ತಿಂಗಳಿಗೆ 7 ಲಕ್ಷ ಸಂಬಳ, 82 ಲಕ್ಷ ಉಳಿತಾಯ ಇದ್ದರೂ ನೆಮ್ಮದಿ ಇಲ್ಲ! 29ರ ಟೆಕ್ಕಿಯ ಮಾತು ವೈರಲ್


ರೋಹಿತ್‌ ಎಂಬ 29 ವರ್ಷದ ಐಟಿ ಉದ್ಯೋಗಿಯೊಬ್ಬನ ಸ್ಟೋರಿ ಎಲ್ಲೆಲ್ಲೂ ವೈರಲ್‌ ಆಗ್ತಿದೆ. ತಿಂಗಳಿಗೆ ಸುಮಾರು 7 ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದರೂ ಈ ಪುಣ್ಯಾತ್ಮನಿಗೆ ನೆಮ್ಮದಿ ಇಲ್ವಂತೆ! ಅಂಥಾದ್ದೇನಾಯ್ತು ಇವನಿಗೆ?

Advertisement

ಮಾಡರ್ನ್‌ ಲೈಫ್‌ ಎಷ್ಟೆಲ್ಲ ಟೆನ್ಶನ್‌, ಸ್ಟ್ರೆಸ್‌ ಸೃಷ್ಟಿ ಮಾಡ್ತಿದೆ ನೋಡಿ. ಇಲ್ಲೊಬ್ಬ 29 ವರ್ಷ ವಯಸ್ಸಿನ ಟೆಕ್ಕಿ ಮಾತು ಕೇಳ್ತಿದ್ರೆ ದೇವ್ರೇ ನಮ್ಮ ಲೈಪು ಎಲ್ಲಿಗ್‌ ಬಂದು ನಿಂತಿತಪ್ಪಾ ಅನಿಸುತ್ತದೆ. ಈತನ ಹೆಸರು ರೋಹಿತ್.‌ ಈತನಿಗೆ ಈಗ ತನ್ನ ಆರ್ಥಿಕತೆ ಬಗ್ಗೆ ಟೆನ್ಶನ್‌ ಅಂತೆ. ಈ ಹೆಚ್ಚಿನ ಆದಾಯಕ್ಕಾಗಿ ರೋಹಿತ್‌ ಪ್ರತಿದಿನ ಸುಮಾರು 16 ಗಂಟೆಗಳ ಕಾಲ ಕೆಲಸ ಮಾಡಬೇಕಾಗುತ್ತದೆ. ಉತ್ತಮ ಸಂಬಳ ಇದ್ದರೂ ಭವಿಷ್ಯದ ಆರ್ಥಿಕ ಭದ್ರತೆ ಬಗ್ಗೆ ಈ ವ್ಯಕ್ತಿಗೆ ಸಿಕ್ಕಾಪಟ್ಟೆ ಆತಂಕವಂತೆ. ಇವರ ಈ ಮಾತು ಸದ್ಯ ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗ್ತಿದೆ. 29 ವರ್ಷಕ್ಕೆ ತಿಂಗಳಿಗೆ ಏಳು ಲಕ್ಷ ದುಡಿಯೋ ನಿಮಗೇ ನೆಮ್ಮದಿ ಇಲ್ಲ ಅಂದರೆ ನಮ್ಮ ದೇಶದಲ್ಲಿರುವ ಕೋಟ್ಯಂತರ ಜನ ಸ್ಥಿತಿ ಹೇಗಿರಬೇಡ ಎಂದು ಟ್ರೋಲ್‌ ಮಾಡುತ್ತಿದ್ದಾರೆ.

Advertisement

ಹಣ ಬಂದ್ರೂ ನೆಮ್ಮದಿ ಇಲ್ಲ, ಯಾಕೆ ಗೊತ್ತಾ?

ವೈಯಕ್ತಿಕ ಹಣಕಾಸು ಸಲಹೆಗಾರ ಅನ್ಶುಮನ್ ಶರ್ಮಾ ನಡೆಸುವ ಫಿನಾನ್ಸ್‌ ಕುರಿತ ಪಾಡ್‌ಕಾಸ್ಟ್‌ ಕಾರ್ಯಕ್ರಮದಲ್ಲಿ ಮಾತನಾಡಿದ ರೋಹಿತ್, ಇಷ್ಟು ಆದಾಯ ಪಡೆಯಲು ತಾನು ಹಗಲಿರುಳು ದುಡಿಯುತ್ತಿರುವುದಾಗಿ ಹೇಳಿದ್ದಾರೆ. ಹಗಲಿನ ವೇಳೆಯಲ್ಲಿ ಒಂದು ಕಂಪನಿಯಲ್ಲಿ ಮತ್ತು ರಾತ್ರಿ ವೇಳೆ ಅಮೆರಿಕ ಮೂಲದ ಮತ್ತೊಂದು ಕಂಪನಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ತಿಳಿದಿದ್ದಾರೆ. ತಿಂಗಳಿಗೆ 7 ಲಕ್ಷ ರೂಪಾಯಿ ಆದಾಯ ಬಂದರೂ, ಕೆಲಸದ ಒತ್ತಡದಿಂದ ಕುಟುಂಬಕ್ಕೆ ಅಥವಾ ಸ್ನೇಹಿತರಿಗೆ ಸಮಯ ನೀಡಲು ಸಾಧ್ಯವಾಗುತ್ತಿಲ್ಲ ಎನ್ನುವುದು ಅವರ ಗೋಳು. ಒಂದು ಬೇಕಂದ್ರೆ ಇನ್ನೊಂದನ್ನ ಬಿಡ್ಲೇ ಬೇಕಲ್ಲ ಶಿವಾ ಎಂದು ಒಂದಿಷ್ಟು ಮಂದಿ ಅವರ ಕಾಲೆಳೆಯುತ್ತಿದ್ದಾರೆ. ಆದರೆ ಅವರ ಮಾತಿನ ಹಿಂದಿರುವ ನೋವು, ಟೆನ್ಶನ್‌ ಸದ್ಯ ಈ ಕಾಲದ ಯುವಕರ ಮನಸ್ಥಿತಿಗೆ ಕನ್ನಡಿ ಹಿಡಿದ ಹಾಗಿದೆ ಎಂದು ಅನೇಕ ಮಂದಿ ಅಭಿಪ್ರಾಯಪಟ್ಟಿದ್ದಾರೆ.

Advertisement
ಪಾರ್ಟ್-ಟೈಮ್ ಕೆಲಸದ ಆಸೆಗೆ ಭವಿಷ್ಯ ಹಾಳು ಮಾಡಿಕೊಳ್ಳಬೇಡಿ: ವಿದ್ಯಾರ್ಥಿಗಳಿಗೆ UKಯಲ್ಲಿರುವ ಭಾರತದ ಯುವತಿಯ ಕಿವಿಮಾತು

ಕಷ್ಟದಿಂದ ಮೇಲೆ ಬಂದ ಯುವಕ

ರೋಹಿತ್‌ ಹೈಫೈ ಹಿನ್ನೆಲೆಯಿಂದ ಬಂದವರಲ್ಲ. ರೋಹಿತ್ ಬದುಕಿನ ಹಿನ್ನೆಲೆ ತುಂಬಾ ಕಷ್ಟಕರವಾಗಿತ್ತು. ಅವರ ಕುಟುಂಬದ ಆರ್ಥಿಕ ಪರಿಸ್ಥಿತಿ ದುರ್ಬಲವಾಗಿದ್ದರಿಂದ ಒಬ್ಬರಿಗೆ ಮಾತ್ರ ಓದುವ ಅವಕಾಶ ಇತ್ತು. ತಮ್ಮ ಅಣ್ಣ ತಮ್ಮ ಶಿಕ್ಷಣವನ್ನು ಬಿಟ್ಟು, ರೋಹಿತ್ ಓದಲು ಸಹಾಯ ಮಾಡಿದ್ದರು. ಈ ಬಗ್ಗೆ ಮಾತನಾಡಿದ ರೋಹಿತ್, ʼನನ್ನ ಅಣ್ಣ ನನ್ನಗಾಗಿ ತನ್ನ ಶಿಕ್ಷಣವನ್ನು ತ್ಯಜಿಸಿದರು. ಆದ್ದರಿಂದ ನಾನು ಯಶಸ್ವಿಯಾಗದಿದ್ದರೆ ಅದು ನನ್ನ ಕುಟುಂಬದ ವೈಫಲ್ಯ ಎಂದು ನನಗೆ ಅನಿಸುತ್ತದೆ. ಇದೇ ಕಾರಣಕ್ಕೆ ಹೆಚ್ಚು ದುಡಿಯುತ್ತಿದ್ದೇನೆʼ ಎಂದು ಹೇಳುತ್ತಾರೆ.

Advertisement

ಮದುವೆ, ಕಾರು, ಫ್ಲಾಟು ಮತ್ತು ಭಯ

ಇತ್ತೀಚೆಗೆ ರೋಹಿತ್ ತಂದೆಯಾಗಿದ್ದಾರೆ. ಮನೆಯವರ ಸಲಹೆಯಂತೆ ಹೊಸ ಕಾರು ಖರೀದಿಸಿದರು. ನಂತರ 85 ಲಕ್ಷ ರೂಪಾಯಿ ಮೌಲ್ಯದ ೨ ಬೆಡ್‌ರೂಂ ಫ್ಲಾಟ್‌ಅನ್ನೂ ಖರೀದಿಸಿದ್ದಾರೆ. ಈಗ ಅವರನ್ನು ಒಂದು ಯೋಚನೆ ಬಹಳ ಬಾಧಿಸುತ್ತಿದೆಯಂತೆ.

ಕೃತಕ ಬುದ್ಧಿಮತ್ತೆ ಅಂದರೆ ಎಐ ಕ್ಷೇತ್ರದಲ್ಲಾಗುತ್ತಿರುವ ವ್ಯಾಪಕವಾದ ಬೆಳವಣಿಗೆಯಿಂದ ಐಟಿ ಉದ್ಯೋಗಗಳಿಗೆ ಅಪಾಯ ಹೆಚ್ಚುತ್ತಿದೆ ಎಂಬ ಭಯ ಅವರನ್ನು ಕಾಡುತ್ತಿದೆ. ʼನಾನು ಐಟಿ ಕ್ಷೇತ್ರದಲ್ಲಿದ್ದೇನೆ. ಕೃತಕ ಬುದ್ಧಿಮತ್ತೆ ವೇಗವಾಗಿ ಬೆಳೆಯುತ್ತಿದೆ. ಒಂದು ವೇಳೆ ಉದ್ಯೋಗ ಕಳೆದುಕೊಂಡರೆ ಅಥವಾ ಆದಾಯ ಕಡಿಮೆಯಾದರೆ ಕುಟುಂಬವನ್ನು ಹೇಗೆ ನಡೆಸುವುದು ಎಂಬ ಚಿಂತೆ ಯಾವಾಗಲೂ ಇರುತ್ತದೆʼ ಅನ್ನೋ ಮಾತನ್ನು ರೋಹಿತ್‌ ಹೇಳ್ತಾರೆ.

Advertisement
11 ನಿಮಿಷ ತಡವಾಗಿದ್ದಕ್ಕೆ ಒಂದು ಗಂಟೆಯ ಸ್ಯಾಲರಿ ಕಟ್‌!ಕಂಪನಿಯ ನಿಯಮಾನುಸಾರವೇ ತಕ್ಕ ಉತ್ತರ ಕೊಟ್ಟ ಉದ್ಯೋಗಿ

82 ಲಕ್ಷ ಉಳಿತಾಯವಿದ್ದರೂ ಟೆನ್ಶನ್

ರೋಹಿತ್ ಈಗಾಗಲೇ ಉತ್ತಮ ಉಳಿತಾಯ ಮಾಡಿಕೊಂಡಿದ್ದಾರೆ. ಅವರ ಬಳಿ ಮ್ಯೂಚುವಲ್ ಫಂಡ್‌ಗಳಲ್ಲಿ ಸುಮಾರು 70 ಲಕ್ಷ ರೂಪಾಯಿ, ಷೇರು ಮಾರುಕಟ್ಟೆಯಲ್ಲಿ 2 ಲಕ್ಷ ರೂಪಾಯಿ ಮತ್ತು ಸ್ಥಿರ ಠೇವಣಿಯಲ್ಲಿ 10 ಲಕ್ಷ ರೂಪಾಯಿ ಇದೆ. ಒಟ್ಟಾರೆ ಅವರ ಉಳಿತಾಯ ಸುಮಾರು 82 ಲಕ್ಷ ರೂಪಾಯಿ. ಇದಾದರೂ ಅವರು ನೆಮ್ಮದಿಯಾಗಿಲ್ಲ. ಹೊಸ ಮನೆ ಸಿಕ್ಕ ನಂತರ ಪ್ರತಿ ತಿಂಗಳು 60 ಸಾವಿರ ರೂಪಾಯಿ ಮನೆ ಸಾಲದ ಕಂತು ಮತ್ತು 28 ಸಾವಿರ ರೂಪಾಯಿ ಕಾರು ಸಾಲದ ಕಂತು ಪಾವತಿಸಬೇಕಿದೆ. ಇತರೆ ಕುಟುಂಬದ ಖರ್ಚುಗಳನ್ನು ಸೇರಿಸಿದರೆ ತಿಂಗಳ ವೆಚ್ಚ ಸುಮಾರು 1.3 ಲಕ್ಷದಿಂದ 1.4 ಲಕ್ಷ ರೂಪಾಯಿವರೆಗೆ ತಲುಪಲಿದೆ ಅನ್ನೋ ಟೆನ್ಶನ್‌ ಅಂತೆ.

Advertisement

ನೆಮ್ಮದಿ ಬೇಕು ಸ್ವಾಮಿ

ರೋಹಿತ್‌ ಮಾತು ಹೇಳಿ ಕಂಗಾಲಾದ ನಿರೂಪಕ ಅನ್ಶುಮನ್ ಶರ್ಮಾ, ʼನಿಮ್ಮ ಬಳಿ ಸುಮಾರು ನಾಲ್ಕು ವರ್ಷಗಳ ಖರ್ಚಿಗೆ ಸಾಕಾಗುವಷ್ಟು ಉಳಿತಾಯ ಇದೆ. ಹಾಗಿದ್ದರೂ ಏಕೆ ಇಷ್ಟು ಆತಂಕ?ʼ ಎಂದು ಪ್ರಶ್ನೆ ಮಾಡಿದರು. ಅದಕ್ಕೆ ಉತ್ತರಿಸಿದ ರೋಹಿತ್, ʼಪ್ರತಿದಿನ 16 ಗಂಟೆ ಕೆಲಸ ಮಾಡುವುದರಿಂದ ಜೀವನವೇ ಕೆಲಸಕ್ಕೆ ಸೀಮಿತವಾಗಿದೆ. ಕುಟುಂಬದವರ ಜೊತೆ ಅಥವಾ ಸ್ನೇಹಿತರ ಜೊತೆ ಸಮಯ ಕಳೆಯಲು ಸಾಧ್ಯವಾಗುತ್ತಿಲ್ಲ. ಕೆಲವೊಮ್ಮೆ ಎಲ್ಲವನ್ನೂ ಬಿಟ್ಟು ಸ್ವಲ್ಪ ಸಮಯ ನೆಮ್ಮದಿಯಿಂದ ಬದುಕಬೇಕು ಎನ್ನಿಸುತ್ತದೆʼ ಅಂತ ಹೇಳ್ತಾರೆ. ಆದರೆ ಈಗಲೇ ಒಂದು ಉದ್ಯೋಗವನ್ನು ಬಿಡುವ ಯೋಚನೆ ಇಲ್ಲವಂತೆ.

ಕೋಟಿ ಕೋಟಿ ಗಳಿಸಿ ಆರಾಮಾಗಿರೋ ಪ್ಲಾನು

ಮುಂದಿನ ಐದರಿಂದ ಆರು ವರ್ಷಗಳಲ್ಲಿ 7 ರಿಂದ 8 ಕೋಟಿ ರೂಪಾಯಿ ಉಳಿತಾಯ ಮಾಡುವ ಗುರಿ ಇಟ್ಟುಕೊಂಡಿದ್ದೇನೆ. ಆ ಗುರಿ ತಲುಪಿದ ನಂತರ ಒಂದು ಉದ್ಯೋಗವನ್ನು ಬಿಟ್ಟು, ಅಮೆರಿಕದ ಕಂಪನಿಯ ಕೆಲಸವನ್ನು ಮಾತ್ರ ಮುಂದುವರಿಸುವ ಯೋಜನೆ ಇದೆ ಎಂದು ರೋಹಿತ್ ಹೇಳ್ತಾರೆ. ಒಟ್ನಲ್ಲಿ ಮನುಷ್ಯನಿಗೆ ಎಷ್ಟು ಬಂದ್ರೂ ನೆಮ್ದಿನೇ ಇಲ್ಲ. ಆದಾಯ ಇದ್ದವರಿಗೂ ಇಲ್ಲ, ಇಲ್ಲದಿದ್ದವರಿಗೆ ಮೊದಲೇ ಇಲ್ಲ.

(ಬರಹ: ಭವಾನಿ ಭಟ್)

English Summary

IT professional: A 29-year-old IT professional earning nearly ₹7 lakh per month has gone viral after revealing that he still struggles with stress and financial insecurity, despite having ₹82 lakh in savings.