ಸೈನ್ಸ್‌ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರ ನೀಡುವ ‘INSPIRE SHE’ ಸ್ಕಾಲರ್‌ಶಿಪ್ ನಿಲ್ಲಲಿದೆಯಾ?


ಉನ್ನತ ಶಿಕ್ಷಣದಲ್ಲಿ ವಿಜ್ಞಾನವನ್ನ ಆಯ್ಕೆ ಮಾಡಿಕೊಳ್ಳುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಣಕಾಸಿನಲ್ಲಿ ಆಸರೆಯಾಗಿದ್ದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಸ್ಥಗಿತವಾಗುವ ಚಾನ್ಸ್‌ ಹೆಚ್ಚಿದೆ. 2026 ನೇ ಸಾಲಿಗೆ ಅನ್ವಯವಾಗುವಂತೆ ವಿಜ್ಞಾನ ಮತ್ತು ತಂತ್ರಜ್ಞಾನ (ಡಿಎಸ್‌ಟಿ) ಇಲಾಖೆಯು'ಇನ್ಸ್‌ಪೈರ್ ಶಿ' ವಿದ್ಯಾರ್ಥಿವೇತನವನ್ನು ನವೀಕರಿಸುವುದಿಲ್ಲ ಎಂಬ ಮಾಹಿತಿ ಹೊರಬಿದ್ದಿದೆ.

Advertisement

ಡಿಎಸ್‌ಟಿ ಇನ್ಸ್‌ಪೈರ್ ಶಿ ಸ್ಕಾಲರ್‌ಶಿಪ್ 2026 ಅಧಿಸೂಚನೆ ಇಲ್ಲ

ಈ ವರ್ಷದ ಸ್ಕಾಲರ್‌ಶಿಪ್‌ಗೆ ಯಾವಾಗ ಅರ್ಜಿ ಕರೆಯಲಾಗುತ್ತದೆ ಎಂದು 2026ರ ಬ್ಯಾಚ್‌ನ ವಿದ್ಯಾರ್ಥಿಗಳು ಕಳೆದ ಕೆಲವು ವಾರಗಳಿಂದ ಕಾಯುತ್ತಿದ್ದರು. ಆದರೆ, "ಈ ವರ್ಷ ನಾವು ಈ ಫೆಲೋಶಿಪ್ ಅಧಿಸೂಚನೆ ಪ್ರಕಟಿಸುತ್ತಿಲ್ಲ. ಸದ್ಯಕ್ಕೆ ನಮ್ಮ ಬಳಿ ಇರುವ ಮಾಹಿತಿ ಇಷ್ಟೇ," ಎಂದು ಡಿಎಸ್‌ಟಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು 'ದಿ ವೈರ್' ವರದಿ ಮಾಡಿದೆ.

Advertisement

ಆದರೆ, ಈ ಬಗ್ಗೆ ಸರ್ಕಾರ ಇನ್ನೂ ಅಧಿಕೃತವಾಗಿ ಯಾವುದೇ ಪ್ರಕಟಣೆ ಹೊರಡಿಸಿಲ್ಲ. ಹಾಗೇ ಯಾವ ಕಾರಣಕಕ್ಕೆ ಈ ವರ್ಷ ಯೋಜನೆಯನ್ನು ಕೈಬಿಡಲಾಗಿದೆ ಎಂಬುದನ್ನೂ ಇಲಾಖೆ ಸ್ಪಷ್ಟಪಡಿಸಿಲ್ಲ. "ಕಾರಣವನ್ನು ಹೇಳುವ ಸ್ಥಿತಿಯಲ್ಲಿ ನಾವಿಲ್ಲ, ವಿದ್ಯಾರ್ಥಿಗಳು ವೆಬ್‌ಸೈಟ್ ಗಮನಿಸುತ್ತಿರಲಿ" ಎಂದು ಅಧಿಕಾರಿ ಹಾರಿಕೆಯ ಉತ್ತರ ನೀಡಿದ್ದಾರೆ.

ಏನಿದು ಇನ್ಸ್‌ಪೈರ್ ಶಿ ವಿದ್ಯಾರ್ಥಿವೇತನ?

ವಿಜ್ಞಾನದಲ್ಲಿ ಸಂಶೋಧನೆ ಮತ್ತು ಆವಿಷ್ಕಾರವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈ ಸ್ಕಾಲರ್‌ಶಿಪ್ ನೀಡುತ್ತಿತ್ತು. 12ನೇ ತರಗತಿಯ ಬೋರ್ಡ್ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನಾ ಪಡೆದ, ಬಿ.ಎಸ್ಸಿ, ಬಿ.ಎಸ್, ಎಂ.ಎಸ್ಸಿ, ಎಂ.ಎಸ್ ಅಥವಾ ಇಂಟಿಗ್ರೇಟೆಡ್ ವಿಜ್ಞಾನ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳುವ 17 ರಿಂದ 22 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಈ ಯೋಜನೆಯಡಿ ವಾರ್ಷಿಕ 80,000 ರೂ. ನೀಡಲಾಗುತ್ತಿತ್ತು. ಇದರೊಂದಿಗೆ ಬೇಸಿಗೆಯ ಸಂಶೋಧನಾ ಇಂಟರ್ನ್‌ಶಿಪ್ ಕೂಡ ನೀಡಲಾಗುತ್ತಿತ್ತು. 2025ರ ಡಿಸೆಂಬರ್‌ನಲ್ಲಿ ಸರ್ಕಾರ ಸಂಸತ್ತಿಗೆ ನೀಡಿದ ಮಾಹಿತಿಯ ಪ್ರಕಾರ, ಪ್ರತಿ ವರ್ಷ ಸುಮಾರು 8,000 ವಿದ್ಯಾರ್ಥಿಗಳು ಈ ಆರ್ಥಿಕ ನೆರವು ಪಡೆಯುತ್ತಿದ್ದರು.

Advertisement

ಡಿಎಸ್‌ಟಿಯ ಇತರ ಸ್ಕಾಲರ್‌ಶಿಪ್ ಯೋಜನೆಗಳ ಕಥೆಯೇನು?

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು 'ಇನ್ಸ್‌ಪೈರ್ ಶಿ' ಹೊರತಾಗಿ ಇನ್ಸ್‌ಪೈರ್ ಮಾನಕ್ ಮತ್ತು ವಿಜ್ಞಾನ ಜ್ಯೋತಿ ಎಂಬ ಯೋಜನೆಗಳನ್ನು ನಡೆಸುತ್ತಿದೆ. 10 ರಿಂದ 17 ವರ್ಷದ ಶಾಲಾ ಮಕ್ಕಳಿಗೆ 'ಮಾನಕ್' ಯೋಜನೆಯಡಿ ತಿಂಗಳಿಗೆ 10,000 ರೂ. ನೀಡಲಾಗುತ್ತದೆ. ಹಾಗೆಯೇ 'ವಿಜ್ಞಾನ ಜ್ಯೋತಿ' ಯೋಜನೆಯು 9 ರಿಂದ 12ನೇ ತರಗತಿಯಲ್ಲಿ ವಿಜ್ಞಾನ ಓದುತ್ತಿರುವ ವಿದ್ಯಾರ್ಥಿನಿಯರಿಗೆ ಮೀಸಲಾಗಿದೆ. ಈ ಯೋಜನೆಗಳ ಬಗ್ಗೆ ಸದ್ಯಕ್ಕೆ ಯಾವುದೇ ಬದಲಾವಣೆ ಕಂಡುಬಂದಿಲ್ಲ.

ಈಗಾಗಲೇ ಈ ಸ್ಕಾಲರ್‌ಶಿಪ್ ಪಡೆಯುತ್ತಿರುವ ಹಳೆಯ ಬ್ಯಾಚ್‌ನ ವಿದ್ಯಾರ್ಥಿಗಳಿಗೆ ಎಂದಿನಂತೆ ಹಣ ಜಮೆಯಾಗಲಿದ್ದು, ಅವರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಆದರೆ 2026ರಲ್ಲಿ ಪದವಿ ಸೇರಿದ ಹೊಸ ವಿದ್ಯಾರ್ಥಿಗಳಿಗೆ ಈ ಅವಕಾಶ ಕೈತಪ್ಪಿದೆ. ಈ ಬದಲಾವಣೆಗೆ ಪ್ರಮುಖ ಕಾರಣ 'ವಿಜ್ಞಾನ ಧಾರಾ' ಯೋಜನೆ ಎನ್ನಲಾಗುತ್ತಿದೆ.

Advertisement

ಕೇಂದ್ರ ಸರ್ಕಾರವು ದೇಶಾದ್ಯಂತ ಇರುವ ವಿವಿಧ ವಿಜ್ಞಾನ ವಿದ್ಯಾರ್ಥಿವೇತನಗಳನ್ನು ಒಗ್ಗೂಡಿಸಿ ಒಂದೇ ಸೂರಿನಡಿ ತರುವ ನಿಟ್ಟಿನಲ್ಲಿ ಈ ಹೊಸ ಹೆಜ್ಜೆ ಇಟ್ಟಿದೆ. 2025ರ ಮಾರ್ಚ್‌ನಿಂದ 'ವಿಜ್ಞಾನ ಧಾರಾ' ಯೋಜನೆಯನ್ನು ಕೇಂದ್ರ ಸರ್ಕಾರ ಭಾರತದ ವೈಜ್ಞಾನಿಕ ಬದಲಾವಣೆ ಎಂದು ಹೇಳುತ್ತಿದೆ.

ಇದರ ಪರಿಣಾಮ, ಪ್ರಸ್ತುತ ಬಜೆಟ್‌ನಲ್ಲಿ 'ಇನ್ಸ್‌ಪೈರ್ ಶಿ' ಯೋಜನೆಗೆ ಪ್ರತ್ಯೇಕ ಅನುದಾನದ ಕಾಲಂ ಇಲ್ಲ. ವಿಜ್ಞಾನ ಧಾರಾ ಯೋಜನೆಯು ವಿಜ್ಞಾನ ಮತ್ತು ತಂತ್ರಜ್ಞಾನ, ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಒಳಗೊಂಡಿದ್ದರೂ, ಇದರಡಿ ವಿದ್ಯಾರ್ಥಿವೇತನದ ಸ್ವರೂಪ ಹೇಗಿರಲಿದೆ ಎಂಬ ಸಂಪೂರ್ಣ ಮಾಹಿತಿಯನ್ನು ಸರ್ಕಾರ ಇನ್ನೂ ಬಿಟ್ಟುಕೊಟ್ಟಿಲ್ಲ. ಅಧಿಕೃತ ಪ್ರಕಟಣೆ ಹೊರಬರುವವರೆಗೂ ವಿಜ್ಞಾನ ವಿದ್ಯಾರ್ಥಿಗಳ ಕಾಯಬೇಕಿದೆ.

English Summary

In a major setback for aspiring science students, the Government of India will not renew the popular INSPIRE SHE scholarship scheme for the 2026 batch. The scheme may be merged under the new 'Vigyan Dhara' umbrella.