ಖ್ಯಾತ ನಟಿ ಜೊತೆ ರೇನ್‌ ಡ್ಯಾನ್ಸ್‌ಗೆ ಬೇಡಿಕೆ ಇಟ್ಟ ಶಿವಣ್ಣ: ಪಕ್ಕದಲ್ಲೇ ಇದ್ದ ಗೀತಕ್ಕ ರಿಯಾಕ್ಷನ್‌ ವೈರಲ್


ಸ್ಯಾಂಡಲ್‌ವುಡ್‌ನ ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್ ಅವರ ಹುಟ್ಟುಹಬ್ಬದ ಸಂಭ್ರಮಕ್ಕೆ ಚಿತ್ರರಂಗದಿಂದ ಭರ್ಜರಿ ಗಿಫ್ಟ್ ಸಿಕ್ಕಿದೆ. ಶಿವಣ್ಣ ಅವರ ಬಹುನಿರೀಕ್ಷಿತ 'ಎ ಫಾರ್ ಆನಂದ್' ಚಿತ್ರತಂಡವು ಹುಟ್ಟುಹಬ್ಬದ ವಿಶೇಷವಾಗಿ ಒಂದು ವಿಡಿಯೋ ಹಂಚಿಕೊಂಡಿದೆ. ಆದರೆ ಈ ವಿಡಿಯೋದಲ್ಲಿ ಸಿನಿಮಾ ಅಪ್‌ಡೇಟ್‌ಗಿಂತ ಹೆಚ್ಚಾಗಿ, ಶಿವಣ್ಣ ಹಾಗೂ ಅವರ ಧರ್ಮಪತ್ನಿ ಗೀತಾ ಶಿವರಾಜ್‌ಕುಮಾರ್ ಅವರ ನಡುವೆ ನಡೆದ ಕ್ಯೂಟ್ ಮುನಿಸು ಮತ್ತು ತಮಾಷೆಯ ಸಂಭಾಷಣೆ ಈಗ ಎಲ್ಲೆಡೆ ವೈರಲ್ ಆಗಿದೆ.

Advertisement

ಕಥೆಯಲ್ಲಿ ಚೇಂಜ್‌ ಕೇಳಿದ ಶಿವಣ್ಣ

ನಿರ್ದೇಶಕ ಶ್ರೀನಿ ಅವರು ಗೀತಕ್ಕನ ಎದುರಲ್ಲೇ ಶಿವಣ್ಣ ಸಿನಿಮಾ ಶೂಟಿಂಗ್ ವೇಳೆ ಇಟ್ಟಿದ್ದ ಕೆಲವು ಡಿಮ್ಯಾಂಡ್‌ಗಳನ್ನು ರಿವೀಲ್‌ ಮಾಡುವ ಮೂಲಕ ಶಾಕ್ ನೀಡಿದ್ದಾರೆ. ವಿಡಿಯೋದಲ್ಲಿ ನಿರ್ದೇಶಕ ಶ್ರೀನಿ ಅವರು ಚಿತ್ರದ ಸ್ಕ್ರಿಪ್ಟ್ ಚರ್ಚೆಯ ಸಂದರ್ಭವನ್ನು ನೆನಪಿಸಿಕೊಳ್ಳುತ್ತಾ, ಶಿವಣ್ಣ ಕಥೆಯಲ್ಲಿ ಮಾಡಲು ಹೇಳಿದ ಬದಲಾವಣೆಗಳನ್ನು ಗೀತಕ್ಕನ ಮುಂದೆ ಒಂದೊಂದಾಗಿ ಬಿಚ್ಚಿಟ್ಟಿದ್ದಾರೆ ಶ್ರೀನಿ.

Advertisement

ಮಿಲ್ಕಿ ಬ್ಯೂಟಿ ಜೊತೆ ರೇನ್ ಡ್ಯಾನ್ಸ್

ಈ ಸಿನಿಮಾದಲ್ಲಿ ಗ್ಲಾಮರಸ್ ನಟಿ ತಮನ್ನಾ ಭಾಟಿಯಾ ಅವರ ಜೊತೆ ಒಂದು ಭರ್ಜರಿ ಮಳೆ ಹಾಡು (ರೇನ್ ಡ್ಯಾನ್ಸ್) ಇರಬೇಕು ಎಂದು ಶಿವಣ್ಣ ಪಟ್ಟು ಹಿಡಿದಿದ್ದರಂತೆ. ಇದನ್ನು ಕೇಳುತ್ತಿದ್ದಂತೆ ಪಕ್ಕದಲ್ಲೇ ಇದ್ದ ಗೀತಕ್ಕ ಸೀರಿಯಸ್ ಆಗಿ ಶಿವಣ್ಣನ ಕಡೆ ಲುಕ್‌ ಕೊಟ್ಟಿದ್ದಾರೆ. ಸಾಮಾನ್ಯವಾಗಿ ಎಲ್ಲ ಸಿನಿಮಾಗಳಲ್ಲೂ ಒಬ್ಬರೇ ಹೀರೋಯಿನ್ ಇರುತ್ತಾರೆ, ಆದರೆ ಈ ಚಿತ್ರಕ್ಕೆ ಇಬ್ಬರು ನಟಿಯರು ಬೇಕೇ ಬೇಕು ಎಂದು ಶಿವಣ್ಣ ಡಿಮ್ಯಾಂಡ್ ಮಾಡಿದ್ದರಂತೆ. ಈ ಮಾತು ಕೇಳಿ ಗೀತಕ್ಕನ ಕಣ್ಣುಗಳು ಕೆಂಪಾಗಿವೆ. ಇಷ್ಟಕ್ಕೇ ನಿಲ್ಲದ ಶ್ರೀನಿ, ರವಿಚಂದ್ರನ್ ಅವರ ಕೈಯಿಂದ ಒಂದು ಸ್ಪೆಷಲ್ ಸಾಂಗ್‌ಗೆ ನೃತ್ಯ ನಿರ್ದೇಶನ ಮಾಡಿಸಬೇಕು ಎಂದು ಶಿವಣ್ಣ ಹೇಳಿದ್ದಾಗಿ ಬಾಂಬ್ ಸಿಡಿಸಿದ್ದಾರೆ.

Advertisement

ಗೀತಕ್ಕನ ಸ್ವೀಟ್ ವಾರ್ನಿಂಗ್

ನಿರ್ದೇಶಕ ಶ್ರೀನಿ ಒಂದಾದ ಮೇಲೊಂದರಂತೆ ಸೀಕ್ರೇಟ್‌ಗಳನ್ನ ಗೀತಕ್ಕನ ಮುಂದೆ ಹೇಳುತ್ತಿದ್ದರೆ, ಶಿವಣ್ಣ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ತಿಳಿಯದೆ ಒದ್ದಾಡಿದ್ದಾರೆ. ಅವರ ಮುಖದಲ್ಲಿ ಬೆವರು ಇಳಿಯಲು ಶುರುವಾಗಿತ್ತು. ಇದನ್ನು ಗಮನಿಸಿದ ಗೀತಕ್ಕ ತಕ್ಷಣವೇ ಒಂದು ಟಿಶ್ಯೂ ಪೇಪರ್ ಕೈಗಿಟ್ಟು, "ಮೊದಲು ಮುಖದ ಮೇಲಿರೋ ಬೆವರನ್ನು ಒರೆಸಿಕೊಳ್ಳಿ" ಎಂದು ಕಾಲೆಳೆದಿದ್ದಾರೆ.

ಕೇಕ್ ಕತ್ತರಿಸಲು ಬಂದು ಫಿಟ್ಟಿಂಗ್ ಇಟ್ರಲ್ಲಾ

ಸಿನಿಮಾ ಪ್ರಚಾರದ ಈ ವಿಭಿನ್ನ ಹಾಗೂ ಹಾಸ್ಯಭರಿತ ವಿಡಿಯೋ ಸದ್ಯ ಇಂಟರ್ನೆಟ್‌ನಲ್ಲಿ ಧೂಳೆಬ್ಬಿಸುತ್ತಿದೆ. ದಂಪತಿಗಳ ಈ ಅಪರೂಪದ ಜುಗಲ್‌ಬಂದಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಇದೇ ವಿಡಿಯೋ ಹಂಚಿಕೊಂಡಿರುವ ಶಿವಣ್ಣ, ನಿರ್ದೇಶಕ ಶ್ರೀನಿ ಕಾಲೆಳೆಯಲು ಮರೆತಿಲ್ಲ. "ನನ್ನ ಬರ್ತ್‌ಡೇಗೆ ಬಂದು ಕೇಕ್ ಕಟಿಂಗ್ ಮಾಡಿ ಅಂದರೆ, ನೀವೇನೋ ಇಲ್ಲಿ ದೊಡ್ಡ ಫಿಟ್ಟಿಂಗ್ ಕೆಲಸ ಮಾಡಿದ್ದೀರಾ ಶ್ರೀನಿ! ಆಮೇಲೆ ನೋಡ್ಕೋತೀನಿ ನಿನ್ನ" ಎಂದು ವಾರ್ನಿಂಗ್ ನೀಡಿದ್ದಾರೆ. 'ಎ ಫಾರ್ ಆನಂದ್' ಚಿತ್ರದ ಈ ವಿಡಿಯೋ ಸಖತ್ ಕ್ಯೂಟ್ ಆಗಿ ಮೂಡಿಬಂದಿದ್ದು, ಸಿನಿಮಾ ಮೇಲಿನ ನಿರೀಕ್ಷೆಯನ್ನ ಮತ್ತಷ್ಟು ಹೆಚ್ಚಿಸಿದೆ.

English Summary

A fun birthday video of Shivarajkumar from the A For Anand team has gone viral after director Srini revealed the actor's humorous script requests, including a rain dance with Tamannaah.