ಮಗುವಿಗೆ ಎದೆಹಾಲುಣಿಸುವಾಗ ತಾಯಿ ಫೋನ್ ಬಳಸುವುದು ಎಷ್ಟು ಅಪಾಯಕಾರಿ? ಮಗುವಿನ ಮೇಲಾಗುವ ಪರಿಣಾಮಗಳೇನು?


ಮಗುವಿಗೆ ಹಾಲುಣಿಸುವುದು ಎಂದರೆ ಅದು ಮಗುವಿನ ಹೊಟ್ಟೆ ತುಂಬಿಸುವ ವಿಧಾನ ಮಾತ್ರ ಅಲ್ಲ, ಇದು ತಾಯಿ ಮತ್ತು ಮಗುವಿನ ನಡುವಿನ ಅತ್ಯಂತ ಸುಂದರ ಮತ್ತು ಮಾಂತ್ರಿಕ ಬಂಧವನ್ನು ರೂಪಿಸುವ ಸಮಯ. ಆದರೆ, ಇಂದಿನ ಡಿಜಿಟಲ್ ಯುಗದಲ್ಲಿ, ಬಾಂಧವ್ಯದ ನಡುವೆ ಹೊಸ ಪಿಡುಗು ವಕ್ಕರಿಸಿದೆ. ಇದನ್ನು ತಜ್ಞರು "ಬ್ರೆಕ್ಸ್ಟಿಂಗ್" ಎಂದು ಕರೆಯುತ್ತಾರೆ. ಬ್ರೆಕ್ಸ್ಟಿಂಗ್‌ ಎಂದರೆ ಸ್ತನ್ಯಪಾನ ಮಾಡುವಾಗ ಫೋನಿನಲ್ಲಿ ಸಂದೇಶ ಕಳುಹಿಸುವುದು ಅಥವಾ ಟೆಕ್ಟ್‌ ಮಾಡುವುದು. ತಾಯಿ, ಸ್ತನ್ಯಪಾನ ಮಾಡಿಸುವಾಗ ತನ್ನ ಮಗುವಿಗೆ ತನ್ನ ಸಂಪೂರ್ಣ ಗಮನವನ್ನು ನೀಡುವ ಬದಲು, ನಿರಂತರವಾಗಿ ಚಾಟ್ ಮಾಡುವಲ್ಲಿ ಅಥವಾ ಸ್ಕ್ರೀನ್‌ ಸ್ಕ್ರೋಲ್ ಮಾಡುವಲ್ಲಿ ನಿರತರಾಗಿದ್ದರೆ, ಅದು ಮಗುವಿನ ಬೆಳವಣಿಗೆಯ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರುತ್ತದೆ.ಇದು ಮಗುವಿನ ಮಾನಸಿಕ ಬೆಳವಣಿಗೆಯ ಮೇಲೂ ಪರಿಣಾಮ ಬೀರುತ್ತದೆ.

ಚಿಕ್ಕ ಮಗುವಿಗೆ ಬರೀ ಹಾಲು ಕುಡಿಸಿದರೆ ಸಾಕಾಗುತ್ತದೆ ಎನ್ನುವುದು ಅನೇಕರ ಭಾವನೆಯಾಗಿರುತ್ತದೆ. ಹಾಗಾಗಿ ಸಾಮಾಜಿಕ ಮಾಧ್ಯಮವನ್ನು ಸ್ಕ್ರೋಲ್ ಮಾಡುವುದರಿಂದ ಅಥವಾ ರೀಲ್‌ಗಳನ್ನು ನೋಡುವುದರಿಂದ ಏನು ಹಾನಿ ಎನ್ನುವ ಪ್ರಶ್ನೆ ಅನೇಕರದ್ದಾಗಿರುತ್ತದೆ. ಆದರೆ, ತಾಯಿ ಮಾಡುವ ಈ ತಪ್ಪು ಮಗುವಿನ ಮೇಲೆ ಶಾಶ್ವತವಾಗಿ ಪರಿಣಾಮ ಬೀರುತ್ತದೆ ಎನ್ನುತ್ತಾರೆ ವೈದ್ಯರು. ಸ್ತ್ರೀರೋಗ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸಕ ಡಾ.ಆಕಾಂಕ್ಷಾ ಶ್ರೀವಾಸ್ತವ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಈ ಬಗೆಗಿನ ಒಂದು ನಿರ್ಣಾಯಕ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಮಗುವಿಗೆ ಹಾಲುಣಿಸುವಾಗ ಮೊಬೈಲ್ ಫೋನ್‌ಗಳಿಂದ ದೂರವಿರುವುದು ಏಕೆ ಮುಖ್ಯ ಎನ್ನುವುದನ್ನು ಅವರು ಈ ವಿಡಿಯೋದಲ್ಲಿ ವಿವರಿಸಿದ್ದಾರೆ.

ಎದೆಹಾಲು ಕೇವಲ ದೈಹಿಕ ಪೋಷಣೆಯಲ್ಲ:

ಡಾ. ಆಕಾಂಕ್ಷಾ ಶ್ರೀವಾಸ್ತವ ಅವರ ಪ್ರಕಾರ, ಎದೆಹಾಲುಣಿಸುವಿಕೆಯು ಕೇವಲ ದೈಹಿಕ ಪೋಷಣೆಯನ್ನು ಒದಗಿಸುವುದಲ್ಲ. ತಾಯಿ ಮತ್ತು ನವಜಾತ ಶಿಶುವಿನ ನಡುವೆ ಬಲವಾದ ಭಾವನಾತ್ಮಕ ಮತ್ತು ಮಾನಸಿಕ ಬಂಧವು ರೂಪುಗೊಳ್ಳುವ ವಿಶೇಷ ಸಮಯ ಇದಾಗಿರುತ್ತದೆ. ತಾಯಿ ತನ್ನ ಮಗುವಿಗೆ ಹಾಲುಣಿಸುತ್ತಿರುವಾಗ ಇಬ್ಬರ ನಡುವೆ ಅಘೋಷಿತ ಸಂವಹನ ಏರ್ಪಡುತ್ತದೆ.

ಸ್ಮಾರ್ಟ್‌ಫೋನ್‌ಗಳು ನಿಮ್ಮ ಮಗುವಿನ ಮೆದುಳಿನ ಬೆಳವಣಿಗೆಗೆ ಹೇಗೆ ಹಾನಿ ಮಾಡುತ್ತವೆ? :
ನಿಮ್ಮ ಮಗುವಿಗೆ ಹಾಲುಣಿಸುವ ಸಮಯದಲ್ಲಿ ನೀವು ಸ್ಕ್ರೀನ್‌ನಲ್ಲಿ ಮುಳುಗಿದ್ದರೆ, ಅದು ನಿಮ್ಮ ಮಗುವಿನ ಮಾನಸಿಕ ಆರೋಗ್ಯ ಮತ್ತು ನಡವಳಿಕೆಯ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಇದು ಹಲವಾರು ಗಂಭೀರ ನರ-ಮಾನಸಿಕ ಮತ್ತು ನಡವಳಿಕೆಯ ಸಮಸ್ಯೆಗಳಿಗೆ ಕಾರಣವಾಗಬಹುದು.

ಕಣ್ಣಿಗೆ ಮೂಗಿನ ಡ್ರಾಪ್ಸ್‌ ಹಾಕಿದ ವೈದ್ಯ, ದೃಷ್ಟಿ ಕಳೆದುಕೊಡ 19 ತಿಂಗಳ ಕಂದಮ್ಮ.. ಪೋಷಕರ ಆಕ್ರಂದನ

ಸಂವಹನ ಮತ್ತು ಸಾಮಾಜಿಕ ಕೌಶಲ್ಯಗಳ ದುರ್ಬಲತೆ:

ಮಗುವಿನ ಆರಂಭಿಕ ಸಾಮಾಜಿಕ ಮತ್ತು ಭಾಷಾ ಬೆಳವಣಿಗೆಯು ತಾಯಿಯೊಂದಿಗೆ ಸಂವಹನ ನಡೆಸುವುದು ಮತ್ತು ಆಕೆಯ ಮುಖಭಾವಗಳನ್ನು ಗಮನಿಸುವುದರಿಂದ ನಡೆಯುತ್ತದೆ. ತಾಯಿಯೊಂದಿಗಿನ ಸಂವಹನ ಮತ್ತು ಕಣ್ಣಿನ ಸಂಪರ್ಕ ಕಡಿಮೆಯಾದಾಗ, ಮಗುವಿನ ಸಾಮಾಜಿಕ ಬೆಳವಣಿಗೆ ಕುಂಠಿತಗೊಳ್ಳಲು ಪ್ರಾರಂಭಿಸುತ್ತದೆ.

ನಡವಳಿಕೆಯಲ್ಲಿ ಆಗುವ ಬದಲಾವಣೆಗಳು:

ಹಾಲುಣಿಸುವಾಗ ತಾಯಿಯ ಸ್ಪರ್ಶ ಮತ್ತು ಪ್ರೀತಿಯ ನೋಟದಿಂದ ವಂಚಿತರಾದ ಶಿಶುಗಳು ನಂತರ ಮಾನಸಿಕ ಕಿರಿಕಿರಿ, ಹಠಮಾರಿತನ ಸೇರಿದಂತೆ ನಡವಳಿಕೆಯ ಸಮಸ್ಯೆಗಳನ್ನು ಎದುರಿಸಬಹುದು.

ಸ್ಮರಣಶಕ್ತಿ ಮತ್ತು ಮಾನಸಿಕ ದೌರ್ಬಲ್ಯ:

ವೈದ್ಯರ ಪ್ರಕಾರ, ತಾಯಿಯ ಗಮನವನ್ನು ಬೇರೆಡೆ ಇರುವುದರಿಂದ ಮಗುವಿನ ನರ-ಮಾನಸಿಕ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ. ಇದು ಮಗುವಿನ ಸ್ಮರಣಶಕ್ತಿ ಮತ್ತು ಏಕಾಗ್ರತೆಯ ಸಾಮರ್ಥ್ಯವನ್ನು ದುರ್ಬಲಗೊಳಿಸುತ್ತದೆ.

22ನೇ ವಯಸ್ಸಿನಲ್ಲಿ ಐದು ಮಕ್ಕಳ ತಾಯಿ, ಮತ್ತೊಂದು ಗರ್ಭದಲ್ಲಿ! ಇನ್ನೊಂದು ಗಂಡು ಮಗು ಬೇಕಂತೆ, ದಂಪತಿ ಆಸೆಗೆ ವೈದ್ಯರೇ ದಂಗು

ಹಾನಿಕಾರಕ ವಿಕಿರಣದ ಅಪಾಯ:

ನವಜಾತ ಶಿಶುವಿನ ದೇಹ ಮತ್ತು ಮೆದುಳು ತುಂಬಾ ಸೂಕ್ಷ್ಮವಾಗಿರುವುದರಿಂದ, ತಾಯಿಯ ಮಡಿಲಿನಲ್ಲಿರುವಾಗ ಮೊಬೈಲ್‌ನಿಂದ ಹೊರಸೂಸುವ ವಿದ್ಯುತ್ಕಾಂತೀಯ ವಿಕಿರಣವು ಅವರ ಬೆಳವಣಿಗೆಗೆ ತುಂಬಾ ಹಾನಿಕಾರಕವಾಗಿರುತ್ತದೆ.

ಎದೆಹಾಲುಣಿಸಲು ಸರಿಯಾದ ಮತ್ತು ಸುರಕ್ಷಿತ ಮಾರ್ಗ ಯಾವುದು?

1. ಡಿಜಿಟಲ್ ಡಿಟಾಕ್ಸ್ ಮಾಡಿ:

ಎದೆಹಾಲುಣಿಸುವಾಗ ನಿಮ್ಮ ಫೋನ್ ಅನ್ನು ನಿಮ್ಮಿಂದ ಕನಿಷ್ಠ 5 ರಿಂದ 6 ಅಡಿ ದೂರದಲ್ಲಿ ಇರಿಸಿ. ಈ ಹೊತ್ತಿನಲ್ಲಿ ನಿಮ್ಮ ಗಮನವು ನಿಮ್ಮ ಮಗುವಿನ ಮೇಲೆ ಮಾತ್ರ ಇರಬೇಕು.

2. ಕಣ್ಣಿನ ಸಂಪರ್ಕ ಮತ್ತು ಪ್ರೀತಿಯ ಸ್ಪರ್ಶ:

ಹಾಲುಣಿಸುವಾಗ, ನಿಮ್ಮ ಮಗುವಿನ ಕಣ್ಣುಗಳಲ್ಲಿ ಕಣ್ಣಿಟ್ಟು ನೋಡಿ. ನಿಧಾನವಾಗಿ ಮಗುವಿನಲ್ಲಿ ಮಾತನಾಡುವುದಕ್ಕೆ ಶುರು ಮಾಡಿ. ಲಾಲಿ ಹಾಡುಗಳನ್ನು ಹಾಡಿಕೊಂಡು ಮಗುವಿನ ತಲೆಯನ್ನು ನಿಧಾನವಾಗಿ ಸವರಿ. ಈ ಸ್ಪರ್ಶವು ನಿಮ್ಮ ಮಗುವಿಗೆ ಭದ್ರತೆಯ ಭಾವವನ್ನು ನೀಡುತ್ತದೆ.

3. ಶಾಂತವಾಗಿರುವ ವಾತಾವರಣವನ್ನು ಆರಿಸಿ:

ಟಿವಿ ಅಥವಾ ಮೊಬೈಲ್ ಶಬ್ದವಿಲ್ಲದ ಶಾಂತ ಮೂಲೆ ಅಥವಾ ಕೋಣೆಯನ್ನು ಮಗುವಿಗೆ ಹಾಲುಣಿಸಲು ಆರಿಸಿ. ನಿಮ್ಮ ಮಗುವಿಗೆ ಯಾವುದೇ ಒತ್ತಡವಿಲ್ಲದೆ ಶಾಂತ, ನಿರಾಳ ಸ್ಥಿತಿಯಲ್ಲಿ ಹಾಲುಣಿಸಿ.

4. ತುರ್ತು ಸಂದರ್ಭಗಳಲ್ಲಿ ಏರ್‌ಪ್ಲೇನ್ ಮೋಡ್:

ನಿಮ್ಮ ಫೋನ್ ಅನ್ನು ಹತ್ತಿರದಲ್ಲಿ ಇಟ್ಟುಕೊಳ್ಳುವುದು ಅತ್ಯಗತ್ಯವಾದರೆ, ಮಗು ವಿಕಿರಣಕ್ಕೆ ಒಡ್ಡಿಕೊಳ್ಳುವುದನ್ನು ಕಡಿಮೆ ಮಾಡಲು ಫೋನ್‌ ಅನ್ನು ಸೈಲೆಂಟ್ ಅಥವಾ ಏರ್‌ಪ್ಲೇನ್ ಮೋಡ್‌ನಲ್ಲಿ ಇರಿಸಿ. ಮಗು ಮಲಗಿರುವಾಗ ಮಾತ್ರ ನಿಮ್ಮ ಫೋನ್ ಬಳಸಿ.

ತಾಯಿಯ ಮಡಿಲು ಮಗುವಿನ ಮೊದಲ ಶಾಲೆ ಮತ್ತು ರಕ್ಷಣಾತ್ಮಕ ಗುರಾಣಿ. ಹೀಗಿರುವಾಗ ಹಾಲುಣಿಸುವ ಈ ಅಮೂಲ್ಯ ಸಮಯವನ್ನು ಸ್ಕ್ರೀನ್‌ ಮೇಲೆ ವ್ಯರ್ಥ ಮಾಡಬೇಡಿ. ಮೊಬೈಲ್ ನೋಟಿಫಿಕೇಶನ್‌ಗಳು ಸ್ವಲ್ಪ ಹೆಚ್ಚು ಸಮಯ ಕಾಯಬಹುದು, ಆದರೆ ನಿಮ್ಮ ಮಗುವಿನ ಮೆದುಳಿನ ಬೆಳವಣಿಗೆಯನ್ನು ಬದಲಾಯಿಸಲಾಗುವುದಿಲ್ಲ.

(ಬರಹ: ರಂಜಿತಾ ಆರ್.ಕೆ.)

English Summary

Breast Feeding: Mother Using Mobile Phone During Breast Feeding Side Effct on Child Brain Developement and Overall Health.