ಉತ್ತರ ಪ್ರದೇಶದ ಅಯೋಧ್ಯೆ ರಾಮ ಮಂದರದ ದೇಣಿಗೆ ಕಳ್ಳತನ ಹಾಗೂ ಉತ್ತರಾಖಂಡದ ಬದ್ರಿನಾಥ - ಕೇದಾರನಾಥದ ಹುಂಡಿಯಲ್ಲಿ ಅವ್ಯವಹಾರ ನಡೆದಿದೆ ಎನ್ನುವ ಆರೋಪಗಳ ನಡುವೆ ಕರ್ನಾಟಕ ಸರ್ಕಾರವು ಹಿಂದೂ ದೇವಾಲಯಗಳಿಗೆ ಸಂಬಂಧಿಸಿದಂತೆ ಮಹತ್ವದ ಕ್ರಮ ತೆಗೆದುಕೊಂಡಿದೆ. ಹೌದು ಹಿಂದೂ ದೇವಾಲಯಗಳ ಹುಂಡಿ ಹಾಗೂ ಕಾಣಿಕೆ ಸೇರಿದಂತೆ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರವು ಮಹತ್ವದ ಆದೇಶ ಮಾಡಿದೆ. ಕರ್ನಾಟಕ ಸರ್ಕಾರವು ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಾಲಯಗಳಲ್ಲಿ ವಿಶೇಷ ನಿಗಾ ವಹಿಸಲು ಮುಂದಾಗಿದೆ. ದೇವಾಲಯದ ಹುಂಡಿ (ದೇಣಿಗೆ ಪೆಟ್ಟಿಗೆಗಳು) ಮತ್ತು ಹುಂಡಿ ನಗದು, ಚಿನ್ನ ಬೆಳ್ಳಿ ವಸ್ತುಗಳು ಸೇರಿದಂತೆ ಭದ್ರತೆ, ಪಾರದರ್ಶಕತೆ ಹಾಗೂ ಹೊಣೆಗಾರಿಕೆಯನ್ನು ಖಚಿತಪಡಿಸಿಕೊಳ್ಳಲು ಹೊಸ ಮಾರ್ಗಸೂಚಿ ಪ್ರಕಟಿಸಿದೆ.
ದೇಶದ ಬೇರೆ ಬೇರೆ ರಾಜ್ಯಗಳಲ್ಲಿನ ಪ್ರಚಲಿತ ವಿದ್ಯಮಾನಗಳಿಂದ ದೇವಾಲಯಗಳ ಹುಂಡಿಗಳಲ್ಲಿ ಕಳ್ಳತನವಾಗುತ್ತಿರುವ ಬಗ್ಗೆ ಮತ್ತು ಇವುಗಳ ಸುರಕ್ಷತೆ ಕುರಿತಂತೆ ವಿವಿಧ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿರುವುದು ಹಾಗೂ ರಾಜ್ಯದ ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಯ ದೇವಾಲಯಗಳಲ್ಲಿ ಹುಂಡಿ ಎಣಿಕೆ/ ಲೆಕ್ಕಪತ್ರ ನಿರ್ವಹಣೆ ಸಂದರ್ಭದಲ್ಲಿ ಕಳ್ಳತನ ಮತ್ತು ಹಣ ಇತ್ಯಾದಿಗಳ ದುರುಪಯೋಗವಾಗುತ್ತಿರುವುದು ಗಮನಕ್ಕೆ ಬಂದಿರುತ್ತದೆ ಎಂದು ಸರ್ಕಾರ ಹೇಳಿದೆ. ಈ ಹಿನ್ನೆಲೆಯಲ್ಲಿ, ರಾಜ್ಯದ ದೇವಾಲಯಗಳ ಚರಾಸ್ತಿಗಳ ಸಂರಕ್ಷಣೆ ಬಗ್ಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ಹೇಳಲಾಗಿದೆ.
1. ದೇವಾಲಯಗಳ ವಿವಿಧ ಸೂಕ್ತ ಜಾಗಗಳನ್ನು ಗುರುತಿಸಿ, ಎಲ್ಲರಿಗೂ ಕಾಣುವಂತೆ ಹುಂಡಿಗಳನ್ನು ಅಳವಡಿಸಿ, ಸೂಕ್ತ ಭದ್ರತೆ ಒದಗಿಸಬೇಕು. 2. ದೇವಾಲಯದಲ್ಲಿ ಅಳವಡಿಸುವ ಹುಂಡಿಗಳಿಗಳು ನಾಲ್ಕು ದಿಕ್ಕಿನಿಂದ ಕಾಣುವಂತೆ ಅಗತ್ಯವಾದ ಸಿಸಿಟಿವಿ Web ಕ್ಯಾಮರಾಗಳನ್ನು ಕಡ್ಡಾಯವಾಗಿ ಅಳವಡಿಸಿ, Serveನಲ್ಲಿ ಸಂರಕ್ಷಿಸುವುದು. ಜಿಲ್ಲಾಧಿಕಾರಿಗಳ ಉಪ ವಿಭಾಗಾಧಿಕಾರಿಗಳ ಕೆಚೇರಿಯಲ್ಲಿನ ಮುಜರಾಯಿ ವಿಭಾಗದಲ್ಲಿ ಈ ಕ್ಯಾಮರಾಗಳನ್ನು Monitor ಮಾಡಬೇಕು. 3. ದೇವಾಲಯಗಳಲ್ಲಿ ಈಗ ಅಳವಡಿಸಿರುವ ಸಿಸಿಟಿವಿ, ಡಿವಿಆರ್‌ಗಳನ್ನು ಕಳ್ಳತನ, ನಿಷ್ಕ್ರಿಯೆ, ದಂಸ ಮಾಡುತ್ತಿರುವುದರಿಂದ ಹಾಗೂ ಕರ್ಪೂರವನ್ನು ಹಚ್ಚಿ ಅದರಿಂದ ಬರುವ Carbon ನಿಂದ ಕ್ಯಾಮೆರಾ Lens ಗ್ಲಾಸ್ ಕಾಣದಂತೆ ಮಾಡಿ ಕಳ್ಳತನ ಮಾಡುವುದನ್ನು ತಡೆಗಟ್ಟುವ ಹಿತದೃಷ್ಟಿಯಿಂದ CCTV Web Camera ಗಳನ್ನು ಅಳವಡಿಸಬೇಕು. 4. ಧಾರ್ಮಿಕ ದತ್ತಿ ಇಲಾಖೆಯ ಕೇಂದ್ರ ಕಚೇರಿಯಲ್ಲಿ ಸರ್ವರ್ (Server) ಅನ್ನು ಅಳವಡಿಸಿ, ವಸತಿ ಕೋಶದ ವತಿಯಿಂದ ವೆಬ್ ಕ್ಯಾಮೆರಾ (Web Camera)ಗಳ ಮೂಲಕ ಎಲ್ಲಾ ದೇವಾಲಯಗಳಲ್ಲಿ ಅಳವಡಿಸಿರುವ ಕ್ಯಾಮರಾಗಳ ಮೇಲ್ವಿಚಾರಣೆ ನಡೆಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. 5. ಭದ್ರತಾ ಹಿತದೃಷ್ಟಿಯಿಂದ ದೇವಾಲಯಗಳಲ್ಲಿ ಅಳವಡಿಸಿರುವ ಸಿಸಿಟಿವಿ Web ಕ್ಯಾಮರಾಗಳ ಸಂಪರ್ಕವನ್ನು ಸಂಬಂಧಪಟ್ಟ ಜಿಲ್ಲಾಧಿಕಾರಿಗಳು, ಪೋಲೀಸ್ ಅಧೀಕ್ಷಕರು ಮತ್ತು ಪೋಲೀಸ್ ಠಾಣೆ ರವರ ಕಚೇರಿಗಳಿಗೆ ಸಂಪರ್ಕ ಕಲ್ಪಿಸಿ, ಅವುಗಳ ವೀಕ್ಷಣೆಗಾಗಿ ಸಂಚಾರ ನಿಯಂತ್ರಣ ಕೊಠಡಿಯಲ್ಲಿರುವಂತೆ ಡ್ಯಾಶ್‌ಬೋರ್ಡ್‌ಗಳ ವ್ಯವಸ್ಥೆಯನ್ನು ಕಲ್ಪಿಸಬೇಕು. 6. ಎಲ್ಲಾ ದೇವಾಲಯಗಳಲ್ಲಿ ಭಕ್ತಾದಿಗಳು ನಗದು ಅಥವಾ ಬ್ಯಾಗ್/ ಚೀಲವನ್ನು ಹೊತ್ತು ಬಂದಾಗ ಜನಸಂದಣಿಯಲ್ಲಿ ಜೇಬು ಕಳ್ಳತನದಂತಹ ಘಟನೆಗಳನ್ನು ಕಡಿಮೆ ಮಾಡಲು ಡಿಜಿಟಲ್ ಪಾವತಿ ವ್ಯವಸ್ಥೆಗೆ ಹೆಚ್ಚಿನ ಉತ್ತೇಜನ ನೀಡಲು QR Code ಅಳವಡಿಸುವುದು. QR Codeನ ಅಡಿಯಲ್ಲಿ ಸಂಬಂಧಪಟ್ಟ ಬ್ಯಾಂಕ್‌ನ ವಿವರಗಳನ್ನು (IFSC, ಇತ್ಯಾದಿ) ಅಳವಡಿಸುವುದು. 7. ಡಿಜಿಟಲ್ ದೇಣಿಗೆ ಮತ್ತು ನಗದು ರಹಿತ ಪಾವತಿಗಳನ್ನು ಸುಗಮಗೊಳಿಸಲು, ಭಕ್ತರು ಮತ್ತು ಸಂದರ್ಶಕರು, ದೇಣಿಗೆ ನೀಡಲು, ಪ್ರಸಾದ, ಸೇವಾ ಟಿಕೆಟ್‌ಗಳು ಮತ್ತು ಇತರ ದೇವಾಲಯ ಸೇವೆಗಳನ್ನು ನಗದು ರಹಿತ ವಿಧಾನಗಳ ಮೂಲಕ ಖರೀದಿಸಲು ದೇವಾಲಯಗಳಲ್ಲಿ ಸುರಕ್ಷಿತ UPI, BHIM, CR ಕೋಡ್ ಮತ್ತು ಇತರ ಡಿಜಿಟಲ್ ಪಾವತಿ ಸೌಲಭ್ಯಗಳನ್ನು ಒದಗಿಸಬೇಕು. 8. ದೇವಾಲಯಗಳಲ್ಲಿ ಪಾರದರ್ಶಕತೆ, ಸರಿಯಾದ ಲೆಕ್ಕಪರಿಶೋಧನೆ ಮತ್ತು ಸುಧಾರಿತ ಹಣಕಾಸು ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ದೇವಾಲಯದ ಲೆಕ್ಕಪತ್ರ ವ್ಯವಸ್ಥೆಯೊಂದಿಗೆ ಸಂಯೋಜಿಸುವುದು. 9. ಹುಂಡಿ ಇರುವ ಕಡೆ ಮಾತ್ರ QR Code ಅನು ಅಳವಡಿಸುವುದು. 10. ಕೆಲವು ದೇವಾಲಯಗಳಲ್ಲಿ ಹುಂಡಿಗಳಿಗೆ ಅಳವಡಿಸುವ QR Code ಗಳನು ದುರಪಯೋಗಪಡಿಸಿಕೊಳ್ಳುತ್ತಿರುವುದಾಗಿ ತಿಳಿದು ಬಂದಿರುವುದರಿಂದ ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ QR Code ಅನ್ನು ಹಾಳು ಮಾಡದಂತೆ ಅದರ ಮೇಲೆ ಪ್ರತ್ಯೇಕವಾಗಿ ಬೇರೆ OR Code ಅನ್ನು ಅಳವಡಿಸಲು ಸಾಧ್ಯವಾಗದಂತೆ ಇವುಗಳನ್ನು ಸಂರಕ್ಷಿಸಲು ದೇವಾಲಯದ ಅಧಿಕಾರಿಗಳು ಕಾಲ ಕಾಲಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು. 11. ಹುಂಡೆ ಎಣಿಕೆಯಲ್ಲಿ ಕಂದಾಯ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸಲು ಹುಂಡಿ ಎಣಿಕೆ ದಿನಾಂಕಗಳನ್ನು ಮುಂಚಿತವಾಗಿಯೇ ಕ್ಯಾಲೆಂಡರ್‌ನಲ್ಲಿ HUNDI COUNTING ದಿನಗಳನ್ನು ನಿಗದಿಪಡಿಸುವುದು. 12. ಹೆಚ್ಚು ದೇಣಿಗೆ ಕಾಣಿಕೆ ಬರುವ ದೇವಾಲಯಗಳಲ್ಲಿ ವಾರಕ್ಕೆ ಒಂದು ದಿವಸ ಹಾಗೂ ಸಾಧಾರಣ ದೇಣಿಗೆ ಕಾಣಿಕೆ ಬರುವ ದೇವಾಲಯಗಳಲ್ಲಿ ಎರಡು ವಾರಕ್ಕೆ ಒಂದು ದಿವಸ ಕಡ್ಡಾಯವಾಗಿ ಹುಂಡಿ ಎಣಿಕೆ ದಿನಾಂಕಗಳನ್ನು ಮುಂಚಿತವಾಗಿಯೇ ಕ್ಯಾಲೆಂಡರ್‌ನಲ್ಲಿ HUNDI COUNTING ದಿನಗಳನ್ನು ನಿಗದಿಪಡಿಸುವುದು. 13. ಹುಂಡಿ ಎಣಿಕೆಯನ್ನು ಸಂಬಂಧಪಟ್ಟ ತಹಶೀಲ್ದಾರ್ ಅವರ ಮೇಲ್ವಿಚಾರಣೆಯಲ್ಲಿ ನಡೆಸಬೇಕು. 14. ಹುಂಡಿ ಎಣಿಕೆ ಸಂದರ್ಭದಲ್ಲಿ ಸ್ವೀಕೃತವಾಗಬಹುದಾದ ಚಿನ್ನ, ಬೆಳ್ಳಿ ಇತ್ಯಾದಿ ವಸ್ತುಗಳನ್ನು ಎಣಿಕೆ ದಿನದಂದೇ ಕಡ್ಡಾಯವಾಗಿ ಮೌಲ್ಯಮಾಪನ ಮಾಡಿಸಿ ಅಂದೇ ಸಂಬಂಧಪಟ್ಟ ಜಿಲ್ಲಾ/ ಉಪ ಖಜಾನೆಯಲ್ಲಿ, ಸೊಕ್ತ ಮೇಲ್ವಿಚಾರಣೆಯೊಂದಿಗೆ ಜಮಾ ಮಾಡಬೇಕು. 15. ಹುಂಡಿ ಎಣಿಕೆ ಸಮಯದಲ್ಲಿ ಹಾಜರಿರುವ ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ಖಚಿತ ಪಡಿಸಿಕೊಳ್ಳಲು Face Recognition ಅನ್ನು ಅಳವಡಿಸುವುದು ಮತ್ತು ಸಿಬ್ಬಂದಿ ಮತ್ತು ಅಧಿಕಾರಿಗಳು ಎಣಿಕೆಗೆ ಪ್ರವೇಶಿಸುವ ಸಂದರ್ಭದಲ್ಲಿ Cash in handನ್ನು ಘೋಷಿಸುವುದು. 16. ಹುಂಡಿ ತೆರೆಯುವುದರಿಂದ, ಹುಂಡಿ ಎಣಿಕೆ ಮಾಡಿ ಬ್ಯಾಂಕಿನವರಿಗೆ ಹಸ್ತಾಂತರಿಸುವವರೆಗೆ ಸಂಪೂರ್ಣವಾಗಿ ವಿಡಿಯೋ ಚಿತ್ರೀಕರಣವನ್ನು ದಿನಾಂಕ ಮತ್ತು ಸಮಯ ದಾಖಲೆಯಾಗುವಂತೆ ಕಡ್ಡಾಯವಾಗಿ ಚಿತ್ರೀಕರಿಸುವುದು. 17. ಹುಂಡಿ ಎಣಿಕೆ ಪ್ರಕ್ರಿಯೆಯ ಸಂದರ್ಭದಲ್ಲಿ, ಸ್ಥಳಾಂತರಿಸಬಹುದಾದ ಹುಂಡಿಯನ್ನು ಸ್ಥಳಾಂತರಿಸುವುದರಿಂದ ಪ್ರಾರಂಭಿಸಿ, ಹುಂಡಿ ಹಣವನ್ನು ಹುಂಡಿಯಿಂದ ಹೊರ ತೆಗೆಯುವ ಹಾಗೂ ಹುಂಡಿ ಎಣಿಕೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬ ಸಿಬ್ಬಂದಿಗೆ ಎಣಿಕೆ ಮಾಡಲು ನೀಡುವ ಹಣ ಮತ್ತು ಅವರು ಎಣಿಕೆ ಮಾಡಿದ ನಂತರ ಹಿಂದಿರುಗಿಸುವವರೆಗೆ ಸಂಪೂರ್ಣವಾಗಿ ವಿಡಿಯೋ ಚಿತ್ರೀಕರಣವನ್ನು ದಿನಾಂಕ ಮತ್ತು ಸಮಯ ದಾಖಲೆಯಾಗುವಂತೆ ಕಡ್ಡಾಯವಾಗಿ ಚಿತ್ರೀಕರಿಸಬೇಕು. 18. ಹುಂಡಿ ಎಣಿಕೆಗೆ ಸಾರ್ವಜನಿಕರ ಸೇವೆಯನ್ನು ಪಡೆಯುವುದರ ಬದಲಿಗೆ ಕಡ್ಡಾಯವಾಗಿ ಗೃಹ ರಕ್ಷಕದಳದ ಸಿಬ್ಬಂದಿಯವರ / ಬ್ಯಾಂಕ್ ಸಿಬ್ಬಂದಿ/ ಸರ್ಕಾರಿ ನೌಕರರ ಸೇವೆಯನ್ನು ಪಡೆಯುವುದು. ಖಾಸಗಿ / ಸಾರ್ವಜನಿಕರ ಸೇವೆಯನ್ನು ಹುಂಡಿ ಎಣಿಕೆಗೆ ಅವಕಾಶ ನೀಡಬಾರದು. 19. ಹುಂಡಿಗಳ ಎಣಿಕೆ ಸಮಯದಲ್ಲಿ ಮತ್ತು ಹುಂಡಿಗಳಲ್ಲಿ ಕಳ್ಳತನದ ಪ್ರಕರಣಗಳು ಕಂಡು ಬಂದಲ್ಲಿ ಸಂಬಂಧಪಟ್ಟ ದೇವಾಲಯದ ಅಧಿಕಾರಿಗಳು ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎನ್ನುವುದು ಸೇರಿದಂತೆ ಹಲವು ಮಾರ್ಗಸೂಚಿಗಳನ್ನು ಪ್ರಕಟಿಸಲಾಗಿದೆ.