ನಿಮ್ಮ ಪ್ರೀತಿ, ಬೆಚ್ಚಗಿನ ಅಪ್ಪುಗೆಗೆ ನಾನು ಸದಾ ಋಣಿ: ತ್ರಿಶಾ ಕೃಷ್ಣನ್ ಪೋಸ್ಟ್ ವೈರಲ್


ದಕ್ಷಿಣ ಭಾರತದ ಖ್ಯಾತ ಗಾಯಕಿ ಎಸ್.ಜಾನಕಿ ಅವರ ಅಗಲಿಕೆಯ ಆಘಾತದಿಂದ ಚಿತ್ರರಂಗ ಇನ್ನೂ ಹೊರಬಂದಿಲ್ಲ. ಈ ನಡುವೆ ನಟಿ ತ್ರಿಶಾ ಕೃಷ್ಣನ್ (Trisha Krishnan) ಅವರು ಜಾನಕಮ್ಮ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದು, ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅತ್ಯಂತ ಭಾವುಕ ಸಾಲುಗಳನ್ನು ಬರೆದುಕೊಂಡಿದ್ದಾರೆ. ತಾವು ನಟಿಸಿದ ಸಿನಿಮಾವೊಂದರಲ್ಲಿ ಜಾನಕಿ ಅಮ್ಮನ ಹೆಸರಿನ ಪಾತ್ರವನ್ನು ಮಾಡಿದ್ದನ್ನು ನೆನೆದಿರುವ ತ್ರಿಶಾ, ಜಾನಕಿ ಅವರೊಂದಿಗೆ ಕ್ಲಿಕ್ಕಿಸಿಕೊಂಡ ಸ್ಪೆಷಲ್‌ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

Advertisement

ನಿಮ್ಮ ಹೆಸರಲ್ಲಿ ನಟಿಸಿದ್ದು ದೊಡ್ಡ ಗೌರವ

ತಮ್ಮ ವೃತ್ತಿಜೀವನದ ಸಾರ್ವಕಾಲಿಕ ಶ್ರೇಷ್ಠ ಪ್ರೇಮಕಾವ್ಯ ಸಿನಿಮಾ '96' ಚಿತ್ರದಲ್ಲಿ ಜಾನಕಮ್ಮನವರ ಹೆಸರಿನ ಪಾತ್ರವನ್ನೇ ಮಾಡಿದ್ದ ತ್ರಿಶಾ, ಹಳೆಯ ಸುಂದರ ನೆನಪುಗಳನ್ನು ನೆನೆದು ಭಾವುಕರಾಗಿದ್ದಾರೆ. ನಟಿ ತ್ರಿಶಾ ಶೂಟಿಂಗ್ ಸೆಟ್‌ನಲ್ಲಿ ಜಾನಕಮ್ಮನವರನ್ನು ಭೇಟಿಯಾಗಿದ್ದ ಫೋಟೋಗಳನ್ನು ಹಂಚಿಕೊಂಡು, "ನನ್ನ ಸಿನಿಮಾ ಕೆರಿಯರ್‌ನಲ್ಲಿ ವಿಶೇಷವಾದ ಚಲನಚಿತ್ರಗಳಲ್ಲಿ ಒಂದಾದ '96' ನಲ್ಲಿ ನಿಮ್ಮ ಹೆಸರನ್ನು ಹೊತ್ತು (ಜಾನಕಿ ಪಾತ್ರ) ನಟಿಸಿದ್ದು ನನ್ನ ಬದುಕಿನ ಅತ್ಯಂತ ಶ್ರೇಷ್ಠ ಗೌರವಗಳಲ್ಲಿ ಒಂದಾಗಿ ಸದಾ ಕಾಲ ಉಳಿಯುತ್ತದೆ. ಆದರೆ, ಅದಕ್ಕಿಂತ ಹೆಚ್ಚಾಗಿ ನಿಮ್ಮನ್ನು ವೈಯಕ್ತಿಕವಾಗಿ ಹತ್ತಿರದಿಂದ ತಿಳಿದುಕೊಂಡಿದ್ದು ಮತ್ತು ನಿಮ್ಮಿಂದ ಅಪಾರವಾದ ಪ್ರೀತಿ, ಆಶೀರ್ವಾದ ಪಡೆದಿದ್ದು ನನ್ನ ಜೀವನದ ಸೌಭಾಗ್ಯ. ಆ ಕ್ಷಣಗಳನ್ನು ನಾನು ಸದಾ ಕಾಲ ನನ್ನ ಹೃದಯದಲ್ಲಿ ಆರಾಧಿಸುತ್ತೇನೆ" ಎಂದು ಬರೆದಿದ್ದಾರೆ.

Advertisement

ಜಾನಕಮ್ಮ ಅವರ ಮುಗ್ಧತೆ ಮತ್ತು ಸರಳತೆಯನ್ನು ನೆನಪಿಸಿಕೊಂಡ ತ್ರಿಶಾ, "ಚಿತ್ರೀಕರಣದ ವೇಳೆ ನೀವು ನೀಡುತ್ತಿದ್ದ ಆ ಆತ್ಮೀಯ ಅಪ್ಪುಗೆ, ನಿಮ್ಮ ಕರುಣಾಮಯಿ ಸ್ವಭಾವ, ನಿಮ್ಮ ಆ ಚಂದದ ಹಿತವಾದ ನಗು... ಎಲ್ಲವೂ ಅಮರ. ಈ ಜಗತ್ತಿನ ಅತ್ಯಂತ ಶ್ರೇಷ್ಠ ಕಲಾವಿದರು ಯಾವಾಗಲೂ ಅತ್ಯಂತ ಸರಳ ಮತ್ತು ವಿನಮ್ರ ಜೀವಗಳಾಗಿರುತ್ತಾರೆ ಎಂಬುದನ್ನು ನೀವು ನನಗೆ ಸದಾ ನೆನಪಿಸುತ್ತೀರಿ. ನಿಮ್ಮ ಭೌತಿಕವಾಗಿ ನಮ್ಮೊಂದಿಗೆ ಇರದಿದ್ದರೂ, ನಿಮ್ಮ ಧ್ವನಿ ಮಾತ್ರ ಇಡೀ ವಿಶ್ವದಲ್ಲಿ ಎಂದೆಂದಿಗೂ ಅಮರವಾಗಿ ಜೀವಿಸಿರುತ್ತದೆ" ಎಂದು ಹೇಳಿದ್ದಾರೆ.

Advertisement
S Janaki Passes Away: ತಮ್ಮಿಚ್ಛೆಯಂತೆ ಕನ್ನಡ ನಾಡಲ್ಲೇ ಕೊನೆಯುಸಿರೆಳೆದ ಗಾನಕೋಗಿಲೆ ಎಸ್‌.ಜಾನಕಿ

"ಅಮ್ಮ ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ"

ಪೋಸ್ಟ್‌ನ ಕೊನೆಯಲ್ಲಿ ಸಂತಾಪ ಸೂಚಿಸಿರುವ ತ್ರಿಶಾ, "ಜಾನಕಿ ಅಮ್ಮ, ನಿಮ್ಮ ಆತ್ಮಕ್ಕೆ ಚಿರಶಾಂತಿ ಸಿಗಲಿ. ನಾನು ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ" ಎಂದು ಮುರಿದ ಹೃದಯದ ಇಮೋಜಿ ಹಾಕಿ ಕಂಬನಿ ಮಿಡಿದಿದ್ದಾರೆ. ವಿಜಯ್ ಸೇತುಪತಿ ಮತ್ತು ತ್ರಿಶಾ ಅಭಿನಯದ '96' ಚಿತ್ರದಲ್ಲಿ ತ್ರಿಶಾ ಅವರ ಪಾತ್ರದ ಹೆಸರು 'ಜಾನಕಿ ದೇವಿ' (ಜಾನು) ಎಂದಾಗಿದ್ದು, ಆ ಪಾತ್ರ ಸದಾ ಜಾನಕಮ್ಮನವರ ಹಾಡುಗಳನ್ನೇ ಗುನುಗುತ್ತಿರುತ್ತದೆ. ಚಿತ್ರದ ಶೂಟಿಂಗ್ ವೇಳೆ ಜಾನಕಮ್ಮನವರು ಸ್ವತಃ ಬಂದು ತಂಡವನ್ನು ಹರಸಿದ್ದರು. ಸದ್ಯ ಜಾನಕಮ್ಮನವರ ಅಗಲಿಕೆಯಿಂದಾಗಿ '96' ಚಿತ್ರದ ಆ ಸುಂದರ ಕ್ಷಣಗಳ ಫೋಟೋಗಳು ಮತ್ತೊಮ್ಮೆ ಅಭಿಮಾನಿಗಳ ಕಣ್ಣಾಲಿಗಳನ್ನು ಒದ್ದೆಯಾಗಿಸುತ್ತಿವೆ.