ಅಮೀರ್ ಖಾನ್ ಲವ್ ಜಿಹಾದ್‌ನ ಬ್ರ್ಯಾಂಡ್‌ ಅಂಬಾಸಿಡರ್‌ ಎಂದ ಬಿಜೆಪಿ-ಶಿವಸೇನೆ ನಾಯಕರು


ಬಾಲಿವುಡ್‌ನ 'ಮಿಸ್ಟರ್ ಪರ್ಫೆಕ್ಟ್‌' ಅಮೀರ್ ಖಾನ್ ಅವರ ವೈಯಕ್ತಿಕ ಜೀವನದ ಹೊಸ ನಿರ್ಧಾರವೊಂದು ದೊಡ್ಡ ಮಟ್ಟದ ರಾಜಕೀಯ ಜಿದ್ದಾಜಿದ್ದಿಗೆ ಅಸ್ತ್ರವಾಗಿ ಮಾರ್ಪಟ್ಟಿದೆ. ಇತ್ತೀಚೆಗಷ್ಟೇ ಮೂರನೇ ಬಾರಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ಅಮೀರ್ ಖಾನ್ ವಿರುದ್ಧ ಮೊದಲು ಬಿಜೆಪಿ ನಾಯಕರು ಹರಿಹಾಯ್ದಿದ್ದರು. ಇದರ ಬೆನ್ನಲ್ಲೇ ಈಗ ಮಹಾರಾಷ್ಟ್ರದ ಆಡಳಿತಾರೂಢ ಶಿವಸೇನೆ (ಏಕನಾಥ್ ಶಿಂಧೆ ಬಣ) ಮುಖಂಡ ಸಂಜಯ್ ಶಿರ್ಸಾತ್ ಕೂಡ ವಾಗ್ದಾಳಿ ನಡೆಸಿದ್ದು, ಅಮೀರ್ ಖಾನ್ ಅವರನ್ನು 'ಲವ್ ಜಿಹಾದ್‌ನ ಬ್ರ್ಯಾಂಡ್ ಅಂಬಾಸಿಡರ್' ಎಂದು ಕರೆದಿದ್ದಾರೆ.

Advertisement

ಸಾಮಾನ್ಯ ಜನರ ಹೃದಯ ಗೆಲ್ಲಲು ಸಾಧ್ಯವಿಲ್ಲ

ಮಾಧ್ಯಮಗಳೊಂದಿಗೆ ಮಾತನಾಡಿದ ಶಿವಸೇನೆ ಮುಖಂಡ ಸಂಜಯ್ ಶಿರ್ಸಾತ್, ಬಿಜೆಪಿ ಶಾಸಕ ನಿತೇಶ್ ರಾಣೆ ಅವರ ಹೇಳಿಕೆಗಳನ್ನು ಸಂಪೂರ್ಣವಾಗಿ ಸಮರ್ಥಿಸಿಕೊಂಡಿದ್ದಾರೆ. ನಿತೇಶ್ ರಾಣೆ ಅವರ ಮಾತುಗಳಲ್ಲಿ ಸತ್ಯವಿದೆ. ಅಮೀರ್ ಖಾನ್ ಚಿತ್ರರಂಗದ ದೊಡ್ಡ ನಟ ಇರಬಹುದು, ದೇಶದಲ್ಲಿ ಅವರಿಗೆ ಅಪಾರ ಅಭಿಮಾನಿ ಬಳಗವೂ ಇರಬಹುದು. ಆದರೆ ಒಬ್ಬ ಸೆಲೆಬ್ರಿಟಿಯಾಗಿ ಸಮಾಜಕ್ಕೆ ಅವರು ನೀಡುತ್ತಿರುವ ಸಂದೇಶವೇನು? ಒಂದು, ಎರಡು ಅಲ್ಲ, ಸತತ ಮೂರು ಬಾರಿ ಮದುವೆಯಾಗುವ ಇಂತಹ ನಟರಿಂದ ಸಾಮಾನ್ಯ ಜನರು ಏನನ್ನು ಕಲಿಯಬೇಕು?" ಎಂದು ಶಿರ್ಸಾತ್ ಪ್ರಶ್ನಿಸಿದ್ದಾರೆ. ಇಂತಹ ನಡವಳಿಕೆಗಳಿಂದ ಅವರು ಕೇವಲ 'ಲವ್ ಜಿಹಾದ್'ನ ರಾಯಭಾರಿಯಾಗಬಹುದೇ ಹೊರತು, ದೇಶದ ಸಾಮಾನ್ಯ ಜನರ ಹೃದಯದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಎಂದಿಗೂ ಸಾಧ್ಯವಿಲ್ಲ" ಎಂದು ಲೇವಡಿ ಮಾಡಿದ್ದಾರೆ.

Advertisement

ಸಿನಿಮಾ ನೋಡುವ ಮುನ್ನ ಯೋಚಿಸಿ

ಇದಕ್ಕೂ ಮುನ್ನ ಶಿರಡಿಯಲ್ಲಿ ಮಾತನಾಡಿದ್ದ ಬಿಜೆಪಿ ನಾಯಕ ಹಾಗೂ ಮಹಾರಾಷ್ಟ್ರ ಸರ್ಕಾರದ ಸಚಿವ ನಿತೇಶ್ ರಾಣೆ, ಅಮೀರ್ ಖಾನ್ ಮದುವೆಯನ್ನು 'ಲವ್ ಜಿಹಾದ್'ನ ಹೊಸ ಆಯಾಮ ಎಂಬಂತೆ ಬಿಂಬಿಸಿದ್ದರು. ಪ್ರಸಿದ್ಧ ವ್ಯಕ್ತಿಗಳು ತಮ್ಮ ವೈಯಕ್ತಿಕ ಜೀವನದಲ್ಲಿ ಇಂತಹ ನಿರ್ಧಾರಗಳನ್ನು ತೆಗೆದುಕೊಂಡಾಗ ಹಿಂದೂ ಸಮಾಜವು ಅದರ ಬಗ್ಗೆ ಗಂಭೀರವಾಗಿ ಯೋಚಿಸಬೇಕಾಗುತ್ತದೆ. ಅಮೀರ್ ಖಾನ್ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಲವ್ ಜಿಹಾದ್‌ನ ಬ್ರ್ಯಾಂಡ್ ಅಂಬಾಸಿಡರ್ ಆಗುತ್ತಿಲ್ಲವೇ? ಅವರ ಸಿನಿಮಾಗಳನ್ನು ನೋಡಿ ಅವರನ್ನು ದೊಡ್ಡ ಮಟ್ಟಕ್ಕೆ ಬೆಳೆಸುವ ಹಿಂದೂ ಯುವಕರು ಇನ್ಮುಂದೆ ಎಚ್ಚೆತ್ತುಕೊಳ್ಳಬೇಕು. ಇಂತಹ ನಟರ ಚಿತ್ರಗಳನ್ನು ಚಿತ್ರಮಂದಿರಕ್ಕೆ ಹೋಗಿ ನೋಡಬೇಕೇ ಅಥವಾ ಬೇಡವೇ ಎಂಬುದನ್ನು ಹಿಂದೂ ಸಮಾಜ ನಿರ್ಧರಿಸುವ ಸಮಯ ಬಂದಿದೆ" ಎಂದು ರಾಣೆ ಹೇಳಿದ್ದರು.

Advertisement
ಮೂರನೇ ಬಾರಿ ಹಸೆಮಣೆ ಏರಿದ ಅಮೀರ್ ಖಾನ್: ಬೆಂಗಳೂರು ಮೂಲದ ಗೌರಿ ಸ್ಪ್ರ್ಯಾಟ್ ಜೊತೆ ಸರಳ ವಿವಾಹ

ಅಮೀರ್ ಖಾನ್ ಮೂರು ಮದುವೆ

ಜುಲೈ 5ರಂದು ಮುಂಬೈನ ಬಾಂದ್ರಾದಲ್ಲಿರುವ ತಮ್ಮ ಪಾಲಿ ಹಿಲ್ ನಿವಾಸದಲ್ಲಿ ಅಮೀರ್ ಖಾನ್ ಅವರು ವೆಲ್ನೆಸ್ ಮತ್ತು ಬ್ಯೂಟಿ ಉದ್ಯಮದ ಗೌರಿ ಸ್ಕ್ರಾಟ್ (Gauri Spratt) ಅವರೊಂದಿಗೆ ಆಪ್ತರ ಸಮ್ಮುಖದಲ್ಲಿ ಸರಳವಾಗಿ ಮದುವೆಯಾಗಿದ್ದರು. ಇದು ಆಮೀರ್ ಖಾನ್ ಅವರ ಮೂರನೇ ಮದುವೆಯಾಗಿದೆ. ಅಮೀರ್ ಖಾನ್ ಅವರ ಮೊದಲ ಮದುವೆ 1986ರಲ್ಲಿ ರೀನಾ ದತ್ತಾ ಅವರೊಂದಿಗೆ ನಡೆದಿತ್ತು. ಇಬ್ಬರೂ 2002ರಲ್ಲಿ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ ಪಡೆದಿದ್ದರು. ಆ ಬಳಿಕ 2005ರಲ್ಲಿ ಚಲನಚಿತ್ರ ನಿರ್ದೇಶಕಿ ಕಿರಣ್ ರಾವ್ ಅವರನ್ನು ಕೈಹಿಡಿದಿದ್ದ ಅಮೀರ್, 2021ರಲ್ಲಿ ಅವರಿಂದಲೂ ಕಾನೂನಾತ್ಮಕವಾಗಿ ಬೇರ್ಪಟ್ಟಿದ್ದರು.

Advertisement

ಬಲಪಂಥೀಯ ಸಂಘಟನೆಗಳು 'ಲವ್ ಜಿಹಾದ್' ಅನ್ನು ಮುಸ್ಲಿಂ ಯುವಕರು ಇತರೆ ಧರ್ಮದ ಮಹಿಳೆಯರನ್ನು ವ್ಯವಸ್ಥಿತವಾಗಿ ಮದುವೆಯಾಗಿ ಮತಾಂತರ ಮಾಡುವ ಪ್ರಕ್ರಿಯೆ ಎಂದು ಆರೋಪಿಸುತ್ತಾ ಬಂದಿವೆ. ಈಗ ಬಾಲಿವುಡ್ ಸೂಪರ್ ಸ್ಟಾರ್ ವೈಯಕ್ತಿಕ ಜೀವನದ ಮದುವೆಯ ನಿರ್ಧಾರಕ್ಕೆ ರಾಜಕೀಯ ನಾಯಕರು ಈ ಆಯಾಮ ನೀಡಿರುವುದು ಸದ್ಯ ದೇಶಾದ್ಯಂತ ಪರ-ವಿರೋಧದ ಚರ್ಚೆಗೆ ಕಾರಣವಾಗಿದೆ.

English Summary

Aamir Khan's recent marriage has sparked political reactions, with BJP and Shiv Sena leaders criticizing the actor and making controversial remarks that have triggered nationwide debate.