ನನಗೆ ಇಬ್ಬರು ಹೆಣ್ಣುಮಕ್ಕಳು, ದಯವಿಟ್ಟು ಕೆಲಸ ಕೊಡಿ: ತಂದೆ ಬೇಡಿಕೊಂಡಿದ್ದನ್ನ ನೆನೆದು ಕಣ್ಣೀರಿಟ್ಟ ನಟಿ ಭಾಗ್ಯಶ್ರೀ ಬೋರ್ಸೆ


ಖ್ಯಾತ ನಟ ಅಖಿಲ್ ಅಕ್ಕಿನೇನಿ ನಟನೆಯ ಇತ್ತೀಚಿನ ಸೂಪರ್ ಹಿಟ್ ಸಿನಿಮಾ 'ಲೆನಿನ್' (Lenin) ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಉದಯೋನ್ಮುಖ ನಟಿ ಭಾಗ್ಯಶ್ರೀ ಬೋರ್ಸೆ (Bhagyashri Borse) ತಮ್ಮ ವೈಯಕ್ತಿಕ ಜೀವನದಲ್ಲಿ ನಡೆದ ಕಣ್ಣೀರಿನ ಕಥೆಯನ್ನು ಬಿಚ್ಚಿಟ್ಟಿದ್ದಾರೆ. ಇಂದು ತಮಗೆ ಸಿನಿರಂಗದಲ್ಲಿ ಜನಪ್ರಿಯತೆ ಸಿಗುತ್ತಿರಬಹುದು, ಆದರೆ ತಾವು ಬೆಳೆದು ಬಂದ ಹಾದಿ ಅತ್ಯಂತ ಕಡು ಬಡತನದಿಂದ ಕೂಡಿತ್ತು ಎಂದು ಅವರು ಭಾವುಕರಾಗಿದ್ದಾರೆ. ನಾನು ಹುಟ್ಟಿದಾಗಲೇ ನನ್ನ ತಂದೆ ಕೆಲಸ ಕಳೆದುಕೊಂಡಿದ್ದರು ಎಂದು ಕಣ್ಣೀರಿಟ್ಟಿದ್ದಾರೆ.

Advertisement

ನಾವೆಲ್ಲ ಜೀರೋದಿಂದ ಬಂದವರು

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಭಾಗ್ಯಶ್ರೀ ತಮ್ಮ ಕಷ್ಟದ ದಿನಗಳ ಬಗ್ಗೆ ಮಾತನಾಡಿದ್ದಾರೆ. ತಮ್ಮ ಬಾಲ್ಯದ ಕಷ್ಟಗಳನ್ನು ಹಂಚಿಕೊಂಡ ಭಾಗ್ಯಶ್ರೀ ಬೋರ್ಸೆ, ನಾನು ಹುಟ್ಟಿದ ದಿನದಿಂದಲೇ ಜೀವನದ ಮತ್ತೊಂದು ಕರಾಳ ಮುಖವನ್ನು ನೋಡಿದ್ದೇನೆ. ನನ್ನ ಪೋಷಕರು ಅತ್ಯಂತ ಕೆಳ ಮಧ್ಯಮ ವರ್ಗದ ಹಿನ್ನೆಲೆಯಿಂದ ಬಂದವರು. ಇಂದಿನ ಯುವಜನರು ಕಾಣುವ ಜೀವನವನ್ನ ನಾವು ಎಂದಿಗೂ ಕಂಡವರಲ್ಲ. ನಮ್ಮ ಜೀವನದಲ್ಲಿ ಸದಾ ಏನಾದರೂ ತೊಂದರೆಗಳು ಎದುರಾಗುತ್ತಲೇ ಇದ್ದವು. ಆದರೆ ನನ್ನ ಪೋಷಕರು ಮಕ್ಕಳಿಗಾಗಿ ಒಳ್ಳೆಯದನ್ನ ಮಾಡಲು ನಿರಂತರವಾಗಿ ಹೋರಾಡಿದರು, ಎಂದಿಗೂ ಸೋಲೊಪ್ಪಿಕೊಳ್ಳಲಿಲ್ಲ. ಏಕೆಂದರೆ ನಾವು ಸೊನ್ನೆಯಿಂದ ನಮ್ಮ ಬದುಕು ಆರಂಭಿಸಿದವರು ಎಂದು ಭಾವುಕರಾಗಿದ್ದಾರೆ.

Advertisement

10 ರೂ. ಮೆಣಸಿನಕಾಯಿ, ಪಾಲಕ್ ಸೊಪ್ಪಿಗೂ ಲೆಕ್ಕ ಹಾಕ್ತಿದ್ವಿ

ಬಾಲ್ಯದಲ್ಲಿ ಹಣದ ಮೌಲ್ಯ ತಿಳಿಯದಿದ್ದರೂ, ಬೆಳೆಯುತ್ತಾ ಪೋಷಕರ ಹೋರಾಟ ಕಣ್ಣಿಗೆ ಕಟ್ಟಿದಂತೆ ಕಾಣುತ್ತಿತ್ತು ಎಂದು ಅವರು ಹೇಳಿದ್ದಾರೆ. ಚಿಕ್ಕಂದಿನಲ್ಲಿ ನಮಗೆ ಹಣದ ಮಹತ್ವ ತಿಳಿಯುವುದಿಲ್ಲ. ನಮಗೆ ಕೇವಲ ಆಟ ಆಡುವುದು, ಊಟ ಮಾಡುವುದು ಅಷ್ಟೇ ಗೊತ್ತಿರುತ್ತೆ. ಆದರೆ ನನ್ನ ಪೋಷಕರು ಬರೆದಿಡುತ್ತಿದ್ದ ದಿನಚರಿ ಪುಸ್ತಕವನ್ನ ನಾನು ನೋಡಿದ್ದೇನೆ. ಅದರಲ್ಲಿ 10 ರೂಪಾಯಿಗೆ ಹಸಿಮೆಣಸಿನಕಾಯಿ, 10 ರೂಪಾಯಿಗೆ ಪಾಲಕ್ ಸೊಪ್ಪು ಎಂದು ಬರೆಯಲಾಗಿತ್ತು. ಈ ವಾರ 300 ರೂಪಾಯಿ ಖರ್ಚಾದರೆ, ಮುಂದಿನ ವಾರ ಬಜೆಟ್ ಹೇಗೆ ಸರಿದೂಗಿಸಬೇಕು ಎಂದು ಅವರು ಲೆಕ್ಕ ಹಾಕುತ್ತಿದ್ದರು ಎಂದು ನೆನೆದಿದ್ದಾರೆ.

Advertisement
ಟಾಲಿವುಡ್‌ನಲ್ಲಿ ಕನ್ನಡಿಗನ ಹವಾ, ಹೀರೋಗಿಂತ ಈ ಮಂಡ್ಯ ಹೈದನ ಆಕ್ಟಿಂಗ್‌ ಸೂಪರ್‌ ಎಂದ ತೆಲುಗು ಮಂದಿ

ನನ್ನ ತಂದೆ ಬೇರೆಯವರ ಮುಂದೆ ನಿಂತು, ದಯವಿಟ್ಟು ನನಗೆ ಯಾವುದಾದರೂ ಒಂದು ಕೆಲಸ ಕೊಡಿ, ನನಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ ಎಂದು ಕೈಮುಗಿದು ಬೇಡಿಕೊಳ್ಳುತ್ತಿದ್ದನ್ನು ನಾನು ಕಣ್ಣಾರೆ ನೋಡಿದ್ದೇನೆ. ಚಿಕ್ಕ ಮಗುವಾಗಿ ಆ ವಯಸ್ಸಿನಲ್ಲಿ ಯಾವ ಮಗಳು ಕೂಡ ತನ್ನ ತಂದೆ ಆ ರೀತಿ ಕೈಮುಗಿದು ಬೇಡುವುದನ್ನ ನೋಡಲು ಬಯಸುವುದಿಲ್ಲ. ಅಂದು ನನ್ನ ತಂದೆ ಅನುಭವಿಸಿದ ನೋವನ್ನು ನೋಡಿದಾಗಲೇ ನನ್ನ ಮನಸ್ಸಿನಲ್ಲಿ ಒಂದು ಛಲ ಹುಟ್ಟಿತು. ಇಂತಹ ಪರಿಸ್ಥಿತಿ ನನ್ನ ತಂದೆಗೆ ಮತ್ತೆಂದೂ ಬರಬಾರದು, ನಾನು ದೊಡ್ಡವಳಾಗಿ ಅವರು ಸಮಾಜದಲ್ಲಿ ಸದಾ ಎತ್ತಿ ನಿಲ್ಲುವಂತೆ ಮಾಡಬೇಕು ಎಂದು ನಿರ್ಧರಿಸಿದೆ. ಆ ನೋವೇ ಇಂದು ನನ್ನ ಯಶಸ್ಸಿಗೆ ಮುಖ್ಯ ಪ್ರೇರಣೆ" ಎಂದು ಭಾಗ್ಯಶ್ರೀ ಕಣ್ಣೀರು ಹಾಕಿದ್ದಾರೆ.

Advertisement

ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ಜನಿಸಿದ ಭಾಗ್ಯಶ್ರೀ ಬೋರ್ಸೆ, ವಿದ್ಯಾಭ್ಯಾಸಕ್ಕಾಗಿ ತಮ್ಮ ಕುಟುಂಬದೊಂದಿಗೆ ನೈಜೀರಿಯಾದಲ್ಲಿ ಸುಮಾರು 7 ವರ್ಷಗಳ ಕಾಲ ನೆಲೆಸಿದ್ದರು. ತದನಂತರ ಭಾರತಕ್ಕೆ ಮರಳಿದ ಅವರು ಮುಂಬೈನಲ್ಲಿ ಮ್ಯಾನೇಜ್‌ಮೆಂಟ್ ಪದವಿ ಪಡೆಯುತ್ತಲೇ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟರು. 2023ರಲ್ಲಿ ತೆರೆಕಂಡ ಬಾಲಿವುಡ್‌ನ 'ಯಾರಿಯಾ-2' ಹಾಗೂ 2024ರ 'ಚಂದು ಚಾಂಪಿಯನ್' ಸಿನಿಮಾಗಳಲ್ಲಿ ಸಣ್ಣ ಪಾತ್ರಗಳ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದರು.

ನಿರ್ದೇಶಕ ಹರೀಶ್ ಶಂಕರ್ ಅವರ ತೆಲುಗಿನ 'ಮಿಸ್ಟರ್ ಬಚ್ಚನ್' ಸಿನಿಮಾದಲ್ಲಿ ರವಿತೇಜ ಜೊತೆ ನಾಯಕಿಯಾಗಿ ನಟಿಸುವ ಮೂಲಕ ಜನಪ್ರಿಯರಾದರು. ನಂತರ ವಿಜಯ್ ದೇವರಕೊಂಡ ಜೊತೆ 'ಕಿಂಗ್‌ಡಮ್', ದುಲ್ಕರ್ ಸಲ್ಮಾನ್ ಜೊತೆ ತಮಿಳಿನ 'ಕಾಂತಾ' ಹಾಗೂ ರಾಮ್ ಪೋತಿನೇನಿ ಜೊತೆ 'ಆಂಧ್ರ ಕಿಂಗ್ ತಾಲೂಕಾ' ಸಿನಿಮಾಗಳಲ್ಲಿ ನಟಿಸಿದರು.ಜುಲೈ 10 ರಂದು ಬಿಡುಗಡೆಯಾದ ಅಖಿಲ್ ಅಕ್ಕಿನೇನಿ ನಟನೆಯ 'ಲೆನಿನ್' ಸಿನಿಮಾದ ದೊಡ್ಡ ಯಶಸ್ಸಿನ ಖುಷಿಯಲ್ಲಿದ್ದಾರೆ. ಅವರ ಮುಂದಿನ ಸಿನಿಮಾ ಖ್ಯಾತ ನಟ ಶಿವಕಾರ್ತಿಕೇಯನ್ ಜೊತೆ ತಮಿಳಿನ 'ಸೇಯೋನ್' (Seyon) ಶೀಘ್ರದಲ್ಲೇ ತೆರೆಗೆ ಬರಲಿದೆ.

English Summary

Lenin actress Bhagyashri Borse opened up about her family's financial struggles, her father's job loss, and the hardships they endured while growing up.