ಟಾಕ್ಸಿಕ್‌ ತಂಡದಲ್ಲಿ ಕನ್ನಡಿಗರ ದಂಡು, ಯಶ್‌ ಅಲ್ಲಿ ಮಿನಿ ಕರ್ನಾಟಕವನ್ನೇ ಕಟ್ಟಿದ್ದಾನೆ: ಯೋಗರಾಜ್‌ ಭಟ್‌


ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾದ 'ತಬಾಹಿ' ಸಾಂಗ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸೌಂಡ್ ಮಾಡುತ್ತಿದೆ. ಈ ಹಾಡಿಗೆ ಅದ್ಭುತವಾಗಿ ಸಾಹಿತ್ಯ ಬರೆದಿರುವ ಯೋಗರಾಜ್ ಭಟ್ ಅವರು, ಹಾಡಿನ ಕಂಪೋಸಿಂಗ್ ಹಾಗೂ ಬರವಣಿಗೆಯ ಸಮಯದಲ್ಲಿ ತಮಗಾದ ವಿಶೇಷ ಅನುಭವವನ್ನು ಇತ್ತೀಚಿನ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ. "ಯಶ್ ಉತ್ತರ ಭಾರತದಲ್ಲಿ ಒಂದು ಮಿನಿ ಕರ್ನಾಟಕವನ್ನೇ ಸೃಷ್ಟಿ ಮಾಡಿದ್ದಾರೆ" ಎಂದು ಭಟ್ರು ಯಶ್‌ ಬಗ್ಗೆ ಮನಸಾರೆ ಕೊಂಡಾಡಿದ್ದಾರೆ.

Advertisement

ಯಶ್ ಹಠ ಇವತ್ತು ನಿನ್ನೆಯದಲ್ಲ

ತಬಾಹಿ ಹಾಡಿನ ಸೃಷ್ಟಿಯ ಬಗ್ಗೆ ಮಾತನಾಡಿದ ಭಟ್ರು, "ನೆನ್ನೆ ಮೊನ್ನೆ ಚಿತ್ರರಂಗಕ್ಕೆ ಬಂದು ಅಂಬೆಗಾಲಿಟ್ಟ ಕನ್ನಡದ ಹುಡುಗ ಯಶ್, ಇವತ್ತು ಈ ಮಟ್ಟಕ್ಕೆ ಬೆಳೆದು ನಿಂತಿರುವುದನ್ನು ನೋಡುವಾಗ ಹೆಮ್ಮೆಯಾಗುತ್ತದೆ. ಯಶ್ ಅವರ ಈ ಯಶಸ್ಸಿನ ಹಿಂದಿರುವ ಹಠ ಇವತ್ತು ಅಥವಾ ನಿನ್ನೆಯದಲ್ಲ, ಅದು ಅವರ ರಕ್ತದಲ್ಲೇ ಇದೆ. ನಾನು 'ತಬಾಹಿ' ಹಾಡನ್ನು ಬರೆಯಲು ಹೋದಾಗ ಅಲ್ಲಿ ಕಂಡ ದೃಶ್ಯ ನನ್ನನ್ನು ರೋಮಾಂಚನಗೊಳಿಸಿತು" ಎಂದಿದ್ದಾರೆ.

Advertisement

ಬೆಂಗಳೂರಿನಿಂದ ಮುದ್ದೆ ಬಂದಿತ್ತು

ಹಾಡು ಬರವಣಿಗೆಯ ಸಂದರ್ಭದಲ್ಲಿ ನಡೆದ ಕುತೂಹಲಕಾರಿ ವಿಚಾರ ರಿವೀಲ್‌ ಮಾಡಿದ ಯೋಗರಾಜ್ ಭಟ್, "ನಾನು ಯಶ್ ಅವರ ಕಚೇರಿಗೆ ಹೋದ ದಿನ ಬೆಂಗಳೂರಿನಿಂದ ಮುದ್ದೆ ಊಟ ಬಂದಿತ್ತು. ನಾನು ಆಶ್ಚರ್ಯಪಟ್ಟು, ಪ್ರತಿದಿನವೂ ಇಲ್ಲಿಗೆ ಮುದ್ದೆ ಬರುತ್ತಾ ಅಂತ ಕೇಳಿದೆ. ಅದಕ್ಕೆ ಅವರು ಇಲ್ಲ, ಬೆಂಗಳೂರಿನಿಂದ ಇಲ್ಲಿಗೆ ಬರುವವರ ಕೈಯಲ್ಲಿ ವಿಶೇಷವಾಗಿ ತರಿಸಿಕೊಂಡಿದ್ದೇವೆ ಎಂದರು. ವಿಶೇಷವೆಂದರೆ ಆ ಮುದ್ದೆಯನ್ನು ಸ್ವತಃ ರಾಧಿಕಾ ಪಂಡಿತ್ ಅವರೇ ಮನೆಯಲ್ಲಿ ಮಾಡಿ ಕಳಿಸಿಕೊಟ್ಟಿದ್ದರಂತೆ ಎಂದು ವಿವರಿಸಿದರು.

ಇಡೀ ಕರ್ನಾಟಕವನ್ನ ಅಲ್ಲಿಗೆ ಶಿಫ್ಟ್ ಮಾಡಿಕೊಂಡಿದ್ದಾರೆ

ಯಶ್ ಅವರ ಕಂಟೆಂಟ್ ಕ್ರಿಯೇಷನ್ ತಂಡ ಮತ್ತು ಆಫೀಸ್‌ನಲ್ಲಿ ಕನ್ನಡಿಗರಿಗೆ ನೀಡುತ್ತಿರುವ ಆದ್ಯತೆಯ ಬಗ್ಗೆ ಭಟ್ರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ಯಶ್ ಆಫೀಸ್‌ನಲ್ಲಿ ಕೆಲಸ ಮಾಡುವ ಬಹುತೇಕ ಹುಡುಗರು ನಮ್ಮ ಕನ್ನಡಿಗರೇ ಆಗಿದ್ದಾರೆ. ಟಾಕ್ಸಿಕ್ ಚಿತ್ರದ ತಾಂತ್ರಿಕ ತಂಡದಲ್ಲೂ ನಮ್ಮ ಮಣ್ಣಿನ ಪ್ರತಿಭೆಗಳಿಗೆ ಅವಕಾಶ ನೀಡಲಾಗಿದೆ. ಇದನ್ನು ನೋಡಿದಾಗ ನನಗೆ ಯಶ್ ಇಡೀ ಕರ್ನಾಟಕವನ್ನೇ ಇಲ್ಲಿಗೆ ಶಿಫ್ಟ್ ಮಾಡಿಕೊಂಡಿದ್ದಾರಾ ಅನಿಸಿತು. ಅಲ್ಲಿ ಇಡೀ ಭಾರತ ಒಂದೆಡೆಯಾದರೆ, ನಾವೆಲ್ಲಾ ಕನ್ನಡಿಗರು ಒಂದು ಎನ್ನುವಂತಹ ಆತ್ಮೀಯ ವಾತಾವರಣವಿತ್ತು ಎಂದು ಯೋಗರಾಜ್ ಭಟ್ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

Advertisement

ಯೋಗರಾಜ್ ಭಟ್ ಅವರ ಈ ಮಾತುಗಳು ಸದ್ಯ ಯಶ್ ಅಭಿಮಾನಿಗಳ ಮನ ಗೆದ್ದಿದ್ದು, ಪರಭಾಷೆಯ ದೊಡ್ಡ ಮಟ್ಟದ ಸಿನಿಮಾಗಳನ್ನು ಮಾಡುವಾಗಲೂ ತನ್ನ ನೆಲದ ತಂತ್ರಜ್ಞರನ್ನು ಮತ್ತು ಕನ್ನಡಿಗರನ್ನು ಜೊತೆಯಲ್ಲೇ ಕರೆದುಕೊಂಡು ಹೋಗುತ್ತಿರುವ ಯಶ್ ಅವರ ಗುಣಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಪ್ರಶಂಸೆ ವ್ಯಕ್ತವಾಗುತ್ತಿದೆ.

English Summary

Lyricist Yogaraj Bhat praised Yash, saying the Toxic team feels like a mini Karnataka with many Kannada talents. He also revealed how Radhika Pandit sent homemade ragi mudde