ಶ್ರೀಮಧುಸೂದನ ಸಾಯಿ ಆಸ್ಪತ್ರೆಯಲ್ಲಿ ದೇಶದ ಮೊದಲ ಅಂತಾರಾಷ್ಟ್ರೀಯ ರೋಬೋಟಿಕ್ ಶಸ್ತ್ರಚಿಕಿತ್ಸಾ ಸಮ್ಮೇಳನ


ಚಿಕ್ಕಬಳ್ಳಾಪುರ: ವೈದ್ಯಕೀಯ ರಂಗದಲ್ಲಿ ಭಾರತದ ಹೆಮ್ಮೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಮಹತ್ವದ ಮೈಲಿಗಲ್ಲೊಂದಕ್ಕೆ ಚಿಕ್ಕಬಳ್ಳಾಪುರ ಜಿಲ್ಲೆ ಸಾಕ್ಷಿಯಾಗಿದೆ. ಇಲ್ಲಿನ ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿರುವ ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ (SMSIMSR) ಎರಡು ದಿನಗಳ ಕಾಲ ನಡೆಯಲಿರುವ ಅತ್ಯಂತ ಪ್ರತಿಷ್ಠಿತ 'ಅಂತಾರಾಷ್ಟ್ರೀಯ ಎಂಡೋಸ್ಕೋಪಿಕ್ ಮತ್ತು ರೋಬೋಟಿಕ್ ಹೃದಯ ಶಸ್ತ್ರಚಿಕಿತ್ಸಾ ಸಮ್ಮೇಳನ'ಕ್ಕೆ (IERCSC-2026) ಜುಲೈ 11ರಂದು ಅದ್ಧೂರಿ ಚಾಲನೆ ಸಿಕ್ಕಿದೆ. ದೇಶದಲ್ಲೇ ಸಂಪೂರ್ಣ ಉಚಿತ ವೈದ್ಯಕೀಯ ಶಿಕ್ಷಣ ಮತ್ತು ಸೇವೆ ನೀಡುವ ಆಸ್ಪತ್ರೆಯೊಂದರಲ್ಲಿ ಇಂತಹದೊಂದು ಹೈಟೆಕ್ ಅಂತಾರಾಷ್ಟ್ರೀಯ ಸಮ್ಮೇಳನ ಆಯೋಜನೆಗೊಂಡಿರುವುದು ಇದೇ ಮೊದಲ ಬಾರಿ ಎನ್ನುವುದು ವಿಶೇಷ.

Advertisement

'ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್' ಆಶ್ರಯದಲ್ಲಿ, ಪ್ರಖ್ಯಾತ ಮಣಿಪಾಲ್ ಆಸ್ಪತ್ರೆ ಹಾಗೂ ಎಸ್‌ಎಸ್ ಇನ್ನೋವೇಷನ್ಸ್ ಸಂಸ್ಥೆಗಳ ಜಂಟಿ ಸಹಯೋಗದೊಂದಿಗೆ ಈ ಸಮ್ಮೇಳನವನ್ನು ಆಯೋಜಿಸಲಾಗಿದೆ. ಈ ಜಾಗತಿಕ ಸಮ್ಮೇಳನದಲ್ಲಿ ಭಾರತ ಮಾತ್ರವಲ್ಲದೆ ಅಮೆರಿಕ, ಚೀನಾ, ಗ್ರೀಸ್, ಬ್ರೆಜಿಲ್, ಜರ್ಮನಿ, ಉಕ್ರೇನ್, ವಿಯೆಟ್ನಾಂ ಸೇರಿದಂತೆ ವಿಶ್ವದ ವಿವಿಧ ರಾಷ್ಟ್ರಗಳ ಮುಂಚೂಣಿಯ ಹೃದಯ ಶಸ್ತ್ರಚಿಕಿತ್ಸಾ ತಜ್ಞರು, ನುರಿತ ವೈದ್ಯರು ಹಾಗೂ ನೂರಾರು ವೈದ್ಯಕೀಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ.

Advertisement

ರಿಮೋಟ್ ರೋಬೋಟಿಕ್ ಸರ್ಜರಿಯಲ್ಲಿ ಹೊಸ ದಾಖಲೆ

ರಿಮೋಟ್ ತಂತ್ರಜ್ಞಾನ ಬಳಸಿ ರೋಬೋಟಿಕ್ ಹೃದಯ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಿರ್ವಹಿಸುವಲ್ಲಿ ಈ ಸಂಸ್ಥೆ ದೇಶದಲ್ಲೇ ಮುಂಚೂಣಿಯಲ್ಲಿದೆ. ಈಗಾಗಲೇ ಇಲ್ಲಿ ಮೂವರು ರೋಗಿಗಳಿಗೆ ಅತ್ಯಂತ ಯಶಸ್ವಿಯಾಗಿ ರಿಮೋಟ್ ರೋಬೋಟಿಕ್ ಸರ್ಜರಿ ಮಾಡಲಾಗಿದ್ದು, ಅವರೆಲ್ಲರೂ ಸಂಪೂರ್ಣ ಗುಣಮುಖರಾಗಿ ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಜೊತೆಗೆ ದೇಶದ ವಿವಿಧ ಭಾಗಗಳ ಸರ್ಜನ್‌ಗಳಿಗೆ ರೋಬೋಟಿಕ್ ಶಸ್ತ್ರಚಿಕಿತ್ಸೆಯಲ್ಲಿ ಉಚಿತವಾಗಿ ಪ್ರಾಯೋಗಿಕ ತರಬೇತಿ ನೀಡುತ್ತಿರುವ ಹೆಗ್ಗಳಿಕೆಯೂ ಈ ವೈದ್ಯಕೀಯ ಕಾಲೇಜಿಗಿದೆ.

Advertisement
ಮುದ್ದೇನಹಳ್ಳಿ ಸತ್ಯಸಾಯಿ ಗ್ರಾಮದಲ್ಲಿ CSR ರಾಷ್ಟ್ರೀಯ ಸಮಾವೇಶ: ವಿಕಸಿತ ಭಾರತ ಚರ್ಚೆ

ದಿಲ್ಲಿಯಲ್ಲಿದ್ದ ವೈದ್ಯರಿಂದ ಮುದ್ದೇನಹಳ್ಳಿಯ ರೋಗಿಗೆ ಲೈವ್ ಸರ್ಜರಿ

ಕನಿಷ್ಠ ಘಾಸಿಗೊಳಿಸುವ (ಮಿನಿಮಲಿ ಇನ್ವೇಸಿವ್) ಹಾಗೂ ರೋಬೋಟಿಕ್ ಹೃದಯ ಶಸ್ತ್ರಚಿಕಿತ್ಸೆಯಲ್ಲಿನ ಅತ್ಯಾಧುನಿಕ ತಂತ್ರಜ್ಞಾನ, ಸಂಶೋಧನೆ ಮತ್ತು ಚಿಕಿತ್ಸಾ ವಿಧಾನಗಳ ಕುರಿತು ಅನುಭವ ಹಂಚಿಕೆ ಹಾಗೂ ನೇರ ಶಸ್ತ್ರಚಿಕಿತ್ಸೆಗಳ ಪ್ರಾತ್ಯಕ್ಷಿಕೆಗಳು ಸಮ್ಮೇಳನದ ಪ್ರಮುಖ ಆಕರ್ಷಣೆ. ಗ್ರೀಸ್, ಕೊಯಮತ್ತೂರು ಹಾಗೂ ಮುದ್ದೇನಹಳ್ಳಿಯ ಆಸ್ಪತ್ರೆಗಳಿಂದ ಏಕಕಾಲದಲ್ಲಿ ನೇರ ಹೃದಯ ಶಸ್ತ್ರಚಿಕಿತ್ಸೆಗಳ ಪ್ರದರ್ಶನ ನಡೆಯಿತು. ಮೂವರು ರೋಗಿಗಳಿಗೆ ದೆಹಲಿಯಲ್ಲಿದ್ದ ಎಸ್‌ಎಸ್ ಇನ್ನೋವೇಷನ್ಸ್ ಸಂಸ್ಥಾಪಕ ಹಾಗೂ ಅಧ್ಯಕ್ಷ ಡಾ.ಸುಧೀರ್ ಶ್ರೀವಾಸ್ತವ ಅವರು ದೂರಸ್ಥ ತಂತ್ರಜ್ಞಾನದ ಮೂಲಕ ರೋಬೋಟಿಕ್ ಹೃದಯ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿದರು.

Advertisement

ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಸಂಘಟನಾ ಕಾರ್ಯದರ್ಶಿ ಡಾ. ಸಿ.ಎಸ್. ಹಿರೇಮಠ, "ಈ ಸಮ್ಮೇಳನವು ವೈದ್ಯರಿಗೆ ಜಾಗತಿಕ ತಜ್ಞರೊಂದಿಗೆ ನೇರ ಸಂವಾದ ನಡೆಸುವ ಅವಕಾಶ ಕಲ್ಪಿಸುತ್ತದೆ. ಹೊಸ ತಂತ್ರಜ್ಞಾನವನ್ನು ಕಲಿಯುವುದರ ಜತೆಗೆ ಅದನ್ನು ರೋಗಿಗಳ ಚಿಕಿತ್ಸೆಯಲ್ಲಿ ಸುರಕ್ಷಿತವಾಗಿ ಅಳವಡಿಸಿಕೊಳ್ಳುವ ಅನುಭವವೂ ಇಲ್ಲಿ ದೊರೆಯಲಿದೆ" ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಪ್ರಭು ಜಿ., "ಕರುಣೆ ಮತ್ತು ಅತ್ಯಾಧುನಿಕ ವೈದ್ಯಕೀಯ ತಂತ್ರಜ್ಞಾನ ಒಂದಕ್ಕೊಂದು ಪೂರಕವಾಗಬಲ್ಲವು ಎಂಬುದನ್ನು ಈ ಸಂಸ್ಥೆ ಸಾಬೀತುಪಡಿಸಿದೆ. ಇಂತಹ ಪ್ರಯತ್ನಗಳು ಜಿಲ್ಲೆಯ ಆರೋಗ್ಯ ಕ್ಷೇತ್ರಕ್ಕೂ ಹೊಸ ದಿಕ್ಕು ನೀಡಲಿವೆ" ಎಂದರು. ಎಸ್‌ಎಸ್ ಇನ್ನೋವೇಷನ್ಸ್ ಸಂಸ್ಥಾಪಕ ಹಾಗೂ ಅಧ್ಯಕ್ಷ ಡಾ. ಸುಧೀರ್ ಶ್ರೀವಾಸ್ತವ, "ಸ್ವದೇಶಿ ರೋಬೋಟಿಕ್ ತಂತ್ರಜ್ಞಾನವು ಅತ್ಯಾಧುನಿಕ ವೈದ್ಯಕೀಯ ಸೇವೆಯನ್ನು ಇನ್ನಷ್ಟು ಜನರಿಗೆ ತಲುಪಿಸುವ ಸಾಮರ್ಥ್ಯ ಹೊಂದಿದೆ. ಈ ಕ್ಷೇತ್ರದಲ್ಲಿ ಭಾರತ ಜಾಗತಿಕ ನಾಯಕತ್ವ ವಹಿಸುವ ಶಕ್ತಿ ಹೊಂದಿದೆ" ಎಂದು ಹೇಳಿದರು.

Advertisement

ಕಾರ್ಯಕ್ರಮದಲ್ಲಿ ಮಾತನಾಡಿದ 'ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್' ಸಂಸ್ಥಾಪಕ ಸದ್ಗುರು ಶ್ರೀ ಮಧುಸೂದನ ಸಾಯಿ, "ಕೇವಲ ಪರಿಣತ ವೈದ್ಯರನ್ನು ರೂಪಿಸುವುದಷ್ಟೇ ವೈದ್ಯಕೀಯ ಶಿಕ್ಷಣದ ಗುರಿಯಲ್ಲ. ಕರುಣೆಯುಳ್ಳ ವೈದ್ಯರನ್ನು ರೂಪಿಸುವುದು ಬಹಳ ಮುಖ್ಯ. ಹತ್ತು ವರ್ಷಗಳ ಹಿಂದೆ ಈ ಪ್ರದೇಶದಲ್ಲಿ ಮೂಲಸೌಕರ್ಯವೇ ಇರಲಿಲ್ಲ. ಇಂದು ಇದೇ ಸ್ಥಳ ಜಾಗತಿಕ ಮಟ್ಟದ ವೈದ್ಯಕೀಯ ಶಿಕ್ಷಣ, ಸಂಶೋಧನೆ ಹಾಗೂ ಗ್ರಾಮೀಣ ಆರೋಗ್ಯ ಸೇವೆಯ ಕೇಂದ್ರವಾಗಿ ರೂಪುಗೊಂಡಿದೆ. ಜಗತ್ತಿನ ಮೊದಲ ಉಚಿತ ಎಂಬಿಬಿಎಸ್ ಕಾಲೇಜು ಇಲ್ಲಿಯೇ ಕಾರ್ಯನಿರ್ವಹಿಸುತ್ತಿದೆ. ನಮ್ಮ ಆರೋಗ್ಯ ಸೇವೆಗಳು ಭಾರತ ಮಾತ್ರವಲ್ಲದೆ ನೈಜೀರಿಯಾ ಹಾಗೂ ಶ್ರೀಲಂಕಾದಂತಹ ದೇಶಗಳಿಗೂ ವಿಸ್ತರಿಸಿವೆ" ಎಂದು ಹೇಳಿದರು. ಈ ಐತಿಹಾಸಿಕ ವೈದ್ಯಕೀಯ ಸಮ್ಮೇಳನ ಭಾನುವಾರವೂ (ಜುಲೈ 12) ಮುಂದುವರಿಯಲಿದ್ದು, ಅಂದು ಎಂಡೋಸ್ಕೋಪಿಕ್ ಹಾಗೂ ರೋಬೋಟಿಕ್ ಹೃದಯ ಶಸ್ತ್ರಚಿಕಿತ್ಸೆಯ ವೆಟ್‌ಲ್ಯಾಬ್ (ಪ್ರಾಯೋಗಿಕ) ಕಾರ್ಯಾಗಾರಗಳು ನಡೆಯಲಿವೆ.

English Summary

India's first international robotic and endoscopic cardiac surgery conference has begun at SMSIMSR, Muddenahalli, with leading surgeons and experts from across the world participating.