ಸಾಮಾನ್ಯವಾಗಿ ಸ್ಟಾರ್ ಕಿಡ್ಸ್‌ಗೆ ಸಿನಿಮಾರಂಗದಲ್ಲಿ ಸಕ್ಸಸ್ ಸಲೀಸು ಎನ್ನುವ ಮಾತಿದೆ. ಆದರೆ ಇದು ಎಲ್ಲರ ವಿಚಾರದಲ್ಲೂ ಕೂಡಿ ಬರೋದಿಲ್ಲ. ಟಾಲಿವುಡ್‌ನ ಸ್ಟಾರ್ ನಟ ನಾಗಾರ್ಜುನ್ ಪುತ್ರರ ಕಥೆ ಇದಕ್ಕೆ ಉತ್ತಮ ಉದಾಹರಣೆ. ಕೋಟ್ಯಂತರ ರೂಪಾಯಿ ಆಸ್ತಿ, ತಮ್ಮದೇ ಬ್ಯಾನರ್, ಅಪ್ಪನ ಹೆಸರು ಸೇರಿ ದೊಡ್ಡ ಸಾಮ್ರಾಜ್ಯದಲ್ಲಿದ್ದರೂ ಸಿನಿಮಾಗರಂಗದಲ್ಲಿ ನೆಲೆಯೂರಲು ಹಲವು ವರ್ಷಗಳೇ ಸವೆಸಬೇಕಾಯ್ತು. ಸದ್ಯ ನಾಗ್ ಎರಡನೇ ಪುತ್ರ ಅಖಿಲ್ ಅಕ್ಕಿನೇನಿ ನಟನೆಯ ಲೆನಿನ್ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗೆದ್ದಿದ್ದು, ಇದು ಅಕ್ಕಿನೇನಿ ಕುಟುಂಬಕ್ಕೆ ನಿಜಕ್ಕೂ ಒಂದು ದೊಡ್ಡ ತಿರುವು ಎನ್ನುವ ಮಾತುಗಳು ಕೇಳಿಬರುತ್ತಿವೆ. ಇನ್ನು ಈ ಖುಷಿಯಲ್ಲಿ ನಾಗಾರ್ಜುನ್ ಕಣ್ಣೀರಿಟ್ಟಿರುವ ವಿಡಿಯೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವೈರಲ್ ವಿಡಿಯೋದಲ್ಲಿ ಏನಿದೆ?
ಅಕ್ಕಿನೇನಿ ಕುಟುಂಬದ ಅಭಿಮಾನಿಗಳಿಗೆ ಹಾಗೂ ಟಾಲಿವುಡ್ ಪ್ರೇಕ್ಷಕರಿಗೆ ಸಖತ್ ಇಮೋಷನಲ್ ಮಾಡುವಂತಹ ದೃಶ್ಯವೊಂದು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದು, ಹಿರಿಯ ನಟ ನಾಗಾರ್ಜುನ್ ಅವರು ತಮ್ಮ ಮುದ್ದಿನ ಮಗ ಅಖಿಲ್ ಅಕ್ಕಿನೇನಿ ಅಭಿನಯದ ಹೊಸ ಸಿನಿಮಾ ಭರ್ಜರಿ ಯಶಸ್ಸು ಕಂಡಿರುವ ಖುಷಿಯಲ್ಲಿ ಕಣ್ಣೀರು ಹಾಕಿದ್ದಾರೆ. ಹಲವು ವರ್ಷಗಳ ಕಠಿಣ ಪರಿಶ್ರಮ ಮತ್ತು ಸತತ ಪ್ರಯತ್ನಗಳ ನಂತರ ಅಖಿಲ್ ನಟನೆಯ 'ಲೆನಿನ್' (Lenin) ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಬ್ಲಾಕ್‌ಬಸ್ಟರ್ ಹಿಟ್ ಆಗಿ ಹೊರಹೊಮ್ಮಿದೆ. ಈ ಅದ್ಭುತ ಗೆಲುವನ್ನು ಸಂಭ್ರಮಿಸಲು ಹಮ್ಮಿಕೊಂಡಿದ್ದ ಪಾರ್ಟಿಯಲ್ಲಿ, ನಾಗಾರ್ಜುನ್ ಅವರು ಕೇಕ್ ಕತ್ತರಿಸುವ ಸಂಭ್ರಮದ ನಡುವೆಯೇ ಮಗನನ್ನು ಗಟ್ಟಿಯಾಗಿ ಬಿಗಿದಪ್ಪಿ ಭಾವುಕರಾಗಿದ್ದಾರೆ. ಮಗನ ಯಶಸ್ಸನ್ನು ಕಂಡು ಒಬ್ಬ ತಂದೆಯಾಗಿ ಅವರ ಕಣ್ಣಿಂದ ಆನಂದಬಾಷ್ಪ ಹರಿದಿದ್ದು, ಈ ಭಾವುಕ ಕ್ಷಣದ ವಿಡಿಯೋ ವೈರಲ್ ಆಗುತ್ತಿದೆ.
ಟಾಲಿವುಡ್‌ನ ಸ್ಟಾರ್ ಕಿಡ್ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಅಖಿಲ್ ಅಕ್ಕಿನೇನಿ ಅವರಿಗೆ ಆರಂಭದಲ್ಲಿ ಅದೃಷ್ಟ ಕೈಕೊಟ್ಟಿತ್ತು. ನೋಡಲು ಅಪ್ಪಟ 'ಚಾಕೊಲೇಟ್ ಬಾಯ್' ತರಹ ಇರುವ ಅಖಿಲ್, ತೆಲುಗು ಚಿತ್ರರಂಗದಲ್ಲಿ ತನ್ನದೇ ಆದ ಸ್ವತಂತ್ರ ಗುರುತು ಮೂಡಿಸಲು ಕಳೆದ ಹಲವು ವರ್ಷಗಳಿಂದ ಸತತವಾಗಿ ಶ್ರಮಿಸುತ್ತಿದ್ದರು. ಅವರು ನಾಯಕನಾಗಿ ಈ ಹಿಂದೆ ಹಲವು ಸಿನಿಮಾಗಳಲ್ಲಿ ನಟಿಸಿದ್ದರೂ, ಯಾವ ಚಿತ್ರವೂ ನಿರೀಕ್ಷಿತ ಮಟ್ಟದ ಯಶಸ್ಸು ತಂದುಕೊಟ್ಟಿರಲಿಲ್ಲ. ಸದಾ ಸೋಲುಗಳನ್ನೇ ಎದುರಿಸುತ್ತಿದ್ದಾಗ ಸೋಷಿಯಲ್ ಮೀಡಿಯಾ ಹಾಗೂ ಸಿನಿ ವಲಯದಲ್ಲಿ ಟೀಕೆಗಳೂ ಕೇಳಿಬಂದಿದ್ದವು. ಎಷ್ಟೇ ದೊಡ್ಡ ಸ್ಟಾರ್ ನಟ ನಾಗಾರ್ಜುನ್ ಅವರ ಪುತ್ರನಾಗಿದ್ದರೂ, ಸ್ವಂತ ಪ್ರತಿಭೆ ಮತ್ತು ಅದೃಷ್ಟ ಇಲ್ಲದಿದ್ದರೆ ಸಿನಿಮಾ ರಂಗದಲ್ಲಿ ಗೆಲ್ಲುವುದು ಕಷ್ಟ ಎಂದೆಲ್ಲ ಜನರು ಮಾತನಾಡಿಕೊಂಡಿದ್ದರು. ಆದರೆ, ಈ ಎಲ್ಲ ನೆಗೆಟಿವ್ ಕಾಮೆಂಟ್‌ಗಳು ಮತ್ತು ಟೀಕೆಗಳಿಗೆ ಅಖಿಲ್ ಈಗ ತಮ್ಮ 'ಲೆನಿನ್' ಸಿನಿಮಾ ಮೂಲಕವೇ ಖಡಕ್ ಉತ್ತರ ನೀಡಿದ್ದಾರೆ. ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸುತ್ತಿರುವ ಈ ಸಿನಿಮಾ, ವಿಮರ್ಶಕರು ಹಾಗೂ ಪ್ರೇಕ್ಷಕರಿಂದ ಜೈಕಾರ ಹಾಕಿಸಿಕೊಳ್ಳುವ ಮೂಲಕ ಅಖಿಲ್ ವೃತ್ತಿಜೀವನಕ್ಕೆ ಬಿಗ್ ಬ್ರೇಕ್ ತಂದುಕೊಟ್ಟಿದೆ. ತಮ್ಮ ಮಗ ಚಿತ್ರರಂಗದಲ್ಲಿ ನೆಲೆ ನಿಲ್ಲಲು ಪಡುತ್ತಿದ್ದ ಕಷ್ಟವನ್ನು ಹತ್ತಿರದಿಂದ ನೋಡಿದ್ದ ತಂದೆ ನಾಗಾರ್ಜುನ್ ಅವರಿಗೆ ಈ ಬ್ಲಾಕ್‌ಬಸ್ಟರ್ ಗೆಲುವು ಸಂತಸ ತಂದಿದೆ. ಸದಾ ಗಂಭೀರವಾಗಿ ಹಾಗೂ ಸ್ಮಾರ್ಟ್ ಆಗಿ ಕಾಣುವ ನಾಗಾರ್ಜುನ್, ಮಗನ ಯಶಸ್ಸಿನ ಪಾರ್ಟಿಯಲ್ಲಿ ತಮ್ಮ ಇಮೋಷನ್ ಅನ್ನು ತಡೆದುಕೊಳ್ಳಲು ಸಾಧ್ಯವಾಗದೆ ಮಗನನ್ನು ಅಪ್ಪಿಕೊಂಡು ಕಣ್ಣೀರಿಟ್ಟಿದ್ದಾರೆ. ಅಕ್ಕಿನೇನಿ ಅಭಿಮಾನಿಗಳು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದು, "ಒಬ್ಬ ತಂದೆಗೆ ಮಗನ ಗೆಲುವಿಗಿಂತ ದೊಡ್ಡ ಸಂತೋಷ ಮತ್ತೊಂದಿಲ್ಲ" ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಹಲವು ವರ್ಷಗಳ ಬಳಿಕ ಸಿಕ್ಕ ಈ ಯಶಸ್ಸು ಅಖಿಲ್ ಅಕ್ಕಿನೇನಿ ಸಿನಿಮಾ ಜರ್ನಿಗೆ ಹೊಸ ದಿಕ್ಕು ತೋರಿರುವುದಂತೂ ಸತ್ಯ.ಟೀಕಾಕಾರರ ಬಾಯಿ ಮುಚ್ಚಿಸಿದ 'ಲೆನಿನ್'