ಇನ್ಫೋಸಿಸ್ ಗೆ ಮತ್ತೆ ಮರಳಿದ ನಾರಾಯಣ ಮೂರ್ತಿ
ಬೆಂಗಳೂರು, ಜೂ.1: ದೇಶದ ಪ್ರಮುಖ ಐಟಿ ಸಂಸ್ಥೆ ಇನ್ಫೋಸಿಸ್ ನ ಸಹ ಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿ ಅವರು ಮತ್ತೊಮ್ಮೆ ಇನ್ಫೋಸಿಸ್ ಬೋರ್ಡ್ ಗೆ ಮರಳಿದ್ದಾರೆ. ಎನ್ ಆರ್ ನಾರಾಯಣ ಮೂರ್ತಿ ಅವರನ್ನು ಕಾರ್ಯಕಾರಿ ಚೇಮರ್ನ್ ಆಗಿ ನೇಮಕ ಮಾಡಲಾಗಿದೆ.
ಶನಿವಾರ ಬೆಳಗ್ಗೆ ನಡೆದ ಬೋರ್ಡ್ ಸಭೆಯಲ್ಲಿ ಸರ್ವಾನುಮತದಿಂದ ಈ ನಿರ್ಣಯ ಕೈಗೊಳ್ಳಲಾಗಿದ್ದು, ಇನ್ಫೋಸಿಸ್ ನಿಂದ ನಿವೃತ್ತಿ ಹೊಂದಿದ್ದ ನಾರಾಯಣಮೂರ್ತಿ ಅವರನ್ನು ಮತ್ತೆ ಕರೆಸಿಕೊಳ್ಳಲಾಗಿದೆ. ಜೂನ್.1, 2013ರಿಂದ ಜಾರಿಗೆ ಬರುವಂತೆ ಬೋರ್ಡ್ ಚೇರ್ಮನ್ ಹಾಗೂ ಹೆಚ್ಚುವರಿ ನಿರ್ದೇಶಕರಾಗಿ ನೇಮಕ ಮಾಡಲಾಗಿದೆ ಎಂದು ಬಿಎಸ್ ಇಗೆ ಇನ್ಪೋಸಿಸ್ ಬೋರ್ಡ್ ಹೇಳಿಕೆ ನೀಡಿದೆ.
2011ರಲ್ಲಿ ಇನ್ಫೋಸಿಸ್ [ಷೇರು ಸೂಚ್ಯಂಕ] ಬೋರ್ಡ್ ಚೇರ್ಮನ್ ಸ್ಥಾನಕ್ಕೆ ನಾರಾಯಣಮೂರ್ತಿ ಅವರು ರಾಜೀನಾಮೆ ನೀಡಿ ಹೊರ ನಡೆದಿದ್ದರು. ಕಳೆದ ಹಲವಾರು ತ್ರೈಮಾಸಿಕಗಳಲ್ಲಿ ಇನ್ಫೋಸಿಸ್ ಸಂಸ್ಥೆ ಕಳಪೆ ಸಾಧನೆ ತೋರಿದೆ. ಎಚ್ ಸಿಎಲ್, ಟಿಸಿಎಸ್ ಹಾಗೂ ಕಾಂಗ್ನಿಜೆಂಟ್ ವಿರುದ್ಧ ಹೋರಾಟ ನಡೆಸಲು ಸಾಧ್ಯವಾಗದೆ ಸೋತಿದೆ. ಹೀಗಾಗಿ ಸಮರ್ಥವಾಗಿ ನೇತಾರರ ಅಗತ್ಯವಿತ್ತು.

ಜೂ.15 ಕ್ಕೆ ನಿಗದಿಯಾಗಿರುವ ಸರ್ವ ಸದಸ್ಯರ ಸಭೆ(AGM)ಯಲ್ಲಿ ಮೂರ್ತಿ ಅವರನ್ನು ನಿರ್ದೇಶಕರನ್ನಾಗಿ ಚುನಾಯಿಸಲು ಶಿಫಾರಸು ಮಾಡಲಾಗುತ್ತದೆ. ಕಂಪನಿಯ ಬೋರ್ಡ್ ಸದಸ್ಯರು, ಷೇರುದಾರರ ಅನುಮತಿ ಸಿಕ್ಕ ನಂತರ ಕಾರ್ಯಕಾರಿ ಚೇರ್ಮನ್ ಹಾಗೂ ಶಾಶ್ವತವಾಗಿ ನಿರ್ದೇಶಕ ಸ್ಥಾನವನ್ನು ಜೂ.1 ರಿಂದ ಆರಂಭವಾಗಿ ಐದು ವರ್ಷಗಳ ಕಾಲ ಮೂರ್ತಿ ಅವರು ಕಾರ್ಯ ನಿರ್ವಹಿಸಬಹುದಾಗಿದೆ.
ಕಾಮತ್ ಸ್ಥಾನ ಪಲ್ಲಟ: ಬೋರ್ಡ್ ಚೇರ್ಮನ್ ಹುದ್ದೆಯಿಂದ ಕೆಳಗಿಳಿದಿರುವ ಕೆ.ವಿ ಕಾಮತ್ ಅವರು ಸ್ವತಂತ್ರವಾಗಿ ನಿರ್ದೇಶಕ ಸ್ಥಾನಕ್ಕೆ ಬಡ್ತಿ ಹೊಂದಿದ್ದಾರೆ. ಇನ್ಫೋಸಿಸ್ 3.0 ಅನುಷ್ಠಾನಕ್ಕೆ ಸಮರ್ಥ ವ್ಯಕ್ತಿ ಅವಶ್ಯವಾಗಿತ್ತು. ಇದಕ್ಕೆ ಮೂರ್ತಿ ಅವರನ್ನು ಕರೆಸಿಕೊಳ್ಳಲಾಗಿದೆ. ಇದು ಷೇರುದಾರರ ಹಲವಾರು ಬೋರ್ಡ್ ಸದಸ್ಯರ ಬೇಡಿಕೆ ಎಂದರೂ ತಪ್ಪಾಗಲಾರದು. ಮೂರ್ತಿ ಅವರ ಅನುಭವ, ಮಾರ್ಗದರ್ಶನ ಅಗತ್ಯವಿದೆ ಎಂದು ಕೆವಿ ಕಾಮತ್ ಪ್ರತಿಕ್ರಿಯಿಸಿದ್ದಾರೆ.
ನಾರಾಯಣ ಮೂರ್ತಿ ಪ್ರತಿಕ್ರಿಯೆ: ಇದು ಅನಿರೀಕ್ಷಿತ, ಅನಪೇಕ್ಷಿತ ಆದರೆ, ಇನ್ಪೋಸಿಸ್ ನನ್ನ ಕನಸಿನ ಕೂಸು, ಕೂಸು ಕರೆದಾಗ ಓಗೊಡುವುದು ನನ್ನ ಕರ್ತವ್ಯ. ನಾನು ಕೆವಿ ಕಾಮತ್ ಅವರಿಗೆ ಥ್ಯಾಂಕ್ಸ್ ಹೇಳಲು ಇಷ್ಟಪಡುತ್ತೇನೆ. ಜೊತೆಗೆ ಇನ್ಪೋಸಿಸ್ ಉದ್ಯೋಗಿ(Infoscion) ಅವರಿಗೂ ನನ್ನ ಧನ್ಯವಾದಗಳು. ಮುಂದಿನ ದಿನಗಳು ಅತ್ಯಂತ ಚಾಲೆಂಜಿಂಗ್ ಆಗಿರುತ್ತದೆ ನಿಮ್ಮ ಸಹಕಾರ ನನಗೆ ಅಗತ್ಯ' ಎಂದಿದ್ದಾರೆ.
ಎಸ್ ಗೋಪಾಲಕೃಷ್ಣನ್ ಅವರು ಕಾರ್ಯಕಾರಿ ಉಪಾಧ್ಯಕ್ಷರಾಗಿ ಜೂ.1 ರಿಂದ ಮುಂದುವರೆಯಲಿದ್ದಾರೆ. ಶಿಬುಲಾಲ್ ಅವರು ಸಿಇಒ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿರುತ್ತಾರೆ.
ಇದರ ಜೊತೆಗೆ ನಾರಾಯಣ ಮೂರ್ತಿ ಅವರ ಮಗ ರೋಹನ್ ಮೂರ್ತಿ ಅವರು ತಮ್ಮ ಅಪ್ಪನಿಗೆ ಕಾರ್ಯಕಾರಿ ಸಹಾಯಕನಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಹಾರ್ವರ್ಡ್, ಕಾರ್ನೆಲ್ ವಿವಿಯಲ್ಲಿ ಓದಿ ಬಂದಿರುವ, ಕಂಪ್ಯೂಟರ್ ಸೈನ್ಸ್ ನಲ್ಲಿ ಪಿಎಚ್ ಡಿ ಮಾಡಿರುವ ರೋಹನ್ ಅವರ ಆಯ್ಕೆ ಬಗ್ಗೆ ಯಾರೂ ಸೊಲ್ಲೆತ್ತಿಲ್ಲ.
ಮೊಬೈಲ್ ಕಂಪ್ಯೂಟಿಂಗ್, ನಿಸ್ತಂತು ಸೇವೆ ಬಗ್ಗೆ ರೋಹನ್ ಸಂಶೋಧನೆ ನಡೆಸಿದ್ದಾರೆ. ಇವರಿಗೂ ಕೂಡಾ ಬೋರ್ಡ್ ವರ್ಷಕ್ಕೆ 1 ರು ನಂತೆ ಟೋಕನ್ ಪರಿಹಾರ ಧನ ನೀಡಲಿದೆ.












Click it and Unblock the Notifications