Paraak Teaser: 'ಪರಾಕ್‌' ಟೀಸರ್‌ನಲ್ಲಿ ಶ್ರೀಮುರಳಿ ಅಬ್ಬರ: ಉಗ್ರಂನ 'ಅಗಸ್ತ್ಯ' ಮತ್ತೆ ಬಂದ ಎಂದ ಫ್ಯಾನ್ಸ್‌


ಕನ್ನಡ ಚಿತ್ರರಂಗದ 'ರೋರಿಂಗ್ ಸ್ಟಾರ್' ಶ್ರೀಮುರಳಿ ಅಭಿನಯದ 'ಪರಾಕ್' (Paraak) ಚಿತ್ರದ ಟೀಸರ್ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿದೆ. ಚಿತ್ರದ ಟೀಸರ್ ನೋಡಿದ ಸಿನಿರಸಿಕರು ಮತ್ತು ಶ್ರೀಮುರಳಿ ಅಭಿಮಾನಿಗಳು ಸದ್ಯ ಫುಲ್ ಜೋಶ್‌ನಲ್ಲಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರದ ಮೇಕಿಂಗ್ ಹಾಗೂ ನಟನ ರಗಡ್ ಲುಕ್ ಬಗ್ಗೆ ಚರ್ಚೆಗಳು ಶುರುವಾಗಿವೆ. ನಿರ್ದೇಶಕ ಪ್ರಶಾಂತ್ ನೀಲ್ ಸಾರಥ್ಯದಲ್ಲಿ ಮೂಡಿಬಂದಿದ್ದ ಸ್ಯಾಂಡಲ್‌ವುಡ್‌ನ ಎವರ್‌ಗ್ರೀನ್ ಆಕ್ಷನ್ ಸಿನಿಮಾ 'ಉಗ್ರಂ' ಚಿತ್ರದ 'ಅಗಸ್ತ್ಯ'ನ ಪಾತ್ರವನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಈಗ 'ಪರಾಕ್' ಟೀಸರ್ ನೋಡಿದ ಪ್ರೇಕ್ಷಕರಿಗೆ ಮತ್ತೆ ಅದೇ ಉಗ್ರಂ ಶೇಡ್‌ನ ಶ್ರೀಮುರಳಿ ಕಣ್ಣೆದುರು ಬಂದಿದ್ದಾರೆ.

Advertisement

ಖಡಕ್ ಫೈಟ್ ಸೀನ್‌

ಟೀಸರ್‌ನ ಉದ್ದಕ್ಕೂ ಕಣ್ಣು ಮಿಟುಕಿಸದಂತೆ ನೋಡುವ ಭರ್ಜರಿ ಆಕ್ಷನ್ ಸೀಕ್ವೆನ್ಸ್‌ಗಳಿವೆ. ಶ್ರೀಮುರಳಿ ಅವರು ಎಂದಿನಂತೆ ತಮ್ಮ ಸಿಗ್ನೇಚರ್ ಶೈಲಿಯಲ್ಲಿ ವಿಲನ್‌ಗಳನ್ನು ಚಚ್ಚಿ ಧೂಳಿಪಟ ಮಾಡುವ ದೃಶ್ಯಗಳು ಮಾಸ್ ಪ್ರೇಕ್ಷಕರಿಗೆ ಹಬ್ಬದೂಟ ಬಡಿಸಿದೆ. ಕತ್ತಿ ಹಿಡಿದು, ರಕ್ತಸಿಕ್ತ ಮುಖದೊಂದಿಗೆ ಅಬ್ಬರಿಸಿರುವ ರೋರಿಂಗ್ ಸ್ಟಾರ್ ಅವರ ಕಣ್ಣಿನಲ್ಲೇ ಒಂದು ರೀತಿಯ ಕ್ರೌರ್ಯ ಕಾಣಿಸುತ್ತಿದೆ. ಬ್ಯಾಕ್‌ಗ್ರೌಂಡ್ ಮ್ಯೂಸಿಕ್ ಕೂಡ ಟೀಸರ್‌ನ ತೂಕವನ್ನು ಮತ್ತಷ್ಟು ಹೆಚ್ಚಿಸಿದೆ.

Advertisement

"ಅಗಸ್ತ್ಯ ಮತ್ತೆ ಬಂದ..." ಎಂದ ಅಭಿಮಾನಿಗಳು

ಟೀಸರ್ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಸಾವಿರಾರು ಕಾಮೆಂಟ್‌ಗಳು ಹರಿದುಬಂದಿದ್ದು, ಶ್ರೀಮುರಳಿ ಕೆರಿಯರ್‌ನಲ್ಲಿ ಇದು ಮತ್ತೊಂದು ಮೈಲಿಗಲ್ಲು ಸಿನಿಮಾ ಆಗಲಿದೆ ಎಂದು ಫ್ಯಾನ್ಸ್ ಭವಿಷ್ಯ ನುಡಿಯುತ್ತಿದ್ದಾರೆ. ಸ್ಯಾಂಡಲ್‌ವುಡ್‌ನ ಅಸಲಿ ಗ್ಯಾಂಗ್‌ಸ್ಟರ್ ಅಗಸ್ತ್ಯ ಮತ್ತೆ ಮರಳಿ ಬಂದಿದ್ದಾನೆ. ಇದು ಮತ್ತೊಂದು ಉಗ್ರಂ ಸಿನಿಮಾ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಅಭಿಮಾನಿಗಳು ಕಾಮೆಂಟ್‌ ಮಾಡುತ್ತಿದ್ದಾರೆ. ಶ್ರೀಮುರಳಿ ಅವರ ಖಡಕ್ ಕಂಬ್ಯಾಕ್ ನೋಡಲು ಚಿತ್ರಮಂದಿರಕ್ಕೆ ಬರಲು ಕಾಯುತ್ತಿದ್ದೇವೆ ಎಂದು ಆಸೆ ಬಿಚ್ಚಿಟ್ಟಿದ್ದಾರೆ.

ಅಭಿಮಾನಿಗಳು ಈ ಟೀಸರ್‌ನಲ್ಲಿರುವ ಮಾಸ್ ಮತ್ತು ರಗಡ್ ಲುಕ್‌ಗೆ ಸಂಪೂರ್ಣವಾಗಿ ಫಿದಾ ಆಗಿದ್ದಾರೆ. ಶ್ರೀಮುರಳಿ ಅವರ ರಾ ಅವತಾರವನ್ನು ನೋಡಿದ ಪ್ರೇಕ್ಷಕರಿಗೆ ಹಾಲಿವುಡ್‌ನ ಪ್ರಸಿದ್ಧ ಆಕ್ಷನ್ ಸರಣಿ 'ದಿ ಪನಿಷರ್' ನೆನಪಾಗುತ್ತಿದ್ದು, ಟೀಸರ್ ಅದ್ಭುತವಾದ ವೈಬ್ಸ್ ನೀಡುತ್ತಿದೆ ಎಂದಿದ್ದಾರೆ. ಕೆಲವರು ಈ ಲುಕ್ ನೋಡಿ "ಇದೇ ನಮಗೆ ಬೇಕಾಗಿದ್ದು" ಎಂದು ಸಂಭ್ರಮಿಸುತ್ತಾ, ಶ್ರೀಮುರಳಿ ಅವರ ಕೆರಿಯರ್ ಬೆಸ್ಟ್ ಸಿನಿಮಾ 'ಉಗ್ರಂ' ಚಿತ್ರದ ಅಗಸ್ತ್ಯನ ಪಾತ್ರವೇ ಮರಳಿ ಬಂದಂತೆ ಭಾಸವಾಗುತ್ತಿದೆ ಎಂದಿದ್ದಾರೆ.

Advertisement

ಸೋಷಿಯಲ್ ಮೀಡಿಯಾದಲ್ಲಿ ಕೇಳಿಬರುವ ನೆಗೆಟಿವ್ ಮಾತುಗಳು ಅಥವಾ ಟ್ರೋಲ್‌ಗಳಿಗೆ ಕಿವಿಗೊಡಬೇಡಿ ಎಂದು ಶ್ರೀಮುರಳಿಗೆ ಧೈರ್ಯ ತುಂಬಿರುವ ಫ್ಯಾನ್ಸ್, ಟೀಸರ್‌ನಲ್ಲಿ ಕಾಣಿಸಿರುವ ಇದೇ ಅದ್ಭುತ ಕ್ವಾಲಿಟಿಯನ್ನು ಇಡೀ ಸಿನಿಮಾದಲ್ಲೂ ಕಾಯ್ದುಕೊಳ್ಳಿ ಎಂದು ವಿನಂತಿಸಿದ್ದಾರೆ. ಚಿತ್ರದ ಕಥೆಯೂ ಕೂಡ ಆಕ್ಷನ್‌ಗೆ ಪೂರಕವಾಗಿ ಭರ್ಜರಿಯಾಗಿ ಮೂಡಿಬರಲಿ ಎಂಬ ಆಶಯ ವ್ಯಕ್ತಪಡಿಸಿದ್ದಾರೆ. ಈ ಸಿನಿಮಾ ಎಲ್ಲೆಡೆ ತಲುಪಲು ಅರ್ಹವಾಗಿದ್ದು, ಚಿತ್ರತಂಡದವರು ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡಬೇಕೆಂದು ಕಿವಿಮಾತು ಹೇಳಿದ್ದಾರೆ.

ವರ್ಷಕ್ಕೆ ಎರಡು ಸಿನಿಮಾ ಮಾಡಿ ಪ್ಲೀಸ್‌

ಟೀಸರ್ ನೋಡಿದ ಮೇಲೆ ಕುತೂಹಲ ತಡೆಯಲು ಸಾಧ್ಯವಾಗುತ್ತಿಲ್ಲ, ಆದ್ದರಿಂದ ಚಿತ್ರದ ಬಿಡುಗಡೆಯನ್ನು ತಡ ಮಾಡದೆ ಆದಷ್ಟು ಬೇಗ ರಿಲೀಸ್ ಮಾಡಿ ಎಂದು ಡಿಮ್ಯಾಂಡ್ ಮಾಡುತ್ತಿದ್ದಾರೆ. ಕನ್ನಡ ಚಿತ್ರರಂಗದಿಂದ ಕೊನೆಗೂ ಒಂದು ಅತ್ಯುತ್ತಮ ಕಂಟೆಂಟ್ ಹೊರಬರುತ್ತಿದೆ ಎಂದು ಬೆನ್ನುತಟ್ಟಿರುವ ಅಭಿಮಾನಿಗಳು, ಇನ್ಮುಂದೆ ಶ್ರೀಮುರಳಿ ಅವರು ವರ್ಷಕ್ಕೆ ಕನಿಷ್ಠ ಎರಡು ಸಿನಿಮಾಗಳನ್ನಾದರೂ ಮಾಡಬೇಕು ಎಂದು ತಮ್ಮ ಆಸೆ ವ್ಯಕ್ತಪಡಿಸಿದ್ದಾರೆ. 'ಪರಾಕ್' ಚಿತ್ರದ ಈ ಸಣ್ಣ ಝಲಕ್ ಸ್ಯಾಂಡಲ್‌ವುಡ್‌ನಲ್ಲಿ ದೊಡ್ಡ ಮಟ್ಟದ ಹೈಪ್ ಕ್ರಿಯೇಟ್ ಮಾಡಿದ್ದು, ಮುಂದಿನ ದಿನಗಳಲ್ಲಿ ಚಿತ್ರತಂಡ ಬಿಡುಗಡೆ ಮಾಡಲಿರುವ ಟ್ರೈಲರ್ ಮೇಲಿನ ನಿರೀಕ್ಷೆಯನ್ನ ದುಪ್ಪಟ್ಟು ಮಾಡಿದೆ.

Advertisement

English Summary

Srimurali Paraak teaser has taken social media by storm, with fans comparing his intense action avatar to the iconic Agastya from Ugramm.