ಭಕ್ತರ ಕಾಣಿಕೆ ದುರುಪಯೋಗದ ಆರೋಪ: ರಾಜಕೀಯ ಜಿದ್ದಾಜಿದ್ದಿನ ಕಣವಾದ ಬದರಿನಾಥ್, ಅಯೋಧ್ಯೆ ದೇಣಿಗೆ ವಿವಾದ


ದೇಶದ ಪ್ರಮುಖ ಧಾರ್ಮಿಕ ಕ್ಷೇತ್ರಗಳಾದ ಉತ್ತರಾಖಂಡದ ಬದರಿನಾಥ್ ಮತ್ತು ಉತ್ತರ ಪ್ರದೇಶದ ಅಯೋಧ್ಯೆಯ ರಾಮ ಮಂದಿರದ ದೇಣಿಗೆ ನಿರ್ವಹಣೆಯಲ್ಲಿ ಕೇಳಿಬಂದಿರುವ ಅಕ್ರಮಗಳ ಆರೋಪಗಳು ಸದ್ಯ ದೇಶಾದ್ಯಂತ ರಾಜಕೀಯ ವಲಯ ಹಾಗೂ ಸಾಮಾಜಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿವೆ. ಈ ಪ್ರಕರಣಗಳಲ್ಲಿ ಇತ್ತೀಚಿನ ಬೆಳವಣಿಗೆಗಳ ಮೂಲಕ ಈ ವಿವಾದ ದಿನದಿಂದ ದಿನಕ್ಕೆ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ.

Advertisement

ಬದರಿನಾಥ್ ದೇಣಿಗೆ ಅಕ್ರಮ

ಉತ್ತರಾಖಂಡದ ಪವಿತ್ರ ಬದರಿನಾಥ ದೇವಾಲಯದಲ್ಲಿ ದೇಣಿಗೆ ಹಣದ ನಿರ್ವಹಣೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ ಉತ್ತರಾಖಂಡ ಪೊಲೀಸರು ಭಾನುವಾರ ತಡರಾತ್ರಿ ಪ್ರಮೋದ್ ನೌಟಿಯಾಲ್ ಎಂಬುವವರನ್ನು ಬಂಧಿಸಿದ್ದಾರೆ. ಬಂಧಿತನು ಬದರಿನಾಥ್-ಕೇದಾರನಾಥ ದೇವಸ್ಥಾನ ಸಮಿತಿಯ (BKTC) ಅಮಾನತುಗೊಂಡ ನೌಕರನಾಗಿದ್ದು, ಈ ಹಿಂದೆ ಸಮಿತಿಯ ಅಧ್ಯಕ್ಷರ ಆಪ್ತ ಸಹಾಯಕನಾಗಿ (ಪಿಎ) ಕಾರ್ಯನಿರ್ವಹಿಸುತ್ತಿದ್ದ ಎಂದು ತಿಳಿದುಬಂದಿದೆ.

Advertisement

ದೇಣಿಗೆ ಹಣ ದುರುಪಯೋಗದ ದೂರು ಕೇಳಿಬಂದ ತಕ್ಷಣ ದೇವಸ್ಥಾನ ಸಮಿತಿಯು ನಾಲ್ಕು ಸದಸ್ಯರ ಪ್ರಾಥಮಿಕ ತನಿಖಾ ಸಮಿತಿ ರಚಿಸಿತ್ತು. ಈ ಸಮಿತಿ ನಡೆಸಿದ ಆಂತರಿಕ ವಿಚಾರಣೆಯಲ್ಲಿ ಪ್ರಮೋದ್ ಮೇಲಿನ ಆರೋಪಗಳು ಮೇಲ್ನೋಟಕ್ಕೆ ಸತ್ಯ ಎಂದು ಸಾಬೀತಾದ ಹಿನ್ನೆಲೆ ಪೊಲೀಸರು ಎಫ್‌ಐಆರ್ ದಾಖಲಿಸಿ ಈ ಕ್ರಮ ಕೈಗೊಂಡಿದ್ದಾರೆ.

ಅಯೋಧ್ಯೆ ದೇಣಿಗೆ ವಿವಾದ

ಬೆಳಗಾವಿಯಲ್ಲಿ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ವಾರ್ಷಿಕ 'ಅಖಿಲ ಭಾರತೀಯ ಪ್ರಾಂತ ಪ್ರಚಾರಕ ಬೈಠಕ್'ನಲ್ಲಿ ಅಯೋಧ್ಯೆ ರಾಮ ಮಂದಿರದ ದೇಣಿಗೆ ಎಣಿಕೆಯಲ್ಲಿ ನಡೆದಿರುವ ಅಕ್ರಮಗಳ ಕುರಿತು ಗಂಭೀರ ಚರ್ಚೆ ನಡೆದಿದೆ. ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಮತ್ತು ದತ್ತಾತ್ರೇಯ ಹೊಸಬಾಳೆ ನೇತೃತ್ವದಲ್ಲಿ ಈ ಸಭೆ ನಡೆದಿದೆ. ಆರೆಸ್ಸೆಸ್ ಪ್ರಚಾರ ಪ್ರಮುಖ್ ಸುನಿಲ್ ಅಂಬೇಕರ್, ದೇಣಿಗೆ ಅಕ್ರಮದ ವರದಿಗಳು ಬೇಸರ ಮೂಡಿಸಿವೆ. ಪ್ರಸ್ತುತ ನಡೆಯುತ್ತಿರುವ ತನಿಖೆಯು ಶೀಘ್ರದಲ್ಲೇ ಒಂದು ನಿರ್ಣಾಯಕ ಹಂತಕ್ಕೆ ತಲುಪಲಿದೆ ಎಂಬ ನಂಬಿಕೆ ನಮಗಿದೆ. ಭಕ್ತರ ನಂಬಿಕೆಗೆ ಧಕ್ಕೆ ತರುವ ಇಂತಹ ಘಟನೆಗಳು ಮರುಕಳಿಸದಂತೆ ಮಂದಿರ ಟ್ರಸ್ಟ್ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

Advertisement
ಅಯೋಧ್ಯೆ ರಾಮಮಂದಿರ ದೇಣಿಗೆ ಕಳ್ಳತನ; ಕರ್ನಾಟಕದ ಹಿಂದೂ ದೇವಾಲಯಗಳ ಹುಂಡಿ ರಕ್ಷಣೆಗೆ ಕಾಂಗ್ರೆಸ್ ಸರ್ಕಾರದಿಂದ ವಿಶೇಷ ಮಾರ್ಗಸೂಚಿ

ಆರ್‌ಎಸ್‌ಎಸ್‌ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

ಅಯೋಧ್ಯೆ ದೇಣಿಗೆ ಅಕ್ರಮದ ಬಗ್ಗೆ ಆರ್‌ಎಸ್‌ಎಸ್‌ ಬೇಸರ ವ್ಯಕ್ತಪಡಿಸಿರುವುದನ್ನು ಕರ್ನಾಟಕ ಗೃಹಸಚಿವ ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ. ಆರ್‌ಎಸ್‌ಎಸ್‌ ನಾಯಕರು ಕೇವಲ ಬೇಸರ ವ್ಯಕ್ತಪಡಿಸಿದರೆ ಸಾಲದು, ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು. ಕ್ಷಮೆ ಕೇಳುವುದರಲ್ಲಿ ಅವರು ಮೊದಲಿನಿಂದಲೂ ಪರಿಣಿತರು, ಸಾವರ್ಕರ್ ಅವರ ಇತಿಹಾಸವೇ ಅದಕ್ಕೆ ಸಾಕ್ಷಿ ಎಂದು ಲೇವಡಿ ಮಾಡಿದ್ದಾರೆ.

ಅಯೋಧ್ಯೆ ಮಂದಿರದ ದೇಣಿಗೆ ಕಳ್ಳತನದ ಆರೋಪದ ಮೇಲೆ ಜೈಲು ಪಾಲಾದವರು ವಿಶ್ವ ಹಿಂದೂ ಪರಿಷತ್ (VHP) ಸಂಘಟನೆಗೆ ಸೇರಿದವರಲ್ಲವೇ? ವಿಎಚ್‌ಪಿ ಸಂಸ್ಥಾಪಕರು ಯಾರು ಮತ್ತು ಅವರು ಯಾರೊಂದಿಗೆ ಗುರುತಿಸಿಕೊಂಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತು. ಧೈರ್ಯವಿದ್ದರೆ ಮೋಹನ್ ಭಾಗವತ್ ಅವರು ಆರ್‌ಎಸ್‌ಎಸ್‌ ಅನ್ನು ಅಧಿಕೃತವಾಗಿ ನೋಂದಣಿ ಮಾಡಿಸಲಿ. ಆ ದಾಖಲೆಗಳನ್ನು ನನ್ನ ಮುಖಕ್ಕೆ ಬಿಸಾಡಲಿ ಎಂದು ಸವಾಲು ಹಾಕಿದ್ದಾರೆ.

Advertisement

ಆಪ್‌ನಿಂದ ದೇಶಾದ್ಯಂತ ಸಹಿ ಚಳವಳಿ

ರಾಮ ಮಂದಿರದ ದೇಣಿಗೆ ದುರುಪಯೋಗವನ್ನ ರಾಜಕೀಯವಾಗಿ ಅಸ್ತ್ರವಾಗಿಸಿಕೊಂಡಿರುವ ಆಮ್ ಆದ್ಮಿ ಪಾರ್ಟಿ (AAP), ಹಗರಣದ ತನಿಖೆಗೆ ಆಗ್ರಹಿಸಿ ದೇಶಾದ್ಯಂತ ಸಹಿ ಸಂಗ್ರಹ ಚಳವಳಿ ಹಮ್ಮಿಕೊಂಡಿದೆ. ಆಪ್ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ಹನುಮಂತನ ಆಶೀರ್ವಾದದೊಂದಿಗೆ ಈ ಅಭಿಯಾನಕ್ಕೆ ಚಾಲನೆ ನೀಡಿದ್ದು, ಮಂದಿರದಲ್ಲಿ ನಡೆದಿರುವ 'ಚಂದಾ-ಚೋರಿ'ಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯಲು ಸಾರ್ವಜನಿಕರಿಗೆ ಕರೆ ನೀಡಿದ್ದಾರೆ.

ಅನುಪಮ್ ಖೇರ್ ವಿವಾದಾತ್ಮಕ ಹೇಳಿಕೆ

ಇದೇ ವಿಷಯವಾಗಿ ಖ್ಯಾತ ನಟ ಅನುಪಮ್ ಖೇರ್ ನೀಡಿರುವ ಹೇಳಿಕೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಟಿವಿ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಮಂದಿರದ ದೇಣಿಗೆ ಕಳ್ಳತನದ ಆರೋಪವನ್ನು "ಮಾನವನ ದುರಾಸೆಯ ಸಣ್ಣ ವಿಷಯ" ಎಂದು ಹೇಳಿದ್ದಾರೆ. "ಮೊಘಲ್ ದೊರೆಗಳು ಭಾರತದ ಹಿಂದೂ ದೇವಾಲಯಗಳ ಸಂಪತ್ತನ್ನು ಲೂಟಿ ಮಾಡಿ ಧ್ವಂಸಗೊಳಿಸಿದ ನೈಜ ಇತಿಹಾಸಕ್ಕೆ ಹೋಲಿಸಿದರೆ, ಪ್ರಸ್ತುತ ನಡೆದಿರುವ ಹಣದ ಅಕ್ರಮ ತೀರಾ ಚಿಕ್ಕದು" ಎಂದು ಹೇಳಿದ್ದಾರೆ. ವಿರ್ಯಾಸವೆಂದರೆ ಅನುಪಮ್ ಖೇರ್ ಸದ್ಯ ಕಮಾಖ್ಯ ನಾರಾಯಣ್ ಸಿಂಗ್ ನಿರ್ದೇಶನದ 'ಶ್ರೀ ರಾಮ್ ಭೂಮಿ' ಎಂಬ ಚಿತ್ರದಲ್ಲಿ ನಟಿಸುತ್ತಿದ್ದು, ಅದರ ಪ್ರಚಾರದ ನಡುವೆಯೇ ಈ ಹೇಳಿಕೆ ಹೊರಬಿದ್ದಿದೆ.

Advertisement

ಧಾರ್ಮಿಕ ಪಾವಿತ್ರ್ಯತೆಯ ಹಿನ್ನೆಲೆಯಲ್ಲಿ ಕೋಟ್ಯಂತರ ಭಕ್ತರು ನೀಡಿದ ಕಾಣಿಕೆಯ ದುರುಪಯೋಗದ ಆರೋಪಗಳು ಒಂದೆಡೆ ಧಾರ್ಮಿಕ ಮುಖಂಡರಲ್ಲಿ ಆತಂಕ ಮೂಡಿಸಿದ್ದರೆ, ಮತ್ತೊಂದೆಡೆ ಮುಂಬರುವ ಚುನಾವಣೆಗಳ ಹಿನ್ನೆಲೆಯಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವಿನ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿದೆ.

English Summary

Allegations over misuse of donations at Badrinath Temple and Ayodhya Ram Mandir have sparked political debate. Here's what the investigations and latest developments reveal.