ಅತಿಯಾದ ಮೊಬೈಲ್ ಬಳಕೆ: ನಿದ್ರೆ, ಮಾನಸಿಕ ಆರೋಗ್ಯಕ್ಕೂ ಕುತ್ತು


ಈ ಡಿಜಿಟಲ್ ಯುಗದಲ್ಲಿ ಭಾರತ ಸೇರೆ ವಿಶ್ವದೆಲ್ಲೆಡೆ ಮೊಬೈಲ್ ಫೋನ್‌ ಬಳಕೆ ಹೆಚ್ಚಾಗಿದೆ. ಫೋನ್‌ಗಳು ಮತ್ತು ಟೆಲಿಕಾಂ ಟವರ್‌ಗಳಿಂದ ಹೊರ ಸೂಸುವ ವಿಕಿರಣದಿಂದ ಆರೋಗ್ಯಕ್ಕೆ ಆಗಬಹುದಾದ ದುಷ್ಪರಿಣಾಮಗಳನ್ನು ತಿಳಿಯಲು ಭಾರತದಲ್ಲಿ ಹಲವು ಅಧ್ಯಯನಗಳು ನಡೆಯುತ್ತಿವೆ.

Advertisement

ಅಧ್ಯಯನದ ಪ್ರಕಾರ, ಅತಿಯಾದ ಮೊಬೈಲ್ ಬಳಕೆ ನಿಮ್ಮ ನಿದ್ರಾ ಗುಣಮಟ್ಟವನ್ನು ಕುಂಠಿತಗೊಳಿಸುತ್ತದೆ. ಮೊಬೈಲ್ ಫೋನ್‌ಗಳು ಮೆದುಳಿಗೆ ಇದು ಹಗಲೆಂಬ ಭ್ರಮೆ ಹುಟ್ಟಿಸುತ್ತವೆ. ಇದು ನಿಮ್ಮ ದೇಹದ ನಿದ್ರೆ-ಎಚ್ಚರದ ನೈಸರ್ಗಿಕ ಚಕ್ರವನ್ನು ಹಾಳು ಗೆಡವುತ್ತದೆ. ಇದರಿಂದ ನಿಮಗೆ ನಿದ್ರೆ ಮಾಡಲು ಹೆಚ್ಚು ಸಮಯ ಬೇಕು. ಆದರೆ, ಗಾಢವಾದ ನಿದ್ರೆ ಸಿಗುವುದಿಲ್ಲ ಮತ್ತು ಹಗಲಿನಲ್ಲಿ ನೀವು ದಣಿವನ್ನು ಅನುಭವಿಸುತ್ತೀರಿ. ತಲೆನೋವು, ಹಗಲಿನಲ್ಲಿ ಅತಿಯಾದ ನಿದ್ರೆಗೂ ಇದೇ ಕಾರಣವಾಗಿರಬಹುದು.

Advertisement

ಮೊಬೈಲ್ ಆರೋಗ್ಯದ ಮೇಲೆ ಬೀರೋ ಪರಿಣಾಮ ಒಂದೆರಡಲ್ಲ

ಆಯುರ್ವೇದದ ಪ್ರಕಾರ ಆಹಾರ, ನಿದ್ರೆ ಮತ್ತು ಬ್ರಹ್ಮಚರ್ಯವು ತ್ರಯೋಪಸ್ತಂಭಗಳು. ಉಪಸ್ತಂಭಗಳೆಂದರೆ ಶರೀರ ಧಾರಣೆಯ ಮೂಲ. ನಿದ್ರೆಯು ಮನುಷ್ಯನ ಶಾರೀರಿಕ ಮತ್ತು ಮಾನಸಿಕ ಆರೋಗ್ಯದ ಒಳಿತಿಗೆ ಪ್ರಮುಖ ಕಾರಣ. ಆಯುರ್ವೇದದಲ್ಲಿ ನಿದ್ರೆಯಿಂದ ಸಿಗುವ ಪ್ರಮುಖ ಲಾಭಗಳನ್ನು ಈ ಕೆಳಗಿನಂತೆ ಉಲ್ಲೇಖಿಸಲಾಗಿದೆ - ಮನಸ್ಸು ಮತ್ತು ದೇಹಕ್ಕೆ ಆನಂದ, ಶರೀರಕ್ಕೆ ಉತ್ತಮ ಪೋಷಣೆ, ರೋಗ ನಿರೋಧಕ ಶಕ್ತಿ ಮತ್ತು ದೈಹಿಕ ಸಾಮರ್ಥ್ಯ, ಲೈಂಗಿಕ ಸಾಮರ್ಥ್ಯ ಮತ್ತು ಸಂತಾನೋತ್ಪತ್ತಿ ಶಕ್ತಿ, ಬುದ್ಧಿಶಕ್ತಿ, ನೆನಪಿನ ಶಕ್ತಿ ಮತ್ತು ಏಕಾಗ್ರತೆ, ಆಯಸ್ಸು ಆರೋಗ್ಯಕರ ಜೀವನ ಲಭಿಸುತ್ತದೆ.

Advertisement

ಸರಿಯಾದ ನಿದ್ರೆಯ ಕೊರತೆಯಿಂದ ಮಾನಸಿಕ ಆರೋಗ್ಯದ ಸಮಸ್ಯೆಗಳು ಉಂಟಾಗುತ್ತವೆ. ಏಕೆಂದರೆ ನಿಮ್ಮ ಮೆದುಳಿಗೆ ವಿಶ್ರಾಂತಿ ಸಿಗುವುದಿಲ್ಲ ಮತ್ತು ಅದು ಚೇತರಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಇದು ಒತ್ತಡ, ಆತಂಕ ಮತ್ತು ಖಿನ್ನತೆಗೆ ಕಾರಣವಾಗುತ್ತದೆ.

ನಿಮ್ಮ ಮನಸ್ಸನ್ನು ಆರೋಗ್ಯವಾಗಿಡಲು ಮತ್ತು ಚೆನ್ನಾಗಿ ನಿದ್ರೆ ಮಾಡಲು, ರಾತ್ರಿ ಮಲಗುವ ಕನಿಷ್ಠ ಒಂದು ಗಂಟೆ ಮುನ್ನ ನಿಮ್ಮ ಮೊಬೈಲ್ ಫೋನ್ ಬಳಸುವುದನ್ನು ನಿಲ್ಲಿಸಿ. ಫೋನ್ ಅನ್ನು 1 ರಿಂದ 2 ಅಡಿ ದೂರದಲ್ಲಿಡಿ. ಹಾಗೂ 'ಡು ನಾಟ್ ಡಿಸ್ಟರ್ಬ್' (Do Not Disturb) ಮೋಡ್ ಬಳಸಿ. ನೈಟ್ ಮೋಡ್ ಬಳಸಿ, ಇದು ಕಣ್ಣಿನ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ಅಥವಾ ನಿದ್ರೆಗೆ ಭಂಗ ಬಾರದಂತೆ ರಾತ್ರಿ ವೇಳೆ ಅನಗತ್ಯ ಆ್ಯಪ್‌ಗಳ ನೋಟಿಫಿಕೇಶನ್‌ಗಳನ್ನು ಮ್ಯೂಟ್ ಮಾಡಿ.

Advertisement

ಸೋಷಿಯಲ್ ಮೀಡಿಯಾ ಬಳಸುವಾಗಲೂ ಇತಿ ಮಿತಿ ಇರಲಿ. ಸುಖಾ ಸುಮ್ಮನೆ ಬೇಡದ ಪುಟಗಳನ್ನು ಫಾಲೋ ಮಾಡಬೇಡಿ. ಏನೇ ನೋಡಿದರೂ ನಿಮ್ಮ ಮನಸ್ಸಿನಲ್ಲಿ ಪಾಸಿಟಿವ್ ಪರಿಣಾಮ ಬೀರ್ತಾ ಇದೆಯಾ ಎಂಬುದನ್ನು ಗಮನಿಸಿ. ಅಕಸ್ಮಾತ್ ಮನಸ್ಸನ್ನು ಕದಡುತ್ತಿದೆ ಎಂದಾದಲ್ಲಿ ಆ ಪ್ರೊಫೈಲ್ ಅಥವಾ ಪುಟವನ್ನು ಫಾಲೋ ಮಾಡುವುದನ್ನೇ ಬಿಟ್ಟು ಬಿಡಿ. ಅಲ್ಲದೇ ನೀವೇ ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟಿವ್ ಆಗಿದ್ದರೆ ಲೈಕ್ಸ್, ಶೇರ್ಸ್, ಕಮೆಂಟ್ಸ್ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ. ಸೋಷಿಯಲ್ ಮೀಡಿಯಾವೇ ಜೀವನವಲ್ಲ ಎಂಬುವುದು ನಿಮ್ಮ ಅರಿವಿನಲ್ಲಿ ಇರಲಿ. ಅಂತರಂಗ ಶುದ್ಧಿಯಾಗಿರಬೇಕು. ಮನಸ್ಸಿಗೆ ಹಿತ ಎನಿಸುವ ಕೆಲಸ ಮಾಡಿದರೆ ದೈಹಿಕ ಹಾಗೂ ಮಾನಸಿಕ ಆರೋಗ್ಯ ಚನ್ನಾಗಿರುತ್ತದೆ.

Advertisement

ಮನಸ್ಸನ್ನು ಶಾಂತವಾಗಿಡುವ ಧ್ಯಾನ, ಯೋಗವನ್ನು ತಪ್ಪದೇ ಮಾಡಿ. ತಕ್ಷಣವೇ ನಿಮ್ಮ ಮನಸ್ಸು ಹಾಗೂ ದೇಹದಲ್ಲಿ ಆಗುತ್ತಿರುವ ಬದಲಾವಣೆಗಳು ನಿಮ್ಮ ಅರಿವಿಗೆ ಬಾರದೇ ಇರಬಹುದು. ಆದರೆ, ಬರ್ತಾ ಬರ್ತಾ ಇವು ನಿಮ್ಮಲ್ಲಿ ಉಂಟು ಮಾಡುತ್ತಿರುವ ಪರಿಣಾಮಗಳನ್ನು ಫೀಲ್ ಮಾಡಿ ಕೊಳ್ಳಬಹುದು. ಉಸಿರಾಟದಲ್ಲಿ ಯಾವಾಗ ಬದಲಾವಣೆಯಾಗುತ್ತದೋ, ಆಗ ಇಡೀ ದೇಹ ಹಾಗೂ ಮನಸ್ಸಿನ ಮೇಲೆ ಸದಾ ಧನಾತ್ಮಕ ಪರಿಣಾಮಗಳು ಬೀರುತ್ತವೆ. ಸೋಷಿಯಲ್ ಮೀಡಿಯಾ ಹಾಗೂ ಮೊಬೈಲ್‌ನಲ್ಲಿ ಕಳೆಯುವ ಹತ್ತಿಪ್ಪತ್ತು ನಿಮಿಷಗಳನ್ನು ಒಳ್ಳೇ ಹವ್ಯಾಸಗಳಿಗೆ ಮುಡಿಪಾಗಿಟ್ಟರೆ ನಿದ್ರೆ ಸಮಸ್ಯೆ ದೂರ ಆಗುವುದಲ್ಲದೇ, ಮಾನಸಿಕವಾಗಿಯೂ ಗಟ್ಟಿಯಾಗಿರಬಹುದು. ಲೈಫೈಲ್ಲಿ ಏನೇ ಏರಿತವಾದರೂ ನಿಭಾಯಿಸುವ ಶಕ್ತಿಯನ್ನು ನೀವು ಕಲಿತು ಕೊಳ್ಳುತ್ತೀರಿ.

Advertisement

ಡಾ. ಸುಶೋಭಿತ ಎಂ.
ಸಹಾಯಕ ಪ್ರಾಧ್ಯಾಪಕರು, ಶಾಲಾಕ್ಯ ತಂತ್ರ ವಿಭಾಗ
ಎಸ್‌ಡಿಎಂ ಇನ್‌ಸ್ಟಿಟ್ಯೂಟ್ ಆಫ್ ಆಯುರ್ವೇದ ಮತ್ತು ಆಸ್ಪತ್ರೆ ಬೆಂಗಳೂರು

English Summary

All will be having world in hands via mobile phones. Effect that screen time has on mind of a person who spends more time with their mobile phone than talking to people around them is no small thing.