ಮುಪ್ಪು ಸಾವಿಲ್ಲದ ಗಂಧರ್ವ ಗಾಯಕಿ..! ಸುಖ, ದುಃಖ, ಪ್ರೀತಿ, ಪ್ರಣಯ ಎಲ್ಲವಕ್ಕೂ ದನಿಯಾಗಿದ್ದ ಜಾನಕಿಯಮ್ಮ


"ಗಜಮುಖನೆ ಗಣಪತಿಯೆ ನಿನಗೆ ವಂದನೆ.."
ನಮಗೆ ಈ ಹಾಡಿನ ದನಿಯಿಂದಲೇ ಬೆಳಗು...
"ರಾಘವೇಂದ್ರ ನೀ ಮೌನವಾದರೆ ನನ್ನ ಗತಿಯೇನು.." ಈ ಆರ್ತನಾದದ ದನಿಯಿಂದಲೇ ನಮಗೆ ‌ರಾಯರ ಮೇಲೆ‌ ಭಕ್ತಿ ಉಕ್ಕಿಸಿತು.

Advertisement

"ಪೂಜಿಸಲೆಂದೇ ಹೂಗಳ ತಂದೆ ದರುಶನ ಕೋರಿ ನಾನಿಂತೆ..."
ಈ ಇನಿದನಿಗೆ ರಾಮನೂ ಮರುಳಾಗಿ ಬಾಗಿಲು ತೆರೆದನೇನೋ ಅನ್ನಿಸುತ್ತಿತ್ತು.

Advertisement

"ಇವಳೇ ವೀಣಾಪಾಣಿ:, ಮಲೆನಾಡಿನ ಈ ಸೊಬಗಿನ ಐಸಿರಿ ಚೆಲುವಿನ ವರ ಶೃಂಗೇರಿ" ಹಾಡು ಕೇಳಿಯೇ ಶೃಂಗೇರಿಯನ್ನು ಕಣ್ಮುಂದೆ ಹಾಡು ಹೋಗುತಿತ್ತು.

'ತಾಯೆ ಬಾರ ಮೊಗವ ತೋರೆ ಕನ್ನಡಿಗರ ಮಾತೆಯೇ'..
ಕನ್ನಡಕ್ಕೆ ಮಾಧುರ್ಯ ಕೊಟ್ಟಿದ್ದೇ ಈ ದನಿ.

'ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತ್ತಿದೆ.."
ಹಬ್ಬದ ಸಂಭ್ರಮಕ್ಕೆ ಕಳೆಕಟ್ಟುತ್ತಿದ್ದದ್ದೇ ಈ ಹಾಡು

'ಯಾವ ಜನ್ಮದ ಮೈತ್ರಿ ಈ ಜನ್ಮದಲಿ ಬಂದು',
'ದೋಣಿ ಸಾಗಲಿ ಮುಂದೆ ಹೋಗಲಿ',
'ಮೂಡಣ ಮನೆಯ ಮುತ್ತಿನ ನೀರಿನ ಎರಕಾವಾ ಹೊಯ್ದ',
'ಜಯ ಗೌರಿ ಜಗದೀಶ್ವರೀ',
'ಆಡೋಣ ಬಾ ಬಾ ಗೋಪಾಲ',
'ನಂಬಿದೆ ನಿನ್ನ ನಾದ ದೇವತೆಯೇ ಅಭಿಮಾನ ತಳೆದ ತಾಯೆ ಭಾರತಿಯೇ..ʼ
ಅಬ್ಬಬ್ಬಾ ಆ ದನಿಯಲ್ಲಿ ಅದೆಂಥಾ ಮಾಂತ್ರಿಕತೆ‌?
ಅದು ಅಂತಿಂಥ ದನಿಯಲ್ಲ,

Advertisement

ಸಾಕ್ಷಾತ್ ಸರಸ್ವತಿಯೇ ಜಾನಕಿ ಅಮ್ಮನ ನಾಲಗೆ ಮೇಲೆ ನಲಿದಾಡಿ, ಹಾಡಾಗಿ ಎಲ್ಲರ ಕಿವಿಯಲ್ಲಿ ಹರಿದು ಮನಸ್ಸು, ಹೃದಯವನ್ನು ತುಂಬಿಸಿ ತನ್ಮಯಗೊಳಿಸಿಬಿಡುತ್ತಿದ್ದಳು.

S Janaki Passes Away: ತಮ್ಮಿಚ್ಛೆಯಂತೆ ಕನ್ನಡ ನಾಡಲ್ಲೇ ಕೊನೆಯುಸಿರೆಳೆದ ಗಾನಕೋಗಿಲೆ ಎಸ್‌.ಜಾನಕಿ

ನಮ್ಮೆಲ್ಲರ ಬಾಲ್ಯವನ್ನು, ಯೌವ್ವನವನ್ನು, ಸಂಸಾರ, ಮಕ್ಕಳು, ದೇವರು, ಒಂಟಿತನ, ದುಃಖ, ಸುಖ, ಸಂತೋಷಕ್ಕೂ ಜಾನಕಿಯಮ್ಮನೇ ನಮ್ಮೆಲ್ಲರ ಪ್ರತಿನಿಧಿ. ಜಾನಕಿ ಹಾಡುಗಳನ್ನು ಗುನುಗಿಸದೇ ದಿನ ಕಳೆದ ಹೆಣ್ಮಕ್ಕಳು ಇಲ್ಲವೇ ಇಲ್ಲ.

ತೆರೆ ಮೇಲೆ ಯಾವುದೇ ಹೀರೋಯಿನ್‌ ಇರಲಿ, ಆಕೆಯದ್ದು ಜಾನಕಿಯಮ್ಮನದ್ದೇ ಕಂಠ. ಹಾಡು ಕೇಳಿದ್ದಾಗೆಲ್ಲ ನಟಿಯರ ಮುಖ ಕಣ್ಮುಂದೆ ಬಂದಿದ್ದಕ್ಕಿಂತ, ಜಾನಕಿಯ ದನಿಯೇ ಮನಸ್ಸನ್ನು ಆಹ್ಲಾದಗೊಳಿಸುತ್ತಿತ್ತು.

Advertisement

ಪ್ರೇಮಗೀತೆಗೆ ಆ ದನಿ ಪ್ರೇಮವನ್ನೇ ಎರಕ ಹೊಯ್ದು, ಹೃದಯ ಅರಳಿಸಿ ಪ್ರೇಮಿಗಳ ಪಾಲಿಗೆ ರಸಗಂಗೆಯಾಗಿ ತನುಮನಗಳಲ್ಲಿ ಪ್ರೀತಿ ತುಂಬಿಸಿಬಿಟ್ಟಿದ್ದರು ಜಾನಕಿ.

'ಗಗನವು ಎಲ್ಲೋ ಭೂಮಿಯು ಎಲ್ಲೋ',
'ಪಂಚಮ ವೇದ ಪ್ರೇಮದ ನಾದ',
'ಅರಳಿದೆ ಅರಳಿದೆ ಮುದುಡಿದ ತಾವರೆ ಅರಳಿದೆ',
'ಒಲವಿನ ಗೆಳೆಯನೆ ನಿನಗೆ ಕೈ ಮುಗಿವೆ',
'ಬರೆದೆ ನೀನು ನಿನ್ನ ಹೆಸರ ನನ್ನ ಬಾಳ ಪುಟದಲಿ',
'ನಾ ಮೆಚ್ಚಿದ ಹುಡುಗನಿಗೆ ಕಾಣಿಕೆ ತಂದಿರುವೆ',
"ನಗುವಾ ನಯನಾ ಮಧುರ ಮೌನ.."
ಹೆಣ್ಣಿನ ಸಂಕಟವನ್ನು ಕರುಳಿನಿಂದ ಹೊತ್ತು ಹಾಡಾಗಿಸಿದವರು ಜಾನಕಿ.

ಮೂಕ ಹಕ್ಕಿಯು ಹಾಡುತ್ತಿದೆ..
ಕಂಗಳು ತುಂಬಿರಲು
ನೀ ನಡೆವ ಹಾದಿಯಲ್ಲಿ ನಗೆ ಹೂವು ಬಾಡದಿರಲಿ
ದೇವರ ಆಟ ಬಲ್ಲವರಾರು..ಹಾಡಿನ ಜತೆ ಕಣ್ಣೀರೂ ರಾಗವಾಗಿ ಹೊರಹೊಮ್ಮುತ್ತಿದೆ ಅನ್ನಿಸದೇ ಇರದು.

Advertisement

ಡ್ಯುಯೆಟ್‌ ಸಾಂಗ್‌ನಲ್ಲಿ ಎಸ್‌ಪಿ. ಬಾಲಸುಬ್ರಹ್ಮಣ್ಯಂ ಇರಲಿ, ಯೇಸುದಾಸ್‌, ಪಿಬಿ ಶ್ರೀನಿವಾಸ್‌, ಡಾ. ರಾಜ್‌ ಕುಮಾರ್‌ ಎಲ್ಲರಿಗೂ ಜತೆಯಾಗಿ ಹಾಡಿ ಗೆದ್ದವರು ಜಾನಕಿ.

ನಾನೇ ಭಾಗ್ಯವತಿ, ಇಂದು ನಾನೇ ಪುಣ್ಯವತಿ ಅಂತ ಡಾ. ರಾಜ್‌ ಜತೆ ಜಾನಕಿ ಹಾಡ್ತಿದ್ದರೆ, ಅದು ಭಕ್ತಿಗೀತೆಯೋ, ಪ್ರೇಮಗೀತೆಯೋ ಅರಿಯದಷ್ಟು ಸುಮಧುರ ಗೀತೆ.
ಜಾನಕಿಯವರದ್ದು ಜೇನಿಗೆ ಅದ್ದಿ ತೆಗೆದಂತಹ ದನಿ.

ಕ್ಯಾಬರೆ, ಡಿಸ್ಕೋ ಹಾಡಿಗೂ ತಮ್ಮ ಮಾದಕದನಿಯಿಂದ ಕಿಕ್‌ ಕೊಟ್ಟವರು ಜಾನಕಿ.
ನಿಜ ಹೇಳುವೆನು ಅಮ್ಮ ನಿನ್ನ ಕಂಡರೆ ಪ್ರೀತಿ.. ಎಂಬ ಗೀತೆಯನ್ನು ಮಗುವೇ ಹಾಡಿದೆ ಎಂದು ನಂಬಿಕೊಂಡಿದ್ದವರು ಹಲವರು. ಅದು ಜಾನಕಿ ಕಂಠದ ಮ್ಯಾಜಿಕ್‌.

Advertisement
ಗಾನಕೋಗಿಲೆ ಎಸ್ ಜಾನಕಿ ನಿಧನ: ಸಿಎಂ ಡಿಕೆ ಶಿವಕುಮಾರ್‌ ಸೇರಿ ಗಣ್ಯರ ತೀವ್ರ ಸಂತಾಪ

ತಮಿಳು, ತೆಲುಗಿನಲ್ಲಿ ಜಾನಕಿ ಹಾಡದೇ ಸಿನಿಮಾವೇ ಇಲ್ಲ. ಜಾನಕಿ ಅಂದ್ರೆ ದಕ್ಷಿಣ ಭಾರತದ ಎಲ್ಲ ಖ್ಯಾತ ಸಂಗೀತ ನಿರ್ದೇಶಕರಿಗೂ ಅಚ್ಚುಮೆಚ್ಚು.

ತಮಿಳು, ತೆಲುಗು, ಕನ್ನಡ, ಮಲಯಾಳಂ, ಒಡಿಯಾ, ಹಿಂದಿ, ಸಿಂಹಳ, ತುಳು, ಬಡಗ, ಬಂಗಾಳಿ, ಉರ್ದು, ಪಂಜಾಬಿ, ಕೊಂಕಣಿ, ಮರಾಠಿ, ಸಿಂಧಿ ಮುಂತಾದ 17ಕ್ಕೂ ಹೆಚ್ಚಿನ ಭಾರತೀಯ ಭಾಷೆಗಳಲ್ಲಿ 48,000ಕ್ಕೂ ಹೆಚ್ಚಿನ ಹಾಡುಗಳನ್ನು ಹಾಡಿ ಮನೆಮಾತಾದವರು.

ಕ್ಯಾಸೆಟ್‌ ಯುಗದಿಂದ, ಪೆನ್‌ಡ್ರೈವ್‌, ಸಿ.ಡಿ ಕಾಲದಲ್ಲೂ ಎಸ್.‌ ಜಾನಕಿ ಎಲ್ಲರ ಮನೆಮನಗಳಲ್ಲಿ, ಕಾರಿನಲ್ಲಿ ಈಗಲೂ ಜಾನಕಿ ದನಿಗೆ ಪರ್ಮನೆಂಟ್‌ ಜಾಗವಿದೆ.

ನಾಲ್ಕು ಬಾರಿ ಅತ್ಯುತ್ತಮ ಹಿನ್ನೆಲೆಗಾಯಕಿ ರಾಷ್ಟ್ರ ಪ್ರಶಸ್ತಿ ಪಡೆದಿರುವ ಜಾನಕಿ, ವಿವಿಧ ರಾಜ್ಯಗಳಿಂದ 28ಕ್ಕೂ ಹೆಚ್ಚಿನ ರಾಜ್ಯ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡವರು.

ಆದರೆ, ದಕ್ಷಿಣ ಭಾರತದವರ ಮೇಲೆ ಸದಾ ಅಸೂಯೆ ಕಾರುವ ಉತ್ತರದವರಿಗೆ ಎಸ್.‌ ಜಾನಕಿ ವೇದ್ಯವಾಗಲಿಲ್ಲ. ಅದೇ ಕಾರಣಕ್ಕೆ ಜಾನಕಿಯವರಿಗೆ ಸಲ್ಲಬೇಕಾದ ಪದ್ಮಪ್ರಶಸ್ತಿಯೂ ತಡವಾಯ್ತು, ಅದೇ ಕಾರಣಕ್ಕೆ ಪದ್ಮಪ್ರಶಸ್ತಿಯನ್ನೇ ತಿರಸ್ಕರಿಸಿಬಿಟ್ಟರು.

ಹೇಮಾವತಿ ಚಿತ್ರಕ್ಕೆ ಜಾನಕಿ ಹಾಡಿದ "ಶಿವ ಶಿವ ಎನ್ನದ ನಾಲಿಗೆ ಏಕೆ..?" ಅನ್ನೋ ಗೀತೆ ಇಡೀ ಭಾರತದ ಸಂಗೀತಲೋಕದಲ್ಲೀ ಅತ್ಯಂತ ತ್ರಾಸದಾಯಕ ಹಾಡು ಎನ್ನಿಸಿಕೊಂಡಿತ್ತು.
ಕನ್ನಡ ಸಿನಿಮಾ ಲೋಕವನ್ನು ತನ್ನ ಜೇನುಕಂಠದಿಂದಲೇ ಶ್ರೀಮಂತಗೊಳಿಸಿದ ಎಸ್.ಜಾನಕಿ, ಗಾಯನಲೋಕದಿಂದ ಮರೆಯಾಗಿದ್ದಾರೆ.

ಸಾವು ನಿನಗೆಲ್ಲಿಯದು ಜಾನಕಮ್ಮ. ಸಾವಿಲ್ಲದ ಕೇಡಿಲ್ಲದ ಮಧುರ ಕಂಠ ನಿಮ್ಮದು. ನಿಮ್ಮ ಗಾಯನ ಸುಧೆಗೆ ಸಾವಿಲ್ಲ. ನೀವು ಹಾಡಿದ ಹಾಡುಗಳೇ ಇಂದು, ಎಂದೆಂದೂ ತನುಮನಗಳಲ್ಲಿ ಗುನುಗುನಿಸುತ್ತಲೇ ಇರುತ್ತವೆ..!!

ಬರಹ: ಶೋಭಾಮಳವಳ್ಳಿ

English Summary

Remembering legendary playback singer S. Janaki, her magical voice, 48,000+ songs across 17 languages, National Awards, and her unforgettable contribution to Indian cinema.