ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಮೆರಿಕದಲ್ಲಿ ಚಿನ್ನ ಗೆದ್ದ ಬಿಎನ್ಎಸ್ ರೆಡ್ಡಿ (ಐಪಿಎಸ್) ಸಂದರ್ಶನ

By ಬಾಲರಾಜ್ ತಂತ್ರಿ
|
Google Oneindia Kannada News

ಕರ್ನಾಟಕ ಪೊಲೀಸರಿಗೆ ದೇಶದಲ್ಲಿ ವಿಶೇಷ ಸ್ಥಾನವಿದೆ. ಕಾನೂನು ಮತ್ತು ಸುವ್ಯವಸ್ಥೆಯ ವಿಚಾರದಲ್ಲಿ ಹೆಸರಾಗಿರುವ ನಮ್ಮ ಪೊಲೀಸರು ಈಗ ಕ್ರೀಡಾ ಕ್ಷೇತ್ರದಲ್ಲೂ ಹೆಸರು ಮಾಡಿದ್ದಾರೆ.

ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಅಂತರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ರಾಜ್ಯದ ಹೆಸರನ್ನು ಮತ್ತಷ್ಟು ಉತ್ತುಂಗಕ್ಕೇರಿಸಿದ್ದಾರೆ. (ವಿಶಿಷ್ಟ ಸೇವಾ ಮತ್ತು ಶ್ಲಾಘನೀಯ ಪದಕ ಪ್ರದಾನ)

ಇತ್ತೀಚಿಗೆ ಅಮೆರಿಕಾದಲ್ಲಿ ನಡೆದ ವಿಶ್ವ ಪೊಲೀಸ್ ಮತ್ತು ಫೈರ್ ಗೇಮ್ಸ್ ನಲ್ಲಿನ ಸಿಂಗಲ್ಸ್ ಟೆನಿಸ್ ವಿಭಾಗದಲ್ಲಿ ಬೆಂಗಳೂರು ಹೆಚ್ಚುವರಿ ಪೊಲೀಸ್ ಐಜಿಪಿ ಬಿಎನ್ಎಸ್ ರೆಡ್ಡಿ, ಚಿನ್ನದ ಪದಕ ಗೆಲ್ಲುವ ಮೂಲಕ, ಈ ಪ್ರಶಸ್ತಿ ಗೆದ್ದ ಮೊದಲ ದಕ್ಷಿಣ ಭಾರತೀಯ ಅಲ್ಲದೇ ಮೊದಲ ಕನ್ನಡಿಗ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ. (ಪಂಜಾಬಿನ ಪೊಲೀಸ್ ಅಧಿಕಾರಿ ಆಶಿಸ್ ಈ ಹಿಂದೆ ಚಿನ್ನದ ಪದಕ ಪಡೆದಿದ್ದರು)

An exclusive interview with Bengaluru additional IGP, BNS Reedy

ಈ ಅಪರೂಪದ ಸಾಧನೆ ಮಾಡಿದ ಪೊಲೀಸ್ ಅಧಿಕಾರಿ ಬಿಎನ್ಎಸ್ ರೆಡ್ಡಿಯವರಿಗೆ "ಒನ್ ಇಂಡಿಯಾ"ದ ಪರವಾಗಿ ಅಭಿನಂದನೆ ಸಲ್ಲಿಸುತ್ತಾ, ಅವರ ಜೊತೆ ನಡೆಸಿದ ಸಂದರ್ಶನದ ಆಯ್ದ ಭಾಗ ಇಂತಿದೆ..

ಪ್ರ: ಪೊಲೀಸ್ ಅಧಿಕಾರಿಯಾಗಿ, ಅಧಿಕ ಒತ್ತಡದ ನಡುವೆಯೂ ಅಂತರಾಷ್ಟ್ರೀಯ ಮಟ್ಟದಲ್ಲಿ ಈ ಸಾಧನೆ ಮಾಡಿದ್ದೀರಿ. ಹೇಗಿತ್ತುಅನುಭವ?
ರೆಡ್ಡಿ: ಅಮೆರಿಕಾದ ವರ್ಜೀನಿಯಾ ಪ್ರಾಂತ್ಯದಲ್ಲಿ ಈ ಟೂರ್ನಿ ನಡೆಯಿತು. ಇದರಲ್ಲಿ ಭಾಗವಹಿಸುತ್ತೇನೋ, ಇಲ್ಲವೋ ಎಂದು ವೀಸಾ ತೊಂದರೆಯಿಂದ ಕೊನೇ ಕ್ಷಣದ ವರೆಗೂ ಅನುಮಾನವಿತ್ತು. ಅಪರೂಪಕ್ಕೆ ಎನ್ನುವಂತೆ ಚೆನ್ನೈ ಕಾನ್ಸುಲೇಟ್ ಕಚೇರಿಯವರೇ ಫೋನ್ ಮಾಡಿ ವೀಸಾ ರೆಡಿ ಇದೆ ಎಂದರು, ಜೊತೆಗೆ ನನ್ನ ಪರವಾಗಿ ಚೆನ್ನೈ ಪೊಲೀಸ್ ಅಧಿಕಾರಿಗಳು ವೀಸಾ ಸ್ವೀಕರಿಸಲು ಅವಕಾಶವನ್ನೂ ನೀಡಿದರು.

ಕೊನೇ ಕ್ಷಣದಲ್ಲಿ ಅಮೆರಿಕಾಕ್ಕೆ ವಿಮಾನ ಹತ್ತಿದೆ. ಪಂದ್ಯದ ಹಿಂದಿನ ದಿನ ನಾನು ಅಮೆರಿಕಾ ತಲುಪಿದೆ. ಜೆಟ್ ಲ್ಯಾಗ್, ಹೊಸ ವಾತಾವರಣಕ್ಕೆ ಹೊಂದಿಕೊಳ್ಳಬೇಕಿತ್ತು. ಫೇರ್ ಫಾಕ್ಸ್, ವರ್ಜೀನಿಯಾದಲ್ಲಿ ನಡೆಯುತ್ತಿದ್ದ ಈ ಟೂರ್ನಿಯಲ್ಲಿ ಹನ್ನೆರಡು ಸಾವಿರಕ್ಕೂ ಹೆಚ್ಚು ಕ್ರೀಡಾಗುಳು ಭಾಗವಹಿಸಿದ್ದರು. ಈ ಟೂರ್ನಿಯಲ್ಲಿ ಭಾಗವಹಿಸಿದ್ದೇ ಒಂದು ವಿಶೇಷ ಅನುಭವ.

An exclusive interview with Bengaluru additional IGP, BNS Reedy

ಆಸ್ಟ್ರೇಲಿಯಾದ ಜೇಮ್ಸ್ ವಾಟ್ಸನ್ ಜೊತೆ ನಡೆದ ಮೊದಲ ಪಂದ್ಯದ ಮೊದಲ ಸೆಟ್ಟಿನಲ್ಲೇ ಸೋತೆ. ಸೋಲು ಗೆಲುವಿನ ಮೆಟ್ಟಿಲು ಎನ್ನುವಂತೆ, ಆತ್ಮಸ್ಥೈರ್ಯ ತೆಗೆದುಕೊಂಡೆ, ದೈವಶಕ್ತಿಯ ಬಲದಿಂದ ನಂತರದ ಎರಡು ಸೆಟ್ ಗೆದ್ದೆ, ಪ್ರಿ, ಕ್ವಾ, ಸೆಮಿ ಹೀಗೆ ಫೈನಲಿಗೆ ಬಂದೆ.

ದೂರದ ದೇಶದಿಂದ ಬಂದಿದ್ದಕ್ಕೆ ಸಾರ್ಥಕವಾಯಿತು, ಕೊನೇ ಪಕ್ಷ ಬೆಳ್ಳಿ ಪದಕವಾದರೂ ಸಿಗುತ್ತಲ್ಲಾ ಎಂದು ಕೊಂಡಿದ್ದೇನೇ ಹೊರತು, ಅಮೆರಿಕಾದ ಬ್ರೂಸ್ ಬಾರಿಯರ್ಸ್ ಅವರನ್ನು ಸೋಲಿಸಿ ಚಿನ್ನದ ಪದಕ ಗೆಲ್ಲುತ್ತೇನೆಂದು ಮನಸಿನಲ್ಲಿ ಬಿಡಿ, ಕನಸಿನಲ್ಲೂ ನೆನೆಸಿರಲಿಲ್ಲ. ಈ ಪ್ರಶಸ್ತಿ ಗೆದ್ದ ಮೊದಲ ಕನ್ನಡಿಗ ಎನ್ನುವ ಹೆಮ್ಮೆಯಿದೆ.

ಪ್ರ: ಈ ಪ್ರಶಸ್ತಿ ಗೆಲ್ಲಲು ಯಾವ ರೀತಿ ಪೂರ್ವ ತಯಾರಿ ಮಾಡಿಕೊಂಡಿದ್ರಿ?
ರೆಡ್ಡಿ: ಮ್ಯಾಚ್ ಇರಲಿ, ಇರದೇ ಇರಲಿ ನಿರಂತರವಾಗಿ, ದಿನಾಲೂ ಟೆನ್ನಿಸ್ ಆಡೇ ಆಡುತ್ತೇನೆ. ದಿನಕ್ಕೆ ಒಂದೂವರೆ ಗಂಟೆ ಆಡುತ್ತೇನೆ. ಇದರಿಂದ ಟೆಂಪರ್ಮೆಂಟ್, ಫಿಟ್ನೆಸ್ ನಾವು ಕಾಯ್ದುಕೊಂಡು ಬರಬಹುದು. ಬೇರೆ ಬೇರೆಯವರ ಜೊತೆಗೆ ಆಡುವುದರಿಂದ ಮ್ಯಾಚಿಗೆ ವಿಶೇಷ ಪೂರ್ವ ತಯಾರಿ ಬೇಕಾಗಿಲ್ಲ. ನನ್ನ ಫೇವರೇಟ್ ಶಾಟ್ ಫೋರೆಂಡ್. ಆ ಶಾಟ್ ಬಗ್ಗೆ ವಿಶೇಷ ಗಮನ ನೀಡುತ್ತೇನೆ. ಇದೆಲ್ಲಾ ನನಗೆ ಈ ಪ್ರಶಸ್ತಿ ಗೆಲ್ಲಲು ಸಹಾಯವಾಯಿತು.

ಪ್ರ: ಟೆನಿಸ್ ಮತ್ತು ಪೊಲೀಸ್ ಜವಾಬ್ದಾರಿಯನ್ನು ಹೇಗೆ ಜೊತೆಗೆ ಜೊತೆಗೆ ನಿಭಾಯಿಸುತ್ತೀರಾ?
ರೆಡ್ಡಿ: ಮನುಷ್ಯನಿಗೆ ತುಂಬಾ ಕೆಲಸದ ಒತ್ತಡವಿದ್ದರೆ ಯಾವತ್ತೂ ಒತ್ತಡದಲ್ಲೇ ಇರುತ್ತಾರೆ. ಪೊಲೀಸ್ ಅಧಿಕಾರಿಯಾಗಲಿ ಅಥವಾ ಯಾರಿಗೇ ಆಗಲಿ ಕೆಲಸದಲ್ಲಿ ಒತ್ತಡ ಇದ್ದೇ ಇರುತ್ತೆ. ಮನೆಯಲ್ಲಿ, ಕೆಲಸದಲ್ಲಿ ಒತ್ತಡ ಇದ್ದಿದ್ದೇ. ಒತ್ತಡವನ್ನು ನಿಭಾಯಿಸುವ ಶಕ್ತಿ ಕ್ರೀಡೆಗಿದೆ. ಇದರಿಂದ ದೈಹಿಕ ದೃಢತೆ ಬರುತ್ತೆ. ಕ್ರೀಡೆಯಲ್ಲಿ ತೊಡಗಿಸಿಕೊಂಡರೆ ನಗುನಗುತಾ ಇರಬಹುದು ಎನ್ನುವುದು ನನ್ನ ಸಿಂಪಲ್ ಪಾಲಿಸಿ.

ಪ್ರ: ಯಾವತ್ತಿಂದ ಟೆನಿಸ್ ಆಡುತ್ತಿದ್ದೀರಾ, ನಿಮ್ಮ ಫೇವರೇಟ್ ಗೇಮ್ ಯಾವುದು?

ರೆಡ್ಡಿ: ಸಣ್ಣದಾಗಿಂದಲೇ ಆಟದಲ್ಲಿ ನನ್ನನ್ನು ತೊಡಗಿಸಿಕೊಂಡಿದ್ದೆ. ಮೊದ ಮೊದಲು ಕ್ರಿಕೆಟ್ ಆಡುತ್ತಿದ್ದೆ. ನಂತರ ಬಿಲಿಯರ್ಡ್ಸ್ ಆಡುತ್ತಿದ್ದೆ. ನಂತರ ಟೆನಿಸ್ ಆಡಲು ಇಳಿದೆ. ನನ್ನ ಫೇವರೇಟ್ ಗೇಮ್ obviously ಟೆನಿಸ್.

ಪ್ರ: ನಿಮಗೆ ಕ್ರೀಡೆಯಲ್ಲಿ ಯಾರು ರೋಲ್ ಮಾಡೆಲ್?
ರೆಡ್ಡಿ: ನನಗೆ ರೋಲ್ ಮಾಡೆಲ್ ಅಂತಾ ಯಾರೂ ಇಲ್ಲ. ಅವರು ಇವರು ಆಡುವುದನ್ನು ನೋಡಿ ಕಲಿತು ಈ ಮಟ್ಟಕ್ಕೆ ಬಂದಿದ್ದೇನೆ. ಯಾವ ಕೋಚಿಂಗಿಗೂ ಇದುವರೆಗೆ ಹೋಗಿಲ್ಲ.

ಪ್ರ: ಟೆನಿಸ್ ನಲ್ಲಿ ನಿಮ್ಮ ರೋಲ್ ಮಾಡೆಲ್ ಯಾರು?
ರೆಡ್ಡಿ: ರೋಜರ್ ಫೆಡರರ್. ಅವರೊಬ್ಬ ಕಂಪ್ಲೀಟ್ ಆಟಗಾರ. ಯುವಕರನ್ನು ಕೇಳಿದರೆ ನಡಾಲ್ ಎನ್ನುತ್ತಾರೆ, ಆತ ಎಗ್ರೆಸ್ಸೀವ್ ಆಟಗಾರ ಒಪ್ಪಿಕೊಳ್ಳುತ್ತೇನೆ. ಕೋರ್ಟ್ ತುಂಬಾ ಲವಲವಿಕೆಯಿಂದ ಓಡಾಡುತ್ತಾರೆ. ಆದರೆ ಲಾಂಗ್ ರನ್ ನಲ್ಲಿ ಇದು ಒಳ್ಳೆದಲ್ಲ ಎನ್ನುವುದು ನನ್ನ ಅಭಿಪ್ರಾಯ. ಆದರೆ ಫೆಡರರ್ ಆಟದ ಶೈಲಿಯೇ ಬೇರೆ. ಆತ ಟೆನಿಸ್ ಅನ್ನು ಚೆನ್ನಾಗಿ ಅರಿತ ನುರಿತ ಆಟಗಾರ. ಅದರಿಂದಾಗಿಯೇ 35-38 ಆದರೂ ಟೆನಿಸ್ ನಲ್ಲಿ ಫಿಟ್ ಆಗಿದ್ದಾರೆ.

ಪ್ರ: ನಿಮ್ಮ ಅಲ್ಟಿಮೇಟ್ ಗೋಲ್ ಏನು?
ರೆಡ್ಡಿ: ಟೆನಿಸ್ ಆಡಬೇಕು, ರಾಜ್ಯ ಮಟ್ಟದಲ್ಲಿ ಗೆಲ್ಲಬೇಕೆಂದಿದ್ದೆ ಗೆದ್ದೆ, ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಬೇಕೆಂದಿದ್ದೆ ಅದೂ ಆಯ್ತು. ಆದರೆ ಅಂತರಾಷ್ಟ್ರೀಯ ಮಟ್ಟದಲ್ಲಿ ಕನಸು ಮನಸಲ್ಲೂ ಈ ಪ್ರಶಸ್ತಿ ಗೆಲ್ಲುತ್ತೇನೆಂದು ನೆನೆಸಿರಲಿಲ್ಲ. ಹಾಗಾಗಿ ಗೋಲ್ ಎನ್ನುವುದು ಇಲ್ಲ.

An exclusive interview with Bengaluru additional IGP, BNS Reedy

ಪ್ರ: ಕ್ರಿಕೆಟ್ ಬಿಟ್ಟು ಯಾಕೆ ನಮ್ಮ ದೇಶದಲ್ಲಿ ಇತರ ಕ್ರೀಡೆಗಳು ಹೆಸರಾಗುತ್ತಿಲ್ಲ?
ರೆಡ್ಡಿ: ಕ್ರಿಕೆಟ್ ದೇಶದ ಜನಪ್ರಿಯ ಆಟ, ಒಪ್ಪಿಕೊಳ್ಳುತ್ತೇನೆ. ಈಗ ಕಬ್ಬಡಿ ಪಿಕಪ್ ಆಗುತ್ತಿದೆ, ಹಾಕಿ ಕೂಡಾ ಹೆಸರು ಮಾಡುತ್ತಿದೆ. ಮೊದಲು ಸರಕಾರ ಎಲ್ಲಾ ಕ್ರೀಡೆಯನ್ನು ಸಮನಾಗಿ ಪ್ರಮೋಟ್ ಮಾಡಬೇಕು. ಅದಕ್ಕಾಗಿ ಮಲ್ಟಿ ಪರ್ಪಸ್ ಕ್ರೀಡಾಂಗಣದ ಯೋಜನೆ ರೂಪಿಸಬೇಕು.

ದೇಶದೆಲ್ಲಡೇ ಹತ್ತು ಹನ್ನೆರಡು ಎಲ್ಲಾ ಕ್ರೀಡೆಗಳು ಆಡುವಂತಹ ಕ್ರೀಡಾಂಗಣವನ್ನು ಎಲ್ಲಾ ಜಿಲ್ಲೆಯಲ್ಲಿ ನಿರ್ಮಿಸಬೇಕು. ಜೊತೆಗೆ ಶಾಲಾ ಕಾಲೇಜಿನಲ್ಲೂ ಕ್ರೀಡೆಯನ್ನು ಒಂದು ವಿಷಯವನ್ನಾಗಿ ಮಾಡಬೇಕು ಎನ್ನುವುದು ನನ್ನ ಅಭಿಪ್ರಾಯ. ಎಲ್ಲಾ ಕ್ರೀಡೆಯಲ್ಲೂ ವಿಜ್ಞಾನವಿದೆ.

ಪ್ರ: ಪೊಲೀಸ್ ಇಲಾಖೆಗೆ ಸರಕಾರದಿಂದ ಬೆಂಬಲ ಸಿಗುತ್ತಿದೆಯಾ?
ರೆಡ್ಡಿ: ಪೊಲೀಸ್, ರೈಲ್ವೆ, ಸರ್ವಿಸಸ್ ಇಲಾಖೆಯಿಂದ ಕ್ರೀಡೆಗೆ ಭಾರೀ ಬೆಂಬಲ ಸಿಗುತ್ತಿದೆ. ಸ್ಪೋರ್ಟ್ಸ್ ಕೋಟಾದಲ್ಲಿ ಪೊಲೀಸ್ ಇಲಾಖೆಯಲ್ಲಿ ಬಹಳಷ್ಟು ಆಯ್ಕೆಗಳು ನಡೆಯುತ್ತಿವೆ. ಕ್ರೀಡಾ ಕೋಟಾದಿಂದ ಬಂದ ತುಂಬಾ ಜನ ಎಸೈ ಕೂಡಾ ಆಗಿದ್ದಾರೆ.

ಪ್ರ: ಸರ್ ಕೊನೆದಾಗಿ, ಯುವಕರಿಗೆ ನಿಮ್ಮ ಸಂದೇಶ?
ರೆಡ್ಡಿ: ಕ್ರೀಡೆಯಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ಇದರಿಂದ ದೈಹಿಕವಾಗಿ ಆರಾಮಾಗಿರಬಹುದು. ಆತನನ್ನು ನೋಡಿ ಆತನ ಕುಟುಂಬ ಕೂಡಾ ಅವನನ್ನು ಅನುಸರಿಸುತ್ತಾರೆ. ಕ್ರೀಡೆಯಲ್ಲಿ ತೊಡಗುವುದರಿಂದ ಮನುಷ್ಯ ತಾಳ್ಮೆ ಕಳೆದುಕೊಳ್ಳುವುದಿಲ್ಲ, ಮನಸ್ಥೈರ್ಯ ಕಳೆದುಕೊಳ್ಳುವುದಿಲ್ಲ.

English summary
An exclusive interview with Bengaluru additional IGP, BNS Reedy (IPS) who won the gold medal in Tennis Singles in the World Police and Fire event 2015 in USA.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X