Bidadi TownShip: ಯೋಜನೆ ಮೇಲೆ ಏಕಿಷ್ಟು ಪ್ರೀತಿ: ಕನಸಿನ ಹಿಂದೆ ಡಿಕೆಶಿಯ ಗುಪ್ತ ಕನಸೊಂದಿದೆಯೇ? ಬೊಮ್ಮಾಯಿ ಶಂಕೆ


ಹಾವೇರಿ/ಬೆಂಗಳೂರು: ಗಾರ್ಡನ್ ಸಿಟಿ ಬೆಂಗಳೂರಿನ ದಕ್ಷಿಣ ಜಿಲ್ಲೆ ವ್ಯಾಪ್ತಿಯ ಬಿಡದಿ ಟೌನ್‌ಶಿಪ್ ರೈತರ ವ್ಯಾಪಕ ವಿರೋಧವಿದೆ. ಇದರ ನಡುವೆಯೂ ಈ ಯೋಜನೆಯನ್ನು ಮುಂದುವರಿಸಲು ಸರ್ಕಾರದ ಆಂತರಿಕ ಕಾರ್ಯಸೂಚಿಯೇ ಕಾರಣ. ಮುಖ್ಯಮಂತ್ರಿಗಳಿಗೆ ಈ ಯೋಜನೆ ಮೇಲೆ ಏಕಿಷ್ಟು ಪ್ರೀತಿ? ಎಂದು ಪ್ರಶ್ನಿಸಿದ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅವರು ಅನುಮಾನ ಸಹ ವ್ಯಕ್ತಪಡಿಸಿದ್ದಾರೆ.

Advertisement

ಹಾವೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಡದಿ ಟೌನ್‌ಶಿಪ್ ಯೋಜನೆಯನ್ನು ಇಂದಿನ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಅಂದು ಪ್ರಾರಂಭಿಸಿದ್ದರು. ನಂತರ ಬಿ.ಎಸ್. ಯಡಿಯೂರಪ್ಪನವರ ಅವಧಿಯಲ್ಲಿ ಈ ಬಗ್ಗೆ ಯಾವುದೇ ಪ್ರಗತಿಯಾಗಿಲ್ಲ ಎಂದು ಮುಖ್ಯಮಂತ್ರಿಗಳು ಹೇಳುತ್ತಿದ್ದಾರೆ. ಒಂದು ವೇಳೆ ಕುಮಾರಸ್ವಾಮಿಯವರು ಇದನ್ನು ಪ್ರಾರಂಭಿಸಿದ್ದರೆ, ಪ್ರಸ್ತುತ ಮುಖ್ಯಮಂತ್ರಿಗಳಿಗೆ ಈ ಯೋಜನೆಯ ಮೇಲೆ ಏಕಿಷ್ಟು ಪ್ರೀತಿ? ಎಲ್ಲ ವಿಷಯಗಳಲ್ಲೂ ಕುಮಾರಸ್ವಾಮಿ ಅವರನ್ನು ಟೀಕಿಸುವ ಮುಖ್ಯಮಂತ್ರಿಗಳು, ಈ ಟೌನ್‌ಶಿಪ್ ಯೋಜನೆಯಲ್ಲಿ ಮಾತ್ರ ಅವರನ್ನು ಯಾಕೆ ಅನುಸರಿಸುತ್ತಿದ್ದಾರೆ? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

Advertisement

​ಯೋಜನೆಯ ಹಿಂದೆ ಆಂತರಿಕ ಕಾರ್ಯಸೂಚಿ ಶಂಕೆ

ಸರ್ಕಾರವು 4,000 ಎಕರೆ ಜಮೀನಿಗೆ ಅಧಿಸೂಚನೆ ಹೊರಡಿಸಿದೆ. ಇದನ್ನು ಪ್ರಸ್ತಾಪಿಸಿದ ಬೊಮ್ಮಾಯಿ, "ಇದರ ಹಿಂದೆ ಸರ್ಕಾರದ ಹಿತಾಸಕ್ತಿ ಮತ್ತು ಆಂತರಿಕ ಕಾರ್ಯಸೂಚಿ ಅಡಗಿದೆ. ರೈತರು ಬೇಡ ಎನ್ನುತ್ತಿದ್ದರೂ, ಅವರಿಗೆ ಎರಡು ತಿಂಗಳ ಕಾಲಾವಕಾಶ ನೀಡಿ ಒಪ್ಪಿಸಲು ಪ್ರಯತ್ನಿಸುತ್ತಿರುವುದರ ಹಿಂದೆ ಇರುವ ಗುಪ್ತ ಉದ್ದೇಶವೇನು? ಎಂದು ಅವರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ದೊಡ್ಡ ದೊಡ್ಡ ಯೋಜನೆಗಳ ಮೂಲಕ ಭ್ರಷ್ಟಾಚಾರ, ಕಿಕ್ ಬ್ಯಾಕ್ ಪಡೆಯುತ್ತಾರೆ ಎಂದು ವಿಪಕ್ಷ ನಾಯಕ ಆರೋಪಿಸಿದ್ದರು. ಈ ಯೋಜನೆಯ ಹಿಂದೆಯು ಏನೋ ಪ್ರಮುಖ ಉದ್ದೇಶವಿರಬೇಕೆಂದು ಬೊಮ್ಮಾಯಿ ಅವರು ಶಂಕಿಸಿದ್ದಾರೆ.

Advertisement
ಬಿಡದಿ ರೈತರಿಗೆ ಗುಡ್‌ನ್ಯೂಸ್‌: ಬಲವಂತದಿಂದ ಜಮೀನು ಪಡೆಯಲ್ಲ ಎಂದ ಡಿಕೆ ಶಿವಕುಮಾರ್, ಜು.17ಕ್ಕೆ ಬಿಜೆಪಿ ಧರಣಿ

​ಸರ್ಕಾರಿ ಭೂಮಿಯಲ್ಲಿ ಟೌನ್‌ಶಿಪ್ ಮಾಡಿ

ಕಳೆದ 30 ವರ್ಷಗಳಿಂದಲೂ ಬೆಂಗಳೂರಿನ ಸುತ್ತಮುತ್ತ ಸ್ಯಾಟಲೈಟ್ ಟೌನ್‌ಶಿಪ್‌ಗಳನ್ನು ಅಭಿವೃದ್ಧಿಪಡಿಸಬೇಕೆಂದು ಚರ್ಚೆಗಳು ನಡೆಯುತ್ತಿದೆ. ರೈತರ ಫಲವತ್ತಾದ ಜಮೀನನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳುವ ಬದಲು, ಸರ್ಕಾರದ ಬಳಿ ಲಭ್ಯವಿರುವ ಜಮೀನಿನಲ್ಲೇ ಟೌನ್‌ಶಿಪ್ ನಿರ್ಮಿಸಲು ಸರ್ಕಾರ ಮುಂದಾಗಬೇಕು ಎಂದು ರಾಜ್ಯ ಸರ್ಕಾರಕ್ಕೆ ಬೊಮ್ಮಾಯಿ ಸಲಹೆ ನೀಡಿದರು.

"ನಾನು ಮುಖ್ಯಮಂತ್ರಿಯಾಗಿದ್ದಾಗ ಉತ್ತರ ಕರ್ನಾಟಕದ ರಾಯಚೂರು, ಬೆಳಗಾವಿ ವಿಭಾಗ ಹಾಗೂ ಮಧ್ಯ ಕರ್ನಾಟಕದ ಚಿತ್ರದುರ್ಗ-ತುಮಕೂರು ನಡುವೆ ಬೆಂಗಳೂರಿಗೆ ಹತ್ತಿರವಿರುವ ಕಡೆಗಳಲ್ಲಿ ಎಲ್ಲಿ ಸರ್ಕಾರಿ ಜಮೀನು ಲಭ್ಯವಿದೆಯೋ, ಅಲ್ಲಿಯೇ ಟೌನ್‌ಶಿಪ್‌ಗಳನ್ನು ಮಾಡಲು ತೀರ್ಮಾನಿಸಿದ್ದೆವು. ಇದರಿಂದ ಯಾವುದೇ ವಿವಾದ ಉಂಟಾಗುತ್ತಿರಲಿಲ್ಲ ಮತ್ತು ರೈತರ ಜಮೀನು ಪಡೆಯುವ ಪ್ರಶ್ನೆಯೇ ಬರುತ್ತಿರಲಿಲ್ಲ" ಎಂದು ವಿವರಿಸಿದರು.

Advertisement

ಕನಸಿನ ಹಿಂದೆ ಮತ್ತೊಂದು ಡಿಕೆಶಿಯ ಗುಪ್ತ ಕನಸಿದೆಯೇ

​ಬಿಡದಿ ಟೌನ್‌ಶಿಪ್ ವಿಚಾರದಲ್ಲಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಬಿ.ಎಸ್. ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲೇ ತಾವು ಮುನ್ನಡೆಯುತ್ತಿರುವುದಾಗಿ ಮುಖ್ಯಮಂತ್ರಿ ಹೇಳಿಕೊಳ್ಳುತ್ತಿರುವುದಕ್ಕೆ ಬೊಮ್ಮಾಯಿ ಆಕ್ಷೇಪ ವ್ಯಕ್ತಪಡಿಸಿದರು. "ಅಣ್ಣಾಜಿ, ಅಪ್ಪಾಜಿ ದಾರಿಯಲ್ಲೇ ಹೋಗುತ್ತಿದ್ದೇವೆ ಎನ್ನುವ ಇವರಿಗೆ ಈ ಯೋಜನೆಯಲ್ಲಿ ಹಿತಾಸಕ್ತಿ ಏನಿದೆ? ಅವರ ಕನಸನ್ನು ನನಸು ಮಾಡಲು ಹೊರಟಿರುವ ಇವರ ಉದ್ದೇಶವೇನು? ಈ ಕನಸಿನ ಹಿಂದೆ ಮತ್ತೊಂದು ಗುಪ್ತ ಕನಸಿದೆಯೇ? ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.

​ರೈತರು ಬೇಡವೆಂದರೆ ಯೋಜನೆ ಕೈಬಿಡಿ

​ಕೈಗಾರಿಕಾ ಉದ್ದೇಶಕ್ಕೆ ಭೂಮಿ ಸ್ವಾಧೀನಪಡಿಸಿಕೊಳ್ಳುವಾಗ ರೈತರ ಒಪ್ಪಿಗೆ ಮುಖ್ಯವಾಗಿರುತ್ತದೆ. ಹಾವೇರಿ ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪನೆಗಾಗಿ ಮೊಟೇಬೆನ್ನೂರು ಬಳಿ ಜಮೀನು ಗುರುತಿಸಲಾಗಿತ್ತು. ಆದರೆ ಅಲ್ಲಿನ ರೈತರು ಬಂದು, ಇದು ನಮ್ಮ ಫಲವತ್ತಾದ ಜಮೀನು, ನಾವು ಕೊಡುವುದಿಲ್ಲ ಎಂದಾಗ ನಾವು ತಕ್ಷಣ ಆ ಯೋಜನೆಯನ್ನು ಅಲ್ಲಿಂದ ಕೈಬಿಟ್ಟೆವು. ಅಂತಹ ಪ್ರಾಮಾಣಿಕತೆಯನ್ನು ಈಗಿನ ಸರ್ಕಾರವೂ ಪ್ರದರ್ಶಿಸಬೇಕು ಎಂದು ಕಿವಿ ಮಾತು ಹೇಳಿದರು.

English Summary

Basavaraj Bommai questioned DK Shivakumar's insistence on Bidadi Township, alleging hidden motives and urging use of government land instead.