕಳಿಗೆ ಹೇರಿಕೆ ಮಾಡುತ್ತಿರುವುದಲ್ಲ, ಬದಲಿಗೆ ಇದನ್ನ ಮಕ್ಕಳ ಆರೋಗ್ಯ ಸುಧಾರಣೆಯ ಮಹತ್ವದ ಹೆಜ್ಜೆ ಎನ್ನಬಹುದು. ಶಾಲಾ ಮಕ್ಕಳಲ್ಲಿ ಪೌಷ್ಟಿಕಾಂಶ ಹೆಚ್ಚಿಸುವ ಸರ್ಕಾರದ ಈ ಯೋಜನೆಯಲ್ಲಿ ಮೊದಲಿಗೆ ವಾರಕ್ಕೆ ಕೇವಲ ಎರಡೇ ದಿನ ಮೊಟ್ಟೆ ನೀಡಲಾಗುತ್ತಿತ್ತು. ಆದರೆ 2024ರಿಂದ ಈ ಯೋಜನೆಯನ್ನ ವಿಸ್ತರಿಸಿ ವಾರದಲ್ಲಿ ಆರು ದಿನ ಮೊಟ್ಟೆ ನೀಡಲಾಗುತ್ತಿದೆ. 2021ರ ಡಿಸೆಂಬರ್‌ನಲ್ಲಿ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಮೊಟ್ಟೆ ವಿತರಣೆ ಆರಂಭಿಸಿದಾಗ ತೀವ್ರ ವಿರೋಧ ವ್ಯಕ್ತವಾಗಿತ್ತು. ಆದರೆ, ವೈಜ್ಞಾನಿಕ ವರದಿಗಳ ಪ್ರಕಾರ ಮೊಟ್ಟೆ ತಿಂದ ಹೆಣ್ಣುಮಕ್ಕಳ ತೂಕದಲ್ಲಿ 0.9 ಕೆ.ಜಿ ಇಂದ 3.6 ಕೆ.ಜಿ ವರೆಗೆ ಏರಿಕೆಯಾಗಿತ್ತು. ಶಿಕ್ಷಣ ಇಲಾಖೆಯ ಇತ್ತೀಚಿನ ವರದಿಗಳ ಪ್ರಕಾರ, ಬಿಸಿಯೂಟದಲ್ಲಿ ವಾರಕ್ಕೆ ಆರು ದಿನ ಮೊಟ್ಟೆ ನೀಡಲು ಆರಂಭಿಸಿದ ಬಳಿಕ ಶಾಲಾ ಹಾಜರಾತಿ ಪ್ರಮಾಣವು ಶೇ. 93.5 ರಿಂದ ಬರೋಬ್ಬರಿ ಶೇ. 98.9 ಕ್ಕೆ ಏರಿಕೆಯಾಗಿದೆ. ಕೋವಿಡ್ ನಂತರದ ದಿನಗಳಲ್ಲಿ ಮಕ್ಕಳಲ್ಲಿ ಅಪೌಷ್ಟಿಕತೆ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ, ಈ ಯೋಜನೆಯು ಸಂಜೀವಿನಿಯಾಗಿ ಕೆಲಸ ಮಾಡುತ್ತಿದೆ. ಯಾವುದೇ ಹೊಸ ಯೋಜನೆ ಜಾರಿಯಾದಾಗ ವಿರೋಧ ಮಾಡುವುದು ಸಹಜ. ಕರ್ನಾಟಕದಲ್ಲೂ ಹಲವು ಮಠಾಧೀಶರು ಹಾಗೂ ಸಂಘಟನೆಗಳು ಶಾಲೆಗಳಲ್ಲಿ ಮೊಟ್ಟೆ ವಿತರಿಸುವುದನ್ನು ತೀವ್ರವಾಗಿ ವಿರೋಧಿಸಿದ್ದರು. ಆದರೆ ಸರ್ಕಾರವು ಪೋಷಕರ ಲಿಖಿತ ಒಪ್ಪಿಗೆಯ ಮೇರೆಗೆ ಮೊಟ್ಟೆ ನೀಡುವ ಆಯ್ಕೆ ಮುಂದಿಟ್ಟಿತು. ಮೊಟ್ಟೆ ಬೇಡವಾದವರಿಗೆ ಬೇರೆ ವ್ಯವಸ್ಥೆ ಕಲ್ಪಿಸಿದ ಕಾರಣ ವಿವಾದ ತಣ್ಣಗಾಯಿತು. ಈ ಯೋಜನೆಗೆ ಆರ್ಥಿಕವಾಗಿ ಬೆನ್ನೆಲುಬಾಗಿ ನಿಂತದ್ದು ಅಜೀಂ ಪ್ರೇಮ್‌ಜಿ ಫೌಂಡೇಶನ್. ಈ ಸಂಸ್ಥೆಯು ಮುಂದಿನ ಮೂರು ವರ್ಷಗಳ ಕಾಲ ಹೆಚ್ಚುವರಿ ನಾಲ್ಕು ದಿನಗಳ ಮೊಟ್ಟೆ ವಿತರಣೆಗಾಗಿ ಬರೋಬ್ಬರಿ 1,500 ಕೋಟಿ ರೂ.ಗಳ ಅನುದಾನ ನೀಡಿದೆ. ಇತ್ತೀಚೆಗೆ ಪಶ್ಚಿಮ ಬಂಗಾಳ ಬಿಸಿಯೂಟ ಯೋಜನೆಯ ನಿರ್ವಹಣೆಯನ್ನು ಇಸ್ಕಾನ್ ಸಂಸ್ಥೆಗೆ ವಹಿಸಲಾಗಿದ್ದು, ಆ ಸಂಸ್ಥೆ ನಿಯಮದ ಪ್ರಕಾರ ಸಸ್ಯಾಹಾರಿ ಆಹಾರವನ್ನು ಮಾತ್ರ ನೀಡುತ್ತದೆ. ಹಾಗಾಗಿ ಮೊಟ್ಟೆಯನ್ನು ಕೈಬಿಡಲಾಗಿದೆ. ಆದರೆ ಕರ್ನಾಟಕ ಮಕ್ಕಳ ಅಗತ್ಯತೆಗಳನ್ನು ಮುಂದೆ ಇಟ್ಟುಕೊಂಡು ಈ ಯೋಜನೆ ರೂಪಿಸಿದೆ. ವೈದ್ಯಕೀಯ ತಜ್ಞರ ಪ್ರಕಾರ, ಮೊಟ್ಟೆಯಲ್ಲಿ ದೇಹಕ್ಕೆ ಅಗತ್ಯವಿರುವ ಶೇ. 100ರಷ್ಟು ಜೈವಿಕ ಪ್ರೋಟೀನ್ ಇರುತ್ತದೆ, ಇದು ಮಕ್ಕಳ ಮೆದುಳಿನ ಬೆಳವಣಿಗೆಗೆ ತುಂಬ ಮುಖ್ಯ. ಕರ್ನಾಟಕದಲ್ಲಿ ಹಿಂದೆ ಕೆಲ ಸ್ವಯಂ ಸೇವಾ ಸಂಸ್ಥೆಗಳು ಮೊಟ್ಟೆ ವಿತರಿಸಲು ನಿರಾಕರಿಸಿದಾಗ, ಸರ್ಕಾರವು ಬೇರೆ ಏಜೆನ್ಸಿಗಳ ಮೂಲಕ ಮಕ್ಕಳಿಗೆ ಮೊಟ್ಟೆ ತಲುಪಿಸುವ ವ್ಯವಸ್ಥೆ ಮಾಡಿತ್ತು. ಸದ್ಯ ಕರ್ನಾಟಕದ ಶಾಲಾ ಶಿಕ್ಷಣ ಇಲಾಖೆ ಮೊಟ್ಟೆ ಸೇವಿಸುವ ಮಕ್ಕಳ ಪ್ರಮಾಣವನ್ನು ಶೇ. 65ರಿಂದ ಶೇ. 80-85ಕ್ಕೆ ಹೆಚ್ಚಿಸುವ ಗುರಿ ಹೊಂದಿದ್ದು, ಪೋಷಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನ ಮಾಡುತ್ತಿದೆ.ಪೋಕ್ಸೊ ಕಾಯ್ದೆ ದುರ್ಬಳಕೆಗೆ ತಡೆ: ಇನ್ಮುಂದೆ ದೇಶದ ಎಲ್ಲಾ ಶಾಲಾ-ಕಾಲೇಜುಗಳಲ್ಲಿ ಲೈಂಗಿಕ ಶಿಕ್ಷಣ ಕಡ್ಡಾಯ
ಅಜೀಂ ಪ್ರೇಮ್‌ಜಿ ಫೌಂಡೇಶನ್ ನೆರವು
ಪಶ್ಚಿಮ ಬಂಗಾಳ ಬಿಸಿಯೂಟ ಯೋಜನೆಗೂ ಕರ್ನಾಟಕಕ್ಕೂ ಇರುವ ವ್ಯತ್ಯಾಸ
ಸೈನ್ಸ್ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರ ನೀಡುವ 'INSPIRE SHE' ಸ್ಕಾಲರ್‌ಶಿಪ್ ನಿಲ್ಲಲಿದೆಯಾ?