ಮಳೆ ಬಂದು, ಮರ ಬಿದ್ದರೆ ಬಿಬಿಎಂಪಿಗೆ ದೂರು ನೀಡೋದು ಹೇಗೆ?
Recommended Video

ಬೆಂಗಳೂರು, ಸೆಪ್ಟೆಂಬರ್ 11: "ಮನೆಗೆ ಮಳೆ ನೀರು ನುಗ್ಗಿದೆ, ರಸ್ತೆಯ ಚರಂಡಿ ನೀರು ತುಂಬಿ ಹರಿಯುತ್ತಿದೆ, ಮರ ಬಿದ್ದಿದೆ, ಕಸದ ಸಮಸ್ಯೆ ಇದೆ" -ಬಿಬಿಎಂಪಿ ವ್ಯಾಪ್ತಿಯಲ್ಲಿ ಇಂಥ ಸಮಸ್ಯೆಗಳ ಪೈಕಿ ಯಾವುದೇ ಇದ್ದರೂ ದೂರು ನೀಡಬಹುದು ಮತ್ತು ಅದನ್ನು ಸಂಬಂಧಪಟ್ಟವರು ನಲವತ್ತೆಂಟು ಗಂಟೆಗಳಲ್ಲಿ ಪರಿಹರಿಸಬೇಕು. ಅದಕ್ಕಾಗಿಯೇ ಸಹಾಯವಾಣಿ ಇದೆ ಎಂದು ನಿಮಗೆ ಗೊತ್ತಿದೆಯೇ?
ಅಷ್ಟೇ ಅಲ್ಲ, ಅನಧಿಕೃತವಾಗಿ ಫ್ಲೆಕ್ಸ್ ಹಾಕಿದ್ದರು ಸಹ ದೂರು ನೀಡಬಹುದು. ಯಾವುದೇ ಫ್ಲೆಕ್ಸ್ ಹಾಕಬೇಕೆಂದರೆ ಬಿಬಿಎಂಪಿಯಿಂದ ಅನುಮತಿ ಪಡೆಯಬೇಕು. ಒಂದು ವೇಳೆ ಪಡೆದಿಲ್ಲ ಅಂದರೆ ಆ ಬಗ್ಗೆಯೂ ಮಾಹಿತಿ ನೀಡಬಹುದು. ಬೀದಿ ದೀಪದ ಸಮಸ್ಯೆಯಿದ್ದರೂ ತಿಳಿಸಬಹುದು.

ಸಹಾಯವಾಣಿ ಸಂಖ್ಯೆ- 080-22660000ಗೆ ಕರೆ ಮಾಡಿ ಮಾಹಿತಿ ನೀಡಬಹುದು. ಕರೆ ಮಾಡಿದವರ ವಿಳಾಸ, ಹೆಸರು, ಸಂಪರ್ಕ ಸಂಖ್ಯೆಯನ್ನು ಸಹಾಯ ವಾಣಿಯವರು ಕೇಳಿ ಪಡೆಯುತ್ತಾರೆ. ಆ ನಂತರ ಸಂಬಂಧಪಟ್ಟ ವಿಭಾಗಕ್ಕೆ ದೂರನ್ನು ವರ್ಗಾಯಿಸುತ್ತಾರೆ. ಯಾವ ಅಧಿಕಾರಿಗೆ ದೂರನ್ನು ಪರಿಹರಿಸಲು ವರ್ಗಾಯಿಸಲಾಗಿದೆ ಎಂಬ ಬಗ್ಗೆ ಕೂಡ ದೂರುದಾರರಿಗೆ ಮಾಹಿತಿ ನೀಡಲಾಗುತ್ತದೆ. ದೂರು ನೀಡಿದ ನಲವತ್ತೆಂಟು ಗಂಟೆಗಳಲ್ಲಿ ನೆರವಿಗೆ ಬರುತ್ತಾರೆ.
ಮೊನ್ನೆ ಅಂದರೆ ಶನಿವಾರ ಒಂದೇ ದಿನ ಆರುನೂರು ದೂರುಗಳು ಇವರಿಗೆ ಬಂದಿವೆ. ಆ ಪೈಕಿ ಒಳಚರಂಡಿ ಸಮಸ್ಯೆ (ಮಳೆ ನೀರು), ಮರಗಳು ಬಿದ್ದಿರುವುದೇ ಹೆಚ್ಚಿನ ದೂರುಗಳಾಗಿವೆ. ಈ ಸಹಾಯವಾಣಿ ಮೂಲಕ ಸಮಸ್ಯೆಯ ಗಂಭೀರತೆ ತಿಳಿದು ಆದ್ಯತೆ ಮೇರೆಗೆ ಅವುಗಳನ್ನು ಪರಿಹರಿಸಲಾಗುತ್ತದೆ.
ಬೆಂಗಳೂರು ನಗರ ಬೃಹತ್ ಆಗಿದೆ. ಈ ಸಹಾಯ ವಾಣಿಯಿಂದ ಒಳ್ಳೆ ಪ್ರಯತ್ನ ಕೂಡ ನಡೆಯುತ್ತಿದೆ. ಯಾವುದೇ ಕಾರಣಕ್ಕೂ ತಮಾಷೆಗಾಗಿಯೋ ಸುಮ್ಮನೆ ಪರೀಕ್ಷೆ ಮಾಡೋಣ ಅಂತಲೋ ಈ ಸಂಖ್ಯೆಗೆ ಕರೆ ಮಾಡಬೇಡಿ.












Click it and Unblock the Notifications