ಆಷಾಢದಲ್ಲಿ ಅತ್ತೆ ಸೊಸೆ ಒಂದೇ ಮನೆಯಲ್ಲಿದ್ದರೆ ಏನಾಗುತ್ತದೆ? ಸೊಸೆಯನ್ನು ತವರು ಮನೆಗೆ ಕಳುಹಿಸುವ ಹಿಂದಿನ ಕಾರಣ?


ಆಷಾಢ ಮಾಸ ಆರಂಭವಾಗುತ್ತಿದೆ. ಆಷಾಢ ಎಂದ ತಕ್ಷಣ ನೆನಪಿಗೆ ಬರುವ ಮೊದಲ ವಿಚಾರವೆಂದರೆ ಈ ಮಾಸದಲ್ಲಿ ಅತ್ತೆ ಮತ್ತು ಸೊಸೆ ಒಂದೇ ಮನೆಯಲ್ಲಿ ಜೊತೆಯಲ್ಲಿ ವಾಸ ಮಾಡಬಾರದು ಎನ್ನುವುದು. ಹೊಸದಾಗಿ ಮದುವೆಯಾಗಿ ಬಂದ ಸೊಸೆಯನ್ನು ಆಷಾಢದಲ್ಲಿ ಆಕೆಯ ತವರು ಮನೆಗೆ ಕಳುಹಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ. ಈ ತಿಂಗಳಲ್ಲಿ ಅತ್ತೆ ಮತ್ತು ಸೊಸೆ ಜೊತೆಗಿದ್ದರೆ ಅವರಿಬ್ಬರ ನಡುವೆ ಜಗಳವಾಗುತ್ತದೆ. ಇಬ್ಬರು ಪರಸ್ಪರರ ಮುಖ ನೋಡಿದರೆ ಅಪಶಕುನ ಎನ್ನುವ ನಂಬಿಕೆ ಈಗಲೂ ನಮ್ಮಲ್ಲಿದೆ. ಹೀಗಾಗಿ ಆಷಾಢದಲ್ಲಿ ತವರು ಮನೆಯವರು ಬಂದು ಮಗಳನ್ನು ತಮ್ಮೊಂದಿಗೆ ಕರೆದುಕೊಂಡು ಹೋಗುತ್ತಾರೆ. ಅತ್ತೆ ಮನೆಯವರು ಕೂಡಾ ಈ ತಿಂಗಳಲ್ಲಿ ಸೊಸೆಯನ್ನು ಸಂತೋಷದಿಂದ ಕಳುಹಿಸಿ ಕೊಡುತ್ತಾರೆ.

Advertisement

ಆದರೆ ಈ ಪದ್ದತಿಯ ಹಿಂದೆ ಇರುವುದು ಕೇವಲ ಸಂಪ್ರದಾಯವಲ್ಲ, ಬದಲಿಗೆ ಅನಾದಿ ಕಾಲದಿಂದ ನಡೆದುಕೊಂಡು ಬಂದಿರುವ ಈ ಪದ್ದತಿಯ ಹಿಂದೆ ಬಲವಾದ ಆರೋಗ್ಯ, ಸಾಮಾಜಿಕ ಮತ್ತು ವೈಜ್ಞಾನಿಕ ಕಾರಣಗಳೂ ಅಡಗಿವೆ.

Advertisement

ಸೊಸೆಯ ಆರೋಗ್ಯ ದೃಷ್ಟಿಯಿಂದ:

ವೈಜ್ಞಾನಿಕ ದೃಷ್ಟಿಕೋನದಿಂದ ನೋಡುವುದಾದರೆ ಆಷಾಢ ಮಾಸ ಎಂದರೆ ಮಳೆಗಾಲದ ಆರಂಭ. ಈ ಅವಧಿಯಲ್ಲಿ, ಹವಾಮಾನದಲ್ಲಿನ ಬದಲಾವಣೆಗಳಿಂದಾಗಿ, ಸೊಳ್ಳೆಗಳು ಮತ್ತು ಬ್ಯಾಕ್ಟೀರಿಯಾಗಳ ಸಂಖ್ಯೆ ವಿಪರೀತವಾಗಿರುತ್ತವೆ. ಇದರಿಂದ ರೋಗಗಳು ಹರಡುವ ಭೀತಿ ಕೂಡಾ ಹೆಚ್ಚಿರುತ್ತದೆ. ಹಿಂದೆ, ಸಾರಿಗೆ ಮತ್ತು ವೈದ್ಯಕೀಯ ಸೌಲಭ್ಯಗಳು ಕಡಿಮೆಯಾಗಿದ್ದವು. ಹಾಗಾಗಿ ಹವಾಮಾನ ಬದಲಾವಣೆಗಳಿಂದಾಗಿ ಹೊಸದಾಗಿ ಮದುವೆಯಾದ ಹುಡುಗಿ ಅನಾರೋಗ್ಯಕ್ಕೆ ಒಳಗಾದರೆ ಎನ್ನುವ ಚಿಂತೆ ಕಾಡುತ್ತಿತ್ತು. ಒಂದು ವೇಳೆ ಈ ಹೊತ್ತಿನಲ್ಲಿ ಆಕೆ ತನ್ನ ತವರು ಮನೆಯಲ್ಲಿದ್ದರೆ ಆಕೆಗೆ ಸಂಪೂರ್ಣ ವಿಶ್ರಾಂತಿ ಮತ್ತು ಆರೈಕೆ ಸಿಗುತ್ತದೆ ಎಂಬ ಉದ್ದೇಶದಿಂದ ಆಷಾಢದಲ್ಲಿ ಸೊಸೆಯನ್ನು ತವರು ಮನೆಗೆ ಕಳುಹಿಸುವ ವ್ಯವಸ್ಥೆ ಮಾಡಲಾಗುತ್ತಿತ್ತು.

Advertisement
ಸತ್ತ ನಂತರವೂ ನೆಮ್ಮದಿಯಿಲ್ಲ!ಪ್ರತಿ 5 ವರ್ಷಗಳಿಗೊಮ್ಮೆ ಸಮಾಧಿಯಿಂದ ಹೊರ ತೆಗದು ಮಾಡಿಸಲಾಗುತ್ತದೆ ಈ ಕೆಲಸ

ಗರ್ಭಧಾರಣೆ ತಡೆಗೆ:

ಇದರ ಹಿಂದಿರುವ ಇನ್ನೊಂದು ಪ್ರಮುಖ ಕಾರಣವೆಂದರೆ ಗರ್ಭಧಾರಣೆ. ಆಷಾಢಮಾಸದ ಸಮಯದಲ್ಲಿ ನವ ದಂಪತಿಗಳು ಒಟ್ಟಿಗೆ ಇದ್ದು, ಪತ್ನಿ ಗರ್ಭಿಣಿಯಾದರೆ, ಮಗು ಒಂಭತ್ತು ತಿಂಗಳ ನಂತರ ಜನಿಸುತ್ತದೆ. ಅಂದರೆ ಚೈತ್ರ ಅಥವಾ ವೈಶಾಖ ಮಾಸಗಳಲ್ಲಿ ಮಗು ಭೂಮಿಗೆ ಬರುತ್ತದೆ. ಚೈತ್ರ ಅಥವಾ ವೈಶಾಖ ಮಾಸ ಎಂದರೆ ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ಮಗುವಿನ ಜನನವಾಗುವುದು. ಇದು ವಿಪರೀತ ಬೇಸಿಗೆ ಇರುವ ತಿಂಗಳು. ಆ ಸಮಯದಲ್ಲಿ ಬಿಸಿಲು ತೀವ್ರವಾಗಿರುವುದರಿಂದ, ಮಗು ಮತ್ತು ತಾಯಿ ಇಬ್ಬರಿಗೂ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಹೆಚ್ಚು. ಅದಕ್ಕಾಗಿಯೇ, ಬೇಸಿಗೆಯಲ್ಲಿ ಆಗುವ ಹೆರಿಗೆಯನ್ನು ತಪ್ಪಿಸುವ ದೂರದೃಷ್ಟಿಯಿಂದ, ಆಷಾಢಮಾಸದ ಸಮಯದಲ್ಲಿ ಗಂಡ ಮತ್ತು ಹೆಂಡತಿಯನ್ನು ದೂರವಿಡುವ ಪದ್ಧತಿಯನ್ನು ಪರಿಚಯಿಸಲಾಯಿತು.

Advertisement

ಅತ್ತೆ ಮನೆಗೆ ಹೊಂದಿಕೊಳ್ಳಲು ನೀಡುವ ಸಮಯ:

ಮಾನಸಿಕ ಅಥವಾ ಸಾಮಾಜಿಕ ದೃಷ್ಟಿಕೋನದಿಂದ, ನೋಡುವುದಾದರೆ ಹೊಸದಾಗಿ ಮದುವೆಯಾದ ಹುಡುಗಿ ತನ್ನ ಅತ್ತೆಯ ಮನೆಗೆ ಹೋಗುವಾಗ ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಈ ಪ್ರಕ್ರಿಯೆಯಲ್ಲಿ ಅತ್ತೆ ಮತ್ತು ಸೊಸೆಯರ ನಡುವೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಉಂಟಾಗುವುದು ಸಹಜ. ಅದಕ್ಕಾಗಿಯೇ ಆಷಾಢದ ನೆಪದಲ್ಲಿ ಸೊಸೆಯನ್ನು ಒಂದು ತಿಂಗಳ ಕಾಲ ತನ್ನ ತವರು ಮನೆಗೆ ಕಳುಹಿಸುವುದರಿಂದ, ಆಕೆಯ ಮನಸ್ಸಿನ ಆತಂಕ ನಿವಾರಣೆಯಾಗುತ್ತದೆ.

ನಿತ್ಯ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಣ ದ್ರಾಕ್ಷಿ ಸೇವಿಸಿದರೆ ನಿಮ್ಮ ದೇಹದಲ್ಲಿ ಈ ಬದಲಾವಣೆಗಳಾಗುವುದು!

ಆದ್ದರಿಂದ, ಆಷಾಢಮಾಸದ ಸಮಯದಲ್ಲಿ ಅತ್ತೆ-ಸೊಸೆಯಂದಿರು ಒಂದೇ ಮನೆಯಲ್ಲಿ ವಾಸಿಸಬಾರದು ಎಂಬ ನಿಯಮದ ಹಿಂದೆ ಇರುವುದು ಕೇವಲ ಮೂಢನಂಬಿಕೆ ಅಲ್ಲ. ಬದಲಿಗೆ ಅತ್ತೆ-ಸೊಸೆಯಂದಿರ ನಡುವಿನ ಉತ್ತಮ ಸಂಬಂಧವನ್ನು ಹೆಚ್ಚಿಸಲು ಮತ್ತು ಸೊಸೆ ಮತ್ತು ಮಗುವಿನ ಆರೋಗ್ಯವನ್ನು ರಕ್ಷಿಸಲು ಪೂರ್ವಜರು ಈ ಸಂಪ್ರದಾಯವನ್ನು ಅಳವಡಿಸಿಕೊಂಡರು. ಇಲ್ಲಿ ಅತ್ತೆ ಸೊಸೆ ಆಷಾಢದಲ್ಲಿ ಮುಖ ನೋಡಿಕೊಳ್ಳಬಾರದು ಎನ್ನುವುದು ಮಾತ್ರ ನಂಬಿಕೆಗೆ ಬಿಟ್ಟ ವಿಚಾರವಷ್ಟೇ.

Advertisement

(ಬರಹ: ರಂಜಿತಾ ಆರ್.ಕೆ.)

English Summary

Ashada Masa: Real reason behind why mother and daughter in law should live separate in ashada month.