Get Updates
Get notified of breaking news, exclusive insights, and must-see stories!

ಅಪರೂಪದ ಪತ್ರಕರ್ತೆ ಗೌರಿ ಲಂಕೇಶ್ ವ್ಯಕ್ತಿ ಪರಿಚಯ

ಬೆಂಗಳೂರು, ಸೆಪ್ಟೆಂಬರ್ 6: ಎಡಪಂಥೀಯ ವಿಚಾರಗಳ ಪರ ವಕಾಲತ್ತು ವಹಿಸುತ್ತಿದ್ದ, ನಕ್ಸಲೀಯರನ್ನು ಸಮಾಜದ ಮುಖ್ಯ ವಾಹಿನಿಗೆ ಕರೆತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕರ್ನಾಟಕ ಕಂಡ ಅಪರೂಪದ ಪತ್ರಕರ್ತೆ, ಸಾಮಾಜಿಕ ಕಾರ್ಯಕರ್ತೆ ಗೌರಿ ಲಂಕೇಶ್ ನಿಧನರಾಗಿದ್ದಾರೆ.

ಅವರನ್ನು ಮಂಗಳವಾರ ಸಂಜೆ ದುಷ್ಕರ್ಮಿಗಳ ತಂಡ ಬೆಂಗಳೂರಿನ ರಾಜರಾಜೇಶ್ವರಿ ನಗರ ನಿವಾಸದಲ್ಲಿ ಗುಂಡಿಕ್ಕಿ ಹತ್ಯೆ ಮಾಡಿದೆ.
ಗೌರಿ ಲಂಕೇಶ್ ಹುಟ್ಟಿದ್ದು ಬೆಂಗಳೂರಿನಲ್ಲಿ; 1962ರಲ್ಲಿ. ಸಾಯುವ ವೇಳೆ ಅವರಿಗೆ 55 ವರ್ಷ ವಯಸ್ಸಾಗಿತ್ತು. ಕನ್ನಡ ಕಂಡ ವಿಶಿಷ್ಟ ಸಾಹಿತಿ, ಪತ್ರಿಕೋದ್ಯಮಿ ಪಿ. ಲಂಕೇಶ್ ಅವರ ಮೂವರು ಮಕ್ಕಳಲ್ಲಿ ಗೌರಿ ಲಂಕೇಶ್ ಕೂಡ ಒಬ್ಬರಾಗಿದ್ದರು.

Senior Karnataka journalist Gauri Lankesh's profile

ಬೆಂಗಳೂರಿನ ಪ್ರಖ್ಯಾತ ಸೆಂಟ್ರಲ್ ಕಾಲೇಜಿನಲ್ಲಿ ಬಿಎ ಮುಗಿಸಿ, ನವದೆಹಲಿಯಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪಡೆದಿದ್ದ ಅವರು 1984ರಿಂದ ಪತ್ರಿಕೋದ್ಯಮ ವೃತ್ತಿಯಲ್ಲಿದ್ದಾರೆ. ಒಂದಷ್ಟು ಕಾಲ ಅಮೆರಿಕಾ, ಫ್ರಾನ್ಸ್ ಮೊದಲಾದ ದೇಶಗಳಲ್ಲಿ ಪತ್ರಕರ್ತರಾಗಿಯೂ ಸೇವೆ ಸಲ್ಲಿಸಿದ ಅನುಭವ ಅವರಿಗಿತ್ತು.

ತಂದೆ ಪಿ. ಲಂಕೇಶ್ ನಿಧನದ ನಂತರ ಜನಪ್ರಿಯ ಲಂಕೇಶ್ ಪತ್ರಿಕೆಯನ್ನು ಮುನ್ನಡೆಸುವ ಜವಾಬ್ದಾರಿಯನ್ನು ಹೆಗಲೇರಿಸಿಕೊಂಡಿದ್ದರು. ಸಹೋದರ ಇಂದ್ರಜಿತ್ ಲಂಕೇಶ್ ಜತೆಗಿನ ಪತ್ರಿಕೆಯ ಹಕ್ಕುಗಳ ವಿಚಾರದಲ್ಲಿ ನಡೆದ ಕಲಹದ ನಂತರ 'ಗೌರಿ-ಲಂಕೇಶ್ ಪತ್ರಿಕೆ' ಹೆಸರಿನಲ್ಲಿ ಟ್ಯಾಬ್ಲಾಯ್ಡ್ ಪತ್ರಿಕೆಯನ್ನು 'ಗೈಡ್' ಎಂಬ ಮಾಸ ಪತ್ರಿಕೆಯನ್ನು ಅವರು ಹೊರ ತರುತ್ತಿದ್ದರು.

ಅಲ್ಪಸಂಖ್ಯಾತರ ಮೇಲಿನ ಹಲ್ಲೆ, ಬಾಬಾ ಬುಡನ್‍ ಗಿರಿ (ದತ್ತಪೀಠ) ವಿವಾದ, ಅತ್ಯಾಚಾರ ಆರೋಪಕ್ಕೆ ಗುರಿಯಾಗಿದ್ದ ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮೀಜಿ ಹಾಗೂ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಸಂಸ್ಥಾನಗಳೂ ಸೇರಿದಂತೆ ಹಲವರ ವಿರುದ್ಧ ಸರಣಿ ಲೇಖನಗಳನ್ನು ಪ್ರಕಟಿಸಿದ್ದರು. ಪ್ರಮುಖವಾಗಿ ಆರ್‍ಎಸ್‍ಎಸ್, ಸಂಘ ಪರಿವಾರ, ಬಿಜೆಪಿಯ ಸಿದ್ಧಾಂತಗಳನ್ನು ಅತ್ಯಂತ ಪ್ರಬಲವಾಗಿ ವಿರೋಧಿಸುತ್ತಿದ್ದರು ಗೌರಿ ಲಂಕೇಶ್. ಇದೇ ಕಾರಣಕ್ಕೆ ಸಮಾಜದಲ್ಲಿ ಒಂದು ವರ್ಗದ ವಿರೋಧಕ್ಕೂ ಅವರು ಗುರಿಯಾಗಿದ್ದರು.
ತಮ್ಮ ನೇರ, ನಿಷ್ಟುರ, ಹರಿತ ಬರವಣಿಗೆಯಿಂದಲೇ ಅನೇಕರ ಕೆಂಗಣ್ಣಿಗೆ ಗೌರಿ ಲಂಕೇಶ್ ಗುರಿಯಾಗಿದ್ದರು. ಇದೇ ಕಾರಣಕ್ಕೆ ಕೆಲ ಸಂದರ್ಭಗಳಲ್ಲಿ ಅವರ ಮೇಲೆ ಹಲ್ಲೆಯ ಯತ್ನಗಳೂ ನಡೆದಿತ್ತು.

ಪತ್ರಿಕೆಯಾಚೆಗೂ ಗೌರಿ ಲಂಕೇಶ್ ವ್ಯಕ್ತಿತ್ವ ಹರಡಿಕೊಂಡಿತ್ತು. ಕನ್ನಡ ಖ್ಯಾತ ಕಾದಂಬರಿಕಾರ ಎಸ್.ಎಲ್ ಭೈರಪ್ಪ ಕಾದಂಬರಿ 'ಆವರಣ'ದ ಬಗ್ಗೆ 'ಆವರಣ ಒಂದು ವಿ-ಕೃತಿ' ಎಂಬ ವಿಮರ್ಶಾ ಪುಸ್ತಕವನ್ನು ಅವರು ಸಂಪಾದಿಸಿದ್ದರು. ಖ್ಯಾತ ಸಂಪಾದಕ ಎಸ್ ಬಸವರಾಜು ಕುರಿತಂತೆ 'ಬಸವರಾಜಮಾರ್ಗ' ಸಂಗ್ರಹ ಲೇಖನಗಳ ಪ್ರಕಟಣೆ, ಪಾಶ್ಚಿಮಾತ್ಯ ಲೇಖಕರ ಬಗ್ಗೆ ಪಿ ಲಂಕೇಶ್ ಬರೆದಿದ್ದ ಲೇಖನಗಳ ಗುಚ್ಛ 'ಮನಕೆ ಕಾರಂಜಿಯ ಸ್ಪರ್ಷ'ದ ಸಂಯೋಜನೆ, ಲಂಕೇಶರ 'ಮರೆಯುವ ಮುನ್ನ'ದ ಐದು ಸಂಪುಟಗಳನ್ನು ಅವರು ಹೊರ ತಂದಿದ್ದಾರೆ.

ಇದಲ್ಲದೆ 'Tales of the Dervishes' ಕಥೆಗಳನ್ನು 'ಧರವೇಶಿಯ ಕಥೆಗಳು' ಹೆಸರಿನಲ್ಲಿ ಕನ್ನಡಕ್ಕೆ ತಂದಿದ್ದರು. 'ಕಪ್ಪು ಮಲ್ಲಿಗೆ' ಹೆಸರಿನಲ್ಲಿ ಅನುವಾಧಿತ ಕಥೆಗಳ ಸಂಕಲನ, 'ಕಂಡ ಹಾಗೆ' ಸಂಪಾದಕೀಯ ಬರಹಗಳ ಮೂರು ಸಂಗ್ರಹ ಪುಸ್ತಕಗಳೂ, ಬೆನೆಜೀರ್ ಬುಟ್ಟೋ ಹತ್ಯೆ ಕುರಿತಾದ ಪುಸ್ತಕಗಳನ್ನು ಗೌರಿ ಲಂಕೇಶ್ ಹೊರ ತಂದಿದ್ದಾರೆ.

ರಾಜ್ಯ ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಪ್ರೆಸ್ ಕ್ಲಬ್ ಪ್ರಶಸ್ತಿಗಳೂ ಅವರನ್ನರಸಿ ಬಂದಿದ್ದವು.

ಬಹುಶಃ ಇಷ್ಟೇ ಆಗಿದ್ದರೆ ಗೌರಿ ಲಂಕೇಶ್ ನಮ್ಮ ನಡುವೆ ಇಷ್ಟು ದೊಡ್ಡ ಮಟ್ಟಕ್ಕೆ ಗುರುತಿಸಿಕೊಳ್ಲಲು ಸಾಧ್ಯವಿರಲಿಲ್ಲವೇನೋ. ಪತ್ರಿಕೋದ್ಯಮ, ಬರವಣಿಗೆಗಳಾಚೆಗೂ ಅವರು ಸಮಾಜದಲ್ಲಿ ಗುರುತಿಸಿಕೊಂಡಿದ್ದರು. ಕರ್ನಾಟಕ ಕೋಮು ಸೌಹಾರ್ದ ವೇದಿಕೆ, ಶಾಂತಿಗಾಗಿ ನಾಗರಿಕ ವೇದಿಕೆಯಂಥ ಸಾಮಾಜಿಕ ಸಂಘಟನೆಗಳಲ್ಲಿ ಗುರುತಿಸಿಕೊಂದ ಸಕ್ರಿಯ ಕಾರ್ಯಕರ್ತರಲ್ಲಿ ಅವರೂ ಒಬ್ಬರಾಗಿದ್ದರು.

ಇವತ್ತು ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಂಡ ನೂರ್ ಶ್ರೀಧರ್, ಸಿರಿಮನೆ ನಾಗರಾಜ್ ಸೇರಿದಂತೆ ಮೊನ್ನೆ ಮೊನ್ನೆ ಜೂನಿನಲ್ಲಿ ಚಿಕ್ಕಮಗಳೂರಿನಲ್ಲಿ ಶರಣಾದ ಮೂವರು ನಕ್ಸಲೀಯರವರೆಗೆ ಅನೇಕ ನಕ್ಸಲೀಯರು ಬಂದೂಕು ಬಿಟ್ಟು ನಾಡಿಗೆ ಬರಲು ಗೌರಿ ಲಂಕೇಶ್ ಶ್ರಮಿಸಿದ್ದರು.

ಜೀವನದ್ದುದಕ್ಕೂ ದೃಢ ವಿಶ್ವಾಸದಿಂದ ಹೋರಾಟದ ಹಾದಿಯನ್ನೇ ತುಳಿದಿದ್ದ ಗೌರಿ ಲಂಕೇಶ್ ತಾನೇ ಇಷ್ಟಪಟ್ಟು ವಿವಾಹವಾದರೂ ಮುಂದೆ ವಿಚ್ಛೇದನ ಪಡೆದಿದ್ದರು. ಇತ್ತೀಚೆಗೆ ತಮ್ಮ ತಂಗಿ ಕವಿತಾ ಲಂಕೇಶ್ ಹಾಗೂ ತಾಯಿಯ ಜತೆ ಜೀವನ ನಡೆಸುತ್ತಿದ್ದರು.

ಹೀಗೆ ಸಮಾಜದಲ್ಲಿ ನಿರಂತರ ಎಚ್ಚರವನ್ನು ಕಾಯ್ದುಕೊಂಡು ಬಂದ ವಿಶಿಷ್ಟ ವ್ಯಕ್ತಿತ್ವದ ಗೌರಿ ಲಂಕೇಶ್ ಇನ್ನು ನೆನಪು ಮಾತ್ರ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+