ಸಿನಿಮಾ ಸೋತಿದ್ದಕ್ಕೆ ಮೈತುಂಬಾ ಸಾಲ, ಖ್ಯಾತ ನಟನಿಗೆ ಹಳೇ ಕೇಸ್‌ನಲ್ಲಿ 3 ತಿಂಗಳ ಜೈಲು ಶಿಕ್ಷೆ


ಬಾಲಿವುಡ್‌ನ ಖ್ಯಾತ ಹಾಸ್ಯನಟ ರಾಜ್‌ಪಾಲ್ ಯಾದವ್ ಅವರ ಕಾನೂನು ಸಂಕಷ್ಟ ಮತ್ತಷ್ಟು ಹೆಚ್ಚಾಗಿದೆ. ಹಲವು ವರ್ಷಗಳಿಂದ ನಡೆಯುತ್ತಿದ್ದ ಕೋಟ್ಯಂತರ ರೂಪಾಯಿ ಮೊತ್ತದ ಚೆಕ್ ಬೌನ್ಸ್ ಪ್ರಕರಣದಲ್ಲಿ ನಟನ ಅಪರಾಧವನ್ನು ದೆಹಲಿ ಹೈಕೋರ್ಟ್ ಎತ್ತಿಹಿಡಿದಿದೆ. ಅಲ್ಲದೆ ಅವರಿಗೆ 3 ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮಾ ಅವರಿದ್ದ ಏಕಸದಸ್ಯ ಪೀಠವು ಈ ಮಹತ್ವದ ತೀರ್ಪು ಪ್ರಕಟಿಸಿದೆ.

Advertisement

ಇದರೊಂದಿಗೆ ದೂರುದಾರರಿಗೆ ದಾಖಲಾಗಿರುವ ಒಟ್ಟು 7 ದೂರುಗಳ ಪೈಕಿ, ಪ್ರತಿ ದೂರಿಗೂ ತಲಾ 1 ಕೋಟಿ ರೂಪಾಯಿಗಳಿಗಿಂತ ಹೆಚ್ಚಿನ ಹಣ ಪಾವತಿಸುವಂತೆ ರಾಜ್‌ಪಾಲ್ ಯಾದವ್ ಅವರಿಗೆ ಕೋರ್ಟ್ ಖಡಕ್ ನಿರ್ದೇಶನ ನೀಡಿದೆ. ಇದರೊಂದಿಗೆ ನಟ ರಾಜ್‌ಪಾಲ್ ಯಾದವ್ ಅವರಿಗೆ ಸಣ್ಣದೊಂದು ವಿನಾಯಿತಿಯನ್ನೂ ನ್ಯಾಯಾಲಯ ನೀಡಿದೆ. ನಟ ಈಗಾಗಲೇ ಪಾವತಿಸಿರುವ ಸುಮಾರು 2 ಕೋಟಿ ರೂಪಾಯಿ ಹಣವನ್ನು ಅಂತಿಮ ಬಾಕಿ ಮೊತ್ತದಲ್ಲಿ ಹೊಂದಾಣಿಕೆ ಮಾಡಲಾಗುವುದು ಎಂದು ಜಸ್ಟಿಸ್ ಸ್ವರ್ಣ ಕಾಂತ ಶರ್ಮಾ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಈ ತೀರ್ಪಿನ ವಿರುದ್ಧ ಹಿರಿಯ ಅಪೀಲು ನ್ಯಾಯಾಲಯದ ಮೆಟ್ಟಿಲೇರಲು ನಟನಿಗೆ 2 ತಿಂಗಳ ಕಾಲಾವಕಾಶ ನೀಡಲಾಗಿದೆ.

Advertisement

ಗಾನಕೋಗಿಲೆ ಎಸ್ ಜಾನಕಿ ನಿಧನ: ಸಿಎಂ ಡಿಕೆ ಶಿವಕುಮಾರ್‌ ಸೇರಿ ಗಣ್ಯರ ತೀವ್ರ ಸಂತಾಪ

ಏನಿದು ಪ್ರಕರಣ?

ಸಿನಿಮಾ ನಿರ್ಮಾಣಕ್ಕಾಗಿ ರಾಜ್‌ಪಾಲ್ ಯಾದವ್ ಹಾಗೂ ಅವರ ಪತ್ನಿ ದೊಡ್ಡ ಮೊತ್ತದ ಹಣವನ್ನು ಸಾಲವಾಗಿ ಪಡೆದಿದ್ದರು. ಆದರೆ ಆ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭಾರಿ ಸೋಲು ಕಂಡಿದ್ದರಿಂದ ಯಾದವ್ ಅವರಿಗೆ ಭಾರಿ ಆರ್ಥಿಕ ನಷ್ಟ ಉಂಟಾಗಿತ್ತು. ಹಣ ಮರುಪಾವತಿಗಾಗಿ ಅವರು ನೀಡಿದ್ದ ಚೆಕ್‌ ಬ್ಯಾಂಕ್‌ನಲ್ಲಿ ಹಣವಿಲ್ಲದೆ ಬೌನ್ಸ್ ಆಗಿದ್ದವು. ಈ ಪ್ರಕರಣದಲ್ಲಿ 2018ರ ಏಪ್ರಿಲ್‌ನಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ನಟನಿಗೆ 6 ತಿಂಗಳ ಜೈಲು ಶಿಕ್ಷೆ ವಿಧಿಸಿತ್ತು.

ಇದನ್ನು ಪ್ರಶ್ನಿಸಿ ಯಾದವ್ ದಂಪತಿ ಸೆಷನ್ಸ್ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ 2019ರಲ್ಲಿ ಸೆಷನ್ಸ್ ನ್ಯಾಯಾಲಯದಲ್ಲಿ ಕೂಡ ಹಿನ್ನಡೆಯಾಗಿತ್ತು. ಈ ನಿರ್ಧಾರ ಪ್ರಶ್ನಿಸಿ ರಾಜ್‌ಪಾಲ್ ಯಾದವ್ ಹೈಕೋರ್ಟ್‌ನಲ್ಲಿ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದರು. ಕಳೆದ 2024ರಲ್ಲಿ ಹೈಕೋರ್ಟ್, ದೂರುದಾರರೊಂದಿಗೆ ಮಾತುಕತೆ ನಡೆಸಿ ಸಂಧಾನದ ಮೂಲಕ ಮರುಪಾವತಿ ಮಾಡಿಕೊಳ್ಳುವ ಷರತ್ತಿನ ಮೇಲೆ ರಾಜ್‌ಪಾಲ್ ಅವರ ಶಿಕ್ಷೆಯನ್ನ ತಾತ್ಕಾಲಿಕವಾಗಿ ಅಮಾನತುಗೊಳಿಸಿತ್ತು. ಆದರೆ ಕೋರ್ಟ್‌ಗೆ ನೀಡಿದ್ದ ಭರವಸೆಯಂತೆ ಹಣ ಪಾವತಿಸಲು ನಟ ವಿಫಲರಾಗಿದ್ದರು.

Advertisement

ಮಾತು ತಪ್ಪಿದ್ದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯವು ಫೆಬ್ರವರಿ 2ರಂದು ತಕ್ಷಣವೇ ಶರಣಾಗುವಂತೆ ಸೂಚಿಸಿತ್ತು. ಅದರಂತೆ ಫೆಬ್ರವರಿ 4ರಂದು ಅವರು ಜೈಲು ಸೇರಿದ್ದರು. ತದನಂತರ ಫೆಬ್ರವರಿ 16ರಂದು ದೂರುದಾರರ ಬ್ಯಾಂಕ್ ಖಾತೆಗೆ 1.5 ಕೋಟಿ ರೂಪಾಯಿ ಜಮೆ ಮಾಡಿದ ಬಳಿಕ ಹೈಕೋರ್ಟ್ ಅವರಿಗೆ ಬಿಡುಗಡೆ ಭಾಗ್ಯ ನೀಡಿತ್ತು. ಆದರೆ ಈಗ ಅಂತಿಮ ವಿಚಾರಣೆ ನಡೆಸಿರುವ ನ್ಯಾಯಾಲಯ ನಟನಿಗೆ 3 ತಿಂಗಳ ಜೈಲು ಶಿಕ್ಷೆಯನ್ನು ಅಂತಿಮಗೊಳಿಸಿದೆ. ಅಂತಿಮಗೊಳಿಸಿದೆ. ಈ ಪ್ರಕರಣದ ವಿವರವಾದ ತೀರ್ಪು ಹೊರಬರಬೇಕಿದೆ.

English Summary

Delhi High Court has sentenced Bollywood actor Rajpal Yadav to three months in jail in a long-pending cheque bounce case and directed him to pay over ₹1 crore in each of seven complaints.