ಹೈದರಾಬಾದ್ 6 ಜನರ ಹತ್ಯೆ ಮಾಡಿದ್ದ ಕೊಲೆ ಆರೋಪಿ ರಾಜ್‌ಕುಮಾರ್ ಮೃತದೇಹ ಪತ್ತೆ, ಪ್ರಕರಣಕ್ಕೆ ನಾಟಕೀಯ ತಿರುವು


ತೆಲಂಗಾಣದಲ್ಲಿ ಈಚೆಗೆ ನಡೆದಿದ್ದ ಭೀಕರ ಘಟನೆಯೊಂದು ಇದೀಗ ವಿಚಿತ್ರ ತಿರುವು ಪಡೆದುಕೊಂಡಿದೆ. ಪೋಕ್ಸೋ ಪ್ರಕರಣ ಆರೋಪಿಯು 6 ಜನರನ್ನು ಹತ್ಯೆ ಮಾಡಿದ್ದಾನೆ. ಅದರಲ್ಲಿ ದೂರು ನೀಡಿದ್ದ ಹುಡುಗಿಯೂ ಸಹ ಸೇರಿದ್ದಳು. ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ 16 ವರ್ಷದ ಬಾಲಕಿಗೆ ಕಿರುಕುಳ ನೀಡದ ಆರೋಪದ ಮೇಲೆ 35 ವರ್ಷದ ವ್ಯಕ್ತಿಯೊಬ್ಬ ಭೀಕರ ಕೃತ್ಯವನ್ನೆಸಗಿದ್ದ. ಆದರೆ ಇದೀಗ ಆರೋಪಿ ರಾಜ್‌ಕುಮಾರ್ ಮೃತದೇಹ ಪತ್ತೆಯಾಗಿದೆ. ಆದರೆ ಆತ ಆತ್ಮಹತ್ಯೆ ಮಾಡಿಕೊಂಡನೇ ಎನ್ನುವ ವಿಷಯ ಇನ್ನಷ್ಟೇ ಸ್ಪಷ್ಟವಾಗಬೇಕಾಗಿದೆ.

Advertisement

ಇಡೀ ಭಾರತವನ್ನೇ ಬೆಚ್ಚಿ ಬೀಳಿಸಿದ್ದ ಆರು ಕೊಲೆ ಪ್ರಕರಣ ಇದೀಗ ಮತ್ತೊಂದು ತಿರುವು ಪಡೆದುಕೊಂಡಿದೆ. ಹೈದರಾಬಾದ್ ಪೊಲೀಸರು ಈ ಪ್ರಕರಣದ ತನಿಖೆ ಚುರುಕುಗೊಳಿಸಿದ್ದರು. ಆದರೆ, ಇದೀಗ ಪ್ರಮುಖ ಆರೋಪಿ ರಾಜ್‌ಕುಮಾರ್ ಮೃತದೇಹ ಪತ್ತೆಯಾಗಿದೆ. ತನಿಖೆಯ ಸಂದರ್ಭದಲ್ಲಿ ಪೊಲೀಸರಿಗೆ ಕೆಲವೊಂದು ಪ್ರಮುಖ ಸುಳಿವು ಪತ್ತೆಯಾಗಿತ್ತು. ಈ ಮಾಹಿತಿಯ ಆಧಾರದ ಮೇಲೆ ಹೈದರಾಬಾದ್ ವಿಶೇಷ ಪೊಲೀಸ್ ತಂಡವು ಕೊತ್ತೂರು ಪ್ರದೇಶದ ಬಳಿ ಅವರ ಮೃತದೇಹವನ್ನು ಪತ್ತೆಹಚ್ಚಿದೆ. ಬಂಧನದಿಂದ ತಪ್ಪಿಸಿಕೊಳ್ಳಲು ರಾಜ್‌ಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪ್ರಾಥಮಿಕ ವರದಿಯಲ್ಲಿ ತಿಳಿದು ಬಂದಿದೆ. ಇತ್ತೀಚಿನ ದಿನಗಳಲ್ಲಿ ನಡೆದ ಅತ್ಯಂತ ತೀವ್ರ ತನಿಖೆಯಲ್ಲಿ ಒಂದಾಗಿದೆ ಎಂದು ಹೇಳಲಾಗಿದೆ.

Advertisement

ಮೂರು ದಿನಗಳ ಹಿಂದೆ ಶಾಬಾದ್‌ನಲ್ಲಿ ರಾಜ್‌ಕುಮಾರ್ ಆರು ಜನರನ್ನು ಬರ್ಬರವಾಗಿ ಕೊಲೆ ಮಾಡಿದ್ದ. ಭೀಕರ ಹತ್ಯೆಗಳ ನಂತರ ತೆಲಂಗಾಣ ಪೊಲೀಸರು ಪರಾರಿಯಾದ ವ್ಯಕ್ತಿಯನ್ನು ಬಂಧಿಸಲು ಬೃಹತ್ ಹಾಗೂ ವಿವಿಧ ರಾಜ್ಯಗಳಲ್ಲಿ ಕಾರ್ಯಾಚರಣೆ ಪ್ರಾರಂಭಿಸಿದ್ದರು. ತೆಲಂಗಾಣದಾದ್ಯಂತ ಬಹು ಹಂತದ ಶೋಧ ಕಾರ್ಯಾಚರಣೆಗಳನ್ನು ನಡೆಸಲಾಗಿತ್ತು ಅಲ್ಲದೆ ಬೆಂಗಳೂರಿನಲ್ಲೂ ಪೊಲೀಸರು ಕೊಲೆ ಆರೋಪಿಗೆ ಬಲೆ ಬೀಸಿದ್ದರು. ತನಿಖಾ ತಂಡಗಳು ಆರೋಪಿ ಸಾರ್ವಜನಿಕ ಸಾರಿಗೆ ಮೂಲಕ ಪರಾರಿಯಾಗಿರಬಹುದು ಎನ್ನುವ ಸಂಶಯದಿಂದ ತನಿಖೆ ನಡೆಸಿದ್ದರು. ಅಲ್ಲದೆ ಶಂಕಿತನ ಯಾವುದೇ ಕುರುಹುಗಾಗಿ ವಿವಿಧ ಬಸ್ ನಿಲ್ದಾಣಗಳು ಮತ್ತು ರೈಲ್ವೆ ಕ್ವಾರ್ಟರ್‌ಗಳಲ್ಲಿ ಸಿಸಿಟಿವಿ ದೃಶ್ಯಗಳನ್ನು ಸೂಕ್ಷ್ಮವಾಗಿ ಪರಿಶೀಲನೆ ಮಾಡಿದ್ದರು.

Advertisement
ಮಾನಸಿಕ ಅಸ್ವಸ್ಥ ಸಹೋದರಿ ಬಿಟ್ಟು 6 ಮಂದಿಯ ಕೊ* ಮಾಡಿದ ಪೋಕ್ಸೋ ಆರೋಪಿ: ತನ್ನ ಮಕ್ಕಳನ್ನೂ ಬಿಡಲಿಲ್ಲ !

ರಾಜ್‌ಕುಮಾರ್ ವಿಷ ಸೇವಿಸಿದ್ದಾರೆ ಎನ್ನಲಾದ ಕೊತ್ತೂರು ಮಂಡಲದ ಪಂಜರ್ಲಾ ಗ್ರಾಮದಲ್ಲಿ ಪೊಲೀಸರು ಶೋಧ ಕಾರ್ಯ ಮುಗಿಸಿದ್ದರು. ಮೃತ ದೇಹದ ಪಕ್ಕದಲ್ಲಿ ವಿಷದ ಬಾಟಲಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸಾಮೂಹಿಕ ಹತ್ಯೆಗಳ ನಂತರ ಎರಡು ತೆಲುಗು ರಾಜ್ಯಗಳಲ್ಲಿ ವ್ಯಕ್ತಿಯ ಬಂಧನ ಹಾಗೂ ಮರಣದಂಡನೆ ವಿಧಿಸಬೇಕು ಎನ್ನುವ ಆಗ್ರಹ ಹೆಚ್ಚಾಗಿತ್ತು. ಆದರೆ ಕೊಲೆ ಆರೋಪಿ ಆತ್ಮಹತ್ಯೆ ಮಾಡಿಕೊಳ್ಳುವುದರೊಂದಿಗೆ ಪ್ರಕರಣವು ನಾಟಕೀಯ ತಿರುವು ಪಡೆದುಕೊಂಡಿದೆ.

ಪ್ರಕರಣದ ಹಿನ್ನೆಲೆ ಏನು ?

ಪೋಕ್ಸೋ ಪ್ರಕರಣ ಆರೋಪಿ 6 ಜನರನ್ನು ಹತ್ಯೆ ಮಾಡಿದ್ದ. ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ 16 ವರ್ಷದ ಬಾಲಕಿಗೆ ಕಿರುಕುಳ ನೀಡದ ಆರೋಪದ ಮೇಲೆ ವ್ಯಕ್ತಿಯ ಬಂಧನವಾಗಿತ್ತು. ಆದರೆ ಜಾಮೀನಿನ ಆಧಾರದ ಮೇಲೆ ಹೊರಗೆ ಬಂದಿದ್ದ ಆರೋಪಿಯು ಬಾಲಕಿ, ಆಕೆಯ ತಾಯಿ ಹಾಗೂ ಅಜ್ಜಿ ಸೇರಿದಂತೆ ಆರು ಜನರನ್ನು ಕೊಲೆ ಮಾಡಿದ್ದ. ಬಾಲಕಿ ಹಾಗೂ ಅವರ ಮನೆಯವರನ್ನು ಕೊಲೆ ಮಾಡಿದ ನಂತರ ಆತನ ಪತ್ನಿ ಹಾಗೂ ಇಬ್ಬರು ಗಂಡು ಮಕ್ಕಳನ್ನು ಸಹ ಕೊಂದು ಪರಾರಿಯಾಗಿದ್ದ. ಈತನ ಬಂಧನಕ್ಕಾಗಿ ಪೊಲೀಸರು ತೀವ್ರ ಕಾರ್ಯಾಚರಣೆ ನಡೆಸಿದ್ದರು.

English Summary

Telangana Hyderabad 6-Murder Case: Main Accused Rajkumar Found Dead; Investigation Dramatic Turn