Cabinet Reshuffle: ಜಾತಿ ನೋಡಿ ಕೆಲಸಕ್ಕೆ ಬಾರದವರಿಗೆಲ್ಲ ಸಚಿವ ಸ್ಥಾನ ಕೊಡಬೇಡಿ: ಉಗ್ರಪ್ಪ ಹೀಗಂದಿದ್ದೇಕೆ?


ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆಯ ಕಸರತ್ತು ಬಿರುಸುಗೊಂಡಿರುವ ಬೆನ್ನಲ್ಲೇ ಕಾಂಗ್ರೆಸ್ ಪಾಳಯದಲ್ಲಿ ಆಂತರಿಕ ಭಿನ್ನಮತ ಜೋರಾಗಿದೆ. ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಹಾಗೂ ಹಿರಿಯ ನಾಯಕ ವಿ.ಎಸ್.ಉಗ್ರಪ್ಪ ಅವರು ಕಾರವಾರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುವಾಗ ಸಚಿವ ಸ್ಥಾನದ ಆಕಾಂಕ್ಷಿಗಳು ಹಾಗೂ ಸರ್ಕಾರದ ಆಯ್ಕೆಯ ಮಾನದಂಡಗಳ ಕುರಿತು ಖಂಡಿಸಿದ್ದಾರೆ. ಕೇವಲ ಜಾತಿ ಮತ್ತು ಧರ್ಮದ ಆಧಾರದ ಮೇಲೆ ಕೆಲಸಕ್ಕೆ ಬಾರದವರಿಗೆ ಸಚಿವ ಸ್ಥಾನ ನೀಡಬಾರದು ಎಂದು ಅವರು ತಮ್ಮದೇ ಪಕ್ಷದ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

Advertisement

"ಮಂತ್ರಿಗಿರಿ ಯಾರಪ್ಪನ ಆಸ್ತಿಯೂ ಅಲ್ಲ"

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರದಲ್ಲಿ ಇನ್ನು ಹಲವು ಶಾಸಕರಿಗೆ ಸಚಿವ ಸ್ಥಾನ ಸಿಕ್ಕಿಲ್ಲ. ಸದ್ಯದಲ್ಲೇ ಸಂಪುಟ ಪುನಾರಚನೆ ಅಥವಾ ವಿಸ್ತರಣೆಯಾಗುವ ಮುನ್ಸೂಚನೆ ಇರುವುದರಿಂದ ಉಗ್ರಪ್ಪ ಅವರ ಈ ಮಾತುಗಳು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿವೆ. ಮಾಧ್ಯಮಗಳ ಮುಂದೆ ತಮ್ಮ ಆಕ್ರೋಶ ಹೊರಹಾಕಿದ ಉಗ್ರಪ್ಪ, "ಸಚಿವ ಸ್ಥಾನ ನೀಡುವಾಗ ಅರ್ಹತೆಗೆ ಮಾನದಂಡವಾಗಬೇಕೇ ಹೊರತು ಜಾತಿ-ಧರ್ಮಕ್ಕಲ್ಲ. ನೂರಾರು ಜನ ಅಯೋಗ್ಯರು, ಅಪ್ರಾಮಾಣಿಕರು, ಕ್ರಿಮಿನಲ್‌ ಹಿನ್ನೆಲೆಯುಳ್ಳವರು ಮತ್ತು ಭ್ರಷ್ಟರು ಮಂತ್ರಿಗಳಾಗುವ ಬದಲು, ನಾಲ್ಕಾರು ಜನ ವಿದ್ಯಾವಂತರು, ದೇಶಪ್ರೇಮಿಗಳು ಹಾಗೂ ವಿಚಾರವಂತರು ಮಂತ್ರಿಗಳಾದರೆ ಮಾತ್ರ ಈ ರಾಜ್ಯ ಮತ್ತು ದೇಶ ಉದ್ಧಾರವಾಗುತ್ತೆ" ಎಂದಿದ್ದಾರೆ.

Advertisement

"ಮಂತ್ರಿಗಿರಿ ಎನ್ನುವುದು ಯಾರಪ್ಪನ ಸ್ವಂತ ಆಸ್ತಿಯೂ ಅಲ್ಲ. ಈ ಅಧಿಕಾರ ಇರುವುದು ಪಕ್ಷಕ್ಕೆ, ನಿಷ್ಠಾವಂತ ಕಾರ್ಯಕರ್ತರಿಗೆ ಮತ್ತು ಜನಸಾಮಾನ್ಯರಿಗೆ. ಈ ರಾಜ್ಯವನ್ನು ಮುನ್ನಡೆಸುವ ಗತ್ತು ಹಾಗೂ ಬದ್ಧತೆ ಯಾರಿಗೆ ಇದೆಯೋ, ಅಂತಹವರನ್ನು ಗುರುತಿಸಿ ಮಂತ್ರಿ ಮಾಡುವ ಸಂಪೂರ್ಣ ಸಾಮರ್ಥ್ಯ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಇದೆ ಎಂದಿದ್ದಾರೆ ಉಗ್ರಪ್ಪ.

Karnataka Cabinet Expansion: ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್‌: ಇವರಿಗೆ ಸಚಿವ ಸ್ಥಾನ ಸಿಗುವುದು ಕನ್ಫರ್ಮ್!

ಹೊಸಬರಿಗೆ ಚಾನ್ಸ್ ಕೊಡಿ

ಪಕ್ಷ ಅಧಿಕಾರಕ್ಕೆ ಬಂದಾಗಲೆಲ್ಲಾ ಕೆಲವು ನಿರ್ದಿಷ್ಟ ನಾಯಕರಿಗೇ ಸಚಿವ ಸ್ಥಾನ ಸಿಗುವ ವ್ಯವಸ್ಥೆಯ ವಿರುದ್ಧ ಉಗ್ರಪ್ಪ ಅಸಮಾಧಾನ ಹೊರಹಾಕಿದ್ದಾರೆ. "ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲ ಕೆಲವೇ ಮುಖಗಳಿಗೆ ಸಚಿವ ಸ್ಥಾನ ನೀಡಲಾಗುತ್ತಿದೆ. ಕೆಲವರು ಹತ್ತು-ಹದಿನೈದು ವರ್ಷಗಳಿಂದ ಸಚಿವ ಸ್ಥಾನವನ್ನು ಅನುಭವಿಸಿದ್ದಾರೆ. ಇದು ಸಾಕು, ಉಳಿದವರನ್ನು ಪಕ್ಷದ ಸಂಘಟನೆಗೆ ಬಳಸಿಕೊಳ್ಳಬೇಕು. ಸಕ್ರಿಯವಾಗಿ ಕೆಲಸ ಮಾಡುತ್ತಿರುವ ಯುವಕರು ಮತ್ತು ಅನುಭವ ಹೊಂದಿರುವ ಹೊಸ ಮುಖಗಳಿಗೆ ಈ ಬಾರಿ ಸಚಿವ ಸಂಪುಟದಲ್ಲಿ ಅವಕಾಶ ನೀಡಬೇಕು. ಇದರಿಂದ ಪಕ್ಷದ ಬಗ್ಗೆ ಸಾರ್ವಜನಿಕರಲ್ಲಿ ಒಳ್ಳೆಯ ಅಭಿಪ್ರಾಯ ಮೂಡುತ್ತೆ ಎಂದು ಸಲಹೆ ನೀಡಿದ್ದಾರೆ.

Advertisement

ಇದೇ ವೇಳೆ ರಾಜ್ಯದಲ್ಲಿ ಬಾಂಗ್ಲಾದೇಶಿ ವಲಸಿಗರಿಗೆ ಕಾಂಗ್ರೆಸ್ ಮಣೆ ಹಾಕುತ್ತಿದೆ ಎಂಬ ವಿರೋಧ ಪಕ್ಷಗಳ ಆರೋಪಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ ಉಗ್ರಪ್ಪ, ಭಾರತದ ಪೌರತ್ವ ಹೊಂದಿಲ್ಲದವರಿಗೆ ನಮ್ಮ ದೇಶದಲ್ಲಿ ಯಾವ ಕಾರಣಕ್ಕೂ ಆಶ್ರಯ ಅಥವಾ ಸೌಲಭ್ಯ ಇಲ್ಲ. ಇದು ಕಾಂಗ್ರೆಸ್ ಪಕ್ಷದ ಸ್ಪಷ್ಟ ನಿಲುವು. ಒಂದು ವೇಳೆ ಬಾಂಗ್ಲಾದೇಶದಿಂದ ಜನರು ಪಶ್ಚಿಮ ಬಂಗಾಳ ಅಥವಾ ಅಸ್ಸಾಂಗೆ ನುಸುಳಿದ್ದರೆ, ಅದಕ್ಕೆ ಗಡಿ ಕಾಯುವ ಕೇಂದ್ರದ ಬಿಜೆಪಿ ಸರ್ಕಾರವೇ ನೇರ ಹೊಣೆ ಎಂದು ತಿರುಗೇಟು ನೀಡಿದ್ದಾರೆ. ಬಿಜೆಪಿಯವರಿಗೆ ರಾಜಕಾರಣದ ಎಬಿಸಿಡಿಯೇ ಗೊತ್ತಿಲ್ಲ. ಅವರು ಯಾವುದೇ ಒಂದು ವಿಷಯವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ದ ಉದಾಹರಣೆಯೇ ಇಲ್ಲ. ನಮ್ಮ ಸರ್ಕಾರ ಎಂದಿಗೂ ಜಾತಿ ಕಾರಣಕ್ಕಾಗಿ ಯಾವುದೇ ವಿಶೇಷ ಸೌಲಭ್ಯಗಳನ್ನು ನೀಡಲ್ಲ ಎಂದಿದ್ದಾರೆ.

Advertisement

ಸದ್ಯ ರಾಜ್ಯ ರಾಜಕಾರಣದಲ್ಲಿ ಸಚಿವ ಸ್ಥಾನಕ್ಕಾಗಿ ಭಾರಿ ಪೈಪೋಟಿ ನಡೆಯುತ್ತಿದ್ದು, ಹಿರಿಯ ಮತ್ತು ಕಿರಿಯ ನಾಯಕರ ನಡುವೆ ಶೀತಲ ಸಮರ ಏರ್ಪಟ್ಟಿರುವ ಈ ಸಂದರ್ಭದಲ್ಲಿ ಉಗ್ರಪ್ಪ ಅವರ 'ಹೊಸ ಮುಖಗಳಿಗೆ ಆದ್ಯತೆ' ನೀಡಿ ಎಂಬ ಹೇಳಿಕೆ ಸಂಪುಟ ವಿಸ್ತರಣೆಯ ಮೇಲಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.

English Summary

Congress leader V.S. Ugrappa has said ministerial posts should be based on merit, not caste or religion, amid speculation over Karnataka cabinet expansion.